ಪ್ರೊಫೆಶನಲ್ ಕುಡುಕ ರಾಯಚೂರು ಬಸ್ಯಾ!

ನಮ್ಮ ರಾಯಚೂರು ಬಸ್ಯಾ ಹುಟ್ಟಿದ ಐದು ವರ್ಷದಾಗ ಹಾಲು‌ ಕುಡ್ಯೋದು ಬಿಟ್ಟು ಅಲ್ಕೋಹಾಲ್ ಕುಡ್ಯೋಕ ಸುರು‌ಮಾಡಿದ್ನಂತೆ. ಅವತಿಂದ ಇವತ್ತಿನತಂಕ ದಿನಾ ಸಂಜಿಮುಂದ ರಾಯಲ್ ಸ್ಟ್ಯಾಗ್, ವೋಟಿ ಕುಡ್ದು ಕುಡ್ದು ಇತ್ತೀಚೆಗೆ ಅನಾರೋಗ್ಯಕ್ಕೊಳಗಾಗಿ ದಾವಖಾನಿಗೆ ದಾಖಲಾದ.

“ಕುಡ್ಯೋದು ಬಿಡಲೇ ಬದ್ಮಾಶ್” ಅಂತ ಊರು‌ಮಂದಿ ಕ್ಯಾಕರಿಸಿ ಉಗುದ್ರೂ, ಬೈದು ಬುದ್ಧಿ ಹೇಳಿದರೂ ಯಾರ ಮಾತೂ ಕೇಳದವ್ನು. ಅಲ್ಲದೆ “ಈ ಜಡ್ಡು ಜಾಪತ್ತು ಕುಡ್ಯೋದ್ರಿಂದ ಬಂದಿದ್ದಲ್ಲ. ತಿಂಗ್ಳಾತು ಇಡೀ ದೇಶಕ್ಕ ದೇಶನೇ ಲಾಕ್‌ಡೌನ್ ಆಗಿ, ದುಖಾನ್ ಬಂದ್ ಆಗ್ಯಾವು. ಊರು ಕಡಿ ಕಳ್ಳಬಟ್ಟಿನೂ ಸಿಗದಂಗಾಗ್ಯದ. ಇದರಿಂದ ಮುಂದೆಂಗ ಎಂಬ ಭವಿಷ್ಯ ಚಿಂತಿ ನನಗ. ಈ ಚಿಂತಿಲೇ ಜಡ್ಡು ಹತ್ತಿದ್ದಂಗಾಗ್ಯದ” ಅಂತ ಹೇಳವ.

ಹಂಗು ಹಿಂಗು ಬಸ್ಯಾನ ಮನಿಯವರು ದಾವಖಾನಿಗೆ ಸಾಗಿಸಿದ್ರು. ಕೆದರಿದ‌ ಕೂದಲು, ತಲಿಗೂದಲೊಳಗ ಬೇವಿನ ತೊಪ್ಪಲು, ಕಸ ಕಡ್ಡಿ ತುಂಬಿಕೊಂಡಿತ್ತು. ಅವನ ಸ್ಥಿತಿ, ಗಬ್ಬನಾತ, ಹೊಲ್ಸೆದ್ದ ಬಟ್ಟೆಬರೆ ನೋಡಿ ನರ್ಸಮ್ಮ ಸಿಟ್ಟಿಗೆದ್ದಳು. ‘ಲೋ ಯಪ್ಪಾ ನಿನಗೇನು ಬಂದಾದ ರೋಗ? ಮುತ್ತಿನಂಗ ಹೆಂಡ್ತಿ ಅದಾಳ. ಚೆಂದ ಸಂಸಾರ ಮಾಡ್ಕಂಡಿರೋದ್ಕೇನು ಧಾಡಿ ನಿನಗಾ?” ಅಂತ ಬೈದು ಕುಡಿತದಿಂದ ದೇಹಕ್ಕಾಗುವ ಅಪಾಯದ ಬಗ್ಗೆ ಬಸ್ಯಾಗ, ಬಸ್ಯಾನ ಹೆಂಡ್ತೀಗೂ ವಿವರಿಸಿ ಹೇಳಿದ್ಳು.

ನರ್ಸಮ್ಮ : ಅಲಾ ಖಬರಗೆಟ್ಟು ಕುಡ್ತಿಯಲ್ಲ, ಇದ್ರಿಂದ ನಿನಗೇನು ಸಿಗ್ತದಾ? ಏನು ಲಾಭ ಆದ?

ಈ ನರ್ಸಮ್ಮ, ಡಾಕ್ಟರಮ್ಮಗಳ ತಲಿನಾ ಹಿಂಗ. ಇವಕ್ಕೆ ಬರೀ ಗುಳಿಗಿ ಬರಕೊಡೋದು, ಸೂಜಿ ಮಾಡೋದಷ್ಟ ಗೊತ್ತು, ಕುಡ್ಯೋದು ಗೊತ್ತಿಲ್ಲ. ಕುಡಿತದಿಂದ ಆಗೋ ಲಾಭ ಗೊತ್ತಿಲ್ಲ. ಅಲ್ಲಿ ಸಿಗೋ ಆನಂದ ಗೊತ್ತಿಲ್ಲ, ಅನುಭವಿಸಿಲ್ಲ. ಪ್ರಶ್ನೆ ಕೇಳಿ ಕೇಳಿ ಕುಡ್ಯೋರ ತಲಿ ಕೆಡಿಸ್ತವ. ಉದ್ದಕ ಓದಿದ್ರೇನು ಬಂತು ದಂಡಕ್ಕೆ ಅಂತ‌ ಮನಸೊಳಗೇ ಬೈಕೊಂಡ ಬಸ್ಯಾ, ಅದನ್ನು‌ ಮುಖದಲ್ಲಿ ತೋರಿಸದಂತೆ “ನರ್ಸಮ್ಮ, ನೀನ್ಯಾವತ್ತು ಕುಡಿದಿಲ್ಲ ಅಲಾ, ಅದ್ಕೆ ಅದರ ಸೆಳೆತ ನಿನಗೆ ತಿಳಿದಿಲ್ಲ. ನಾ ಏನ ಹೇಳಿದ್ರೂ ನಿಂಗ ಅರ್ಥಾಗಂಗಿಲ್ಲ” ಅಂದ.

“ಹಾ, ಸೆಳಕೊಳ್ಳಾಕ ಅಂಥದೇನಾದ ಅದರಾಗ ಮಣ್ಣು?. ತಗೊಂಡಬಾ ನಾನೂ ಕುಡಿದು ನೋಡ್ತೀನಿ. ಆದರ ನಿನ್ನಂಗ ಕುಡಿತಕ್ಕ ಜೋತು ಬೀಳಂಗಿಲ್ಲ” ಅಂತ ನರ್ಸಮ್ಮ ಬಸ್ಯಾಗ ಸವಾಲು ಹಾಕಿದ್ಳು.

ಬಸ್ಯಾ ಈ ಸವಾಲಿಗೆ ಒಪ್ಪಿದ. ಹೆಂಗೂ ಈ ಸವಾಲಿನ ಖರ್ಚಿನ್ಯಾಗ ತನಗೊಂದು ದಕ್ಕಬಹುದು ಎಂಬ ದೂರಾಲೋಚನೆ ಅವಂದು!

ಆದರ ನರ್ಸಮ್ಮ ಒಂದು ಕಂಡಿಷನ್ ಹಾಕಿದ್ಳು, “ನೋಡ್ ಬಸ್ಯಾ, ನಾನು ಹೇಳಿಕೇಳಿ ನರ್ಸಮ್ಮ ಅದೇನಿ. ಈ ದಾವಖಾನ್ಯಾಗ ಕೆಲಸ ಮಾಡಕತ್ತೀನು. ಹಂಗಾಗಿ ನಿನ್ನಂಗ ಪಬ್ಲಿಕದಾಗ ಕುಡ್ಯೋಕ ನನಗ ಆಗಂಗಿಲ್ಲ. ಅದಕ್ಕ ನೀ‌ ಒಂದು ಕೆಲಸ ಮಾಡು, ರಾಯಲ್ ಸ್ಟ್ಯಾಗ್ ಆಗಲಿ, ವೋಡ್ಕಾ ಆಗಲಿ ಎಳೆನೀರಿನ ಕಾಯೊಳಗ ಹಾಕಿಸಿಕೊಂಡ ಬಾ ಅಂದ್ಳು.

“ಸರಿ ನಿಮ್ಮೌನ್” ಅಂತ ಮನಸಿನ್ಯಾಗ ಬೈದುಕೊಂಡು ಹೊರಟ ಬಸ್ಯಾ. ದಾವಖಾನೆ ಬಗಲಕಿದ್ದ ದುಖಾನಂಗಡಿಗೆ ಹೋದ. ಅಲ್ಲಿ ವೋಡ್ಕಾ ಖರೀದಿಸಿ ಎಳೆನೀರು ಮಾರುವವನ ಬಳಿ ಬಂದು, ಈ ವೋಡ್ಕಾ ಪಾಕೇಟ್ ಎಳೆನೀರಿನೊಳಗ ಬೆರೆಸಿಕೊಡುವಂತೆ ತಿಳಿಸಿದ.

ಎಳೆನೀರು ಮಾರುವವನು ಬಸ್ಯಾನ ಕಡೆ ಅನುಮಾನದಿಂದ ನೋಡಿದ. “ಇವನ್ಯಾಕ ಹಿಂಗ್ ನೋಡ್ತಿದಾನೆ’ ಅಂತ ಬಸ್ಯಾಗೂ ತಲಿ ಕೆಡಿತು.

ಎಳನೀರಿನವನು ಕೇಳಿದ, “ಇದನ್ನು ಯಾರು ತರೋಕ ಹೇಳಿದ್ದು‌ ನಿನಗಾ?; ಎದುರುಗಡೆ ದಾವಖಾನಿ ನರ್ಸಮ್ಮಾ?”

ಈ ಮಾತು ಕೇಳಿ ಬಸ್ಯಾಗೂ ಬಾಳ ಆಶ್ಚರ್ಯ ಆತು. “ಹೌದು, ಆ ನರ್ಸಮ್ಮಳೇ ಕಳಿಸಿದ್ದು ನಿನಗ ಹೆಂಗ್ ಗೊತ್ತಾತು?” ಅಂತ ಬಸ್ಯಾ ಪ್ರಶ್ನಿಸಿದ.

ಎಳನೀರು ಮಾರುವವನು ನಕ್ಕು, ” ಆ ನರ್ಸಮ್ಮ ಇವತ್ತು‌ ಮುಂಜಾನಿಂದ ಎಳೆನೀರು ತರಿಸ್ತಿರೋದು ಇದು ಎಂಟನೇ ಸಲ” ಅಂದ.

ಬಸ್ಯಾ, ಎಲಾ ಇವಳಾ!!!

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s