ಜೀವನದಲ್ಲಿ ನಡೆಯುವ ಪ್ರತಿ ಘಟನೆಯ ಹಿಂದೆಯೂ ಒಂದು ಕಾರಣ ಇರುತ್ತದೆ. ಯಾವುದೋ ಕಾಯಿಲೆ, ಗಾಯ, ನೋವು, ಪ್ರೀತಿ, ಗತಿಸಿ ಹೋದ ಮರೆಯಲಾರದ ಕ್ಷಣಗಳು ಅಥವಾ ಮೇರೆ ಮೀರಿದ ಮೂರ್ಖತನ ಯಾವುದೂ ಅಕಸ್ಮಾತ್ ಅಥವಾ ಅದೃಷ್ಟವಶಾತ್ ಜರುಗಿರುವುದಿಲ್ಲ. ಎಲ್ಲವೂ ನಮ್ಮ ಆತ್ಮಶಕ್ತಿಯನ್ನು, ಸಾಮರ್ಥ್ಯವನ್ನು ಕಂಡುಕೊಳ್ಳಲು ಒದಗಿದ ಸಲಕರಣೆಗಳಾಗಿರುತ್ತವೆ. ಈ ಸಣ್ಣ ಸಣ್ಣ ಉಬ್ಬರ ಇಳಿತಗಳು ಇಲ್ಲದಿದ್ದರೆ ಸಪಾಟಾದ, ಎಲ್ಲಿಗೂ ಕರೆದೊಯ್ಯದ ರಸ್ತೆಯಾಗಿ ಬಿಡುತ್ತದೆ ಬದುಕು. ಎಲ್ಲ ಸರಿಯಾಗಿದೆ, ಅನುಕೂಲಕರ ಮತ್ತು ಸುರಕ್ಷಿತವಾಗಿದೆ ಆದರೆ ಪಯಣದಲ್ಲಿ ಏನೂ ಸ್ವಾರಸ್ಯವಿಲ್ಲ ಎನಿಸಿ ಬಿಡುತ್ತದೆ.
ಒಟ್ಟಿನಲ್ಲಿ, ನಮ್ಮ ಸಂಪರ್ಕಕ್ಕೆ ಬಂದು ಜೀವನವನ್ನು ಪ್ರಭಾವಿಸುವ ವ್ಯಕ್ತಿಗಳು ಹಾಗೂ ಅನಿರೀಕ್ಷಿತ ದುರ್ಘಟನೆ, ದುಃಖ-ಆಘಾತಗಳು ನಮ್ಮ ನೈಜ ವ್ಯಕ್ತಿತ್ವವನ್ನು ರೂಪಿಸುತ್ತವೆ ಎನ್ನಬಹುದು. ಕೆಟ್ಟ ಅನುಭವಗಳೂ ನಮಗೆ ಅಮೂಲ್ಯ ಸಂಗತಿಗಳನ್ನು ಮನವರಿಕೆ ಮಾಡಿಕೊಡಲು ನಿಮಿತ್ತವಾಗಿ ಬರಬಹುದು.
ಉದಾಹರಣೆಗೆ ಯಾರಾದರೂ ನಮ್ಮನ್ನು ನೋಯಿಸಿದರೆ, ದ್ರೋಹ ಮಾಡಿದರೆ, ಪ್ರೇಮ, ಪ್ರೀತಿ ನಿರಾಕರಿಸಿ ಹೃದಯ ಒಡೆದರೆ ನಂಬಿಕೆ, ಪ್ರೀತಿ, ವಿಶ್ವಾಸಗಳ ನೈಜ ರೂಪ ಹೀಗಿರುವುದಿಲ್ಲ ಎನ್ನುವ ಅರಿವು ಮೂಡಿಸುತ್ತದೆ. ಹಿಂದೆ ಮುಂದೆ ಯೋಚಿಸದೆ ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಎಂತಹ ಅಚಾತುರ್ಯಗಳಿಗೆ ಕಾರಣವಾಗುತ್ತದೆ ಎಂದು ಕಣ್ತೆರೆಸುತ್ತದೆ. ಹಾಗೆ ಅವರನ್ನು ಉದಾರವಾಗಿ ಕ್ಷಮಿಸಿ, ಈ ಪಾಠಗಳನ್ನು ಕಲಿಯುವುದು ಸರ್ವರಿಗೂ ಹಿತ.
