ಆ ಹೆಣ್ಮಗಳು..
“ಸರ್ ಸ್ವಲ್ಪ ಹಣ ಬೇಕಾಗಿತ್ತು. ನಮ್ಮ ಯಾಜಮಾನ್ರು ಬಂದಮೇಲೆ ವಾಪಸ್ಸು ಕೊಡ್ತೀನಿ. ಅನ್ನ ಆಗಿದೆ, ಸಾಂಬಾರು ಮಾಡಬೇಕು ಎಣ್ಣೆ ಇಲ್ಲ, ಮುಂಜಾನೆ ನಮ್ಮ ಯಜಮಾನ್ರಿಗೆ ಹೇಳೋದೆ ಮರೆತುಬಿಟ್ಟೆ” ಎಂದಳು.
ಕೆಲವು ದಿನಗಳ ಹಿಂದೆ, ಹೀಗೆ ಮಹಿಳೆಯೊಬ್ಬಳು ಇಂತದ್ದೆ ಸಮಸ್ಯೆ ಹೇಳಿಕೊಂಡು ದುಡ್ಡು ಪಡೆದಿದ್ದಳು. ಆದಾದ ಮೇಲೆ ತಿಂಗಳಾದರೂ ವಾಪಸ್ಸು ಕೊಡಲಿಲ್ಲ. ಒಂದಿನ ಹೇಳದೇ ಕೇಳದೆ ಮನೆ ಬದಲಾಯಿಸಿ ಹೋಗಿಬಿಟ್ಟರು. ಅದರ ಬಿಸಿ ಇನ್ನು ಇತ್ತು.
ಈಗ ಈಕೆಯೂ ಕಷ್ಟ ಅಂತ ಹಣ ಕೇಳ್ತಿದ್ದಾರೆ. ದುಡ್ಡೇನೋ ಕೊಡಬಹುದು, ಕೊಟ್ಟನಂತರ ಸಾಲ ಮಾಡಿದವನಂತೆ ಅವರನ್ನು ನಾನೇ ಕೇಳಿ ಕೇಳಿ ಕೆಟ್ಟವನಾನಾಗೋದು ಯಾರಿಗೆ ಬೇಕು? ಬಹಳ ಜನರಿಗೆ ಸಾಲ ವಾಪಸ್ಸು ಕೊಡೋದಂದ್ರೆ ಸಾವಿರ ಚೇಳು ಒಮ್ಮೆಗೆ ಕುಂಡೆಗೆ ಕುಟುಕಿದಷ್ಟು ನೋವಾಗುತ್ತೆ. ಇದೆಲ್ಲ ಉಸಾಬರಿ ಯಾಕೆ ಬೇಕು “ಹಣ ಇಲ್ಲ” ಅಂದೆ. ಆದರೆ ಅವಳು ಬಿಡಬೇಕಲ್ಲ!
“ಸರ್ ಹಾಗೆ ಹೇಳಬೇಡಿ, ಇದ್ರೆ ಕೊಡಿ. ಐವತ್ತು ರುಪಾಯಿ ಕೊಡಿ ಸಾಕು’ ಎಂದು ಅಂಗಲಾಚಿದಳು.
‘ಓಹೋ! ನೂರೋ, ಇನ್ನೂರೋ ಕೇಳ್ತಾಳೆ ಅಂದ್ಕೊಂಡೆ. ಈಕೆ ಕೇವಲ ಐವತ್ತಕ್ಕೆ ಇಷ್ಟು ಕೇಳ್ಕೊಳ್ತಿದಾಳೆ. ಪಾಪಾ ಏನು ಕಷ್ಟವೋ ಏನೋ. ಸುಳ್ಳು ಹೇಳ್ತಿರಲಿಕ್ಕಿಲ್ಲ ಐವತ್ತೇ ಕೇಳ್ತಿದಾಳೆ.ಎಲ್ಲರೂ ಮೋಸಗಾರರೇ ಇರೋದಿಲ್ಲ’ ಮನಸು ನನಗೆ ಬುದ್ದಿ ಹೇಳೋಕೆ ಶುರು ಮಾಡಿತ್ತು.
ಸರಿ ಅಂತ ಪರ್ಸ್ ತೆಗೆದು ನೋಡಿದೆ, ಚೇಂಜ್ ಇಲ್ಲ. ಐದನೂರರ ನೋಟು ಇತ್ತು. “ನೋಡಮ್ಮ ನನ್ನ ಹತ್ರ ಚೇಂಜ್ ಇಲ್ಲ. ಬೇಕಾದರೆ ಪಕ್ಕದ ಕಿರಾಣಿ ಅಂಗಡಿಯವ ಪರಿಚಯಸ್ಥ ಅವನಿಗೆ ಹೇಳ್ತಿನಿ, ನಿಮಗೆ ಬೇಕಾದ ಸಾಮಾನು ತಗೊಳ್ಳಿ. ದುಡ್ಡು ಇದ್ದಾಗ ಅವರಿಗೆ ವಪಾಸ್ಸು ಕೊಡಿ ಅಂದೆ.
“ಇಲ್ಲ ಸಾರ್, ನಾನು ಎಣ್ಣೆ ಜತೆಗೆ ತರಕಾರಿನೂ ತಗೋಬೇಕು. ಆ ಅಂಗಡಿಯಲ್ಲಿ ಸಿಗೋದಿಲ್ಲ. ಐದನೂರು ಕೊಡಿ ಸರ್ ಚೇಂಜ್ ಮಾಡಿಸ್ಕೊಂಡು ಬರತೀನಿ” ಅಂತ ವರಾತ ತೆಗೆದಳು.
“ಸರಿ. ತಗೋ, ಚೇಂಜ್ ಮಾಡಿಸ್ಕೊ. ಇದರಲ್ಲಿ ಐವತ್ತು ತಗೊಂಡು ನಾಲ್ಕೂನೂರ ಐವತ್ತು ತಂದುಕೊಡು” ಅಂತ ಐದುನೂರರವನೋಟು ಕೊಟ್ಟೆ
ಕೊಟ್ಟಿದ್ದೆ ತಡ ಎಲ್ಲಿಗೋ ಅವಸರದಲ್ಲಿ ನಡೆದಳು. ಇಪ್ಪತ್ತು ನಿಮಿಷ ಆಯ್ತು, ಆಕೆಯ ಸುಳಿವೇ ಇಲ್ಲ!ಅವಳುವ ಏನಾದರೂ ದುಡ್ಡು ತಗೊಂಡು ಓಡಿಹೋದಳಾ? ಇಲ್ಲ, ಹಾಗಾಗಲಿಕ್ಕಿಲ್ಲ. ಸಮೀಪದಲ್ಲೆ ಮನೆ ಇದೆ, ಐದನೂರಕ್ಕೆ ಮನೆ ಬಿಟ್ಟು ಹೋಗೋದು ಅಸಾಧ್ಯ ಅನಿಸಿ ಸುಮ್ಮನಾದೆ.
ಮೂವತ್ತು ನಿಮಿಷ ಆಯ್ತು! ನನಗೂ ಅನುಮಾನ ಶುರುವಾಯಿತು. ನಾಲ್ಕೈದು ಅಂಗಡಿ ಹತ್ರ ನೋಡಿದೆ ಕಾಣಲಿಲ್ಲ. ಒಂದು ಅಂಗಡಿಯ ಮುಂದೆ ಅವಳ ಗಂಡ ಕಂಡ. – ‘ಡ್ಯೂಟಿ ಗೆ ಹೋಗಿಲ್ವಾ ರಾಮಣ್ಣ ಇವತ್ತು ?” ಅಂತ ಕೇಳಿದೆ. ‘ಹೋಗಿಲ್ಲ’ ಎಂದು ತಲೆಯಾಡಿಸಿದ. ಬಾಯಿಯಿಂದ ಬೀರು ವಾಸನೆ ಮೂಗಿಗೆ ರಪ್ಪಂತ ಬಡಿತು. ಅವನನ್ನು ಏನು ಕೇಳಲಿಲ್ಲ ಮನೆಗೆ ವಾಪಸ್ಸಾದೆ.
ಆ ಹೆಂಗಸು ಇನ್ನೂ ಬಂದಿರಲಿಲ್ಲ. ಮನೆ ಲಾಕ್ ಆಗಿತ್ತು. ಬೆಳಿಗ್ಗೆ ಕೇಳಿದ್ರಾಯ್ತು ಎಲ್ಲಿಗೆ ಹೋಗ್ತಾರೆ ಅಂತ ಮಲಗಿದೆ.
ಮಂಜಾನೆ ಎದ್ದೆ, ಸೀದಾ ಅವಳ ಮನೆಯಕಡೆ ನಡೆದೆ. ಆ ಹೆಂಗಸು ಅಂಗಳದಲ್ಲಿ ಪಾತ್ರೆ ತೊಳಿತ ಕುಳಿತಿದ್ದಳು. ನನ್ನನ್ನ ನೋಡಿದಳು, ಆದರೂ ಅವಳಿಗೆ, ನಿನ್ನೆ ರಾತ್ರಿ ಚೇಂಜ್ ಮಾಡಿಸ್ಕೊಂಡು ಬರ್ತೀನಿ ಅಂತ ಐದುನೂರು ತೆಗೆದುಕೊಂಡ ಹೋಗಿದ್ದು, ದುಡ್ಡು ವಾಪಸ್ಸು ಕೊಟ್ಟಿಲ್ಲ ಕೊಡದಿದ್ದಕ್ಕೆ ಏನು ಅಂದ್ಕೊಳ್ತಾರೋ ಅನ್ನೋ ಯಾವ ಅಪರಾದಿಭಾವ ಅವಳ ಮುಖದಲ್ಲಿ ಕಾಣಲಿಲ್ಲ. ಈ ಕೇಸು ಏನು ಅಂತ ನನಗೆ ಅರ್ಥವಾಯಿತು.
” ಏನಮ್ಮಾ ಐವತ್ತು ಬೇಕು ಅಂತ ಐದನೂರು ತಗೊಂಡು ಹೋಗಿದ್ದಿ ವಾಪಸ್ಸು ಕೊಡಬೇಕು ಅಂತ ಅನಿಸುತ್ತಿಲ್ಲವಾ ?” ಸ್ವಲ್ಪ ಕೋಪದಿಂದಲೇ ಕೇಳಿದೆ.
ಅಯ್ಯೋ ನೆನಪೇ ಹೋಗಿತ್ರಿ ಅಂತ ಹುಳ್ಳಗೆ ನಕ್ಕಳು. ಅವಳ ಮುಖದಲ್ಲಿ ಕೃತಕತೆ ಎದ್ದು ಕಾಣುತ್ತಿತ್ತು. ದುಡ್ಡು ತರಲು ಮನೆಯೊಳಗೆ ಹೋದಳು. ಹತ್ತು ನಿಮಿಷ ತಡವಾಗೇ ಬಂದಳು. ಅಲ್ಲಿವರೆಗೂ ನಾನು ಸಾಲಗಾರನಂತೆ ಮನೆಮುಂದೆ ನಿಂತಿದ್ದೆ. ದಾರಿಹೋಕರು ನನ್ನನ್ನೇ ನೋಡುತ್ತಿದ್ದರು.
ಮನೆಯೊಳಗಿಂದ ಬಂದ ಆ ಹೆಂಗಸು ಯಾವುದೋ ಅಳುಕಿನಲ್ಲಿ ನನಗೆ ದುಡ್ಡು ಕೊಟ್ಟಳು. ನೋಟುಗಳನ್ನ ಎಣಿಸಿದೆ ನಾಲ್ಕುನೂರು ಇತ್ತು ! ಅವಳು ರಾತ್ರಿ ಬೇಡಿದ್ದು ಐವತ್ತು. ಈಗ ನಾಲ್ಕುನೂರು ವಾಪಸ್ಸು ಕೊಟ್ಟು ನೂರು ತಗೊಂಡಿದ್ದು ಇದು ನನಗೆ ಸಿಟ್ಟು ಬರಿಸಿತ್ತು.
“ಏನಮ್ಮ ನೀನು ಇದೇ ಕೆಲಸ ಮಾಡ್ತಿರೋದಾ ?
ನೀನು ಕೇಳಿದ್ದು ಐವತ್ತು. ಅದೂ ರಾತ್ರಿನೆ ನಮ್ಮೇಜಮಾನ್ರು ಡ್ಯೂಟಿಯಿಂದ ಬಂದನಂತರ ವಾಪಸ್ಸು ಕೊಡ್ತಿನಿ ಅಂತ ಹೇಳಿದ್ದಿ. ಆದರೆ ಅವರು ನಿನ್ನೆ ಡ್ಯೂಟಿಗೇನೆ ಹೋಗಿಲ್ಲ. ಸರಿ ಈಗ ಬೆಳಗಾಗಿದೆ, ನಿಮ್ಮ ಯಜಮಾನ್ರೂ ಬಂದಿದಾರೆ ಇನ್ನೂ ನೂರು ಕೊಟ್ಟುಬಿಡಿ” ಎಂದೆ.
ಕೊಡ್ತಿನ್ರಿ ಇವತ್ತು ದುಡ್ಡಿಲ್ಲ ಅಂತ ಮತ್ತೆ ಮನೆ ಪುರಾಣ ಹೇಳೋಕೆ ಶುರುಮಾಡಿದ್ಳು. ಪುಣ್ಯಕ್ಕೆ ನಾಲ್ಕುನೂರಾದ್ರೂ ಕೈ ಸೇರಿತ್ತು.
ಇದಾಗಿ ಮೂರ್ನಾಲ್ಕು ತಿಂಗಳು ಕಳೆಯಿತು ಆ ನೂರು ವಾಪಸ್ಸು ಬರಲೇ ಇಲ್ಲ. ಇದ್ಯಾವುದೂ ನಡೆದೇ ಇಲ್ಲವೇನೋ ಎಂಬಂತೆ ನಿಶ್ಚಿಂತವಾಗಿದಾಳೆ. ಈಗಲೂ ದಿನಾ ಯಾರಾದರೊಬ್ಬರು ಮನೆಮುಂದೆ ನಿಂತಿರ್ತಾರೆ ನನ್ನಂತೆ !
(ಕಳೆದ ವರ್ಷ ನಾನು ಕೆಂಗೇರಿಯಲ್ಲಿದ್ದಾಗ ನಡೆದ ಘಟನೆ)