ಕೆಲವ್ರು ಪುಣ್ಯವಂತ್ರು ಇರ್ತಾರೆ; ಇಂಥವ್ರು ಹುಟ್ದಾಗ್ನಿಂದ ಡಿಗ್ರಿ ಮುಗ್ಸಿ ಜಾಬ್ ಸೇರೋ ತನಕ ಎಲ್ಲ ಖರ್ಚು ಕುಟುಂಬನೇ ನೋಡ್ಕೊಳ್ಳುತ್ತೆ. ದುಡಿಯೋದ್ರ ಬಗ್ಗೆ ಯೋಚನೆನೇ ಮಾಡಲ್ಲ. ಖರ್ಚುಗಳಿಗೆಲ್ಲ ತಂದೆ ತಾಯಿಯನ್ನೇ ಅವಲಂಬಿಸಿರ್ತಾರೆ.
ಶಾಲೆ ಫೀಸು, ಕಾಲೇಜ್ ಫೀಸು, ಟ್ಯೂಷನ್ ಫೀ,ನೋಟ್ಸು, ಬಸ್ ಪಾಸ್, ತಿಂಡಿ ತಿನಿಸು.. ಏನೇ ಖರ್ಚು ಆಗ್ತದೆ ಅಂದ್ರೂ ಎಲ್ಲದಕ್ಕೂ ತಂದೆನೋ, ತಾಯಿನೋ ಮಗನ ಎಲ್ಲ ಬೇಕುಗಳನ್ನ ಖುಷಿಯಿಂದ ನೋಡಿಕೊಳ್ತಿರುತ್ತೆ. ಆರ್ಥಿಕವಾಗಿ ಅಷ್ಟು ಸದೃಢವಾಗಿರ್ತಾರೆ. ಇಂಥ ಕುಟುಂಬದಲ್ಲಿ ಬೆಳೆದವ್ರಿಗೆ ಓದಿ ಉದ್ಯೋಗ ಹಿಡಿಯೋತನಕ ಬೆವರಹನಿಯ ಪರಿಚಯ ಆಗೋದೇ ಇಲ್ಲ.
ಸಿರಿವಂತರ ಮಕ್ಕಳ ನೋಡ್ದಾಗೆಲ್ಲ ನನಗೆ ಎಷ್ಟೋ ಸಲ ಅನ್ಸತಿತ್ತು; ನಮ್ಮ ಕುಟುಂಬನೂ ಹಿಂಗಿರಬೇಕಿತ್ತು. ಇದ್ದಿದ್ರೆ ಚೆಂದವಾಗಿ ಆಡಿ ಬಾಲ್ಯ ಕಳಿಬಹುದಿತ್ತು. ಹಬ್ಬಕ್ಕೆ ಮಾತ್ರ ಉಣ್ಣುತ್ತಿದ್ದ ಅನ್ನ ದಿನವೂ ಉಣ್ಬಹುದಿತ್ತು. ಜ್ವರ ಬಂದಾಗಲಷ್ಟೇ ಸಿಗುತ್ತಿದ್ದ ಪಾರ್ಲೆ ಬಿಸ್ಕಿಟ್ಟು ದಿನವೂ ತಿನ್ಬುದಿತ್ತು. ಐದಾರನೇ ತರಗತಿಗೆ 40 ಡಿಗ್ರಿ ಸುಡು ಬಿಸಿಲಿಗೆ ಎಳೆಮೈ ಬಗ್ಗಿಸಿ ಕೂಲಿ ಮಾಡ್ಬೇಕಾದ ಪರಿಸ್ಥಿತಿನೂ ಬರ್ತಿರಲಿಲ್ಲ. ಸಣ್ಣ ವಯಸ್ಗೇ ಇವೆಲ್ಲ ಯೋಚ್ನೆಗಳು ಬರ್ತಾ ಇದ್ವು.
ಆದರೆ ಅಂದಿನ ಖಾಲಿ ಹೊಟ್ಟೆಯ ಅನುಭವ ಈಗ ಕೆಲಸಕ್ಕೆ ಬರ್ತಿದೆ. ಎಂಟನೇ ತರಗತಿಯಿಂದ್ಲೇ ಓದೋದರ ಜತೆಗೆ ಓದಿನ ಸಂಪೂರ್ಣ ಖರ್ಚು ನಾನೇ ನೋಡಿಕೊಳ್ಳುವುದು ಕಲಿತೆ. ಕಾಲೇಜು ಶುರುವಾಗ ಹೊತ್ಗೆ ಮನೆ ಜವಾಬ್ದಾರಿನೂ ನಿಧಾನವಾಗಿ ಹೆಗಲೇರಿಬಿಟ್ಟಿತು.
ಪಿಯು ಓದುವಾಗ, ನನಗಾಗ ಸಿಗುತ್ತಿದ್ದ 2000 ರೂ. ಸಂಬಳದಲ್ಲಿ ಮನೆಗೆ ಕೊಟ್ಟ ಹಣದ ವಿವರ ಬರೆದುಕೊಳ್ಳುವ ಅಭ್ಯಾಸ ಇತ್ತು. ಇವತ್ತು ಏನೋ ಹುಡುಕಾಡ್ತಿದ್ದಾಗ ಈ ಪಟ್ಟಿ ಕಣ್ಣಿಗೆ ಬಿತ್ತು. ಸುಮಾರು ಪಟ್ಟಿಗಳು ಡೈರಿಯಲ್ಲಿವೆ. ಆಗಾಗ ನೋಡಿದಾಗ ಮನಸು ಹಿಮ್ಮುಖವಾಗಿ ಚಲಿಸುತ್ತಿರುತ್ತೆ!
You must be logged in to post a comment.