ಶ್.. ನಾಳೆ ಬಾ!

ಅವತ್ತು ಎಂದಿನಂತೆ ಮುಂಜಾನೆ ಮಕ್ಕಳು ಶಾಲೆಗೆ ಬಂದಿದ್ದರು. ಮಕ್ಕಳು ಶಾಲೆಗೆ ಬಂದ ನಂತರ, ಪ್ರಾರ್ಥನೆಗೆ ಬೆಲ್ ಬಾರಿಸುವವರೆಗೆ ಶಾಲಾ ಆವರಣದಲ್ಲಿ ಕುಂಟುಪಿಲ್ಲೆ, ಕಣ್ಣುಮುಚ್ಚಾಲೆ ಆಟವಾಡುವುದು, ಇಲ್ಲಂದ್ರೆ ನೋಟ್ಸ್ ಬರೆಯುವುದು ರೂಢಿ. ಆದರೆ ಅಂದು ಯಾಕೋ ಏನೋ ಮಕ್ಕಳು ಗುಂಪು ಗುಂಪಾಗಿ ಏನೋ ಗುಸು ಗುಸು ಮಾತಾಡ್ತಿದ್ದುದು ಕಾಣಿಸಿತು. ಯಾವತ್ತೂ ಇಷ್ಟು ಗಾಬರಿಗೆ ಬಿದ್ದಿದ್ದು ನೋಡಿರಲಿಲ್ಲ. ಸ್ವಲ್ಪ ಆತಂಕದಲ್ಲಿದ್ದುದನ್ನು ಗಮನಿಸಿದೆ. ಅತಂಕ ಮೂಡಿಸುವ ಸುದ್ದಿಗಳು, ಘಟನೆಗಳು ನಡೆದಾಗ ಮಕ್ಕಳು ಮಾತಾಡುವಾಗ ತಮ್ಮ ಕಣ್ಣುಗುಡ್ಡೆ ದೊಡ್ಡದು ಮಾಡುವುದು ಸಾಮಾನ್ಯ.

ಏನೋ ಮಾತಾಡುತ್ತಾ ನಡುನಡುವೆ ಅಬ್ಬಾ! ಎಂದು ಎರಡು ಕೈಗಳಿಂದ ಬಾಯಿ ಮುಚ್ಚಿಕೊಳ್ಳುತ್ತಿದ್ದವು. ಅಂದು ಆರೇಳು ತರಗತಿಯ ಮಕ್ಕಳಿಂದಿಡಿದು, ಎಲ್‌ಕೆಜಿ ಯುಕೆಜಿ ಸಣ್ಣ ಸಣ್ಣ ಮಕ್ಕಳತನಕ ಆವರಣದಲ್ಲಿ ಅಲ್ಲಲ್ಲಿ ಗುಂಪು ಕಟ್ಟಿ ಕುಳಿತು, ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದವು. ಆ ರೀತಿ ಮಕ್ಕಳು ಮಾತುಕತೆ ನಡೆಸಿದ್ದು ಅಪರೂಪ. ಏನು ಮಾತಾಡುತ್ತಿರಬಹುದು, ಯಾವ ವಿಷಯದ್ದಿರಬಹುದು, ಊರಲ್ಲಿ ನಿನ್ನೆ ಏನಾದರೂ ಗಲಾಟೆ ಆಗಿರಬಹುದಾ, ಕಳ್ಳರು ಬಂದಿರುವ ಸುದ್ದಿ ಹಬ್ಬಿರಬಹುದಾ ಅಥವಾ ಯಾವುದಾದರೂ ಹಾರರ್ ಸಿನಿಮಾ ನೋಡಿಬಿಟ್ವಾ ಏನ್ ಕತೆ ? ಅಂತ ಯೋಚಿಸುತ್ತಲೇ ದೂರದಲ್ಲಿ ಕುಳಿತಿದ್ದೆ. ಸಮಯ ಸರಿದಂತೆ ಮಕ್ಕಳ ಸಂಖ್ಯೆ ಜಾಸ್ತಿಯಾಯಿತು. ಗುಂಪುಗಳು ಹೆಚ್ಚಾದವು. ಕುತೂಹಲ ನನಗೂ ಜಾಸ್ತಿಯಾಗುತ್ತಿತ್ತು. ಶಾಲೆಯ ಪ್ರಾರ್ಥನೆ ಗಂಟೆ ಹೊಡೆಯಿತು. ಪ್ರಾರ್ಥನೆ ಮುಗಿದ ನಂತರ ನಾನು ಹಾಜರಿ ಪುಸ್ತಕ ಕೈಯಲ್ಲಿಡಿದು ಐದನೇ ತರಗತಿಗೆ ಹೋದೆ.

ಅಲ್ಲಿ ಕೂಡ ಮಕ್ಕಳು ಮತ್ತದೇ ಗುಸು ಗುಸು ಸುದ್ದಿ ಮುಂದುವರಿಸಿದ್ದರು. ‘ಏನ್ರೋ ಅದು, ಬೆಳಗ್ಗೆಯಿಂದ ನಾನೂ ನೋಡ್ತಾ ಇದೀನಿ. ಏನು ಚರ್ಚೆ ನಡೆಸಿರೋದು? ಏನು ಅಂತಾ ಘಟನೆ ನಡೆಯಿತು? ಅಂತ ವಿದ್ಯಾರ್ಥಿಯೊಬ್ಬನ ಪ್ರಶ್ನಿಸಿದೆ. ಈ ಅವಕಾಶಕ್ಕಾಗಿ ಕಾಯುತ್ತಿದ್ದನೋ ಎಂಬಂತೆ ಎಲ್ಲ ಮಕ್ಕಳು ಒಟ್ಟಿಗೆ ಸಾ…ರ್ ಅಂತ ಹೇಳಲು ಶುರು ಹಚ್ಚಿಕೊಂಡವು.

‘ ಸ್ವಲ್ಪ ಸುಮ್ನೆ ಕೂಡ್ತೀರಾ, ಎಲ್ಲರೂ ಹೀಗೆ ಗಲಾಟೆ ಮಾಡಿದ್ರೆ ನನಗೆ ಹೇಗೆ ತಿಳಿಬೇಕು? ನಿಮ್ಮಲ್ಲೆ ಯಾರಾದರೂ ಒಬ್ಬರು ಎದ್ದು ನಿಂತು ಹೇಳಿ, ಉಳಿದವರು ಸುಮ್ಮನೆ ಕುಳಿತುಕೊಳ್ಳಿ’ ಎಂದೆ. ಅದಕ್ಕೆ ಮಕ್ಕಳೆಲ್ಲ ತಮ್ಮ ತಮ್ಮಲ್ಲೇ ಮಾತಾಡಿಕೊಂಡು, ಕೊನೆಗೆ ಹುಟ್ಟು ವಾಚಾಳಿಯಾಗಿದ್ದ ಕೇಶವ್‌ಕುಮಾರನನ್ನ ಸುದ್ದಿ ವಿವರಿಸಲು ಎಬ್ಬಿಸಿದರು. ಅವನು ಓದಿನಲ್ಲಿ ಮುಂದೆ. ಅದಕ್ಕಿಂತಲೂ, ಗಾಳಿಸುದ್ಧಿಗಳನ್ನ ರಣರೋಚಕವಾಗಿ ಹೇಳುವಂಥವನು. ಕಥೆ ಕಟ್ಟುವುದರಲ್ಲಿ ಒಂದು ಹೆಜ್ಜೆ ಮುಂದು. ಅವನು ಎದ್ದು ನಿಂತು ಕೈಕಟ್ಟಿದ. ನಡೆದ ಘಟನೆ ಹೇಳಲು ಮತ್ತೇ ಸಾ… ಎಂದು ಶುರುಮಾಡಿದ. ‘ಸಾಕು ಮುಂದೇನು ಕತೆ ಹೇಳು’ ಎಂದೆ.

‘ಸರ್ ನಿಮಗೆ ಗೊತ್ತಿಲ್ಲೇನ್ರೀ, ಊರಾಗ ನಿನ್ನೆಯಿಂದ ರಾತ್ರಿ ತಾಯಮ್ಮವ್ವ ಕಾಲಿಗೆ ಗೆಜ್ಜೆ ಕಟಿಗೊಂಡು ತಿರುಗುತ್ತಿದ್ದಾಳಂತ್ರಿ, ರಾತ್ರಿ ಹೊತ್ತು ಘಲ್ ಘಲ್ ಅಂತ ಗೆಜ್ಜೆ ಹೆಜ್ಜೆ ಶಬ್ದ ಬರುತ್ತಂತ್ರಿ. ಊರೆಲ್ಲ ತಿರುಗ್ಯಾಡಕತ್ಯಾಳಂತ್ರಿ. ಓಣಿ ಓಣಿಗೆ ಓಡಾಡ್ತಳಂತ್ರಿ. ಯಾರನ ರಾತ್ರಿ ಹತ್ತು ಗಂಟೆ ಮ್ಯಾಲ ಮನಿ ಒಳಗ ಎದ್ದು ಕುಂತಿದ್ರೆ, ರಾತ್ರಿಹೊತ್ನಲ್ಲಿ ಮನಿಯೊಳಗ ಲೈಟ್ ಹಚಗೊಂಡು ಮಕ್ಕಂಡಿದ್ರೆ ಬಾಗ್ಲಿ ಬಡಿತಾಳಂತ್ರಿ, ಬಾಗ್ಲಿ ತೆರೆಯೋವರೆಗೆ ಬಿಡಂಗಿಲ್ಲಂತ್ರಿ, ನಿನ್ನೆ ರಾತ್ರಿ ಹೊತ್ನಲ್ಲಿ ಏನ್ ಆತಿ ಗೊತ್ತೇನ್ರಿ? ಉಚ್ಚೆ ಹೊಯ್ಯೊದಕ್ಕೆ ಎದ್ದು ರೋಡ್ ಮ್ಯಾಗ ಹೋಗಿದ್ದ ಹೊಟೇಲ್‌ಸಾಬ್‌ಗೆ ರೋಡಿನಮೇಲೆ ತಾಯಮ್ಮವ್ವ ಕಾಣಿಸಿದಳಂತ್ರೀ ಸ್ವಲ್ಪದರಲ್ಲಿ ಸಿಗ್ತಿದ್ದನಂತ್ರಿ. ತಾಯಮ್ಮವ್ವನ ಕಂಡು ಉಚ್ಚಿ ಹೊಯ್ಯೋದ್ಬಿಟ್ಟು ತುರ್ರಾ ಓಡಿ ಬಂದು ಮನೆಗೊಕ್ಕಂಡು ಬಾಗಿಲು ಮುಚ್ಕೊಂಡನಂತ್ರೀ..

ಅವನು ಇದನ್ನ ಹೇಳುವಾಗ, ಕೇಳುತ್ತಾ ಕುಳಿತಿದ್ದ ಮಕ್ಕಳಿಗೆ ಮಧ್ಯೆ ನಗು ಬಂದರೂ, ಭಯಕ್ಕೆ ಬಾಯಿಗೆ ಕೈ ಅಡ್ಡಹಾಕಿ ನಗು ತಡೆಯುತ್ತಿದ್ದವು. ಶಾಲೆ ಕಿಟಕಿಯಿಂದ ನೂರು ಮೀಟರ್‌ನಷ್ಟೇ ದೂರ ಇದ್ದ ತಾಯಮ್ಮ ದೇವಿ ಗುಡಿ ಇದ್ದಿದ್ರಿಂದ ಮಕ್ಕಳ ಭಯ ಇನ್ನಷ್ಟು ಹೆಚ್ಚಿಸಿತ್ತು. ಅವನು ಮಾತು ಮುಂದುರಿಸಿದ್ದ, “ಸಾ.. ಹೋಟೆಲ್ ಸಾಬ್ ರಾತ್ರಿಯೆಲ್ಲ ಹೆದರಿ ಎದೆ ಹೊಡ್ಕಂಡ್ ಜ್ವರ ಬಂದಾವಂತ್ರಿ. ಮುಂಜಾನೆ ಮಾನವಿ ದಾವಖಾನೆಗೆ ಆಟೋದಾಗ ಹಾಕೊಂಡು ಹೋದರಂತ್ರಿ. ದೊಡ್ಡವ್ರು ಮಾತಾಡಕತ್ತಿದ್ರೀ, ಊರು ತುಂಬಾ ಇದೆ ಸುದ್ದಿ ಮಾತಾಡಕತ್ಯಾರ್ರೀ. ಸಾಲಿ ಬಿಟ್ಟಮ್ಯಾಲ ಸಂಜಿಮುಂದ “ಸಾಲಿ ಅಂಗಳದಾಗ ನಿಮ್ಮ ಮಾಸ್ತರ ಜತಿಗೆ ಆಡಕೊಂತ ಕೂಡಬ್ಯಾಾಡ್ರಿ, ಹೊತ್ತು ಮುಣುಗುದ್ರೊಳಗ ಜಲ್ದಿ ಮನಿಗಿ ಬರ್ರಿ” ಅಂತ ನಮ್ಮವ್ವ ಹೇಳ್ಯಾಾಳ್ರಿ ಸರ್, ಯಾರು ಸುಳ್ಳು ಹೇಳಿದರೂ ನಮ್ಮವ್ವ ಸುಳ್ಳು ಹೇಳಾಂಗಿಲ್ರೀ ಸರ್. ಖರೇವಂದ್ರ ಖರೇವು ಸರ್. ತಾಯಮ್ಮವ್ವ ಓಡ್ಯಾಡಕತ್ಯಾಳಂತ್ರಿ.’ ನಾವು ಇವತ್ತು ಇಲ್ಲಿ ಸಂಜೆ ಹೊತ್ತು ಇರಂಗಿಲ್ರಿ” ಅಂತ ಒಂದೇ ಉಸಿರಿಗೆ ನಡೆದ ಘಟನೆ ಹೇಳಿದ ಕೇಶವ್ ಕುಮಾರ.

ಮಕ್ಕಳಿಗೆ “ದೆವ್ವ ಮತ್ತು ದೇವರು” ಬಗ್ಗೆ ಹೇಗೆ ತಿಳಿಸಿ ಹೇಳಬೇಕು ಅಂತ ಕೆಲ ನಿಮಿಷ ಯೋಚನೆಗೆ ಬಿದ್ದೆ.

‘ಇವೆಲ್ಲ ಸುಳ್ಳು ಕಣ್ರೋ, ಹೊಟೇಲ್‌ನವನು ಪುಕ್ಕಲ ಇರಬೇಕು. ರಾತ್ರಿ ಉಚ್ಚೆ ಹುಯ್ಯೋಕ ಬಂದಾಗ ರೋಡಿನ ಮೇಲೆ ಯಾವುದೋ ವಸ್ತುವಿನ ಆಕೃತಿ ನೋಡಿ ಹೆದರಿಕೊಂಡಿರಬೇಕು. ಭಯ ಇರುವವನ ಕಣ್ಣಿಗೆ ಹಗ್ಗವೂ ಹಾವಿನಂತೆ ಕಾಣುತ್ತೆ. ಕತ್ತಲಲ್ಲಿ ಒಬ್ಬಂಟಿಯಾಗಿ ಹೋದಾಗ ಭಯ ಶುರುವಾಗುತ್ತೆ ಆ ಕ್ಷಣದಲ್ಲಿ ಯೋಚನೆಗಳು ಆ ರೀತಿ ದೆವ್ವದ ವಿಚಾರಗಳು ತಲೆಯಲ್ಲಿ ಬರುತ್ತವೆ. ಆಗ ಕಲ್ಲು ನೋಡಿದರೂ ದೆವ್ವದ ತರ ಕಾಣುತ್ತೆ, ಗಿಡ ನೋಡಿದರೂ ದೆವ್ವದ ತರ ಕಾಣುತ್ತೆ. ರಾತ್ರಿ ಕೆಲವು ಕೀಟಗಳ ಅರಚಾಟ ಗೆಜ್ಜೆಯ ಸಪ್ಪಳದಂತೆ‌ ಇರುತ್ತೆ. ಮೊದಲೇ ಪುಕ್ಕಲ ಆಗಿದ್ದರೆ ಕಲ್ಲು, ಗಿಡಗಳು ಕೀಟದ ಅರಚಾಟ ಎಲ್ಲವೂ ಸೇರಿಕೊಂಡು ದೆವ್ವದ ಆಕಾರ ಪಡೆದು ನಡೆದು ಬಂದಂತಾಗುತ್ತೆ. ನಮ್ಮ ಮೆದುಳಿನಲ್ಲಿ ಆ ರೀತಿ ಭ್ರಮೆ ಹುಟ್ಟಿಸುತ್ತವೆ. ಅವನು ಇಂಥದ್ದೆ ನೋಡಿರಬೇಕು. ನಿಮಗೆ ಒಂದು ಘಟನೆ ಹೇಳ್ತೀನಿ ಕೇಳಿ,‌ಮಾತು ಮುಂದುವರಿಸಿದೆ.

“ನಾನು ನಿಮ್ಮ ಶಾಲೆಗೆ ಶಿಕ್ಷಕನಾಗಿ ಬಂದ ಹೊಸತರಲ್ಲಿ ನನಗೂ ನಿಮ್ಮೂರಿನ ಕೆಲವು ಮಂದಿ ಹೇಳ್ತಿದ್ರು – ‘ಸರ್ ಆ ಸಾಲ್ಯಾಗ ವಾಸ್ತವ್ಯ ಮಾಡಬಾಡ್ರಿ, ಪಾಠ ಹೇಳಿ ಸಂಜೆ ಊರಿಗೆ ಹೋಗಿ್ರ. ಊರಿನಿಂದ ದಿನ ಬಸ್‌ಗೆ ಬಂದು ಹೋಗ್ರಿ. ಇಲ್ಲಿ ಮಾತ್ರ ಇರಬೇಡಿ. ಆ ಸಾಲಿ ಅಂಗಳದಾಗ ರಾತ್ರಿ ಹೊತ್ತು ಸಣ್ಣ ಹುಡುಗಿ ದೆವ್ವ ಆಗಿ ತಿರುಗಾಡ್ತಾಳ್ರಿ ಆ ಹುಡುಗಿ ಇದೇ ಸಾಲ್ಯಾಗ ಸತ್ತಾಳಂತ್ರಿ. ಈಗ ದೆವ್ವ ಆಗ್ಯಾಳಂತ್ರಿ

ತಾಯಮ್ಮವ್ವನೂ ತಿರುಗ್ಯಾಡ್ತಾಳ್ರೀ. ತಾಯಮ್ಮವ್ವ ಬೆರಕಿ ಐದಾಳ್ರಿ, ಕಣ್ಣಿಗೆ ಕಂಡೋರನ ಸುಮ್ಮನೆ ಬಿಡಾಂಗಿಲ್ರಿ ನೀವು ಇಲ್ಲಿರೋದು ಒಳ್ಳೆದಲ್ಲ ’ ಅಂತ ಆ ಜನರು ಹೇಳ್ತಿದ್ರು.

ನಾನು ಬೇರೆ ಊರಿನವನು ಆದ್ದರಿಂದ ದಿನಾ ಊರಿಗೆ ಹೋಗಿಬರಲು ಬಸ್ಸಿನ ಅನಾನುಕೂಲದಿಂದಾಗಿ ಆಫೀಸ್ ಕೊಠಡಿಯಲ್ಲೇ ವಾಸವಿದ್ದೆ. ಶಾಲೆಯ ಸುತ್ತಮುತ್ತವೂ ಭಯ ಹುಟ್ಟಿಸುವ ರೀತಿಯೇ. ಶಾಲೆಯ ಹಿಂಬದಿ ಸ್ಮಾಶನ, ಇನ್ನೊಂದು ಬದಿ ತಾಯಮ್ಮದೇವಿ ಗುಡಿ, ದೆವ್ವ-ದೇವರುಗಳ ಸಂಗಮ ಅದು!

“ದೇವರಂಥ ಮಕ್ಕಳು ಸತ್ತು ದೆವ್ವಗಳಾಗೋದುಂಟಾ ? ಮುಠ್ಠಾಳ ಜನಗಳು ಇವರು. ಯಾವಾಗ ಬುದ್ಧಿ ಬರುತ್ತೋ ಇವರಿಗೆಲ್ಲ. ತಾವು ಪುಕ್ಕಲರು ಆಗಿದ್ದಲ್ಲದೆ ನಿಮ್ಮನ್ನೂ ದೇವರು, ದೆವ್ವದ ಹೆಸರಿನಲ್ಲಿ ಹೆದರಿಸುತ್ತಿದ್ದಾರೆ. ಇವೆಲ್ಲ ಸುಳ್ಳು ಅಂತ ಮಕ್ಕಳಿಗೆ ತಿಳಿಹೇಳಿದೆ.

ನಾನು ಆ ಶಾಲೆಯ ಕೊಠಡಿಯಲ್ಲಿ ಎರಡ್ಮೂರು ವರ್ಷಗಳ ಕಾಲ ಒಬ್ಬಂಟಿಯಾಗಿ ಇದ್ದೆ. ರಾತ್ರಿ ಊಟ ಮಾಡಿದ ನಂತರ, ದಿನಾಲೂ 10 ರಿಂದ 11 ಗಂಟೆಯವರೆಗೂ ಶಾಲೆ ಅಂಗಳದಲ್ಲಿ ವಾಕಿಂಗ್ ಮಾಡುವುದು ರೂಢಿಯಾಗಿತ್ತು. ಹಳ್ಳಿಯಲ್ಲಿ ಸಾಮಾನ್ಯವಾಗಿ ರಾತ್ರಿ 8 ಗಂಟೆಗೆ ಜನ ಮಲಗಿಬಿಟ್ಟಿರುತ್ತಾರೆ. ಹತ್ತು ಹನ್ನೊಂದು ಗಂಟೆ ಅಂದರೆ ಮಧ್ಯರಾತ್ರಿ ಆದಂತೆ. ಮುಂಜಾನೆ ತಾಸುಗಟ್ಟಲೇ ನನ್ನೊಂದಿಗೆ ಮಾತುಕತೆಯಾಡುತ್ತಿದ್ದ ಪಕ್ಕದ ಮನೆಯವನೊಬ್ಬ, ರಾತ್ರಿ ನಾನು ಅಂಗಳದಲ್ಲಿ ಒಬ್ಬನೇ ವಾಕಿಂಗ್ ಮಾಡುತ್ತಿದ್ದಾಗ, ನನ್ನನ್ನು ನೋಡಿ ಉಚ್ಚೆ ಹುಯ್ಯುವುದಕ್ಕೆ ಹೊರಗಡೆ ಬಂದವನು ವಾಪಸ್ಸು ಮನೆಯೊಳಗೆ ಹೋಗುತ್ತಿದ್ದ. ನಾನು ಸುಮ್ಮನೆ ಅತ್ತಿಂದಿತ್ತ, ಇತ್ತಿಂದತ್ತಾ ಕತ್ತಲಲ್ಲಿ ತಿರುಗುಡುತ್ತಿರುವುದನ್ನು ನೋಡಿ. ನನ್ನನ್ನು ಮಾತಾಡಿಸುವ ಧೈರ್ಯ ಮಾಡುತ್ತಿದ್ದಿಲ್ಲ. ಅವನಿಗೆ ಎಂಥದ್ದೋ ಭಯ! ಈ ಮಾಸ್ತರಗ ದೆವ್ವ ಬಡಕೊಂಡಿರಬಹುದು!

ಅದು ಬೇಸಿಗೆ ಸಮಯ. ರಾಯಚೂರು ಭಾಗದಲ್ಲಿ ವಿಪರೀತ ಬಿಸಿಲು. ಮನೆಯಲ್ಲಿ ಸೆಕೆ ಜಾಸ್ತಿ. ಮನೆ ಒಳಗೆ‌ ಮಲಗುವುದು ಅಸಾಧ್ಯ

ಆರ್‌ಸಿಸಿ ಮನೆ ಇದ್ದವರು ಮನೆಮೇಲೆ ಮಲಗ್ತಾರೆ, ಕೆಲವರು ಮನೆಯಂಗಳದಲ್ಲಿ ಹೊರಸು ಹಾಕಿ ಮಲಗ್ತಾರೆ. ಇನ್ನು ಕೆಲವು ಹುಡುಗರು ಪಕ್ಕದಲ್ಲಿ ಶಾಲೆ, ಗುಡಿಗಳ ಮೇಲೆ ಹತ್ತಿ ಮಲಗ್ತಾರೆ. ಹೀಗೆ ಶಾಲೆ ಪಕ್ಕದಲ್ಲಿದ್ದ ನಾಲ್ಕೈದು ಕುಟುಂಬಗಳ ಹುಡುಗರು ನಮ್ಮ ಶಾಲೆ ಅಂಗಳದಲ್ಲಿ ಬೇಸಿಗೆಗೆ ಮಲಗಲು ಬರುತ್ತಿದ್ದರು. ಅವರು ಗುಂಪಾಗಿರುತ್ತಿದ್ದರಿಂದ ಜತೆಗೆ ನಾಲ್ಕೈದು ನಾಯಿಗಳು ಇರುತ್ತಿದ್ದರಿಂದ ಭಯ ಇರಲಿಲ. ರಾತ್ರಿಯೆಲ್ಲ ಅಂಗಳದಲ್ಲಿ ಮಾಡುವುದು,‌ಗುಟ್ಕಾ ಉಗುಳುವುದು, ಬೀಡಿ ಸಿಗರೇಟು ಸೇದಿ ಬಿಟಾಕುವುದು ಮಾಡುತ್ತಿದ್ದರು. ಇದು ಶಾಲಾ ಅಂಗಳವನ್ನೇ ಹೊಲಸು ಮಾಡಿತ್ತು. ಹೀಗೆಲ್ಲ ಶಾಲೆ ಅಂಗಳದಲ್ಲಿ ಹೊಲಸು ಮಾಡಬೇಡಿ ಅಂತ ತಿಳಿಹೇಳಿದರೂ ಪ್ರಯೋಜನವಾಗಿರಲಿಲ್ಲ.

ನಾನು ಶಾಲೆ ಗೇಟ್ ಸಂಜೆಯಾಗುತ್ತಲೇ ಬೀಗ ಹಾಕಲಾರಂಭಿಸಿದೆ. ಆದರೂ ಕಾಂಪೌಂಡ್ ಏರಿ ಒಬ್ಬನಾದರೂ ಒಳಗೆ ಬರುತ್ತಿದ್ದ. ಒಮ್ಮೆ ಏನಾಯ್ತಂದ್ರೆ ಅವನು ಮುಂಜಾನೆ ಬಂದು ‘ ಸಾಬ್ರೇ, ಇವತ್ತು ಸಾಲಿ ಅಂಗಳ್ದಾಗ ಮಕ್ಕೊಂತೀವಿ ಸಾಲಿ ಗೇಟ್ ತೆರೀರಿ’ ಅಂತ ಕೇಳಿದ್ದ. ಬೇಸಿಗೆ ವಿಪರೀತ ಸೆಕೆ ಬೇರೆ ಇತ್ತಲ್ವ ’ಸರಿ ಮಲಕ್ಕೊಳ್ಳಿ ಗೇಟ್ ತೆಗೆದಿರುತ್ತೇನೆ. ನನಗೂ ಜತೆಯಾದಂತೆ ಆಗುತ್ತದೆ’ ಎಂದೆ. ಅವನು ಅಂದು ರಾತ್ರಿ ಮೂರ್ನಾಲ್ಕು ಗೆಳೆಯರು, ಎರಡು ಮೂರು ನಾಯಿಗಳ ಜತೆ ಶಾಲೆ ಅಂಗಳದಲ್ಲಿ ಮಲಗಲು ಬಂದ. ಗೆಳೆಯರು ಮತ್ತು ಜತೆಗೆ ನಾಯಿಗಳು ಇದ್ದುದರಿಂದ ಯಾವುದೇ ಭಯವಿಲ್ಲದೇ ಹರಟೆ ಹೊಡೆಯುತ್ತ ಮಲಗಿದ್ದರು. ಶಾಲೆ ಕೋಣೆಯೊಂದರಲ್ಲಿ ಫ್ಯಾನ್ ಇದ್ದುದರಿಂದ ನಾನು ಒಳಗಡೆಯೇ ಮಲಗಿದ್ದೆ.

ಅದೇನಾಯಿತೋ ಮಲಗಲು ಬಂದಿದ್ದ ನಾಲ್ವರಲ್ಲಿ ಮೂವರು ರಾತ್ರಿಯೇ ಎದ್ದು ಮನೆಗೆ ಹೋಗಿದ್ದರು. ಇನ್ನೊಬ್ಬ ನಿದ್ದೆಯಲ್ಲೇ ಅಲ್ಲೇ ಮಲಗಿದ್ದ. ಜತೆಗೆ ನಾಯಿಗಳು ಇದ್ದವು. ನರಿ ತೋಳಗಳ ಕೂಗಾಟ ಜೋರಾಗಿತ್ತು. ಇದಕ್ಕೆ ನಾಯಿಗಳ ಕೂಗಾಟವೂ ಎದ್ದಿತ್ತು. ಆ ಶಾಲೆಯು ಹೊಲಕ್ಕೆ ತಾಗಿಕೊಂಡಿರುವುದರಿಂದ ನರಿಗಳು ಶಾಲೆಯ ಪಕ್ಕದಲ್ಲೇ ಬಂದು ಕೂಗುತ್ತಿದ್ದವು. ಅವತ್ತು ಅವನು ಒಬ್ಬನೇ ಮಲಗಿದ್ದ. ಸ್ವಲ್ಪ ಸಮಯದ ನಂತರ ಅವನಿಗೆ ಎಚ್ಚರ ಆಗಿದೆ. ಅವನು ನಾನು ಮಲಗಿದ್ದ ಕೋಣೆಯ ಬಾಗಿಲು ಬಡಿಯತೊಡಗಿದ. ನನಗೆ ಎಚ್ಚರವಿದ್ದೂ ಬಾಗಿಲು ತೆಗೆಯಲಿಲ್ಲ. ಅವನು ರಾತ್ರಿ ವಿಪರೀತ ಮದ್ಯಪಾನ ಮಾಡಿದ್ದರಿಂದ ತೆಗೆಯಲಿಲ್ಲ. ಮಲಗಿದವನಂತೆ ನಟಿಸಿದೆ. ಜೋರಾಗಿ ಬಾಗಿಲು ಬಡಿದು ಶಬ್ದ ಮಾಡಿದಷ್ಟು ಅವನಿಗೆ ಅಪಾಯ ಎಂದು ಅವನು ಭಾವಿಸಿ ಬಡಿಯುವುದು ನಿಲ್ಲಿಸಿದ್ದ. ಅವನು ಸುಮಾರು 32 ವರ್ಷದವನು ನನಗಿಂತ ನಾಲ್ಕು ವರ್ಷ ದೊಡ್ಡವನು. ಅವನ ಧೈರ್ಯ ಪರೀಕ್ಷಿಸಬೇಕೆನಿಸಿತು. ಅವನು ಮಲಗಿರುವ ಜಾಗ ಕಾಣುವಂತೆ ಕಿಟಕಿ ಸ್ವಲ್ಪವೇ ತೆಗೆದೆ. ಅಂಗಳದಿಂದ ಎದ್ದು ಬಂದು ನನ್ನ ಕೋಣೆ ಬಾಗಿಲಿಗೆ ತಲೆ ಇಟ್ಟು ಮಲಗಿದ್ದ. ನಾಯಿಗಳು ಅವನನ್ನು ಬಿಟ್ಟು ಹೋಗಿದ್ದವು. ಅವನು ಮನೆಗೂ ಹೋಗುವ ಧೈರ್ಯವಿಲ್ಲದೇ, ಇಲ್ಲಿಯೂ ಮಲಗಲು ಆಗದೆ ಕುಳಿತಿದ್ದ. ಜತೆಗೆ ಬಂದಿದ್ದ ಮೂವರ ಸುಳಿವಿರಲಿಲ್ಲ. ಮತ್ತೊಮ್ಮೆ ಬಾಗಿಲು ಬಡಿದ. ಮಕ್ಕಳು ಕೂಡುತ್ತಿದ್ದ ಬಂಡೆಮೇಲೆಯೇ ಮೂತ್ರ ಮಾಡಿದ.

ಮತ್ತೆ ಬಂದು ಸಾಬ್ರೇ ಬಾಗಿಲು ತೆಗಿರಿ ಒಳಗ ಮಕ್ಕೊಳ್ತಿನಿ ಅಂತ ಕೂಗಿದ. ಅದು ಆಫೀಸ್ ಕೊಠಡಿ. ಬೇರೆ ಕೋಣೆಗಳು ಖಾಲಿ ಇದ್ದರೂ ಅಲ್ಲಿ ಮಲಗುವ ಧೈರ್ಯ ಇರಲಿಲ್ಲ. ನೋಡೋಕೆ ಆಳೆತ್ತರದ ಮನುಷ್ಯ.

ಜೇಬಿನಿಂದ ಮೊಬೈಲ್ ತೆಗೆದೆ, MP3 ಹಾಡು ಹುಡುಕಿದೆ. ಅಪ್ತಮಿತ್ರ ಚಿತ್ರದ ‘ರಾ…ರಾ.. ಸರಸಕು ರಾ..ರಾ..’ ಹಾಡು ಹಚ್ಚಿದೆ. ಮೊಬೈಲ್ ಬಾಗಿಲ ಬಳಿ ಇಟ್ಟೆ, ಹೊರಗಡೆ ಬಾಗಿಲಿಗೆ ತಲೆಯಿಟ್ಟು ಮಲಗಿದ್ದ ಅವನು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಅಂತ ಕಿಟಕಿಯ ಬಳಿ ಗಮನಿಸುತ್ತ ನಿಂತೆ. ಅವನಿಗೆ ಮೊದಲೇ ಅವತ್ತು ನಿದ್ದೆ ಬಂದಿರಲಿಲ್ಲ. ‘ರಾ.. ರಾ..’ ಎಂದು ಶಬ್ದ ಕೇಳಿದೊಡನೆ ದಿಗ್ಗನೆ ಎದ್ದು ಕುಳಿತೇಬಿಟ್ಟ ! ಸುತ್ತ ಮುತ್ತ ನೋಡಿದ ಏನೂ ಕಾಣುತ್ತಿಲ್ಲ. ಶಬ್ದ ಬಾಗಿಲು ಒಳಗಿಂದ ಬರುತ್ತಿರುವುದನ್ನು ಗಮನಿಸಿದ. ಸಾಂಗ್ ಶುರುವಾಯಿತು. ಹಾಸಿಗೆ ದಿಂಬು ಅವನು ತೊಟ್ಟಿದ್ದ ಲುಂಗಿ ಮೊಬೈಲ್ ಎಲ್ಲ ಇದ್ದಲ್ಲಿಯೇ ಬಿಟ್ಟು ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿಯೇ ಬಿಟ್ಟ !’ ನನಗೆ ನಗು ಬಂತು ಬಾಗಿಲು ತೆಗೆದೆ. ಅವನ ಮೊಬೈಲ್ ಅಲ್ಲೆ ಬಿದ್ದಿತ್ತು ತೆಗೆದು ಒಳಗಿಟ್ಟೆ. ಮುಂಜಾನೆ ಅದೇ ಜಾಗಕ್ಕೆ ಇಟ್ಟಿದ್ದೆ ಅವನು ಬಂದು ಏನು ಮಾತಾಡದೇ ತೆಗೆದುಕೊಂಡು ಹೋದ. ನಾನು ಏನು ಕೇಳಲಿಲ್ಲ. ಅವನು ಅದೇ ಕೊನೆ ಶಾಲೆ ಅಂಗಳಕ್ಕೆ ಬರಲಿಲ್ಲ. ಗೆಳೆಯರು ಬರಲಿಲ್ಲ. ನಾಯಿಗಳು ಮಾತ್ರ ಬರುತ್ತಿದ್ದವು. ಶಾಲೆ ಅಂಗಳ ಮೂತ್ರ, ಬಾಟಲಿ, ಗುಟ್ಕಾದಿಂದ ಮುಕ್ತಿ ಪಡೆದಿತ್ತು.

ಇದನ್ನೆಲ್ಲ ಮಕ್ಕಳಿಗೆ ಹೇಳಿದ್ದೆ, ಕೇಳಿ ಮಕ್ಕಳು ನಕ್ಕಿದ್ದೇ ನಕ್ಕಿದ್ದು….

‘ಸರಿ ಈ ದೆವ್ವ ದೇವರ ಬಗ್ಗೆ ಅಮೇಲೆ ಮಾತಾಡೋಣ ಈಗ ಅವೆಲ್ಲ ಬಿಟ್ಟು ಪಾಠದ ಕಡೆ ಗಮನ ಕೊಡಿ’ ಎಂದು ಪಾಠ ಶುರು ಮಾಡಿದೆ. ಮಕ್ಕಳು ನಗುವುದು ನಿಲ್ಲಿಸಲಿಲ್ಲ. ಮಕ್ಕಳ ಗಮನ ದೇವರು ದೆವ್ವದ ಕಡೆನೇ ಇತ್ತು. ಇಂಥ ವಿಷಯಗಳೆಂದರೆ ಮಕ್ಕಳಿಗೆ ಭಾರಿ ಕುತೂಹಲವಿರುತ್ತದೆ. ಇವತ್ತು ಇವುಗಳ ತಲೆಗೂ ದೆವ್ವ ಬಂದು ಕುಳಿತಿದೆ. ನಾನು ಏನೂ ಹೇಳಿದರೂ ತಲೆಗೆ ಹತ್ತಲ್ಲ’ ಎಂದು ಪುಸ್ತಕ ಮಡಚಿಟ್ಟು ಸ್ಟಾಫ್ ರೂಮ್‌ಗೆ ತೆರಳಿ ಹೆಡ್ ಮಾಸ್ಟರ್‌ನ್ನು ಭೇಟಿ ಆದೆ.

‘ಏನ್ ಸಾರ್, ಊರಲ್ಲಿ ಏನೋ ತಾಯಮ್ಮವ್ವ ಅಂತೆ, ರಾತ್ರಿ ತಿರುಗ್ಯಾಡ್ತಾಳಂತೆ ಊರಲ್ಲಿ ಜನ ನೋಡಿ ಹೆದರಿಕೊಂಡಿದರಂತೆ ಏನ್ರೀ ಇದು ನಿಮಗೇನಾದರೂ ಗೊತ್ತಾ ?’ ಅಂತ ಹೆಡ್ ಮಾಸ್ಟರ್‌ ಗೋವಿಂದರಾಜ್ ಅವರನ್ನು ಕೇಳಿದೆ. ಅದಕ್ಕ ಅವರು- ‘ಹೌದಂತೆ. ಅದರ ಬಗ್ಗೆ ನನಗೂ ಗೊತ್ತಿಲ್ಲ ಜನ ಮಾತಾಡ್ತಿದ್ರು’ ಅಂತಷ್ಟೇ ಹೇಳಿ ಸುಮ್ಮನಾದರು. ಪಿರಿಯಡ್‌ಗಳು ಮುಗಿದವು. ಶಾಲೆ ಬೆಲ್ ಹೊಡೆಯಿತು. ಶಾಲೆ ಬಿಟ್ಟ ಮೇಲೂ ಸ್ವಲ್ಪ ಹೊತ್ತು ಆಟ ಆಡುತ್ತಾ ನನ್ನ ಜೊತೆ ಒಂದಷ್ಟು ಸಮಯ ಹರಟೆ ಹೊಡೆಯುತ್ತಿದ್ದ ಮಕ್ಕಳು ಅಂದು ಮನೆಕಡೆ ಓಟ ಕಿತ್ತಿದ್ದವು ! ಹೋಗುವುದಕ್ಕೆ ಮುಂಚೆ ವಿದ್ಯಾರ್ಥಿಯೊಬ್ಬ ನಾನು ಮಲಗುತ್ತಿದ್ದ ರೂಮಿನ ಬಾಗಿಲಿಗೆ ‘ನಾಳೆ ಬಾ’ ಎಂದು ಬರೆದು ಹೋಗಿದ್ದ! ಒಂದು ವೇಳೆ ಮಧ್ಯರಾತ್ರಿ ತಾಯಮ್ಮವ್ವ ಬಾಗಿಲಿಗೆ ಬಂದರೂ ‘ನಾಳೆ ಬಾ’ ಅನ್ನುವ ಬೋರ್ಡ್ ನೋಡಿ ನಾಳೆ ಬರುತ್ತಾಳಂತೆ. ನಾಳೆ ಬಂದು ಅದೇ ಬೋರ್ಡ್ ಓದಿ ವಾಪಸ್ಸು ಹೋಗುತ್ತಾಳಂತೆ ದಿನಾ ‘ನಾಳೆ ಬಾ’ ಎನ್ನುವುದನ್ನು ಓದಿ ಓದಿ ಒಂದು ದಿನ ಬರುವುದೇ ಬಿಟ್ಟುಬಿಡ್ತಾಳಂತೆ ವಿದ್ಯಾರ್ಥಿಗಳ ಲೆಕ್ಕಚಾರ! ಊರಿನ ಎಲ್ಲ ಮನೆಗಳ ಬಾಗಿಲಿಗೂ ‘ನಾಳೆ ಬಾ’ ಎನ್ನುವ ಬೋರ್ಡ್ ಬರೆದಿತ್ತು.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s