ಈ ವರ್ಷದ ಮಹಾಮಳೆಗೆ ಮುಕ್ಕಾಲು ರಾಜ್ಯವೇ ಪ್ರವಾಹದಲ್ಲಿ ಮುಳುಗಿಹೋಗಿದೆ. ಬೆಳಗಾವಿಯಲ್ಲಿ ಸಾವಿರಾರು ಜನರು ಜನರು ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾಾರೆ. ಅಸಂಖ್ಯ ವನ್ಯಜೀವಿಗಳು ಕೊಚ್ಚಿ ಹೋಗಿವೆ. ಮಕ್ಕಳು, ಮುದುಕರು, ರೋಗಿಗಳು, ಮನೆಯ ಸಾಮಾನು ಸರಂಜಾಮುಗಳು, ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿಗಳು, ಪಹಣಿಗಳು ಆಹಾರ ಧಾನ್ಯಗಳು, ವರ್ಷಾನುಗಟ್ಟಲೆ ಬೆವರು ಹರಿಸಿ ಕೂಡಿಟ್ಟ ಹಣವು, ಜಾನುವಾರುಗಳು ಕಣ್ಣುಮುಂದೆಯೇ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಜನರು ಇದೆಲ್ಲ ನೋಡಿ ಭಯಭೀತರಾಗಿದ್ದಾಾರೆ. ಅವರು ಜೀವಚ್ಛವದಂತಾಗಿದ್ದಾಾರೆ. ಇಲ್ಲಿ ಸಿಲುಕಿರುವ ಜನರು ಕಳೆದ ಮೂರ್ನಾಲ್ಕು ದಿನಗಳಿಂದ ಹಸಿವೆಯಿಂದ ಸಾಯುತ್ತಿದ್ದಾರೆ. ಬದುಕುಳಿದವರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಕ್ಷಣಕ್ಷಣಕ್ಕೂ ಸಾಯುತ್ತಿದ್ದಾರೆ. ಇಷ್ಟಾದರೂ ರಾಜಕಾರಣಿಗಳ ಮನಸ್ಸು ಕರಗುತ್ತಿಲ್ಲ. ಅವರ್ಯಾರೂ ಜನರ ಸಹಾಯಕ್ಕೆ ಧಾವಿಸುತ್ತಿಲ್ಲ. ಅವರೆಲ್ಲ ಭವ್ಯಬಂಗಲೆಯಲ್ಲಿ ಕುಳಿತುಕೊಂಡು ಪ್ರವಾಹ ನೋಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.
ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ಅಲ್ಲ, ಅಂಥ ಬೇಸಿಗೆ ಬಿಸಿಲನ್ನು ಲೆಕ್ಕಿಸದೇ ತಿಂಗಳುಗಟ್ಟಲೆ ಭಿಕ್ಷುಕರಂತೆ ಮನೆಮನೆಗೆ ವೋಟು ಕೇಳಲು ಹೋದವರು, ಈಗ ಪ್ರವಾಹಪಿಡಿತ ಗ್ರಾಮಗಳಿಗೆ ಭೇಟಿ ನೀಡಿ, ನಿಮಗೆ ಮತ ನೀಡಿದ ಅದೇ ಮತದಾರರನ ಯೋಗಕ್ಷೇಮ ವಿಚಾರಿಸಲಾಗುತ್ತಿಲ್ಲವ? ಜನರಿಂದ ಗೆದ್ದು ಸಾವಿರಾರು ಕೋಟಿ ಹಣ ಮಾಡಿಕೊಂಡ ಈ ಭ್ರಷ್ಟರು ಅದರಲ್ಲಿ ಒಂದು ಕಾಲುಭಾಗದಷ್ಟೂ ಪ್ರವಾಹ ಪಿಡಿತ ಜನರಿಗಾಗಿ ನೀಡಲು ಮನಸ್ಸು ಮಾಡುತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ನವರು ಟ್ವಿಟರ್ ಮೂಲಕ ಆಡಳಿತ ಪಕ್ಷದ ಮೇಲೆ ಮುಗಿಬಿದ್ದು ಇಂಥ ಸಂದರ್ಭದಲ್ಲೂ ಹೇಸಿಗೆ ರಾಜಕೀಯ ಮಾಡುತ್ತಿದ್ದಾರೆ. ಆದರೆ ಒಬ್ಬೇ ಒಬ್ಬನು ಸರಕಾರದೊಂದಿಗೆ ಕೈಜೋಡಿಸಿ ಪ್ರವಾಹಪಿಡಿತ ಜನರ ರಕ್ಷಣೆಗೆ ನಿಲ್ಲುವ ಮಾತಾಡುತ್ತಿಲ್ಲ. ಇಲ್ಲಿ ಯಾರಿಗೂ ಸಂತ್ರಸ್ತರ ಮೇಲೆ ಕಾಳಜಿ ಇದ್ದಂತಿಲ್ಲ. ಬಿಜೆಪಿ ಸರಕಾರ ಬಂದು ತಿಂಗಳು ಕಳೆದಿಲ್ಲ. ಆಗಲೇ ‘ಪ್ರವಾಹ ಎದುರಿಸುವಲ್ಲಿ ಸರಕಾರ ವಿಫಲವಾಗಿದೆ’ ಎಂದು ಕಾಂಗ್ರೆಸ್-ಜೆಡಿಎಸ್ ಟ್ವಿಟ್ ಪ್ರವಾಹ ಹರಿಸುತ್ತಿವೆ. ಮೈತ್ರಿ ಸರಕಾರ ಇದ್ದಿದ್ದರೆ ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದ್ದರಾ? ಮೈತ್ರಿ ಸರಕಾರ ಇದ್ದಾಗಲೇ ಬೆಂಗಳೂರು ಒಂದರಲ್ಲೇ ಸುರಿದ ಸಾಮಾನ್ಯ ಮಳೆಗೆ ಆದ ಅವಾಂತರವೆಷ್ಟು ? ಅದೆಷ್ಟು ಮುಂಜಾಗ್ರತ ಕ್ರಮ ಕೈಗೊಂಡಿದ್ದೀರಿ ಎಂಬುದು ಬೆಂಗಳೂರಿನ ಜನರಿಗೆ ಗೊತ್ತಿದೆ. ಅಷ್ಟಕ್ಕೂ ಪ್ರವಾಹ ಪಿಡಿತರ ನೆರವಿಗೆ ಬರಲು ಅಧಿಕಾರವೇ ಇರಬೇಕಾ? ಅಧಿಕಾರವಿಲ್ಲದಿದ್ದಾಗಲೂ ಜನರ ರಕ್ಷಣೆ ಕಾರ್ಯ, ಗಂಜಿ ಕೇಂದ್ರ, ತಾತ್ಕಾಲಿಕ ವಸತಿ ಸ್ಥಾಪಿಸಲು ಸಾಧ್ಯವಾಗಲ್ಲವಾ? ಹಲವಾರು ಸಂಘ-ಸೇವಾಸಂಸ್ಥೆಗಳು, ಯುವಕರು, ಉದ್ಯೋಗಿಗಳ ಗುಂಪು, ಆರೆಸ್ಸೆಸ್ ಕಾರ್ಯಕರ್ತರು ಸಂತ್ರಸ್ತರ ನೆರವಿಗಾಗಿ ದೂರದೂರಿನಿಂದ ಪ್ರವಾಹಪಿಡಿತ ಪ್ರದೇಶಗಳಿಗೆ ಬಂದು ಅಲ್ಲಿನ ಜನರಿಗೆ ಊಟ-ಉಪಚಾರ ಮಾಡುತ್ತಿದ್ದಾರೆ.
ಅಂದಹಾಗೆ ಇವರಿಗೆಲ್ಲ ಯಾವ ಅಧಿಕಾರ ಇದೆ? ಎಲ್ಲವನ್ನು ಸರಕಾರವೇ ಮಾಡಬೇಕಾ? ನಿಮಗೇನಾಗಿದೆ ಧಾಡಿ? ಅಧಿಕಾರ ಕೊಟ್ಟರೆ ಮಾತ್ರ ಸಂತ್ರಸ್ತರ ನೆರವಿಗೆ ಬರುವ, ಅಧಿಕಾರ ಇಲ್ಲದಿದ್ದರೆ ಯಾರ ಸಹಾಯಕ್ಕೂ ಬಾರದ, ಬರೀ ಟ್ವಿಟ್ಟರ್ನಲ್ಲೇ ಬೊಗಳೆ ಬಿಡುವ ಇಂಥ ಭಂಡರಿಂದ ರಾಜ್ಯದ ಜನರು ಪ್ರಕೃತಿ ವಿಕೋಪಕ್ಕೆ ನರಳುವುದು ತಪ್ಪುವುದಿಲ್ಲ. ನಿಮಗೆ ಪ್ರವಾಹ ಸಂತ್ರಸ್ತರ ಶಾಪ ತಟ್ಟದೇ ಇರುವುದಿಲ್ಲ, ನೆನಪಿರಲಿ.
–ರವಿ, ಜಾನೇಕಲ್