ಇತ್ತೀಚೆಗೆ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಕೆಸರೆರಚಾಟದಲ್ಲಿ ದೇಶದ್ಯಾಂತ ಬೇರೆ ಬೇರೆ ನೆಲೆಗಳಲ್ಲಿ ಇಡೀ ದೇಶದ ಮನಸ್ಥಿತಿಯೇ ರಾಡಿಯಾಗುವಂತೆ ಮಾಡಿತ್ತು. ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ಇನ್ನಿತರ ಪಕ್ಷಗಳು ಒಂದುಗೂಡಿ ಮಹಾಗಠಬಂಧನ ರಚಿಸಿಕೊಂಡು ಈ ಬಾರಿ ಲೋಕಸಭೆಯ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಶತಾಯಗತಾಯ ಪ್ರಯತ್ನಿಸಿದ್ದವು. ಅದಕ್ಕಾಗಿ ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡಿದವು. ಆದರೆ ಏನು ಮಾಡುವುದು ಮತದಾರ ಈಗ ಜಾಗೃತವಾಗಿದ್ದನಲ್ಲ. ಅವರ ತಾಳಕ್ಕೆ ಕುಣಿಯಬೇಕಲ್ಲ? ಮತದಾರನಿಗೆ ಮಂತ್ರ ಹಾಕಿ ಒಲಿಸಿಕೊಳ್ಳುವುದು ಈಗ ಅಷ್ಟು ಸುಲಭವಾಗಿಲ್ಲ. ಹೀಗಾಗಿ ಅವರ ಯಾವ ಆಟಗಳು ನಡೆಯಲಿಲ್ಲ. ಈಗ ಲೋಕಸಮರ ಅಂತಿಮ ಹಂತವೂ ಮುಗಿದು ಫಲಿತಾಂಶಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಅಲ್ಲದೇ ಈ ಭಾರಿಯೂ ‘ಅಬ್ ಕಿ ಬಾರ್ ಮೋದಿ ಸರಕಾರ’ ಘೋಷವಾಕ್ಯ ಮತ್ತೆ ನಿಜವಾಗುತ್ತದೆ ಎಂಬುದು ಮತದಾರರಿಗೆ ಮನದಟ್ಟಾದರೆ, ಮಹಾಗಠಬಂದನದ ತಂಡಕ್ಕಂತೂ ಕೈ ಹಿಚುಕಿಕೊಳ್ಳುವಂತೆ, ರಾತ್ರಿ ನಿದ್ದೆ ಹತ್ತದಂತೆ, ಕೈಕಾಲುಗಳಲ್ಲಿ ಉಸುರು ಇಲ್ಲದಂತೆ ಮಾಡಿದೆ. ಕಳೆದೆರಡು ದಿನಗಳಿಂದ ಹಲವು ರಾಷ್ಟ್ರೀಯ ಚಾನೆಲ್ಗಳು ನಡೆಸಿದ ಎಕ್ಸಿಟ್ಪೋಲ್ ಸಮೀಕ್ಷೆಗಳು ಹೊರಬಿದ್ದಿವೆ. ಈ ಬಾರಿಯೂ ಕೇಂದ್ರದಲ್ಲಿ ಮತ್ತೆ ಎನ್ಡಿಎ ಸರಕಾರ ರಚನೆಯಾಗಲಿದೆ ಎಂಬುದನ್ನು ದೃಢಪಡಿಸುತ್ತಿವೆ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾದ ಭಾರತದ ಚುನಾವಣಾ ಫಲಿತಾಂಶಕ್ಕಾಗಿ ಇಡೀ ವಿಶ್ವವೇ ಉಸಿರು ಬಿಗಿ ಹಿಡಿದು ಕುಳಿತಿದೆ.
ಇದರ ಮಧ್ಯೆಯೇ ಚಾನೆಲ್ಗಳು ನಡೆಸುವ ಸಮೀಕ್ಷೆಗಳು ನಿಜವೋ, ಸುಳ್ಳೋ, ಇಂಥ ಸಮೀಕ್ಷೆ ಬೇಕೋ, ಬೇಡವೋ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳು ಪರಸ್ಪರ ಪರ-ವಿರೋಧ ಟ್ವಿಟ್ ಸಮರ ಸಾರಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅಥವಾ ಮಹಾಗಠಬಂಧನದ ಪಕ್ಷಗಳು ಒಟ್ಟುಗೂಡಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯಿಲ್ಲವೆಂದು ಸಮೀಕ್ಷೆಗಳು ಹೇಳುತ್ತಿದ್ದಂತೆಯೇ ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಈಗ ಸಮೀಕ್ಷೆಗಳ ಬಗ್ಗೆ ಗರಂ ಆಗಿದ್ದಾರೆ. ಈ ಸಮೀಕ್ಷೆಗಳೇ ಗಾಸಿಪ್ಗಳು, ಇವು ಕೇಂದ್ರದ ಪರವಾಗಿ ಸಮೀಕ್ಷೆ ಮಾಡುತ್ತಿವೆ. ಈ ಸಮೀಕ್ಷೆಗಳು ಸುಳ್ಳಿನ ಕಂತೆಗಳು, ಇಂಥ ಸಮೀಕ್ಷೆಗಳನ್ನು ನಂಬಬೇಡಿ ಎಂದು ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರೆಲ್ಲ ಎಕ್ಸಿಟ್ಪೋಲ್ ವಿರುದ್ಧ ಕಿಡಿಕಾರುತ್ತಿದ್ದಾಾರೆ. ಈ ಹಿಂದೆ, ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ಮುಂದಾದಾಗ ಕಾಂಗ್ರೆಸ್ ಪಕ್ಷ ದೊಡ್ಡ ಧ್ವನಿಯಲ್ಲಿ, ಇಂತಹ ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ಕೂಗಾಡಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು, ಇಲ್ಲ, ಇಲ್ಲ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಯಾವ ಕಾರಣಕ್ಕೂ ನಿಷೇಧಿಸಕೂಡದು ಎಂದು ಅರಚಾಡಿದ್ದರು. ಅಂದ ಹಾಗೆ ಈ ಚುನಾವಣಾ ಸಮೀಕ್ಷೆಗಳೆಂಬ ಇಡೀ ಎಪಿಸೋಡೇ ವಿಪರ್ಯಾಸಗಳ ಮೂಟೆಯಂತಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು ವಾಸ್ತವವಾಗಿ ಪರ್ಫೆಕ್ಟ್ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಅದು ಚುನಾವಣಾ ಸಂದರ್ಭದಲ್ಲಿ ಒಂದು ರಾಜ್ಯ ಅಥವಾ ರಾಷ್ಟ್ರದ ಜನರ ಭಾವನೆ ಏನಿದೆ? ಅನ್ನುವುದನ್ನು ಗುರುತಿಸಲು ಪ್ರಯತ್ನಿಸುತ್ತದೆ ಅಷ್ಟೇ. ಹಾಗಂತ ಇದು ನೂರಕ್ಕೆ ನೂರು ವೈಜ್ಞಾನಿಕವಾಗಿರುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಸಮೀಕ್ಷೆ ನಡೆಸುವವರು ಯಾವುದೇ ಒಂದು ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದ ವ್ಯಾಾಪ್ತಿಯ ಬಹುಸಂಖ್ಯಾತ ಮತದಾರರನ್ನು ಮಾತನಾಡಿಸಲು ಸಾಧ್ಯವಿರುವುದಿಲ್ಲ. ನೂರರಲ್ಲಿ ಹತ್ತು ಮಂದಿಯ ಅಭಿಪ್ರಾಯವನ್ನೇ ಕೇಳಿ ಸಮೀಕ್ಷೆ ಫಲಿತಾಂಶ ತಯಾರಿಸಬಹುದೇ ಹೊರತು ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲು ಸಾಧ್ಯವಿಲ್ಲ. ಅಲ್ಲದೇ ದೇಶದಲ್ಲಿ ನಡೆಯುವ ಹಲವು ವಿಷಯಗಳು ಮತದಾರರ ಭಾವನೆಯ ಮೇಲೆ ಭಿನ್ನ ಭಿನ್ನ ರೀತಿಯ ಪ್ರಭಾವವನ್ನು ಬೀರುತ್ತವೆಯಾದ್ದರಿಂದ ಪರ್ಫೆಕ್ಟ್ ಸಮೀಕ್ಷೆ ನಡೆಸುವುದು ಅಸಾಧ್ಯ. ಹೀಗಾಗಿಯೇ ಬಹುತೇಕ ಸಮೀಕ್ಷೆಗಳು ವಾಸ್ತವಕ್ಕೆ ದೂರವಾಗಿರುತ್ತವೆ. ನಿಮಗೆಲ್ಲ ಗೊತ್ತಿರುವ ಹಾಗೆ 2004ರಲ್ಲಿ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರ ಸೂತ್ರ ಹಿಡಿಯುತ್ತದೆ ಎಂದು ದೇಶದ ಬಹುದೊಡ್ಡ ಮಾಧ್ಯಮಗಳು ಹೇಳಿದ್ದವು. ಈ ಮಾಧ್ಯಮಗಳ ದೃಷ್ಟಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡ ನೇತೃತ್ವದ ಜೆಡಿಎಸ್ ಲೆಕ್ಕಕ್ಕೇ ಇಲ್ಲದ ಪಕ್ಷವಾಗಿತ್ತು. ಹೀಗಾಗಿ ಅವರ ಪಕ್ಷವನ್ನು ಇತರರು ಎಂಬ ಪಟ್ಟಿಗೆ ಸೇರಿಸಿದ್ದವು. ಆದರೆ ಚುನಾವಣಾ ಫಲಿತಾಂಶ ಬಂದಾಗ ಕತೆಯೇ ಬೇರೆಯಾಗಿತ್ತು. ಜೆಡಿಎಸ್ ಐವತ್ತೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮೈತ್ರಿಕೂಟ ಸರ್ಕಾರದ ಪಾಲುದಾರನಾಗಿ ಹೊರಹೊಮ್ಮಿತ್ತು.
2004ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಹುತೇಕ ಮಾಧ್ಯಮಗಳು ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಎನ್ಡಿಎ ಘೋಷವಾಕ್ಯಕ್ಕೆ ಮರುಳಾದವಂತೆ ವರ್ತಿಸಿದ್ದವು. ಎನ್ಡಿಎ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಲೆಕ್ಕಾಚಾರದ ಸಮೀಕ್ಷೆಯನ್ನು ಫಲಿತಾಂಶ ತಲೆಕೆಳಗೆ ಮಾಡಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಮತ್ತೆ ಕೇಂದ್ರದ ಅಧಿಕಾರ ಗದ್ದುಗೆ ಹಿಡಿದಿತ್ತು. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಎಕ್ಸಿಟ್ ಪೋಲ್ಗಳು ಪ್ರಕಾರ ಬಿಜೆಪಿ ನೇತೃತ್ವ ದ ಎನ್ಡಿಎ ಸರಕಾರ ಅತಿ ಹೆಚ್ಚಿನ ಸ್ಥಾನ ಗೆದ್ದು ಸರಕಾರ ರಚಿಸಲಿದೆ ಎಂದು ಹೇಳಿದ್ದವು. ಇಲ್ಲಿ ಬಿಜೆಪಿ 200ಸ್ಥಾನಗಳನ್ನು ಗೆಲ್ಲಲಿದೆ ಎಂದೇ ಎಲ್ಲ ಸಮೀಕ್ಷೆಗಳು ಹೇಳಿದ್ದವು. ಅದರಲ್ಲೂ ಟೈಮ್ಸ್ನೌ ಸಮೀಕ್ಷೆ ಪ್ರಕಾರ ಬಿಜೆಪಿ 100ರ ಕೆಳಗಿನ ಸ್ಥಾನ ಪಡೆಯುತ್ತದೆ ಎಂದು ಹೇಳಿತ್ತು. ಆದರೆ ಸಮೀಕ್ಷೆಯನ್ನು ಮೀರಿ ಬಿಜೆಪಿ ನೇತೃತ್ವದ ಎನ್ಡಿಎ ಬಿಜೆಪಿ 336 ಸ್ಥಾನ ಗಳಿಸಿ ಹೊಸ ಸರಕಾರ ರಚಿಸಿ, ಸಮೀಕ್ಷೆಯನ್ನೇ ತಲೆಕೆಳಗೆ ಮಾಡಿತ್ತು.
ಬಹುತೇಕ ಸಲ ಚುನಾವಣಾ ಸಮೀಕ್ಷೆಗಳೇ ತಲೆಕೆಳಗಾಗಿವೆ. ಇದು ಹೊಸದೇನಲ್ಲ. ಈಗ ಚುನಾವಣಾ ಪೂರ್ವ ಸಮೀಕ್ಷೆ, ಮತಯಂತ್ರದ ಮೇಲೆ ಕಿಡಿಕಾರುತ್ತಿರುವ ಕಾಂಗ್ರೆಸ್ ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷಗಳು ಮತ್ತು ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಮೀಕ್ಷೆಯನ್ನು ಸಮರ್ಥಿಸುವ ಬಿಜೆಪಿ ಪಕ್ಷಗಳ ನಾಯಕರು ಮಾಡುತ್ತಿರುವುದು ಮಾತ್ರ ಶುದ್ಧ ರಾಜಕೀಯವೇ ಹೊರತು ಮತ್ತೇನಲ್ಲ. ಅಂದ ಹಾಗೆ ಚುನಾವಣಾ ಪೂರ್ವ ಸಮೀಕ್ಷೆಯನ್ನು, ಮತಯಂತ್ರವನ್ನು ನಿಷೇಧಿಸಬೇಕು ಹಳೆಯ ಚುನಾವಣಾ ಪದ್ಧತಿಯನ್ನೇ ಜಾರಿಗೆ ತರಬೇಕೆಂದು ಎಂದು ಅರಚುತ್ತಿರುವ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಮೀಕ್ಷೆಯ ಮೇಲೆ,ಮತಯಂತ್ರದ ಮೇಲೆ ಭರವಸೆ ಇದೆ ಎಂಬಂತೆ ಮಾತಾಡಿತ್ತು. ಅಂದರೆ, ಸಮೀಕ್ಷೆಗಳು ತಮ್ಮ ಪರವಾಗಿ ಬಂದಾಗ ನಂಬುವುದು, ಬರದಿದ್ದಾಾಗ ವಿರೋಧಿಸುವುದು ಎಲ್ಲ ಪಕ್ಷಗಳು ಮಾಡುತ್ತಲೇ ಬಂದಿವೆ. ಅದರಲ್ಲೂ ಕೆಲವು ಚಾನೆಲ್ಗಳು ವೃತ್ತಿಧರ್ಮವನ್ನು ಮರೆತು ತಮ್ಮನ್ನು ತಾವು ಒಂದೊಂದು ಪಕ್ಷಕ್ಕೂ ತಮ್ಮನ್ನು ತಾವು ಮಾರಿಕೊಂಡು ಆ ಪಕ್ಷದ ಮೂಗಿನ ನೇರಕ್ಕೆ ಸಮೀಕ್ಷೆ ನಡೆಸಿ ಫಲಿತಾಂಶ ಹೊರಹಾಕುತ್ತಿವೆ. ಹೀಗೆ ಒಂದು ಪಕ್ಷದ ಪರವಾಗಿರುವಂತೆ ಸಮೀಕ್ಷೆಯನ್ನು ತಯಾರಿಸಿ ಮತದಾರರ ಮೇಲೆ ಪ್ರಭಾವ ಭೀರುತ್ತವೆ. ಕೆಲವೊಮ್ಮೆ ಮತದಾರನು ಚುನಾವಣಾ ಪೂರ್ವ ಸಮೀಕ್ಷೆೆಯ ಆಧಾರದ ಮೇಲೆಯೇ ಅವನು ಯಾವ ಪಕ್ಷಕ್ಕೆ ಮತ ನೀಡಬೇಕೆಂದು ನಿರ್ಧರಿಸುತ್ತಾನೆ. ಒಮ್ಮೊಮ್ಮೆ ಮತದಾರರಿಗೆ ಗೊಂದಲವನ್ನುಂಟು ಮಾಡಲೆಂದೇ ಅಥವಾ ಒಂದು ಪಕ್ಷದ ಪರ ಮತದಾರರ ಒಲವು ಮೂಡಿಸಲೆಂದೇ ಸಮೀಕ್ಷೆಗಳನ್ನು ಬೇಕಾದಂತೆ ತಯಾರು ಮಾಡುತ್ತವೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಈ ಬಾರಿ ನೂರರ ಗಡಿ ದಾಟುವುದೇ ಅನುಮಾನವೆಂದೇ ಎಲ್ಲ ಸಮೀಕ್ಷೆಗಳು ಹೇಳುತ್ತಿವೆ. ದಶಕಗಳ ಕಾಲ ಇತಿಹಾಸವಿರುವ ರಾಷ್ಟ್ರೀಯಮಟ್ಟದ ಪಕ್ಷವೊಂದು ಯಾಕೆ ಈ ಸ್ಥಿತಿಗೆ ತಲುಪಿತು? ಪಕ್ಷದ ಇಂದಿನ ಹೀನಾಯ ಸ್ಥಿತಿಗೆ ಕಾರಣ ಯಾರು? ಯಾರನ್ನೂ ದೂರವಂತಿಲ್ಲ. ಇದಕ್ಕೆಲ್ಲ ಸ್ವತಃ ಆ ಪಕ್ಷದ ಹೈಕಮಾಂಡೇ ಕಾರಣ. ಆ ನಾಯಕನ ಬೇಜವಾಬ್ದಾರಿ ಹೇಳಿಕೆ, ನಾಯಕತ್ವದ ಕೊರತೆ, ಅತಿಯಾದ ಓಲೈಕೆ ರಾಜಕಾರಣ, ಅಧಿಕಾರದ ಹಪಾಹಪಿ, ಭ್ರಷ್ಟಾಚಾರ ಇವೆ ಕಾಂಗ್ರೆಸ್ನ ಇಂದಿನ ಹೀನಾಯ ಸ್ಥಿತಿಗೆ ಪ್ರಮುಖ ಕಾರಣ. ಈಗ ಕಾಂಗ್ರೆಸ್ನ ಸ್ಥಿಿತಿ ಹೇಗಿದೆಯೆಂದರೆ ನೂರಾರು ವರ್ಷದ ಹಳೆಯ ಮರವೊಂದು ಒಣಗುತ್ತಿರುವಂತೆ ಭಾಸವಾಗುತ್ತಿದೆ. ಒಂದು ಕಾಲವಿತ್ತು. ಚುನಾವಣಾ ಸಮಯದಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ, ನೀವು ಯಾರಿಗೆ ವೋಟು ಹಾಕಬೇಕೆಂದಿದ್ದೀರಿ ಎಂದು ಪ್ರಶ್ನಿಸಿದರೆ ಅವರ ಉತ್ತರ ‘ಇನ್ಯಾರಿಗೆ ಕೈಗೆ ಮತ. ಕೈಯಿಲ್ಲದ ಮನುಷ್ಯ ಹೆಂಗ್ ಬದುಕೋದು?’ ಎಂದು ಹೇಳುತ್ತಿದ್ದರು. ಟಂದು ಕಾಂಗ್ರೆಸ್ನ ಆಯ್ಕೆ ಅಷ್ಟು ಭಾವಾನಾತ್ಮಕವಾಗಿತ್ತು. ಪ್ರತಿಯೊಬ್ಬರ ಮನೆಯ ಮೇಲೆ ಕಾಂಗ್ರೆಸ್ ಧ್ವಜ ಹಾರಾಡುತ್ತಿತ್ತು. ಕಾಂಗ್ರೆಸ್ ಅಂದ್ರೆನೇ ಜನರಿಗೆ ಅದೊಂದು ರೀತಿ ಗೌರವದ, ಜೀವನದ ಪ್ರಶ್ನೆಯಾಗಿತ್ತು. ಕಾಂಗ್ರೆಸ್ ಇಲ್ಲದ ಬದುಕಲಾರೆವು ಎಂಬ ಭಾವ ಇತ್ತು ಆ ಪಕ್ಷವನ್ನು ಹೊರತುಪಡಿಸಿ ಯಾವ ಪಕ್ಷವನ್ನು ಕನಸಿನಲ್ಲಿ ನೆನೆಸಿಕೊಳ್ಳುತ್ತಿರಲಿಲ್ಲ. ಆ ಕಾಲಕ್ಕೆ ಕಾಂಗ್ರೆಸ್ನಿಂದ ಎಲೆಕ್ಟ್ರಿಕ್ ಕಂಬವನ್ನು ಚುನಾವಣೆಗೆ ನಿಲ್ಲಿಸಿದರೂ ಗೆದ್ದು ಬರುತ್ತದೆ ಎಂಬ ಮಾತಿತ್ತು. ಅಂತ ಕಾಂಗ್ರೆಸ್ ಈಗ ಏನಾಗಿದೆ. ಭ್ರಷ್ಟಾಚಾರದ ಮೇಲೆ ಭ್ರಷ್ಟಾಚಾರ, ಹಗರಣಗಳ ಮೇಲೆ ಹಗರಣಗಳ ಇತ್ತೀಚೆಗೆ ಚೀನಾ ರಹಸ್ಯ ಭೇಟಿ, ಪಾಕಿಸ್ತಾನಿ ಪರ ಹೇಳಿಕೆ, ಸರ್ಜಿಕಲ್ ಸ್ಟೈಕ್ ಸುಳ್ಳು ಎಂದು ಹೇಳಲು ಹೊರಟಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜೈಲಲ್ಲಿರುವ ಉಗ್ರರನ್ನು ಬಿಡುಗಡೆ ಮಾಡುವುದಾಗಿ ಕಾಶ್ಮೀರದಲ್ಲಿನ ಹೇಳಿಕೆ, ರಾಹುಲ್ ಗಾಂಧಿ ಉಗ್ರನಿಗೆ ಮಸೂದ್ ಜೀ ಎಂದು ಸಂಬೋಧಿಸಿದ್ದು ಕಾಂಗ್ರೆಸ್ನ ತಿಕ್ಕಲುತನಗಳು ಒಂದೇ, ಎರಡೇ? ಇವೆಲ್ಲಕ್ಕಿಂತ ಹೆಚ್ಚಾಗಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕಾಂಗ್ರೆಸ್ ವರ್ತಿಸಿದ ರೀತಿ ಹೇಗಿತ್ತು ಎಂಬುದು ಜನ ಕಂಡಿದ್ದಾರೆ. ದಿನಂಪ್ರತಿ ಪ್ರಧಾನಿಗೆ ಹುಚ್ಚ, ಕೊಲೆಗಡುಕ.. ಅವಾಚ್ಯಬೈಗುಳ ಇವೆಲ್ಲ ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದು ಸುಳ್ಳಲ್ಲ. ಇದರ ಜತೆಗೆ ಜನ ಈಗ ಹಳಬರಂತಿಲ್ಲ. ಅವರ ಮನೋಭಾವ, ನಿರೀಕ್ಷೆಗಳು ಬದಲಾಗಿವೆ. ರಾಷ್ಟ್ರೀಯತೆ ಬೆಳೆಸಿಕೊಂಡಿದ್ದಾರೆ. ದೇಶದ ವಿರುದ್ಧವಾಗಿ ಯಾರೇ ಹೇಳಿಕೆ ನೀಡಿದರೂ ಸಿಡಿದು ಬೀಳುತ್ತಾರೆ. ಅದು ಮೋದಿಯೇ ಆದರೂ ಸರಿಯೇ. ಆದರೆ ಮೋದಿಯವರು ಕಾಂಗ್ರೆಸ್ನಂತೆ ಓಲೈಕೆ ರಾಜಕಾರಣಕ್ಕೆ ಇಳಿಯದೇ ದೇಶವೇ ಮೊದಲು ಎಂದು ನೋಟು ಅಮಾನ್ಯೀಕರಣ, ಸದೃಢ ವಿದೇಶಾಂಗ ನೀತಿ, ಸರ್ಜಿಕಲ್ ಸ್ಟ್ರೈಕ್ನಂತಹ ಹಲವು ಮಹತ್ವದ ನಿರ್ಧಾರ ಕೈಗೊಂಡು ಆಡಳಿತ ನಡೆಸಿದ್ದರಿಂದ ಜನರು ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿರಿಸಿದ್ದಾರೆ. ಅದೇ ಕಾರಣಕ್ಕಾಗಿ ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಾಳೆ ಉದಯಿಸುವ ಸೂರ್ಯನಷ್ಟೇ ಸತ್ಯವಾಗಿದೆ.
– ರವಿ ಜಾನೇಕಲ್
ಹೌದು.. ಮೋದಿ ಮತ್ತೊಮ್ಮೆ👌👌
LikeLiked by 1 person
ಖಂಡಿತ ಮುಂದಿನ ಸಲವೂ ಅವರೇ 😊
LikeLike