ಸಂತ್ರಸ್ತರ ನೆರವಿಗೆ ಧಾವಿಸದ ಇವರ ಜನ್ಮಕ್ಕಿಷ್ಟು!

ಈ ವರ್ಷದ ಮಹಾಮಳೆಗೆ ಮುಕ್ಕಾಲು ರಾಜ್ಯವೇ ಪ್ರವಾಹದಲ್ಲಿ ಮುಳುಗಿಹೋಗಿದೆ. ಬೆಳಗಾವಿಯಲ್ಲಿ ಸಾವಿರಾರು ಜನರು ಜನರು ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾಾರೆ. ಅಸಂಖ್ಯ ವನ್ಯಜೀವಿಗಳು ಕೊಚ್ಚಿ ಹೋಗಿವೆ. ಮಕ್ಕಳು, ಮುದುಕರು, ರೋಗಿಗಳು, ಮನೆಯ ಸಾಮಾನು ಸರಂಜಾಮುಗಳು, ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿಗಳು, ಪಹಣಿಗಳು ಆಹಾರ ಧಾನ್ಯಗಳು, ವರ್ಷಾನುಗಟ್ಟಲೆ ಬೆವರು ಹರಿಸಿ ಕೂಡಿಟ್ಟ ಹಣವು, ಜಾನುವಾರುಗಳು ಕಣ್ಣುಮುಂದೆಯೇ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಜನರು ಇದೆಲ್ಲ ನೋಡಿ ಭಯಭೀತರಾಗಿದ್ದಾಾರೆ. ಅವರು ಜೀವಚ್ಛವದಂತಾಗಿದ್ದಾಾರೆ. ಇಲ್ಲಿ ಸಿಲುಕಿರುವ ಜನರು ಕಳೆದ ಮೂರ್ನಾಲ್ಕು ದಿನಗಳಿಂದ ಹಸಿವೆಯಿಂದ ಸಾಯುತ್ತಿದ್ದಾರೆ. ಬದುಕುಳಿದವರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಕ್ಷಣಕ್ಷಣಕ್ಕೂ ಸಾಯುತ್ತಿದ್ದಾರೆ. ಇಷ್ಟಾದರೂ ರಾಜಕಾರಣಿಗಳ ಮನಸ್ಸು ಕರಗುತ್ತಿಲ್ಲ. ಅವರ್ಯಾರೂ ಜನರ ಸಹಾಯಕ್ಕೆ ಧಾವಿಸುತ್ತಿಲ್ಲ. ಅವರೆಲ್ಲ ಭವ್ಯಬಂಗಲೆಯಲ್ಲಿ ಕುಳಿತುಕೊಂಡು ಪ್ರವಾಹ ನೋಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.

ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ಅಲ್ಲ, ಅಂಥ ಬೇಸಿಗೆ ಬಿಸಿಲನ್ನು ಲೆಕ್ಕಿಸದೇ ತಿಂಗಳುಗಟ್ಟಲೆ ಭಿಕ್ಷುಕರಂತೆ ಮನೆಮನೆಗೆ ವೋಟು ಕೇಳಲು ಹೋದವರು, ಈಗ ಪ್ರವಾಹಪಿಡಿತ ಗ್ರಾಮಗಳಿಗೆ ಭೇಟಿ ನೀಡಿ, ನಿಮಗೆ ಮತ ನೀಡಿದ ಅದೇ ಮತದಾರರನ ಯೋಗಕ್ಷೇಮ ವಿಚಾರಿಸಲಾಗುತ್ತಿಲ್ಲವ? ಜನರಿಂದ ಗೆದ್ದು ಸಾವಿರಾರು ಕೋಟಿ ಹಣ ಮಾಡಿಕೊಂಡ ಈ ಭ್ರಷ್ಟರು ಅದರಲ್ಲಿ ಒಂದು ಕಾಲುಭಾಗದಷ್ಟೂ ಪ್ರವಾಹ ಪಿಡಿತ ಜನರಿಗಾಗಿ ನೀಡಲು ಮನಸ್ಸು ಮಾಡುತ್ತಿಲ್ಲ. ಕಾಂಗ್ರೆಸ್-ಜೆಡಿಎಸ್‌ನವರು ಟ್ವಿಟರ್ ಮೂಲಕ ಆಡಳಿತ ಪಕ್ಷದ ಮೇಲೆ ಮುಗಿಬಿದ್ದು ಇಂಥ ಸಂದರ್ಭದಲ್ಲೂ ಹೇಸಿಗೆ ರಾಜಕೀಯ ಮಾಡುತ್ತಿದ್ದಾರೆ. ಆದರೆ ಒಬ್ಬೇ ಒಬ್ಬನು ಸರಕಾರದೊಂದಿಗೆ ಕೈಜೋಡಿಸಿ ಪ್ರವಾಹಪಿಡಿತ ಜನರ ರಕ್ಷಣೆಗೆ ನಿಲ್ಲುವ ಮಾತಾಡುತ್ತಿಲ್ಲ. ಇಲ್ಲಿ ಯಾರಿಗೂ ಸಂತ್ರಸ್ತರ ಮೇಲೆ ಕಾಳಜಿ ಇದ್ದಂತಿಲ್ಲ. ಬಿಜೆಪಿ ಸರಕಾರ ಬಂದು ತಿಂಗಳು ಕಳೆದಿಲ್ಲ. ಆಗಲೇ ‘ಪ್ರವಾಹ ಎದುರಿಸುವಲ್ಲಿ ಸರಕಾರ ವಿಫಲವಾಗಿದೆ’ ಎಂದು ಕಾಂಗ್ರೆಸ್-ಜೆಡಿಎಸ್ ಟ್ವಿಟ್ ಪ್ರವಾಹ ಹರಿಸುತ್ತಿವೆ. ಮೈತ್ರಿ ಸರಕಾರ ಇದ್ದಿದ್ದರೆ ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದ್ದರಾ? ಮೈತ್ರಿ ಸರಕಾರ ಇದ್ದಾಗಲೇ ಬೆಂಗಳೂರು ಒಂದರಲ್ಲೇ ಸುರಿದ ಸಾಮಾನ್ಯ ಮಳೆಗೆ ಆದ ಅವಾಂತರವೆಷ್ಟು ? ಅದೆಷ್ಟು ಮುಂಜಾಗ್ರತ ಕ್ರಮ ಕೈಗೊಂಡಿದ್ದೀರಿ ಎಂಬುದು ಬೆಂಗಳೂರಿನ ಜನರಿಗೆ ಗೊತ್ತಿದೆ. ಅಷ್ಟಕ್ಕೂ ಪ್ರವಾಹ ಪಿಡಿತರ ನೆರವಿಗೆ ಬರಲು ಅಧಿಕಾರವೇ ಇರಬೇಕಾ? ಅಧಿಕಾರವಿಲ್ಲದಿದ್ದಾಗಲೂ ಜನರ ರಕ್ಷಣೆ ಕಾರ್ಯ, ಗಂಜಿ ಕೇಂದ್ರ, ತಾತ್ಕಾಲಿಕ ವಸತಿ ಸ್ಥಾಪಿಸಲು ಸಾಧ್ಯವಾಗಲ್ಲವಾ? ಹಲವಾರು ಸಂಘ-ಸೇವಾಸಂಸ್ಥೆಗಳು, ಯುವಕರು, ಉದ್ಯೋಗಿಗಳ ಗುಂಪು, ಆರೆಸ್ಸೆಸ್ ಕಾರ್ಯಕರ್ತರು ಸಂತ್ರಸ್ತರ ನೆರವಿಗಾಗಿ ದೂರದೂರಿನಿಂದ ಪ್ರವಾಹಪಿಡಿತ ಪ್ರದೇಶಗಳಿಗೆ ಬಂದು ಅಲ್ಲಿನ ಜನರಿಗೆ ಊಟ-ಉಪಚಾರ ಮಾಡುತ್ತಿದ್ದಾರೆ.

ಅಂದಹಾಗೆ ಇವರಿಗೆಲ್ಲ ಯಾವ ಅಧಿಕಾರ ಇದೆ? ಎಲ್ಲವನ್ನು ಸರಕಾರವೇ ಮಾಡಬೇಕಾ? ನಿಮಗೇನಾಗಿದೆ ಧಾಡಿ? ಅಧಿಕಾರ ಕೊಟ್ಟರೆ ಮಾತ್ರ ಸಂತ್ರಸ್ತರ ನೆರವಿಗೆ ಬರುವ, ಅಧಿಕಾರ ಇಲ್ಲದಿದ್ದರೆ ಯಾರ ಸಹಾಯಕ್ಕೂ ಬಾರದ, ಬರೀ ಟ್ವಿಟ್ಟರ್‌ನಲ್ಲೇ ಬೊಗಳೆ ಬಿಡುವ ಇಂಥ ಭಂಡರಿಂದ ರಾಜ್ಯದ ಜನರು ಪ್ರಕೃತಿ ವಿಕೋಪಕ್ಕೆ ನರಳುವುದು ತಪ್ಪುವುದಿಲ್ಲ. ನಿಮಗೆ ಪ್ರವಾಹ ಸಂತ್ರಸ್ತರ ಶಾಪ ತಟ್ಟದೇ ಇರುವುದಿಲ್ಲ, ನೆನಪಿರಲಿ.

ರವಿ, ಜಾನೇಕಲ್

‘ಬ್ಲ್ಯಾಕ್ ಟೈಗರ್’ ಎಂದೇ ಪ್ರಸಿದ್ಧರಾದ ರವೀಂದ್ರ ಕೌಶಿಕ್ ಯಾರು ಗೊತ್ತೇ?

ಅಂದು 1952 ಏಪ್ರಿಲ್ 11ರ ಸೂರ್ಯಾಸ್ತದ ಸಮಯ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಮುಂದೆ ಭಾರತದ ‘ಬ್ಲ್ಯಾಕ್ ಟೈಗರ್‌’ ಎಂದೇ ಹೆಸರಾದ ಅಪ್ರತಿಮ ವೀರ ರವೀಂದ್ರ ಕೌಶಿಕ್‌ನ ಜನನವಾಯಿತು.

ರವಿಂದರ್ ಕೌಶಿಕ್
ರವಿಂದರ್ ಕೌಶಿಕ್
ಬಾಲಕ ರವಿಂದ್ರ ಕೌಶಿಕ್‌ಗೆ ಸಣ್ಣವನಿದ್ದಾಗಲೇ ದೇಶದ ಬಗ್ಗೆ ಅತ್ಯಂತ ಕಾಳಜಿ. ಮನೆಯಲ್ಲಿ ಹಿರಿಯರು ಹೇಳುತ್ತಿದ್ದ ಶಿವಾಜಿ, ಸುಭಾಷ್, ಆಜಾದ್‌ರ ಕಥೆ ಕೇಳುತ್ತಲೇ ಬೆಳೆದ. ಎಲ್ಲ ಮಕ್ಕಳಂತೆ ಕೇಳಿ ಸುಮ್ಮನಾಗುವ ಜಾಯಮಾನ ಆ ಹುಡುಗನದ್ದಾಗಿರಲಿಲ್ಲ. ಬದಲಿಗೆ ಅದನ್ನು ತನ್ನ ಸ್ನೇಹಿತರಿಗೆಲ್ಲಾ ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಿದ್ದ. ಮಕ್ಕಳ ಜೊತೆಗೂಡಿ ಶಾಲೆಗಳಲ್ಲಿ ಯಥಾವತ್ತಾಗಿ ಅಭಿನಯಿಸುತ್ತಿದ್ದ. ಕೌಶಿಕ್, ಪ್ರತೀ ಸಲವೂ ಸುಭಾಷ್ ಮತ್ತು ಆಜಾದ್‌ರ ಪಾತ್ರವನ್ನು ಹಠ ಮಾಡಿ ತನ್ನದಾಗಿಸಿಕೊಳ್ಳುತ್ತಿದ್ದ.

ರವೀಂದ್ರ ಕೌಶಿಕ್ ರಾಜಸ್ಥಾನದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ. ದಿನ ಕಳೆದಂತೆ ರಂಗಭೂಮಿಯೆಡೆಗೆ ಒಲವು ಹೆಚ್ಚಾಯಿತು. ಮತ್ತು ಅಷ್ಟೇ ಅಲ್ಪ ಅವಧಿಯಲ್ಲಿ ನಟನೆಯೂ ಮೈಗೂಡಿತು. ಯಾವ ಕೆಲಸ ಹಿಡಿದರೂ ಅದರಲ್ಲಿ ಯಶಸ್ವಿಯಾಗದೆ ಕೈಬಿಡುತ್ತಿರಲಿಲ್ಲ. ಅದಕ್ಕೆ ಸಾಕ್ಷಿಯಾಗಿ ಲಕ್ನೌನಲ್ಲಿ ನಡೆದ ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅಭಿನಯಿಸಿ, ಬಹುಮಾನವನ್ನೂ ಗಿಟ್ಟಿಸಿಕೊಂಡ.

ನಾವೊಂದು ಬಗೆದರೆ, ಆ ದೈವವೊಂದು ಬಗೆಯುತ್ತದೆ ಎನ್ನುವ ಮಾತಿನಂತೆ ಆ ಸ್ಪರ್ಧೆಯನ್ನು ನೋಡಲು ಬಂದಿದ್ದ ಭಾರತದ ಗುಪ್ತದಳ ‘ರಾ'(RAW) ಮುಖ್ಯಸ್ಥರು ಕೌಶಿಕ್‌ನ ಕ್ಷಮತೆಯನ್ನು ಗುರುತಿಸಿ ಆತನನ್ನು RAWಗೆ ಸೇರುವಂತೆ ಪ್ರೇರೇಪಿಸಿದರು. ಮೊದಲೇ ದೇಶ ಪ್ರೇಮ ಉಳ್ಳವನಾಗಿದ್ದ ಯುವಕ ಕೌಶಿಕ್‌ಗೆ ಕಿವಿ ನೆಟ್ಟಗಾದಂತಾಯಿತು. ಡಿಗ್ರಿಯನ್ನು ನಾಮಕಾವಸ್ಥೆಗೆ ಮುಗಿಸಿದವನೇ ತನ್ನ 23ನೇ ವಯಸ್ಸಿನಲ್ಲಿ RAWಗೆ ವಿಶೇಷ ‘ಅಂಡರ್ ಕವರ್‌’ ಏಜೆಂಟ್ ಆಗಿ ಸೇರ್ಪಡೆಯಾದ. RAW ಕೂಡ ಅವನ ಆಗಮನಕ್ಕೆ ಕಾಯುತ್ತಿತ್ತು ಎಂಬಂತೆ ಕೌಶಿಕ್ ಡ್ಯುಟಿಗೆ ರಿಪೋರ್ಟ್ ಆಗುತ್ತಿದ್ದಂತೆಯೇ ಅವನನ್ನು ಪಾಕಿಸ್ತಾನಕ್ಕೆ ಒಂದು ಮಿಷನ್‌ನ ಮೇಲೆ ಕಳುಹಿಸಿತು. ಪಾಕಿಸ್ತಾನದಲ್ಲಿದ್ದ ದಿನಗಳು ರವೀಂದ್ರ ಕೌಶಿಕ್‌ನನ್ನು RAW, ಖಾಲಿ ಖಾಲಿಯಾಗಿ ಕಳುಹಿಸಲಿಲ್ಲ. ಬದಲಿಗೆ ದೆಹಲಿಯಲ್ಲಿ ಸತತ ಎರಡು ವರ್ಷಗಳ ತರಬೇತಿಯನ್ನೂ ನೀಡಿತು. ಅದರಲ್ಲಿ ಪಾಕಿಸ್ತಾನದ 100 ಪ್ರತಿಶತ ವಿವರಗಳನ್ನೂ ನೀಡಿ ಕೌಶಿಕ್‌ಗೆ ಮುಸಲ್ಮಾನ ಪದ್ಧತಿಯಂತೆ ಸುನ್ನತ್(Circumcision) ಅನ್ನೂ ಮಾಡಲಾಯಿತು.

ಅತ್ಯಂತ ಬುದ್ಧಿವಂತನಾಗಿದ್ದ ರವೀಂದ್ರ ಕೌಶಿಕ್ ಅಲ್ಪಾವಧಿಯಲ್ಲಿ ಉರ್ದು ಮಾತನಾಡುವುದನ್ನು ಮತ್ತು ಮುಸಲ್ಮಾನರ ಧಾರ್ಮಿಕಾಚರಣೆಯನ್ನೂ ಕಲಿತ. ಆ ಯುವಕನ ಕಲಿಕೆಯು ಎಷ್ಟರ ಮಟ್ಟಿಗೆ ಉತ್ತಮವಾಗಿತ್ತೆಂದರೆ ಪಾಕಿಸ್ತಾನದ ಇನ್ನಿತರ ಸಣ್ಣ ಪುಟ್ಟ ಪ್ರದೇಶಗಳಲ್ಲಿ ಆಡುವ ಭಾಷೆಯನ್ನೂ ತನ್ನ ಮಾತೃ ಭಾಷೆಯಷ್ಟೇ ಸರಾಗವಾಗಿ ಆಡುತ್ತಿದ್ದ. ಒಟ್ಟಾರೆಯಾಗಿ, ಪಾಕಿಸ್ತಾನಕ್ಕೆ ಹೊರಡುವ ವೇಳೆ ಆತ ಸಂಪೂರ್ಣ ಮುಸಲ್ಮಾನನಾಗಿದ್ದ. ತಂದೆ ತಾಯಿಯೂ ಸಹ ‘ಅವನು ಮುಸಲ್ಮಾನನಲ್ಲ’ ಎಂದರೆ ನಂಬಲಾರದಷ್ಟು ಮಟ್ಟಿಗೆ ಬದಲಾಗಿದ್ದ. 1975 ರಲ್ಲಿ ಕೌಶಿಕ್‌ನನ್ನು ‘ನಬೀ ಅಹಮ್ಮದ್ ಶಕೀರ್‌’ ಎಂದು ಮರುನಾಮಕರಣ ಮಾಡಿ ಭಾರತದ ಅಂಡರ್‌ಕವರ್ ಏಜೆಂಟ್ ಆಗಿ ಪಾಕಿಸ್ತಾನಕ್ಕೆ ಕಳುಹಿಸಲಾಯಿತು. ಪಾಕಿಸ್ತಾನಕ್ಕೆ ಹೋದವನೇ ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಸೀಟು ಗಿಟ್ಟಿಸಿಕೊಂಡು ಕೆಲವೇ ವರ್ಷಗಳಲ್ಲಿ ಎಸ್‌ಎಲ್‌ಬಿಯನ್ನೂ ಮುಗಿಸಿದ. ಎಲ್‌ಎಲ್‌ಬಿ ಪದವಿ ಕೇವಲ ನಾಮಕಾವಸ್ಥೆಗಾಗಿತ್ತಷ್ಟೇ. ಪಾಕಿಸ್ತಾನಕ್ಕೆ ಬಂದ ಅಸಲೀ ಕೆಲಸ ಶುರು ಮಾಡುವ ಸಮಯ ಈಗ ಬಂದೊದಗಿತ್ತು. ಪಾಕಿಸ್ತಾನೀ ಸೈನ್ಯಕ್ಕೆ ಸಾಮಾನ್ಯ ಅಧಿಕಾರಿಯಾಗಿ ಸೇರಿ ಕೆಲವೇ ವರ್ಷಗಳಲ್ಲಿ ತನ್ನ ಚಾಕಚಕ್ಯತೆಯಿಂದ ಪ್ರತಿಷ್ಠಿತ ಮೇಜರ್ ಹುದ್ದೆಯನ್ನು ಅಲಂಕರಿಸಿದ.

ಎಲ್ಲರೂ ಹೇಳುವಂತೆ ಪ್ರೀತಿ ಕುರುಡು. ಅದು ಕೌಶಿಕ್‌ನ ಜೊತೆಗೂ ಆಯಿತು. ‘ಅಮಾನತ್‌’ ಎಂಬ ಪಾಕಿಸ್ತಾನೀ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ವರ್ಷದಲ್ಲಿ ಹೆಣ್ಣು ಮಗುವಿನ ತಂದೆಯಾದ. ಆತ ಅಲ್ಲಿನ ಸೇನೆಯಲ್ಲಿ 1979ರಿಂದ 1983ರವರೆಗೆ ಇದ್ದು ಪಾಕಿಸ್ತಾನದ ಕುತಂತ್ರಗಳನ್ನೆಲ್ಲಾ ಅರಿಯುತ್ತಾ ಭಾರತದ ರಕ್ಷಣಾ ಇಲಾಖೆಗೆ ಅಮೃತವೆನಿಸುವ ಅತಿ ಮುಖ್ಯವಾದ ವಿಷಯಗಳನ್ನೆಲ್ಲಾ ರಹಸ್ಯವಾಗಿ ರವಾನಿಸುತ್ತಿದ್ದ. ಈ ಅತ್ಯುನ್ನತ ಸಾಧನೆಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಕೌಶಿಕ್‌ನ ಅನುಪಸ್ಥಿತಿಯಲ್ಲಿ ಆತನಿಗೆ BLACK TIGER ಎಂಬ ಬಿರುದನ್ನೂ ನೀಡಿದರು. ಕೌಶಿಕ್ ಭಾರತ ಮತ್ತು ತನ್ನ ಕುಟುಂಬವನ್ನು ಬಿಟ್ಟಿದ್ದದ್ದು ಬರೋಬ್ಬರಿ 26 ವರ್ಷಗಳು. ಯುದ್ಧದ ಸಮಯದಲ್ಲಿ ಕೌಶಿಕ್‌ನ ಸೇವೆ ನಿಜಕ್ಕೂ ಅತ್ಯಮೋಘವಾದದ್ದು. ಯುದ್ಧದ ಸಮಯದಲ್ಲಿ ಕೌಶಿಕ್ ಮಾಡಿದಂತಹ ಕೆಲಸವನ್ನು ಇಂದಿಗೂ ಎಷ್ಟೋ RAW ಏಜೆಂಟ್‌ಗಳು ಮಾಡಲು ಹಿಂಜರಿಯುತ್ತಾರೆ. ಕೌಶಿಕ್ ಕೊಟ್ಟ ಅತ್ಯುಪಯುಕ್ತ ಮಾಹಿತಿಯಿಂದ ಭಾರತದ ನಡಿಗೆ ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆ ಮೇಲಕ್ಕೇರಿತು. ಪಾಕಿಸ್ತಾನ ಯುದ್ಧದಲ್ಲಿ ಮಾಡುವ ಕುತಂತ್ರಗಳಿಗೆಲ್ಲಾ ಭಾರತ ‘ಚೆಕ್‌ಮೇಟ್‌’ ಎನ್ನುತ್ತಿತ್ತು. ಇನ್ನು ಕೆಲ ಸಂದರ್ಭಗಳಲ್ಲಿ ಪಾಕಿಸ್ತಾನ ರಾಜಸ್ಥಾನದ ಗಡಿ ಭಾಗಗಳಿಂದಲೂ ಯುದ್ಧ ಮಾಡಲು ಬರುವ ತಯಾರಿಯಲ್ಲಿದ್ದಾಗ, ಭಾರತಕ್ಕೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿ ಪಾಕಿಸ್ತಾನದ ಕುತಂತ್ರಗಳನ್ನೆಲ್ಲ ಅಕ್ಷರಶಃ ಉಲ್ಟಾ ಮಾಡುತ್ತಿದ್ದ ರವೀಂದ್ರ ಕೌಶಿಕ್.

ಪ್ರತೀ ಆರಂಭಕ್ಕೊಂದು ಅಂತ್ಯವಿರಬೇಕು ನಿಜ. ಅದು ಪ್ರಕೃತಿ ನಿಯಮವೂ ಹೌದು. 1983 ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದ ಗುಪ್ತಚರ ದಳ, ಇನ್ಯತ್ ಮಸಿಹಾ ಎಂಬ ಏಜೆಂಟ್‌ನನ್ನು ಬ್ಲ್ಯಾಕ್ ಟೈಗರ್‌ನ ಸಹಾಯಕ್ಕಾಗಿ ಕಳುಹಿಸಿತು. ‘ರಾ’ದ ಈ ಕೆಲಸ ಕೌಶಿಕ್‌ನ ಪ್ರಾಣವನ್ನು ತೆಗೆಯಲು ಜವರಾಯನನ್ನು ಕಳುಹಿಸಿದಂತಾಯಿತು. ಇನ್ಯತ್ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಇಂಟಲಿಜೆನ್ಸ್ ಐಖಐ ಏಜೆಂಟ್‌ಗಳಿಗೆ ಸಿಕ್ಕಿಬಿದ್ದ. ಅದಾದ ಕೆಲವೇ ದಿನಗಳಲ್ಲಿ ‘ನಬೀ ಅಹಮ್ಮದ್‌’ ಅಲಿಯಾಸ್ ‘ರವೀಂದ್ರ ಕೈಶಿಕ್‌ನ’ ಅಸಲೀ ಕಥೆಯನ್ನು ಬಾಯಿ ಬಿಟ್ಟಿದ್ದ. ಅಷ್ಟೇ ಸಾಕಿತ್ತು ಪಾಕಿಸ್ತಾನಕ್ಕೆ.

ಕೌಶಿಕ್‌ನನ್ನು ಹಿಡಿದು ಸತತ ಎರಡು ವರ್ಷಗಳ ಕಾಲ ವಿಚಾರಣೆ ಹೆಸರಿನಲ್ಲಿ ನರಕ ತೋರಿಸಿತು. ಕೊನೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ 1985 ರಲ್ಲಿ ಆತನಿಗೆ ಮರಣ ದಂಡನೆ ವಿಧಿಸಿತು. ಆದರೆ ಅದನ್ನು ಕಾರಣಾಂತರಗಳಿಂದ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಲಾಯಿತು. ಕೌಶಿಕ್‌ನನ್ನು ಪ್ರತೀ ಸಲವೂ ಬೇರೆ ಬೇರೆ ಜೈಲುಗಳಿಗೆ ವರ್ಗಾಯಿಸಲಾಗುತ್ತಿತ್ತು. ಸತತ 16 ವರ್ಷಗಳ ಕಾಲ ಆರೋಗ್ಯಕ್ಕೆ ಕುಂದುತರುವಂತಹ ವಾತಾವರಣವಿರುವ ಜೈಲಿನಲ್ಲಿ ತಳ್ಳಿದರು. ಇದರಿಂದ ಕೌಶಿಕ್‌ಗೆ ಟಿ.ಬಿ., ಅಸ್ತಮಾ ಮತ್ತಿನ್ನಿತರ ಹೃದಯ ಸಂಬಂಧಿ ಕಾಯಿಲೆಗಳು ಶುರುವಾದವು. ಆತ ಪಾಕಿಸ್ತಾನಿಗಳು ತನಗೆ ಕೊಡುತ್ತಿರುವ ಹಿಂಸೆಯ ಬಗ್ಗೆ ರಹಸ್ಯವಾಗಿ ಭಾರತಕ್ಕೆ ಪತ್ರಗಳನ್ನು ರವಾನಿಸುತ್ತಿದ್ದ. ಒಂದು ಪತ್ರದಲ್ಲಂತೂ ತನ್ನ ನೋವನ್ನು ಹೇಳುತ್ತಾ ಹೀಗೆಂದಿದ್ದ- ‘ಕ್ಯಾ ಭಾರತ್ ಜೈಸೇ ಬಡೇ ದೇಶ್ ಕೆ ಲಿಯೇ ಕುರ್ಬಾನಿ ದೇನೆ ವಾಲೋಂಕೊ ಯಹೀ ಮಿಲ್ತಾ ಹೈ?’ (ಭಾರತಕ್ಕಾಗಿ ತಮ್ಮ ಜೀವನವನ್ನೇ ತ್ಯಾಗಮಾಡುವವರಿಗೆ ಸಿಗುವ ಬಹುಮಾನ ಇದೇನಾ?)!

ನವೆಂಬರ್ 21, 2001ರಂದು ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಕೊನೆಯುಸಿರೆಳೆದ. ಕೌಶಿಕ್‌ನನ್ನು ಜೈಲಿನ ಹಿಂಭಾಗದಲ್ಲಿ ಹೂಳಲಾಯಿತು. ಆತನ ತಾಯಿ ಸರ್ಕಾರಕ್ಕೆ ಎಷ್ಟೇ ಪತ್ರಗಳನ್ನು ಬರೆದರೂ ಮಾನಿವೀಯತೆಯ ದೃಷ್ಟಿಯಿಂದಲಾದರೂ ಒಂದಕ್ಕೂ ಸರ್ಕಾರ ಉತ್ತರ ಬರೆಯಲಿಲ್ಲ. ಭಾರತಕ್ಕಾಗಿ ತನ್ನ ಜೀವನವನ್ನೇ ಪಾಕಿಸ್ತಾನದಲ್ಲಿ ಕಳೆದು ಪರದೇಶಿ ನೆಲದಲ್ಲಿ ಅಸುನೀಗಿದವನ ಕುಟುಂಬಕ್ಕೆ ನಮ್ಮ ಘನ ಸರ್ಕಾರ ಕೇವಲ 500 ರುಪಾಯಿಗಳ ಮಾಶಾಸನ ನಿಗದಿ ಮಾಡಿ ಕೈ ತೊಳೆದುಕೊಳ್ಳಲು ಮುಂದಾಯಿತು. ಆದರೆ ಕೌಶಿಕ್‌ನ ಮನೆಯವರು ಸರ್ಕಾರ ಕೊಡುವ ಭಿಕ್ಷೆಗೆ ಕೈಯೊಡ್ಡುತ್ತಿಲ್ಲ. ಅನ್ಯ ದೇಶಗಳಿಂದ ಎರವಲು ಪಡೆದ ಏಪ್ರಿಲ್ ಫೂಲ್‌ನಂತಹ ದಿನಗಳನ್ನು ನಾವು ಆಚರಿಸುತ್ತಾ ಬಂದಿದ್ದೇವೆ. ಆದರೆ ಜನ್ಮದಿನವಿರಲಿ, ಕೌಶಿಕ್‌ನ ಹೆಸರನ್ನೂ ಎಷ್ಟೋ ಮಂದಿ ಕೇಳಿಯೇ ಇಲ್ಲವೆಂಬುದು ನಿಜಕ್ಕೂ ದುರಂತ. ಇಂದು ಭಾರತದ ಆ ವೀರಪುತ್ರನ ಜನ್ಮದಿನ, ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ!!

ಮೂಲ ಬರಹಗಾರರು: ಚಿರಂಜೀವಿ ಭಟ್.

ನಿಮಗೇನಾದರೂ ಹೀಗೊಂದು ಬೋರ್ಡ್ ಕಾಣಿಸಿದೆಯಾ?

ಜನಕ್ಕೆ ಯಾವುದು ಸುಲಭವೋ ಅದನ್ನೇ ಬಿಜಿನೆಸ್ ಮಾಡ್ಕೊಳ್ತಾರೆ. ಅದಕ್ಕಾಗೇ “ನಮ್ಮಲ್ಲಿ ಮದ್ಯಪಾನ ಒಂದೇ ತಿಂಗಳಲ್ಲಿ ಬಿಡಿಸಲಾಗುವು” “ದೂಮಪಾನ ಕೇವಲ ಹದಿನೈದು ಬಿಡಿಸಲಾಗುವುದು” ಅಂತ ಬೋರ್ಡ್ ಹಾಕೊಂಡಿರುತ್ತಾರೆ. ಆದರೆ

ನಮ್ಮಲ್ಲಿ “ಫೇಸ್‌ಬುಕ್‌‌ಗೆ ದಾಸ”ರಾದವರನ್ನು ತಿಂಗಳಲ್ಲಿ ಬಿಡಿಸಲಾಗುವುದು ಅಂತ ಇದುವರೆಗೂ ಯಾರೂ ಬೋರ್ಡ್ ಹಾಕಿದ್ದು ನೋಡೇ ಇಲ್ಲ.

ಅಬ್ ಕಿ ಬಾರ್ ಮೋದಿ ಸರಕಾರ ಎನ್ನುತ್ತಿವೆ ಮತಗಟ್ಟೆ ಸಮೀಕ್ಷೆಗಳು!

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಕೆಸರೆರಚಾಟದಲ್ಲಿ ದೇಶದ್ಯಾಂತ ಬೇರೆ ಬೇರೆ ನೆಲೆಗಳಲ್ಲಿ ಇಡೀ ದೇಶದ ಮನಸ್ಥಿತಿಯೇ ರಾಡಿಯಾಗುವಂತೆ ಮಾಡಿತ್ತು. ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ ಇನ್ನಿತರ ಪಕ್ಷಗಳು ಒಂದುಗೂಡಿ ಮಹಾಗಠಬಂಧನ ರಚಿಸಿಕೊಂಡು ಈ ಬಾರಿ ಲೋಕಸಭೆಯ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಶತಾಯಗತಾಯ ಪ್ರಯತ್ನಿಸಿದ್ದವು. ಅದಕ್ಕಾಗಿ ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡಿದವು. ಆದರೆ ಏನು ಮಾಡುವುದು ಮತದಾರ ಈಗ ಜಾಗೃತವಾಗಿದ್ದನಲ್ಲ. ಅವರ ತಾಳಕ್ಕೆ ಕುಣಿಯಬೇಕಲ್ಲ? ಮತದಾರನಿಗೆ ಮಂತ್ರ ಹಾಕಿ ಒಲಿಸಿಕೊಳ್ಳುವುದು ಈಗ ಅಷ್ಟು ಸುಲಭವಾಗಿಲ್ಲ. ಹೀಗಾಗಿ ಅವರ ಯಾವ ಆಟಗಳು ನಡೆಯಲಿಲ್ಲ. ಈಗ ಲೋಕಸಮರ ಅಂತಿಮ ಹಂತವೂ ಮುಗಿದು ಫಲಿತಾಂಶಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಅಲ್ಲದೇ ಈ ಭಾರಿಯೂ ‘ಅಬ್ ಕಿ ಬಾರ್ ಮೋದಿ ಸರಕಾರ’ ಘೋಷವಾಕ್ಯ ಮತ್ತೆ ನಿಜವಾಗುತ್ತದೆ ಎಂಬುದು ಮತದಾರರಿಗೆ ಮನದಟ್ಟಾದರೆ, ಮಹಾಗಠಬಂದನದ ತಂಡಕ್ಕಂತೂ ಕೈ ಹಿಚುಕಿಕೊಳ್ಳುವಂತೆ, ರಾತ್ರಿ ನಿದ್ದೆ ಹತ್ತದಂತೆ, ಕೈಕಾಲುಗಳಲ್ಲಿ ಉಸುರು ಇಲ್ಲದಂತೆ ಮಾಡಿದೆ. ಕಳೆದೆರಡು ದಿನಗಳಿಂದ ಹಲವು ರಾಷ್ಟ್ರೀಯ ಚಾನೆಲ್‌ಗಳು ನಡೆಸಿದ ಎಕ್ಸಿಟ್‌ಪೋಲ್ ಸಮೀಕ್ಷೆಗಳು ಹೊರಬಿದ್ದಿವೆ. ಈ ಬಾರಿಯೂ ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಸರಕಾರ ರಚನೆಯಾಗಲಿದೆ ಎಂಬುದನ್ನು ದೃಢಪಡಿಸುತ್ತಿವೆ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾದ ಭಾರತದ ಚುನಾವಣಾ ಫಲಿತಾಂಶಕ್ಕಾಗಿ ಇಡೀ ವಿಶ್ವವೇ ಉಸಿರು ಬಿಗಿ ಹಿಡಿದು ಕುಳಿತಿದೆ.

ಇದರ ಮಧ್ಯೆಯೇ ಚಾನೆಲ್‌ಗಳು ನಡೆಸುವ ಸಮೀಕ್ಷೆಗಳು ನಿಜವೋ, ಸುಳ್ಳೋ, ಇಂಥ ಸಮೀಕ್ಷೆ ಬೇಕೋ, ಬೇಡವೋ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳು ಪರಸ್ಪರ ಪರ-ವಿರೋಧ ಟ್ವಿಟ್ ಸಮರ ಸಾರಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅಥವಾ ಮಹಾಗಠಬಂಧನದ ಪಕ್ಷಗಳು ಒಟ್ಟುಗೂಡಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯಿಲ್ಲವೆಂದು ಸಮೀಕ್ಷೆಗಳು ಹೇಳುತ್ತಿದ್ದಂತೆಯೇ ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಈಗ ಸಮೀಕ್ಷೆಗಳ ಬಗ್ಗೆ ಗರಂ ಆಗಿದ್ದಾರೆ. ಈ ಸಮೀಕ್ಷೆಗಳೇ ಗಾಸಿಪ್‌ಗಳು, ಇವು ಕೇಂದ್ರದ ಪರವಾಗಿ ಸಮೀಕ್ಷೆ ಮಾಡುತ್ತಿವೆ. ಈ ಸಮೀಕ್ಷೆಗಳು ಸುಳ್ಳಿನ ಕಂತೆಗಳು, ಇಂಥ ಸಮೀಕ್ಷೆಗಳನ್ನು ನಂಬಬೇಡಿ ಎಂದು ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರೆಲ್ಲ ಎಕ್ಸಿಟ್‌ಪೋಲ್ ವಿರುದ್ಧ ಕಿಡಿಕಾರುತ್ತಿದ್ದಾಾರೆ. ಈ ಹಿಂದೆ, ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ಮುಂದಾದಾಗ ಕಾಂಗ್ರೆಸ್ ಪಕ್ಷ ದೊಡ್ಡ ಧ್ವನಿಯಲ್ಲಿ, ಇಂತಹ ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ಕೂಗಾಡಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು, ಇಲ್ಲ, ಇಲ್ಲ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಯಾವ ಕಾರಣಕ್ಕೂ ನಿಷೇಧಿಸಕೂಡದು ಎಂದು ಅರಚಾಡಿದ್ದರು. ಅಂದ ಹಾಗೆ ಈ ಚುನಾವಣಾ ಸಮೀಕ್ಷೆಗಳೆಂಬ ಇಡೀ ಎಪಿಸೋಡೇ ವಿಪರ್ಯಾಸಗಳ ಮೂಟೆಯಂತಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು ವಾಸ್ತವವಾಗಿ ಪರ್ಫೆಕ್ಟ್ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಅದು ಚುನಾವಣಾ ಸಂದರ್ಭದಲ್ಲಿ ಒಂದು ರಾಜ್ಯ ಅಥವಾ ರಾಷ್ಟ್ರದ ಜನರ ಭಾವನೆ ಏನಿದೆ? ಅನ್ನುವುದನ್ನು ಗುರುತಿಸಲು ಪ್ರಯತ್ನಿಸುತ್ತದೆ ಅಷ್ಟೇ. ಹಾಗಂತ ಇದು ನೂರಕ್ಕೆ ನೂರು ವೈಜ್ಞಾನಿಕವಾಗಿರುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಸಮೀಕ್ಷೆ ನಡೆಸುವವರು ಯಾವುದೇ ಒಂದು ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದ ವ್ಯಾಾಪ್ತಿಯ ಬಹುಸಂಖ್ಯಾತ ಮತದಾರರನ್ನು ಮಾತನಾಡಿಸಲು ಸಾಧ್ಯವಿರುವುದಿಲ್ಲ. ನೂರರಲ್ಲಿ ಹತ್ತು ಮಂದಿಯ ಅಭಿಪ್ರಾಯವನ್ನೇ ಕೇಳಿ ಸಮೀಕ್ಷೆ ಫಲಿತಾಂಶ ತಯಾರಿಸಬಹುದೇ ಹೊರತು ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲು ಸಾಧ್ಯವಿಲ್ಲ. ಅಲ್ಲದೇ ದೇಶದಲ್ಲಿ ನಡೆಯುವ ಹಲವು ವಿಷಯಗಳು ಮತದಾರರ ಭಾವನೆಯ ಮೇಲೆ ಭಿನ್ನ ಭಿನ್ನ ರೀತಿಯ ಪ್ರಭಾವವನ್ನು ಬೀರುತ್ತವೆಯಾದ್ದರಿಂದ ಪರ್ಫೆಕ್ಟ್ ಸಮೀಕ್ಷೆ ನಡೆಸುವುದು ಅಸಾಧ್ಯ. ಹೀಗಾಗಿಯೇ ಬಹುತೇಕ ಸಮೀಕ್ಷೆಗಳು ವಾಸ್ತವಕ್ಕೆ ದೂರವಾಗಿರುತ್ತವೆ. ನಿಮಗೆಲ್ಲ ಗೊತ್ತಿರುವ ಹಾಗೆ 2004ರಲ್ಲಿ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರ ಸೂತ್ರ ಹಿಡಿಯುತ್ತದೆ ಎಂದು ದೇಶದ ಬಹುದೊಡ್ಡ ಮಾಧ್ಯಮಗಳು ಹೇಳಿದ್ದವು. ಈ ಮಾಧ್ಯಮಗಳ ದೃಷ್ಟಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡ ನೇತೃತ್ವದ ಜೆಡಿಎಸ್ ಲೆಕ್ಕಕ್ಕೇ ಇಲ್ಲದ ಪಕ್ಷವಾಗಿತ್ತು. ಹೀಗಾಗಿ ಅವರ ಪಕ್ಷವನ್ನು ಇತರರು ಎಂಬ ಪಟ್ಟಿಗೆ ಸೇರಿಸಿದ್ದವು. ಆದರೆ ಚುನಾವಣಾ ಫಲಿತಾಂಶ ಬಂದಾಗ ಕತೆಯೇ ಬೇರೆಯಾಗಿತ್ತು. ಜೆಡಿಎಸ್ ಐವತ್ತೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮೈತ್ರಿಕೂಟ ಸರ್ಕಾರದ ಪಾಲುದಾರನಾಗಿ ಹೊರಹೊಮ್ಮಿತ್ತು.

2004ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಹುತೇಕ ಮಾಧ್ಯಮಗಳು ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಎನ್‌ಡಿಎ ಘೋಷವಾಕ್ಯಕ್ಕೆ ಮರುಳಾದವಂತೆ ವರ್ತಿಸಿದ್ದವು. ಎನ್‌ಡಿಎ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಲೆಕ್ಕಾಚಾರದ ಸಮೀಕ್ಷೆಯನ್ನು ಫಲಿತಾಂಶ ತಲೆಕೆಳಗೆ ಮಾಡಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಮತ್ತೆ ಕೇಂದ್ರದ ಅಧಿಕಾರ ಗದ್ದುಗೆ ಹಿಡಿದಿತ್ತು. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಎಕ್ಸಿಟ್ ಪೋಲ್‌ಗಳು ಪ್ರಕಾರ ಬಿಜೆಪಿ ನೇತೃತ್ವ ದ ಎನ್‌ಡಿಎ ಸರಕಾರ ಅತಿ ಹೆಚ್ಚಿನ ಸ್ಥಾನ ಗೆದ್ದು ಸರಕಾರ ರಚಿಸಲಿದೆ ಎಂದು ಹೇಳಿದ್ದವು. ಇಲ್ಲಿ ಬಿಜೆಪಿ 200ಸ್ಥಾನಗಳನ್ನು ಗೆಲ್ಲಲಿದೆ ಎಂದೇ ಎಲ್ಲ ಸಮೀಕ್ಷೆಗಳು ಹೇಳಿದ್ದವು. ಅದರಲ್ಲೂ ಟೈಮ್‌ಸ್‌‌ನೌ ಸಮೀಕ್ಷೆ ಪ್ರಕಾರ ಬಿಜೆಪಿ 100ರ ಕೆಳಗಿನ ಸ್ಥಾನ ಪಡೆಯುತ್ತದೆ ಎಂದು ಹೇಳಿತ್ತು. ಆದರೆ ಸಮೀಕ್ಷೆಯನ್ನು ಮೀರಿ ಬಿಜೆಪಿ ನೇತೃತ್ವದ ಎನ್‌ಡಿಎ ಬಿಜೆಪಿ 336 ಸ್ಥಾನ ಗಳಿಸಿ ಹೊಸ ಸರಕಾರ ರಚಿಸಿ, ಸಮೀಕ್ಷೆಯನ್ನೇ ತಲೆಕೆಳಗೆ ಮಾಡಿತ್ತು.
ಬಹುತೇಕ ಸಲ ಚುನಾವಣಾ ಸಮೀಕ್ಷೆಗಳೇ ತಲೆಕೆಳಗಾಗಿವೆ. ಇದು ಹೊಸದೇನಲ್ಲ. ಈಗ ಚುನಾವಣಾ ಪೂರ್ವ ಸಮೀಕ್ಷೆ, ಮತಯಂತ್ರದ ಮೇಲೆ ಕಿಡಿಕಾರುತ್ತಿರುವ ಕಾಂಗ್ರೆಸ್ ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷಗಳು ಮತ್ತು ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಮೀಕ್ಷೆಯನ್ನು ಸಮರ್ಥಿಸುವ ಬಿಜೆಪಿ ಪಕ್ಷಗಳ ನಾಯಕರು ಮಾಡುತ್ತಿರುವುದು ಮಾತ್ರ ಶುದ್ಧ ರಾಜಕೀಯವೇ ಹೊರತು ಮತ್ತೇನಲ್ಲ. ಅಂದ ಹಾಗೆ ಚುನಾವಣಾ ಪೂರ್ವ ಸಮೀಕ್ಷೆಯನ್ನು, ಮತಯಂತ್ರವನ್ನು ನಿಷೇಧಿಸಬೇಕು ಹಳೆಯ ಚುನಾವಣಾ ಪದ್ಧತಿಯನ್ನೇ ಜಾರಿಗೆ ತರಬೇಕೆಂದು ಎಂದು ಅರಚುತ್ತಿರುವ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಮೀಕ್ಷೆಯ ಮೇಲೆ,‌ಮತಯಂತ್ರದ ಮೇಲೆ ಭರವಸೆ ಇದೆ ಎಂಬಂತೆ ಮಾತಾಡಿತ್ತು. ಅಂದರೆ, ಸಮೀಕ್ಷೆಗಳು ತಮ್ಮ ಪರವಾಗಿ ಬಂದಾಗ ನಂಬುವುದು, ಬರದಿದ್ದಾಾಗ ವಿರೋಧಿಸುವುದು ಎಲ್ಲ ಪಕ್ಷಗಳು ಮಾಡುತ್ತಲೇ ಬಂದಿವೆ. ಅದರಲ್ಲೂ ಕೆಲವು ಚಾನೆಲ್‌ಗಳು ವೃತ್ತಿಧರ್ಮವನ್ನು ಮರೆತು ತಮ್ಮನ್ನು ತಾವು ಒಂದೊಂದು ಪಕ್ಷಕ್ಕೂ ತಮ್ಮನ್ನು ತಾವು ಮಾರಿಕೊಂಡು ಆ ಪಕ್ಷದ ಮೂಗಿನ ನೇರಕ್ಕೆ ಸಮೀಕ್ಷೆ ನಡೆಸಿ ಫಲಿತಾಂಶ ಹೊರಹಾಕುತ್ತಿವೆ. ಹೀಗೆ ಒಂದು ಪಕ್ಷದ ಪರವಾಗಿರುವಂತೆ ಸಮೀಕ್ಷೆಯನ್ನು ತಯಾರಿಸಿ ಮತದಾರರ ಮೇಲೆ ಪ್ರಭಾವ ಭೀರುತ್ತವೆ. ಕೆಲವೊಮ್ಮೆ ಮತದಾರನು ಚುನಾವಣಾ ಪೂರ್ವ ಸಮೀಕ್ಷೆೆಯ ಆಧಾರದ ಮೇಲೆಯೇ ಅವನು ಯಾವ ಪಕ್ಷಕ್ಕೆ ಮತ ನೀಡಬೇಕೆಂದು ನಿರ್ಧರಿಸುತ್ತಾನೆ. ಒಮ್ಮೊಮ್ಮೆ ಮತದಾರರಿಗೆ ಗೊಂದಲವನ್ನುಂಟು ಮಾಡಲೆಂದೇ ಅಥವಾ ಒಂದು ಪಕ್ಷದ ಪರ ಮತದಾರರ ಒಲವು ಮೂಡಿಸಲೆಂದೇ ಸಮೀಕ್ಷೆಗಳನ್ನು ಬೇಕಾದಂತೆ ತಯಾರು ಮಾಡುತ್ತವೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಈ ಬಾರಿ ನೂರರ ಗಡಿ ದಾಟುವುದೇ ಅನುಮಾನವೆಂದೇ ಎಲ್ಲ ಸಮೀಕ್ಷೆಗಳು ಹೇಳುತ್ತಿವೆ. ದಶಕಗಳ ಕಾಲ ಇತಿಹಾಸವಿರುವ ರಾಷ್ಟ್ರೀಯಮಟ್ಟದ ಪಕ್ಷವೊಂದು ಯಾಕೆ ಈ ಸ್ಥಿತಿಗೆ ತಲುಪಿತು? ಪಕ್ಷದ ಇಂದಿನ ಹೀನಾಯ ಸ್ಥಿತಿಗೆ ಕಾರಣ ಯಾರು? ಯಾರನ್ನೂ ದೂರವಂತಿಲ್ಲ. ಇದಕ್ಕೆಲ್ಲ ಸ್ವತಃ ಆ ಪಕ್ಷದ ಹೈಕಮಾಂಡೇ ಕಾರಣ. ಆ ನಾಯಕನ ಬೇಜವಾಬ್ದಾರಿ ಹೇಳಿಕೆ, ನಾಯಕತ್ವದ ಕೊರತೆ, ಅತಿಯಾದ ಓಲೈಕೆ ರಾಜಕಾರಣ, ಅಧಿಕಾರದ ಹಪಾಹಪಿ, ಭ್ರಷ್ಟಾಚಾರ ಇವೆ ಕಾಂಗ್ರೆಸ್‌ನ ಇಂದಿನ ಹೀನಾಯ ಸ್ಥಿತಿಗೆ ಪ್ರಮುಖ ಕಾರಣ. ಈಗ ಕಾಂಗ್ರೆಸ್‌ನ ಸ್ಥಿಿತಿ ಹೇಗಿದೆಯೆಂದರೆ ನೂರಾರು ವರ್ಷದ ಹಳೆಯ ಮರವೊಂದು ಒಣಗುತ್ತಿರುವಂತೆ ಭಾಸವಾಗುತ್ತಿದೆ. ಒಂದು ಕಾಲವಿತ್ತು. ಚುನಾವಣಾ ಸಮಯದಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ, ನೀವು ಯಾರಿಗೆ ವೋಟು ಹಾಕಬೇಕೆಂದಿದ್ದೀರಿ ಎಂದು ಪ್ರಶ್ನಿಸಿದರೆ ಅವರ ಉತ್ತರ ‘ಇನ್ಯಾರಿಗೆ ಕೈಗೆ ಮತ. ಕೈಯಿಲ್ಲದ ಮನುಷ್ಯ ಹೆಂಗ್ ಬದುಕೋದು?’ ಎಂದು ಹೇಳುತ್ತಿದ್ದರು. ಟಂದು ಕಾಂಗ್ರೆಸ್‌ನ ಆಯ್ಕೆ ಅಷ್ಟು ಭಾವಾನಾತ್ಮಕವಾಗಿತ್ತು. ಪ್ರತಿಯೊಬ್ಬರ ಮನೆಯ ಮೇಲೆ ಕಾಂಗ್ರೆಸ್ ಧ್ವಜ ಹಾರಾಡುತ್ತಿತ್ತು. ಕಾಂಗ್ರೆಸ್ ಅಂದ್ರೆನೇ ಜನರಿಗೆ ಅದೊಂದು ರೀತಿ ಗೌರವದ, ಜೀವನದ ಪ್ರಶ್ನೆಯಾಗಿತ್ತು. ಕಾಂಗ್ರೆಸ್ ಇಲ್ಲದ ಬದುಕಲಾರೆವು ಎಂಬ ಭಾವ ಇತ್ತು ಆ ಪಕ್ಷವನ್ನು ಹೊರತುಪಡಿಸಿ ಯಾವ ಪಕ್ಷವನ್ನು ಕನಸಿನಲ್ಲಿ ನೆನೆಸಿಕೊಳ್ಳುತ್ತಿರಲಿಲ್ಲ. ಆ ಕಾಲಕ್ಕೆ ಕಾಂಗ್ರೆಸ್‌ನಿಂದ ಎಲೆಕ್ಟ್ರಿಕ್ ಕಂಬವನ್ನು ಚುನಾವಣೆಗೆ ನಿಲ್ಲಿಸಿದರೂ ಗೆದ್ದು ಬರುತ್ತದೆ ಎಂಬ ಮಾತಿತ್ತು. ಅಂತ ಕಾಂಗ್ರೆಸ್ ಈಗ ಏನಾಗಿದೆ. ಭ್ರಷ್ಟಾಚಾರದ ಮೇಲೆ ಭ್ರಷ್ಟಾಚಾರ, ಹಗರಣಗಳ ಮೇಲೆ ಹಗರಣಗಳ ಇತ್ತೀಚೆಗೆ ಚೀನಾ ರಹಸ್ಯ ಭೇಟಿ, ಪಾಕಿಸ್ತಾನಿ ಪರ ಹೇಳಿಕೆ, ಸರ್ಜಿಕಲ್ ಸ್ಟೈಕ್ ಸುಳ್ಳು ಎಂದು ಹೇಳಲು ಹೊರಟಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜೈಲಲ್ಲಿರುವ ಉಗ್ರರನ್ನು ಬಿಡುಗಡೆ ಮಾಡುವುದಾಗಿ ಕಾಶ್ಮೀರದಲ್ಲಿನ ಹೇಳಿಕೆ, ರಾಹುಲ್ ಗಾಂಧಿ ಉಗ್ರನಿಗೆ ಮಸೂದ್ ಜೀ ಎಂದು ಸಂಬೋಧಿಸಿದ್ದು ಕಾಂಗ್ರೆಸ್‌ನ ತಿಕ್ಕಲುತನಗಳು ಒಂದೇ, ಎರಡೇ? ಇವೆಲ್ಲಕ್ಕಿಂತ ಹೆಚ್ಚಾಗಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕಾಂಗ್ರೆಸ್ ವರ್ತಿಸಿದ ರೀತಿ ಹೇಗಿತ್ತು ಎಂಬುದು ಜನ ಕಂಡಿದ್ದಾರೆ. ದಿನಂಪ್ರತಿ ಪ್ರಧಾನಿಗೆ ಹುಚ್ಚ, ಕೊಲೆಗಡುಕ.. ಅವಾಚ್ಯಬೈಗುಳ ಇವೆಲ್ಲ ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದು ಸುಳ್ಳಲ್ಲ. ಇದರ ಜತೆಗೆ ಜನ ಈಗ ಹಳಬರಂತಿಲ್ಲ. ಅವರ ಮನೋಭಾವ, ನಿರೀಕ್ಷೆಗಳು ಬದಲಾಗಿವೆ. ರಾಷ್ಟ್ರೀಯತೆ ಬೆಳೆಸಿಕೊಂಡಿದ್ದಾರೆ. ದೇಶದ ವಿರುದ್ಧವಾಗಿ ಯಾರೇ ಹೇಳಿಕೆ ನೀಡಿದರೂ ಸಿಡಿದು ಬೀಳುತ್ತಾರೆ. ಅದು ಮೋದಿಯೇ ಆದರೂ ಸರಿಯೇ. ಆದರೆ ಮೋದಿಯವರು ಕಾಂಗ್ರೆಸ್‌ನಂತೆ ಓಲೈಕೆ ರಾಜಕಾರಣಕ್ಕೆ ಇಳಿಯದೇ ದೇಶವೇ ಮೊದಲು ಎಂದು ನೋಟು ಅಮಾನ್ಯೀಕರಣ, ಸದೃಢ ವಿದೇಶಾಂಗ ನೀತಿ, ಸರ್ಜಿಕಲ್ ಸ್ಟ್ರೈಕ್‌ನಂತಹ ಹಲವು ಮಹತ್ವದ ನಿರ್ಧಾರ ಕೈಗೊಂಡು ಆಡಳಿತ ನಡೆಸಿದ್ದರಿಂದ ಜನರು ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿರಿಸಿದ್ದಾರೆ. ಅದೇ ಕಾರಣಕ್ಕಾಗಿ ಕೇಂದ್ರದಲ್ಲಿ ನರೇಂದ್ರ ಮೋದಿ‌ ಮತ್ತೊಮ್ಮೆ ಪ್ರಧಾನಿಯಾಗುವುದು ನಾಳೆ ಉದಯಿಸುವ ಸೂರ್ಯನಷ್ಟೇ ಸತ್ಯವಾಗಿದೆ.

ರವಿ ಜಾನೇಕಲ್

ಕಂದಹಾರ ವಿಮಾನ ಅಪಹರಣ: ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದ್ದ ವಾಜಪೇಯಿ.

ಅಂದಿನ ಪ್ರಧಾನಿ ವಾಜಪೇಯಿಯವರೇ ಉಗ್ರ ಮಸೂದ ಹಝಾರ್‌ನನ್ನು ಪಾಕಿಸ್ತಾನಕ್ಕೆ ಬಿಟ್ಟು ಬಂದ. ಆ ಉಗ್ರನೇ ಇಂದು ನಮ್ಮ ಯೋಧರನ್ನು ಕೊಂದ. ವಾಜಪೇಯಿಗೆ ಧಿಕ್ಕಾರ ಎನ್ನುವುದು ಅಜ್ಞಾನಿಗಳ ಇವತ್ತಿನ ಮೊಂಡು ವಾದ.

ಆದರೆ ಅಂದು ಸಂಭವಿಸಿದ್ದೇನು?

 

ಅಂದು ಡಿಸೆಂಬರ್ 24, 1999 ರಂದು ಇಂಡಿಯನ್ ಏರ್ಲೈನ್ಸ್ ವಿಮಾನ IC814, ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಆಗಮಿಸುತ್ತಿತ್ತು. 176 ಪ್ರಯಾಣಿಕರಿದ್ದ ಈ ವಿಮಾನವನ್ನು ಪಾಕ್ ಉಗ್ರಗಾಮಿ ಸಂಘಟನೆ ಹರ್ಕತ್-ಉಲ್-ಮುಜಾಹಿದ್ದೀನ್ ಉಗ್ರರು ಅಪಹರಣ ಮಾಡಿದ್ದರು.

ದೆಹಲಿಗೆ ಆಗಮಿಸಬೇಕಾಗಿದ್ದ ವಿಮಾನನವನ್ನು ಉಗ್ರರು ಅಫ್ಘಾನಿಸ್ಥಾನ ಕಂದಹಾರ್ ಗೆ ತೆಗೆದುಕೊಂಡು ಹೋಗಿದ್ದರು. ಈ ವೇಳೆ ವಿಮಾನ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಉಗ್ರರು ತಮ್ಮ ಬಿಗಿ ಹಿಡಿತದಲ್ಲಿರಿಸಿಕೊಂಡಿದ್ದರು.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಇದು ಬಹುದೊಡ್ಡ ಸಂಕಷ್ಟವನ್ನೇ ತಂದಿತ್ತು.
ಉಗ್ರ ಮೌಲಾನಾ ಮಸೂದ್ ಅಝರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕೆಂದು ವಿಮಾನ ಅಪಹರಿಸಿದ್ದ ಉಗ್ರರು ಬೇಡಿಕೆ ಇಟ್ಟಿದ್ದರು.

ಏಳು ದಿನಗಳ ಕಾಲ ಉಗ್ರರ ಒತ್ತೆಯಾಳಾಗಿದ್ದ ವಿಮಾನ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಾಜಪೇಯಿ ಸರ್ಕಾರ ಜೀವಂತವಾಗಿ ಕರೆತರಲು ಭಾರತದಲ್ಲಿ ಜೈಲಿನಲ್ಲಿದ್ದ ಮೂವರು ಕುಖ್ಯಾತ ಭಯೋತ್ಪಾದಕರನ್ನು ಬಿಡುಗಡೆ ಮಾಡಿತ್ತು.
ಅಂದು ವಿದೇಶಾಂಗ ಸಚಿವ ಆಗಿದ್ದ ಜಸ್ವಂತ್ ಸಿಂಗ್ ವಾಜಪೇಯಿ ಅಣತಿಯಂತೆ ಉಗ್ರರೊಡನೆ ಮಾತುಕತೆಗೆ ಮುಂದಾಗಿದ್ದರು. ಅವರು ಭಯೋತ್ಪಾದಕರಾದ ಮಸೂದ್ ಅಝರ್, ಒಮರ್ ಸಯೀದ್ ಶೇಖ್ ಮತ್ತು ಮುಷ್ಠಕ್ ಅಹ್ಮದ್ ಝಾರ್ಗರ್ ಅವರನ್ನು ಕಂದಹಾರ್ ಗೆ ಕರೆದೊಯ್ದರು.ಅಲ್ಲಿ ಅಂತಿಮ ಮಾತುಕತೆ ನಡೆಯಿತು.
ಆ ಸಮಯದಲ್ಲಿ ಪ್ರಧಾನಿ ವಾಜಪೇಯಿ ನಡೆಯನ್ನು ವಿಪಕ್ಷಗಳು, ರಾಷ್ಟ್ರೀಯ ವಿಶ್ಲೇಷಕರಿಂದ ಟೀಕೆಗೆ ಒಳಗಾಗಿತ್ತು. ಭಾರತೀಯ ವಿರೋಧಿ ನಿಲುವು ತಾಳಿದರೆಂದು ವಾಜಪೇಯಿ ಬೇಷರತ್ ಕ್ಷಮೆ ಕೇಳಬೇಕೆಂದು ಅಂದು ಕಾಂಗ್ರೆಸ್ ಸಹ ಆಗ್ರಹಿಸಿತ್ತು.
ಆದರೆ ವಾಜಪೇಯಿಯವರಿಗೆ ವಿಮಾನದಲ್ಲಿರುವ ಪ್ರಯಾಣಿಕರು, ಸಿಬ್ಬಂದಿಗಳ ಜೀವ ರಕ್ಷಣೆಯೇ ಮುಖ್ಯವಾಗಿತ್ತು. ವಿಮಾನ ಪ್ರಯಾಣಿಕರ ಸುರಕ್ಷತೆಯೇ ದೇಶದ ಆದ್ಯತೆ ಎಂದು ಬಗೆದ ವಾಜಪೇಯಿ ಉಗ್ರರ ಬಿಡುಗಡೆ ಮಾಡಿ ವಿಮಾನ ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.

ಇನ್ನೊಂದು ಪ್ರಕಾರ, ಅಂದಿನ ಮಾಧ್ಯಮಗಳು, ವಿರೋಧಪಕ್ಷಗಳು, ಬುದ್ಧಿಜೀವಿಗಳ ತಂಡ, ಅಪಹರಣಕಾರರನ್ನು ಸುರಕ್ಷಿತವಾಗಿ ಕರೆತರುವಂತೆ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಇನ್ನೊಂದು ಕಡೆ ಅಪಹರಣವಾದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು ಇಂತಹಾ ಕಠಿಣ ಸಮಯದಲ್ಲಿ ಪ್ರಧಾನಿಯಾಗಿ ವಾಜಪೇಯಿ ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು. ದೇಶವೇ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಆದರೆ ಇಂದು ಪರಿಜ್ಞಾನವಿಲ್ಲದೆ ಬೊಗಳುತ್ತಿರುವ ಜನಕ್ಕೆ ಏನು ಹೇಳೋಣ? ರಾಜಕೀಯ ಇರಬೇಕು. ಆದರೆ ರಾಜಕೀಯಕ್ಕಾಗಿ ದೇಶದ ಭದ್ರತೆ, ಘನತೆ, ಸಾರ್ವಭೌಮತ್ವವನ್ನೇ ಮಣ್ಣುಮಾಡುವಂತಹ ಹೇಳಿಕೆ ನೀಡುವುದು ದೇಶದ್ರೋಹದ ಕೆಲಸ. ಇಂಥವರನ್ನು‌ ಮುಲಾಜಿಲ್ಲದೇ ಒದ್ದು ಒಳಗೆ ಹಾಕಬೇಕು.

ಸಾಲ ವಾಪಸ್ ಕೊಡುವುದೆಂದರೆ, ಸಾವಿರ ಚೇಳು ಕುಟುಕಿದಂತೆ !

ಆ ಹೆಣ್ಮಗಳು..

“ಸರ್ ಸ್ವಲ್ಪ ಹಣ ಬೇಕಾಗಿತ್ತು. ನಮ್ಮ ಯಾಜಮಾನ್ರು ಬಂದಮೇಲೆ ವಾಪಸ್ಸು ಕೊಡ್ತೀನಿ. ಅನ್ನ ಆಗಿದೆ, ಸಾಂಬಾರು ಮಾಡಬೇಕು ಎಣ್ಣೆ ಇಲ್ಲ, ಮುಂಜಾನೆ ನಮ್ಮ ಯಜಮಾನ್ರಿಗೆ ಹೇಳೋದೆ ಮರೆತುಬಿಟ್ಟೆ” ಎಂದಳು.

ಕೆಲವು ದಿನಗಳ ಹಿಂದೆ, ಹೀಗೆ ಮಹಿಳೆಯೊಬ್ಬಳು ಇಂತದ್ದೆ ಸಮಸ್ಯೆ ಹೇಳಿಕೊಂಡು ದುಡ್ಡು ಪಡೆದಿದ್ದಳು. ಆದಾದ ಮೇಲೆ ತಿಂಗಳಾದರೂ ವಾಪಸ್ಸು ಕೊಡಲಿಲ್ಲ. ಒಂದಿನ ಹೇಳದೇ ಕೇಳದೆ ಮನೆ ಬದಲಾಯಿಸಿ ಹೋಗಿಬಿಟ್ಟರು. ಅದರ ಬಿಸಿ ಇನ್ನು ಇತ್ತು.

ಈಗ ಈಕೆಯೂ ಕಷ್ಟ ಅಂತ ಹಣ ಕೇಳ್ತಿದ್ದಾರೆ. ದುಡ್ಡೇನೋ ಕೊಡಬಹುದು, ಕೊಟ್ಟನಂತರ ಸಾಲ ಮಾಡಿದವನಂತೆ ಅವರನ್ನು ನಾನೇ ಕೇಳಿ ಕೇಳಿ ಕೆಟ್ಟವನಾನಾಗೋದು ಯಾರಿಗೆ ಬೇಕು? ಬಹಳ ಜನರಿಗೆ ಸಾಲ ವಾಪಸ್ಸು ಕೊಡೋದಂದ್ರೆ ಸಾವಿರ ಚೇಳು ಒಮ್ಮೆಗೆ ಕುಂಡೆಗೆ ಕುಟುಕಿದಷ್ಟು ನೋವಾಗುತ್ತೆ. ಇದೆಲ್ಲ ಉಸಾಬರಿ ಯಾಕೆ ಬೇಕು “ಹಣ ಇಲ್ಲ” ಅಂದೆ. ಆದರೆ ಅವಳು ಬಿಡಬೇಕಲ್ಲ!

“ಸರ್ ಹಾಗೆ ಹೇಳಬೇಡಿ, ಇದ್ರೆ ಕೊಡಿ. ಐವತ್ತು ರುಪಾಯಿ ಕೊಡಿ ಸಾಕು’ ಎಂದು ಅಂಗಲಾಚಿದಳು.

‘ಓಹೋ! ನೂರೋ, ಇನ್ನೂರೋ ಕೇಳ್ತಾಳೆ ಅಂದ್ಕೊಂಡೆ. ಈಕೆ ಕೇವಲ ಐವತ್ತಕ್ಕೆ ಇಷ್ಟು ಕೇಳ್ಕೊಳ್ತಿದಾಳೆ. ಪಾಪಾ ಏನು ಕಷ್ಟವೋ ಏನೋ. ಸುಳ್ಳು ಹೇಳ್ತಿರಲಿಕ್ಕಿಲ್ಲ ಐವತ್ತೇ ಕೇಳ್ತಿದಾಳೆ.ಎಲ್ಲರೂ ಮೋಸಗಾರರೇ ಇರೋದಿಲ್ಲ’ ಮನಸು ನನಗೆ ಬುದ್ದಿ ಹೇಳೋಕೆ ಶುರು ಮಾಡಿತ್ತು.

ಸರಿ ಅಂತ ಪರ್ಸ್ ತೆಗೆದು ನೋಡಿದೆ, ಚೇಂಜ್ ಇಲ್ಲ. ಐದನೂರರ ನೋಟು ಇತ್ತು. “ನೋಡಮ್ಮ ನನ್ನ ಹತ್ರ ಚೇಂಜ್ ಇಲ್ಲ. ಬೇಕಾದರೆ ಪಕ್ಕದ ಕಿರಾಣಿ ಅಂಗಡಿಯವ ಪರಿಚಯಸ್ಥ ಅವನಿಗೆ ಹೇಳ್ತಿನಿ, ನಿಮಗೆ ಬೇಕಾದ ಸಾಮಾನು ತಗೊಳ್ಳಿ. ದುಡ್ಡು ಇದ್ದಾಗ ಅವರಿಗೆ ವಪಾಸ್ಸು ಕೊಡಿ ಅಂದೆ.

“ಇಲ್ಲ ಸಾರ್, ನಾನು ಎಣ್ಣೆ ಜತೆಗೆ ತರಕಾರಿನೂ ತಗೋಬೇಕು. ಆ ಅಂಗಡಿಯಲ್ಲಿ ಸಿಗೋದಿಲ್ಲ. ಐದನೂರು ಕೊಡಿ ಸರ್ ಚೇಂಜ್ ಮಾಡಿಸ್ಕೊಂಡು ಬರತೀನಿ” ಅಂತ ವರಾತ ತೆಗೆದಳು.

“ಸರಿ. ತಗೋ, ಚೇಂಜ್ ಮಾಡಿಸ್ಕೊ. ಇದರಲ್ಲಿ ಐವತ್ತು ತಗೊಂಡು ನಾಲ್ಕೂನೂರ ಐವತ್ತು ತಂದುಕೊಡು” ಅಂತ ಐದುನೂರರವನೋಟು ಕೊಟ್ಟೆ

ಕೊಟ್ಟಿದ್ದೆ ತಡ ಎಲ್ಲಿಗೋ ಅವಸರದಲ್ಲಿ ನಡೆದಳು. ಇಪ್ಪತ್ತು ನಿಮಿಷ ಆಯ್ತು, ಆಕೆಯ ಸುಳಿವೇ ಇಲ್ಲ!ಅವಳುವ ಏನಾದರೂ ದುಡ್ಡು ತಗೊಂಡು ಓಡಿಹೋದಳಾ? ಇಲ್ಲ, ಹಾಗಾಗಲಿಕ್ಕಿಲ್ಲ. ಸಮೀಪದಲ್ಲೆ ಮನೆ ಇದೆ, ಐದನೂರಕ್ಕೆ ಮನೆ ಬಿಟ್ಟು ಹೋಗೋದು ಅಸಾಧ್ಯ ಅನಿಸಿ ಸುಮ್ಮನಾದೆ.

ಮೂವತ್ತು ನಿಮಿಷ ಆಯ್ತು! ನನಗೂ ಅನುಮಾನ ಶುರುವಾಯಿತು. ನಾಲ್ಕೈದು ಅಂಗಡಿ ಹತ್ರ ನೋಡಿದೆ ಕಾಣಲಿಲ್ಲ. ಒಂದು ಅಂಗಡಿಯ ಮುಂದೆ ಅವಳ ಗಂಡ ಕಂಡ. – ‘ಡ್ಯೂಟಿ ಗೆ ಹೋಗಿಲ್ವಾ ರಾಮಣ್ಣ ಇವತ್ತು ?” ಅಂತ ಕೇಳಿದೆ. ‘ಹೋಗಿಲ್ಲ’ ಎಂದು ತಲೆಯಾಡಿಸಿದ. ಬಾಯಿಯಿಂದ ಬೀರು ವಾಸನೆ ಮೂಗಿಗೆ ರಪ್ಪಂತ ಬಡಿತು. ಅವನನ್ನು ಏನು ಕೇಳಲಿಲ್ಲ ಮನೆಗೆ ವಾಪಸ್ಸಾದೆ.

ಆ ಹೆಂಗಸು ಇನ್ನೂ ಬಂದಿರಲಿಲ್ಲ. ಮನೆ ಲಾಕ್ ಆಗಿತ್ತು. ಬೆಳಿಗ್ಗೆ ಕೇಳಿದ್ರಾಯ್ತು ಎಲ್ಲಿಗೆ ಹೋಗ್ತಾರೆ ಅಂತ ಮಲಗಿದೆ.

ಮಂಜಾನೆ ಎದ್ದೆ, ಸೀದಾ ಅವಳ ಮನೆಯಕಡೆ ನಡೆದೆ. ಆ ಹೆಂಗಸು ಅಂಗಳದಲ್ಲಿ ಪಾತ್ರೆ ತೊಳಿತ ಕುಳಿತಿದ್ದಳು. ನನ್ನನ್ನ ನೋಡಿದಳು, ಆದರೂ ಅವಳಿಗೆ, ನಿನ್ನೆ ರಾತ್ರಿ ಚೇಂಜ್ ಮಾಡಿಸ್ಕೊಂಡು ಬರ್ತೀನಿ ಅಂತ ಐದುನೂರು ತೆಗೆದುಕೊಂಡ ಹೋಗಿದ್ದು, ದುಡ್ಡು ವಾಪಸ್ಸು ಕೊಟ್ಟಿಲ್ಲ ಕೊಡದಿದ್ದಕ್ಕೆ ಏನು ಅಂದ್ಕೊಳ್ತಾರೋ ಅನ್ನೋ ಯಾವ ಅಪರಾದಿಭಾವ ಅವಳ ಮುಖದಲ್ಲಿ ಕಾಣಲಿಲ್ಲ. ಈ ಕೇಸು ಏನು ಅಂತ ನನಗೆ ಅರ್ಥವಾಯಿತು.

” ಏನಮ್ಮಾ ಐವತ್ತು ಬೇಕು ಅಂತ ಐದನೂರು ತಗೊಂಡು ಹೋಗಿದ್ದಿ ವಾಪಸ್ಸು ಕೊಡಬೇಕು ಅಂತ ಅನಿಸುತ್ತಿಲ್ಲವಾ ?” ಸ್ವಲ್ಪ ಕೋಪದಿಂದಲೇ ಕೇಳಿದೆ.

ಅಯ್ಯೋ ನೆನಪೇ ಹೋಗಿತ್ರಿ ಅಂತ ಹುಳ್ಳಗೆ ನಕ್ಕಳು. ಅವಳ ಮುಖದಲ್ಲಿ ಕೃತಕತೆ ಎದ್ದು ಕಾಣುತ್ತಿತ್ತು. ದುಡ್ಡು ತರಲು ಮನೆಯೊಳಗೆ ಹೋದಳು. ಹತ್ತು ನಿಮಿಷ ತಡವಾಗೇ ಬಂದಳು. ಅಲ್ಲಿವರೆಗೂ ನಾನು ಸಾಲಗಾರನಂತೆ ಮನೆಮುಂದೆ ನಿಂತಿದ್ದೆ. ದಾರಿಹೋಕರು ನನ್ನನ್ನೇ ನೋಡುತ್ತಿದ್ದರು.

ಮನೆಯೊಳಗಿಂದ ಬಂದ ಆ ಹೆಂಗಸು ಯಾವುದೋ ಅಳುಕಿನಲ್ಲಿ ನನಗೆ ದುಡ್ಡು ಕೊಟ್ಟಳು. ನೋಟುಗಳನ್ನ ಎಣಿಸಿದೆ ನಾಲ್ಕುನೂರು ಇತ್ತು ! ಅವಳು ರಾತ್ರಿ ಬೇಡಿದ್ದು ಐವತ್ತು. ಈಗ ನಾಲ್ಕುನೂರು ವಾಪಸ್ಸು ಕೊಟ್ಟು ನೂರು ತಗೊಂಡಿದ್ದು ಇದು ನನಗೆ ಸಿಟ್ಟು ಬರಿಸಿತ್ತು.

“ಏನಮ್ಮ ನೀನು ಇದೇ ಕೆಲಸ ಮಾಡ್ತಿರೋದಾ ?
ನೀನು ಕೇಳಿದ್ದು ಐವತ್ತು. ಅದೂ ರಾತ್ರಿನೆ ನಮ್ಮೇಜಮಾನ್ರು ಡ್ಯೂಟಿಯಿಂದ ಬಂದನಂತರ ವಾಪಸ್ಸು ಕೊಡ್ತಿನಿ ಅಂತ ಹೇಳಿದ್ದಿ. ಆದರೆ ಅವರು ನಿನ್ನೆ ಡ್ಯೂಟಿಗೇನೆ ಹೋಗಿಲ್ಲ. ಸರಿ ಈಗ ಬೆಳಗಾಗಿದೆ, ನಿಮ್ಮ ಯಜಮಾನ್ರೂ ಬಂದಿದಾರೆ ಇನ್ನೂ ನೂರು ಕೊಟ್ಟುಬಿಡಿ” ಎಂದೆ.

ಕೊಡ್ತಿನ್ರಿ ಇವತ್ತು ದುಡ್ಡಿಲ್ಲ ಅಂತ ಮತ್ತೆ ಮನೆ ಪುರಾಣ ಹೇಳೋಕೆ ಶುರುಮಾಡಿದ್ಳು. ಪುಣ್ಯಕ್ಕೆ ನಾಲ್ಕುನೂರಾದ್ರೂ ಕೈ ಸೇರಿತ್ತು.

ಇದಾಗಿ ಮೂರ್ನಾಲ್ಕು ತಿಂಗಳು ಕಳೆಯಿತು ಆ ನೂರು ವಾಪಸ್ಸು ಬರಲೇ ಇಲ್ಲ. ಇದ್ಯಾವುದೂ ನಡೆದೇ ಇಲ್ಲವೇನೋ ಎಂಬಂತೆ ನಿಶ್ಚಿಂತವಾಗಿದಾಳೆ. ಈಗಲೂ ದಿನಾ ಯಾರಾದರೊಬ್ಬರು ಮನೆಮುಂದೆ ನಿಂತಿರ್ತಾರೆ ನನ್ನಂತೆ !

(ಕಳೆದ ವರ್ಷ ನಾನು ಕೆಂಗೇರಿಯಲ್ಲಿದ್ದಾಗ ನಡೆದ ಘಟನೆ)

 

ಇಂಥವರಿಂದ ದೇಶ ಉದ್ಧಾರವಾಗಲ್ಲ!

ದೇಶದ ವಿಚಾರ ಕಟ್ಟಿಕೊಂಡು ನಾವೇನು ಮಾಡ್ಬೇಕು ಅನ್ನುವವನಿಂದ ನಮ್ಮ ದೇಶಕ್ಕೆ ಒಳ್ಳೆ ಭವಿಷ್ಯ ನಿರೀಕ್ಷಿಸುವಂತಿಲ್ಲ ಇವತ್ತು ನೀತಿಯ ಸ್ಥಾನದಲ್ಲಿ ಜಾತಿ ಬಂದಿದೆ ಆ ಜಾತಿ ಪರಸ್ಪರರಲ್ಲಿ ಪ್ರೀತಿ ಹುಟ್ಟಿಸುವದರ ಬದಲು ಭೀತಿ ಹುಟ್ಟಿಸುತ್ತಿದೆ ! ಈ ಜಾತಿ ವ್ಯವಸ್ಥೆ ಬಲವಾಗಲು ಬಿಡಬಾರ್ದು ಜಾತಿವ್ಯವಸ್ಥೆಗಳು ಬೆಳೆದರೆ ಆಗುವ ದುಷ್ಪರಿಣಾಮಗಳಿಗೆ ಉದಾಹರಣೆಗೆ ಒಂದು ಕತೆ ಕೇಳಿ ,
“ಒಬ್ಬ ರಾಜ ಇದ್ದ , ಪಕ್ಕದ ರಾಜನು ತನ್ನ ರಾಜಧಾನಿಗೆ ಮುತ್ತಿಗೆ ಹಾಕುತ್ತಾನೆ ಎನ್ನುವ ಸುದ್ದಿ ಈ ರಾಜನಿಗೆ ತಲುಪಿತು ಶತ್ರುವಿನಿಂದ ತನ್ನ ರಾಜ್ಯವನ್ನ ಕಾಪಾಡಿಕೊಳ್ಳುವುದು ಹೇಗೆಂದು ಸಲಹೆ ಕೇಳಲು ರಾಜನು ಊರ ಪ್ರಮುಖರ ಸಭೆ ಕರೆದನು ,

ಸಭೆಗೆ ಬಂದಿದ್ದ ಸ್ಟಾಪತ್ಯೆ ವಿಶಾರದರು ಹೇಳಿದರು : ಊರು ಸುತ್ತ ಎತ್ತರವಾದ ಮಣ್ಣು ದಂಡೆ ನಿರ್ಮಿಸಬೇಕು ಮತ್ತು ಅದರ ಸುತ್ತ ಆಳವಾದ ಕಂದಕ ತೋಡಿಸಿ “ಎಂದ,
ಬಡಗಿಯ: “ಮರದ ಗೋಡೆ ಕಟ್ಟಬೇಕು ಎಂದ ”
ಚಮ್ಮಾರ: “ಇದಕ್ಕೆ ಚರ್ಮದಂತಹ ಯೋಗ್ಯವಾದುದ್ದು ಇನ್ನೊಂದಿಲ್ಲ ಅದರಂತೆ ಕಟ್ಟಿ “ಎಂದ ,
ಕಮ್ಮಾರನಂತೂ “ಗೋಡೆ ಕಬ್ಬಿನದ್ದೇ ಆಗಬೇಕು ,ಮಿಕ್ಕಾವುದು ಉಪಯೋಗವಿಲ್ಲ ” ಎಂದ ,
ಅಷ್ಟೊತ್ತಿಗೆ ನ್ಯಾಯವಾದಿಗಳು ಮುಂದಾಗಿ ” ಕಾನೂನು ದೃಷ್ಟಿಯಿಂದ ಶತ್ರುವಿನದೇ ಹೇಗೆ ತಪ್ಪಿದೆ , ಇನ್ನೊಬ್ಬರ ಸ್ವತ್ತಿಗೆ ಕೈ ಹಾಕುವುದು ಯಾವ ರೀತಿ ಶಿಕ್ಷರ್ಹ ಅಪರಾಧ ಎಂಬುದನ್ನು ಶತ್ರುವಿಗೆ ತೋರಿಸಿಕೊಡುವುದೇ ರಾಜ್ಯರಕ್ಷಣೆಯ ಸರ್ವೋತ್ಕೃಷ್ಟ ಮಾರ್ಗ : ಎಂದರು,

ಕಡೆಗೆ ಪುರೋಹಿತರು ಎದ್ದರು ” ನೀವೆಲ್ಲ ಶುದ್ಧ ಹುಚ್ಚರಂತೆ ಮಾತನಾಡುವಿರಿ ಮೊದಲಿಗೆ ದೇವತೆಗಳನ್ನ ತೃಪ್ತಿಪಡಿಸಬೇಕು , ಅದಕ್ಕಾಗಿ ಯಾಗ-ಯಾಜ್ಞಾದಿಗಳನ್ನ ನೆರವೇರಿಸಬೇಕು ಆಗಲೇ ನಿಮಗೆ ಗೆಲುವು , ಎಂದ ,

ರಾಜ್ಯದ ರಕ್ಷಣೆ ಮಾಡುವ ಬದಲು ಅವರು ಹೀಗೆ ಜಗಳವಾಡುತ್ತ ಕುಳಿತರು ,ವೈರಿಯೂ ಮುನ್ನುಗ್ಗಿ ದಾಳಿಯಿಟ್ಟು ಊರನ್ನು ಕೊಳ್ಳೆ ಹೊಡೆದನು !

ಸಾಮಾನ್ಯವಾಗಿ ಎಲ್ಲ ದುರಾಗ್ರಹಗಳ ಗತಿಯು ಇದೆ,

ಮೋದಿ ಸರ್ವಾಧಿಕಾರಿಯೇ?

ನಸ್ಸಿಂ ನಿಕೋಲಸ್ ತಲೇಬ್, ಇವನು ಲೆಬಾನಿಸ್ ಮೂಲದ ಅಮೆರಿಕನ್ ಸಂಖ್ಯಾಶಾಸ್ತ್ರಜ್ಞ , ಅಪಾಯ ವಿಶ್ಲೇಷಕ (risk analyst) ಲೇಖಕ ಹಾಗೂ ಪ್ರಾಧ್ಯಾಪಕ. ಇಷ್ಟೇ ಅಲ್ಲ ಮ್ಯಾಥಮೆಟಿಕಲ್ ಫೈನಾನ್ಸ್ ವಿಭಾಗದಲ್ಲೂ ಇತನದು ಎತ್ತಿದ ಕೈ. ಹೆಡ್ಜೆ ಫಂಡ್ ಮ್ಯಾನೇಜರ್, ಡಿರೈವೇಟಿವ್ ಟ್ರೇಡರ್ ಆಗಿ ಕೆಲಸ ಮಾಡಿದ ಅನುಭವ ಕೂಡ ಈತನಿಗಿದೆ. ಸದ್ಯಕ್ಕೆ ಯುನಿವರ್ಸ್ ಇನ್ವೆಸ್ಟ್ ಎನ್ನುವ ಕಂಪನಿಗೆ ವೈಜ್ಞಾನಿಕ ಸಲಹೆಗಾರನಾಗಿ ಕೆಲಸ ಮಾಡುತ್ತಿರುವ ಈತ 2007ರಲ್ಲಿ ಬರೆದ ‘ದಿ ಬ್ಲಾಕ್ ಸ್ವಾನ್’ ಪುಸ್ತಕ ಎರಡನೇ ಮಹಾ ಯುದ್ಧದ ನಂತರದ ಹನ್ನೆರಡು ಅತ್ಯಂತ ಪ್ರಭಾವ ಬೀರುವ ಪುಸ್ತಕಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ.

ಈತನ ಉಲ್ಲೇಖ ಏಕೆ? ಎಂದು ನೀವು ಯೋಚಿಸುತ್ತಿರಬಹುದು. ಮೋದಿ ಗೆದ್ದು ಪ್ರಧಾನಿ ಆಗುವುದಕ್ಕೆ ಮುಂಚೆ ಭಾರತಕ್ಕೆ ಬಂದಿದ್ದ ಈತ ಮೋದಿಯ ಮೋಡಿ ಗೆ ಯಾವ ಪರಿಗೆ ಸಿಲುಕಿದ್ದನೆಂದರೆ ‘ನಾನು ಭಾರತೀಯನಾಗಿದ್ದರೆ , ಮೋದಿ ಅವರಿಗೆ ವೋಟು ಮಾಡುತಿದ್ದೆ’ ಎನ್ನುವ ಹೇಳಿಕೆ ಕೊಡುವಷ್ಟು… ಕೆಲವು ವರ್ಷಗಳ ಹಿಂದೆಯೂ ಮತ್ತೆ ಭಾರತಕ್ಕೆ ಬಂದಿದ್ದ ಈತನಿಗೆ ಮಾಧ್ಯಮಗಳು ಕೇಳಿದ ಮೊದಲ ಪ್ರಶ್ನೆ

‘ಕಳೆದ ಬಾರಿ ಭಾರತೀಯನಾಗಿದ್ದರೆ ಮೋದಿ ಅವರಿಗೆ ವೋಟು ಮಾಡುತಿದ್ದೆ ಎಂದಿರಿ. ನಿಮ್ಮ ಇಂದಿನ ನಿಲುವೇನು?’

ಯಾವುದೇ ಸಂಕೋಚ, ತಡವರಿಕೆ ಇಲ್ಲದೆ ತಕ್ಷಣ ಆತನಿಂದ ಬಂದ ಉತ್ತರ, ‘ಖಂಡಿತ ಮೋದಿ ಆಶಾಭಂಗ ಮಾಡಿಲ್ಲ, ಅವರೊಬ್ಬ ತಪಸ್ವಿ (ascetic ), ಕಳೆದ ವರ್ಷದ ಅಂಕಿ ಸಂಖ್ಯೆ ನೋಡಿದರೆ ನಿಮಗೆ ತಿಳಿಯುತ್ತದೆ, ಎಲ್ಲಕ್ಕೂ ಮುಖ್ಯ ಆತನ ಪ್ರಯತ್ನ (effort ), ಬದ್ಧತೆ ಪ್ರಶ್ನಿಸುವಂತಿಲ್ಲ. ಕೆಲವೊಮ್ಮೆ ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯದೆ ಹೋಗಬಹುದು. ಎಲ್ಲಾ ನಮ್ಮ ಹಿಡಿತದಲ್ಲಿ ಇಲ್ಲವಲ್ಲ?’ ಮುಂದುವರಿದು ಹೇಳುತ್ತಾನೆ- ‘ಮತ್ತೊಮ್ಮೆ ಹೇಳುತ್ತೇನೆ, ಆತನೊಬ್ಬ ತಪಸ್ವಿ. ಮತ್ತು ನಾನು ತಪಸ್ವಿಯನ್ನು ನಂಬುತ್ತೇನೆ.’

‘ಮೋದಿಯನ್ನು ಸರ್ವಾಧಿಕಾರಿ ಎಂದು ಹಲವರು ಹೇಳುತ್ತಾರೆ, ನಿಮ್ಮ ನಿಲುವೇನು?’ ಎನ್ನುವ ಮಾಧ್ಯಮದ ಪ್ರಶ್ನೆಗೆ

‘ಮೊಟ್ಟೆಯನ್ನು ಒಡೆಯದೆ ನೀವು ಆಮ್ಲೆಟ್ ತಯಾರಿಸಬಲ್ಲಿರೆ?’ ಎಂದು ಮರು ಪ್ರಶ್ನಿಸಿ, ಮಹಾನ್ ಕಾರ್ಯ ಸಾಧನೆಗೆ ಹಲವೊಮ್ಮೆ ಕಠಿಣ ನಿಲುವು ತೆಗೆದುಕೊಳ್ಳುವುದು ಅವಶ್ಯಕ ಎನ್ನುವ ಖಡಕ್ ಉತ್ತರ.
ಮೋದಿ ಅಧಿಕಾರ ವಹಿಸಿಕೊಂಡ ನಂತರ ಭಾರತದಲ್ಲಿ ಧರ್ಮ ಆಧಾರಿತ ಅಸಹಿಷ್ಣುತೆ ಹೆಚ್ಚಾಗಿದೆ ಎನ್ನುವ ಕೂಗು ಎದ್ದಿದೆ, ನಿಮ್ಮ ಗಮನಕ್ಕೆ ಅದು ಬಂದಿದೆಯೇ ಎನ್ನುವ ಪ್ರಶ್ನೆಗೆ ‘ಹುಟ್ಟಿನಿಂದ ಹಲವು ದೈವಗಳ ಆರಾಧಿಸಿಕೊಂಡು ಬಂದಿರುವ ನಿಮ್ಮ ವಿಶಾಲ ಮನೋಭಾವ ಒಂದೇ ದೈವ ಎನ್ನುವ ಸಿದ್ದಾಂತಕ್ಕೆ ಕಟ್ಟು ಬಿದ್ದ ಬೇರೆ ಯಾವುದೇ ಧರ್ಮದಲ್ಲೂ ಇಲ್ಲ’ ಎನ್ನುವ ಉತ್ತರ ನಮ್ಮ ಚಿಂತಕರ ಕಿವಿಗೆ ಬಿದ್ದೀತೆ ? ಅಥವಾ ಜಾಣ ಕಿವುಡೆ?
ಚೀನಾದ ಮಾರುಕಟ್ಟೆ ಕುಸಿತ ಜಗತ್ತಿನ ಮೇಲೆ ಬೀರುವ ಪರಿಣಾಮದ ಕುರಿತ ಪ್ರಶ್ನೆಗೆ, ಸಾಮಾನ್ಯವಾಗಿ ಎಲ್ಲರೂ ಅದರಿಂದ ಆಗುವ ನಕಾರಾತ್ಮಕ ಅಂಶಗಳನ್ನೇ ಹೇಳುತ್ತಾರೆ. ನಿಕೋಲಸ್ ಅದಕ್ಕೆ ತದ್ವಿರುದ್ಧ ‘ಏರಿದ್ದು ಇಳಿಯಲೇಬೇಕು ‘ ಎನ್ನುವುದು ಪ್ರಕೃತಿ ನಿಯಮ , ಇಳಿಕೆಯೇ ಮತ್ತೊಂದು ಮಹಾನ್ ಏರಿಕೆಗೆ ಕಾರಣ ಅಲ್ಲವೇ? ಎಲ್ಲವೂ ಏರುತ್ತಲೇ ಇರುವುದಕ್ಕೆ ಹೇಗೆ ಸಾಧ್ಯ? ಇಳಿಕೆ ಮಾರುಕಟ್ಟೆಗೆ ಅವಶ್ಯವಾಗಿ ಬೇಕಾದ ಟಾನಿಕ್. ನೋಡಿ ಇಳಿಕೆಯ ಸಮಯದಲ್ಲಿ ಸಟ್ಟಾ ವ್ಯಾಪಾರಿ (speculator ) ಓಡಿ ಹೋಗುತ್ತಾನೆ, ನಿಜವಾದ ಹೂಡಿಕೆದಾರ (Investor) ನೆಲ ಕಚ್ಚಿ ನಿಲ್ಲುತ್ತಾನೆ. ಹಾಲಿನಿಂದ ನೀರನ್ನು ಬೇರ್ಪಡಿಸುವುದು ಇದರಿಂದ ಸಾಧ್ಯ. ಇಳಿಕೆ ಎಲ್ಲಾ ಸಮಯದಲ್ಲೂ ಕೆಟ್ಟದ್ದೇ ಆಗಿರಬೇಕು ಎಂದೇನು ಇಲ್ಲ’ ಎನ್ನುವುದು ಈತನ ನಿಲುವು.

ನಸ್ಸಿಂ ನಿಕೋಲಸ್ ತಲೇಬ್ ಸಂಘ ಪರಿವಾರದವರಲ್ಲ, ಭಕ್ತನೂ ಅಲ್ಲ. ಅವರೊಬ್ಬ ವಿಶ್ಲೇಷಕ. ಕಪ್ಪನ್ನು ಕಪ್ಪೆಂದು, ಬಿಳಿಯನ್ನು ಬಿಳಿ ಎಂದು ಹೇಳಲು ಸಂಕೋಚಿಸದ ವ್ಯಕ್ತಿ. ನಮ್ಮಲ್ಲಿ ಹಲವರಿಗೆ ಮಾತ್ರ ಎಲ್ಲವನ್ನೂ ಕಾಮಾಲೆ ಕಣ್ಣಿಂದ ನೋಡುವ ಬುದ್ಧಿ! ಬದಲಾವಣೆ ಜಗದ ನಿಯಮ, ಅವರೂ ಬದಲಾಗುತ್ತಾರೆ ಎಂದು ಆಶಿಸೋಣ.

ಅರ್ಥವಾಗದ ಗಣಿತ!

ನಾನ್ಯಾಕೆ ಗಣಿತದಲ್ಲಿ ದಡ್ಡನಾದೆ ಅಂದರೆ, ಪ್ರೈಮರಿಯಲ್ಲಿ ಮೇಷ್ಟ್ರು ಬಿಡಿಸುತ್ತ ಹೋಗುವ ಲೆಕ್ಕವನ್ನು, ಸೂತ್ರವನ್ನು, ಪ್ರಮೇಯವನ್ನು ವೇಗವಾಗಿ ನೋಟ್ಸ್ ಮಾಡ್ಕೊಳ್ಳೋದ್ರಲ್ಲೆ ಮಗ್ನನಾಗಿರುತ್ತಿದ್ದೆ. “ಫಸ್ಟ್ ನಂದಾಯ್ತು ಸರ್” ಅಂದಾಗ ಶಿಕ್ಷಕರ ಬಾಯಿಂದ “ಗುಡ್” ಅನ್ನಿಸಿಕೊಳ್ಳುವುದೇ ಬುದ್ಧಿವಂತಿಕೆ ಅಂದ್ಕೊಂಡಿದ್ದೆ.

ಅವರೂ ಯಾವತ್ತೂ‌ “ಲೆಕ್ಕ ಮಾಡಿ ತೋರಿಸು ಮಗನೇ” ಎಂದು ಹೇಳಲಿಲ್ಲ. ನೋಟ್ಸ್ ಮಾಡಿಕೊಂಡರೆ ಸಾಕಾಗಿತ್ತೇನೋ ಅವರಿಗೂ!

ಮುಗಿಲಿಗೆ ಮುತ್ತಿಕ್ಕಿದ ಸಮಯ !

ಕಳೆದ ಭಾನುವಾರದ ಮುಂಜಾನೆ ಎಂದಿನಂತೆ ಹಾಸಿಗೆ ಬಿಟ್ಟು ಏಳಲು ಮನಸ್ಸಾಗಲಿಲ್ಲ ಸಮಯ ಹತ್ತಾಾದರೂ, ಹಸಿದ ಹೊಟ್ಟೆಗೆ ರಮಿಸುತ್ತಾಾ ಹಾಸಿಗೆಗೆ ಅಂಟಿಕೊಂಡೇ ಇದ್ದೆ ಅದಕ್ಕೆ ಕಾರಣ ಭಾನುವಾರವೆನ್ನುವುದು. ಒಳ್ಳೆಯದೋ, ಕೆಟ್ಟದ್ದೋ ನನಗೊಂದು ವಿಚಿತ್ರ ಅಭ್ಯಾಸವಿದೆ. ಅದೇನೆಂದರೆ, ಮರುದಿನ ಭಾನುವಾರವಿದೆ ಎಂದಾಗ, ಶನಿವಾರದ ರಾತ್ರಿಯೆಲ್ಲ ಜಾಗರಣೆಯಂತೆ ನಿದ್ರಿಸದೆ, ಯಾವುದಾದರೂ ಪುಸ್ತಕವನ್ನು ಅಥವಾ ಕೃತಿಯನ್ನು ಓದುವುದು. ಅದನ್ನು ಓದಿ ಮುಗಿಸದೇ ಬಿಡುವುದಿಲ್ಲ. ಇದು ಒಂದು ಭಾನುವಾರದ ಕಥೆಯಲ್ಲ, ಕಳೆದುಹೋದ ಉಳಿದ ಭಾನುವಾರಗಳ ಕಥೆಯೂ ಇದೇ.

ಭಾನುವಾರದ ಹಿಂದಿನ ರಾತ್ರಿ ಅದೇ ಆಗಿದ್ದು. ‘ರಾಮಾ ರಾಮಾ ರೇ..’ ಕೃತಿಯನ್ನು ಕೈಗೆತ್ಕೊಂಡು ಓದುತ್ತಿದ್ದೆ. ಇದುವರೆಗೂ ನಾನು ಎಷ್ಟೋ ಸಿನಿಮಾಗಳನ್ನು ವೀಕ್ಷಿಸಿದ್ದೇನೆ. ಆದರೆ ಒಂದು ಸಿನಿಮಾವನ್ನು ಪುಸ್ತಕ ರೂಪದಲ್ಲಿ ಓದಿದ್ದಿರಲಿಲ್ಲ. ಅಂಥದ್ದೊಂದು ಕುತೂಹಲದಿಂದಲೇ ರಾಮಾ ರಾಮಾ ರೇ.. ಕೃತಿಯನ್ನು ಮಧ್ಯರಾತ್ರಿಯಾದರೂ ಓದುತ್ತಲೇ ಇದ್ದೆ.
ಬೆಳ್ಳಗ್ಗೆ ಲೇಟ್ ಲತೀಫ್‌ನಂತೆ ಎದ್ದು, ಎದ್ದನಿದ್ದೆಗಣ್ಣಲ್ಲಿ ಬ್ರಶ್ ಹುಡುಕಾಡಿ ಹಲ್ಲುಜ್ಜಿದೆ . ಮೂರುನಾಲ್ಕು ಕೊಣೆಗಳಿರುವ ಬಾಡಿಗೆ ರೂಮು ನಮ್ಮದು. ರೂಮಿನ ವಿಶೇಷತೆ ಏನೆಂದರೆ ಹುಡುಕಾಡದೇ ಯಾವ ವಸ್ತುಗಳು ಸಿಗುವುದಿಲ್ಲ ಮತ್ತು ಬೆಳಗ್ಗೆ ಬೇಗ ಅಥವಾ ಸರಿಯಾದ ಸಮಯಕ್ಕೆ ಎಚ್ಚರವಾಗುವುದಿಲ್ಲ. ಪರಮ ಸೋಮಾರಿಗಳಿಗೆ ಹೇಳಿಮಾಡಿಸಿದ ಸ್ಥಳ ನಮ್ಮ ರೂಮು. ಮುಖ ತೊಳೆದು, ರಾಶಿ ಬಿದ್ದಿದ್ದ ಬಟ್ಟೆಗಳೆನ್ನೆಲ್ಲ ಬಕೆಟ್ ಒಳಗಡೆ ತುರುಕಿಕೊಂಡು ಬಟ್ಟೆ ತೊಳೆಯಲು ಸಿದ್ಧನಾಗುತ್ತಿದ್ದೆ , ಅಷ್ಟರೊಳಗೆ ಗೆಳೆಯ ಮಂಜು ಚೆಲ್ಲೂರ್ ಬಂದು, – ‘ಇವತ್ತು ನಂದಿಬೆಟ್ಟಕ್ಕೆ ಟ್ರಿಪ್ ಹೋಗೋಣ ನಡಿ, ಬೇಗ ಮೈ ತೊಳ್ಕಂಡ್ ನಾಷ್ಟಾ ಮಾಡಿ ರೆಡಿ ಆಗು, ಎಲ್ಲರೂ ಹೊಂಟೀವಿ.’ ಎಂದ.
ಈ ಸುದ್ದಿ ಕಿವಿಗೆ ಬಿದ್ದೊಡನೆಯೇ ಮನಸು ಆಗಲೇ ಭಾರತದ ಎರಡನೇ ಅತಿದೊಡ್ಡ ಬೆಟ್ಟವಾದ ‘ನಂದಿಬೆಟ್ಟ’ದ ತುದಿ ಏರಿ ಕುಳಿತಿತ್ತು. ಆಹಾ! ಯಾವುದೇ ಆಯಾಸವಿಲ್ಲದೇ ಹಸಿವು-ನೀರಡಿಕೆಯಿಲ್ಲದೇ ಮನಸಿನ ಜತೆ ಶರೀರವೂ ಕ್ಷಣಾರ್ಧದಲ್ಲಿ ನಂದಿಬೆಟ್ಟದ ನೆತ್ತಿ ಮೇಲತ್ತಿ ಕುಳಿತುಕೊಳ್ಳುವಂತಿದ್ದರೆ, ಎಷ್ಟು ಚೆನ್ನಾಾಗಿರುತ್ತಿತ್ತು ಎಷ್ಟೆಲ್ಲ ಸಮಯ, ಖರ್ಚು ಉಳಿತಿತ್ತು. ನರ-ನಾಡಿಗಳಂತಿರುವ ಬೆಂಗಳೂರಿನ ರಸ್ತೆ ಗಳಲ್ಲಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕು, ಹೊಗೆಧೂಳಿನಿಂದ ಸಿಕ್ ಬಂದು ಸಾಯುವ ತಾಪತ್ರಯವೇ ಇರುತ್ತಿರಲಿಲ್ಲವಲ್ಲ ಎನಿಸಿತು. ಇವೆಲ್ಲ ಯೋಚನೆಗಳು ಕೆಲವೇ ಸೆಕೆಂಡ್‌ಗಳಲ್ಲಿ ನಡೆದು ಹೋದವು.
‘ಸರಿ ಮಂಜು ನಾನು ಬರುತ್ತೇನೆ.’ ಎಂದು ತೊಳೆಯಬೇಕಾಗಿದ್ದ ಬಟ್ಟೆ ತುಂಬಿದ ಬಕೆಟ್‌ನ್ನು ಮೂಲೆಗಿಟ್ಟು ಮುಂದಿನ ಅರ್ಧಗಂಟೆಯಲ್ಲಿ ಎಲ್ಲ ಕೆಲಸಗಳು ಮಿಂಚಿನಂತೆ ನಡೆದುಹೋದವು. ಮನೆಮುಂದೆ ಮೂರು ಬೈಕ್‌ಗಳು ರೆಡಿ ಆಗಿ ನಿಂತಿದ್ದವು. ಅವು ನಮಗಿಂತ ಅವಸರದಲ್ಲಿರುವಂತೆ, ಬೆಟ್ಟ ಹತ್ತುವ ಹಿಗ್ಗಿನಲ್ಲಿದ್ದವು . ಒಟ್ಟೂ ಮೂರು ಬೈಕ್‌ಗಳಲ್ಲಿ ಆರು ಜನರು ರಾಜಾರಾಜೇಶ್ವರಿನಗರದಿಂದ ನಂದಿಬೆಟ್ಟದ ಕಡೆಗೆ ಮುಂಜಾನೆ ಹನ್ನೆರಡು ಗಂಟೆಯ ಸಮಯ ಪ್ರಯಾಣ ಬೆಳೆಸಿದೆವು.

ನಂದಿಬೆಟ್ಟವು ಬೆಂಗಳೂರಿನಿಂದ ಸುಮಾರು 45ಕಿ.ಮೀ ದೂರದಲ್ಲಿದೆ. ಇದು ಹೊಸ ವಿಮಾನ ನಿಲ್ದಾಣ ದೇವನಹಳ್ಳಿಗೆ ಸಮೀಪವಿದೆ. ಚಿಕ್ಕಬಳ್ಳಾಪುರದಿಂದ ಇನ್ನೂ ಸಮೀಪವಾಗುತ್ತದೆ. ನಂದಿ ಬೆಟ್ಟವನ್ನು ಪುರಾತನ ಕಾಲದಲ್ಲಿ ನಂದಿದುರ್ಗ, ಆನಂದಿಗಿರಿ ಎಂದು ಕರೆಯಲಾಗುತ್ತಿತ್ತು ಬೆಟ್ಟದ ಬಗ್ಗೆ ಹಲವಾರು ಕಥೆಗಳಿವೆ. ಬೆಟ್ಟದ ಮೇಲೆ ಯೋಗ ನಂದೀಶ್ವರನೆಂಬ ತಪಸ್ವಿ ತಪಸ್ಸು ಮಾಡಿದ್ದರಿಂದ ಈ ಬೆಟ್ಟಕ್ಕೆ ನಂದಿಬೆಟ್ಟ ಎಂದು ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಬೆಟ್ಟದ ಮೇಲೆ ಯೋಗನಂದೀಶ್ವರ ದೇವಾಲಯವೂ ಇದೆ. 1791ರಲ್ಲಿ ಟಿಪ್ಪು ಸುಲ್ತಾನ ಹಾಗೂ ಕಾರ್ನವಾಲಿಸ್ ನಡುವೆ ನಡೆದ ಯುದ್ಧದಿಂದ ಈ ಬೆಟ್ಟ ಜನಪ್ರಿಯತೆ ಪಡೆಯಿತು. ಟಿಪ್ಪು ಸುಲ್ತಾನನ ಬೇಸಿಗೆ ವಿಶ್ರಾಂತಿಗೆ ಇದೆ ಬೆಟ್ಟದ ಕೋಟೆಯಲ್ಲಿ ತಂಗುತ್ತಿದ್ದನು. ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಕೂಡ ಬೇಸಿಗೆ ಸಮಯವನ್ನು ಇಲ್ಲೇ ಕಳೆಯುತ್ತಿದ್ದರು. ಸಮುದ್ರ ಮಟ್ಟದಿಂದ 4851 ಅಡಿ ಎತ್ತರದಲ್ಲಿರುವ ಈ ಬೆಟ್ಟವು ಭಾರತದಲ್ಲೇ ಎರಡನೇ ಅತಿದೊಡ್ಡ ಬೆಟ್ಟ ಎನಿಸಿಕೊಂಡಿದೆ. ಈ ಬೆಟ್ಟದ ಮೇಲೆ ನಿಂತಾಗ ಆಕಾಶದಲ್ಲಿ ಸಂಚರಿಸುವ ಮೋಡಗಳೇ ನಮ್ಮ ಕಾಲಡಿಯಲ್ಲಿ ಇರುವಂತೆ ಭಾಸವಾಗುತ್ತದೆ. ದಟ್ಟಮೋಡಗಳಾದಾಗ, ಬೆಟ್ಟದಲ್ಲೇ ನೀರಾಗಿ ಕರಗಿ ಹರಿಯುತ್ತದೆ. ಮನಸು ತಲ್ಲಣಗೊಳ್ಳುವಂತ ವಾತಾವರಣ ನಂದಿಬೆಟ್ಟದ ಮೇಲೆ ಅನುಭವಿಸಿಯೇ ತಿಳಿಯಬೇಕು.
ಬೆಂಗಳೂರಿನ ರಸ್ತೆಗಳ ಪರಿಚಯವಿದ್ದ ಮಲ್ಲೇಶ ಮತ್ತು ವಿಶ್ವನಾಥ್ ದಾರಿ ತೋರಿಸುತ್ತಾ ಮುಂದೆ ಮುಂದೆ ಹೋಗುತ್ತಿದ್ದರೆ ಅವರನ್ನು ಹಿಂಬಾಲಿಸುತ್ತ ನಾವು ಹೋದೆವು. ಎರಡು ಬೈಕ್‌ಗಳಿಗಿಂತ ಹಿಂದೆ ಹೋಗುತ್ತಿದ್ದ ನಮ್ಮ ಸ್ಕೂಟಿ ನಡೆಸುತ್ತಿದ್ದವನು ಹೊಸಬ, ನಾನಂತೂ ಆಫೀಸ್ ಮನೆ ಬಿಟ್ಟರೆ ಯಾವ ದಾರಿಯೂ ತಿಳಿಯದ, ಕಾಣದ ಪೂರಾ ಹೊಸಬ. ಕೆಲವೊಂದು ಕಡೆ ಅವರನ್ನು ಚೇಸ್ ಮಾಡಲಾಗದೇ ಹಿಂದೆ ಬಿದ್ದು, ದಾರಿ ತಪ್ಪಿದ ಮಕ್ಕಳಂತೆ ಹ್ಯಾಪಮೋರೆ ಹಾಕಿಕೊಂಡು ಮೊಬೈಲ್‌ನಲ್ಲಿನ ಮ್ಯಾಪ್ ಮೊರೆ ಹೋಗುತ್ತಿದ್ದೆವು. ಅಲ್ಲಲ್ಲಿ ನೀರು ಕುಡಿಯುತ್ತ ಸುಮಾರು ಮೂರು ತಾಸುಗಳ ನಂತರ ನಂದಿಬೆಟ್ಟದ ಮೇಲೆ ಹತ್ತುವ ರಸ್ತೆೆಗೆ ಬಂದು ನಿಂತಾಗ, ಅಬ್ಬಾ! ಮುಗಿಲೆತ್ತರದ ಈ ನಂದಿಬೆಟ್ಟವನ್ನು ಬೈಕ್ ಓಡಿಸುತ್ತಲೇ ಹೇಗೆ ಹತ್ತುವುದು! ನನಗೆ ಮೊದಲ ಅಚ್ಚರಿಯಾಯಿತು.
ಅಲ್ಲಿ ಕಡಿದಾದ ರಸ್ತೆಗಳ ತಿರುವಿನಲ್ಲಿ ಏರುತ್ತಾ ಏರುತ್ತಾ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಅಷ್ಟೆತ್ತರದ ಬೆಟ್ಟ ಹತ್ತುವುದಿದೆಯಲ್ಲ, ಮೈಜುಮ್ ಎನ್ನುತ್ತದೆ, ರೋಮಾಂಚನಗೊಳಿಸುತ್ತದೆ. ಒಂದು ಕಡೆ ಮನಸು ಸುತ್ತಲಿನ ಗಿರಿಧಾಮವನ್ನು, ಕಣ್ಣು ಹಾಯಿಸಿದಷ್ಟು ಕಾಣುವ ನೈಸರ್ಗಿಕ ಸೊಬಗನ್ನು ನೋಡುತ್ತಾ ಮೈಮರೆಯುತ್ತಿದ್ದರೆ ರಸ್ತೆ ತಿರುವಿನಲ್ಲಿ ನಮ್ಮ ಸ್ಕೂಟಿ ಹೋಗುತ್ತಿದ್ದಾಗ, ಕೆಳಗಡೆ ನೋಡುತ್ತಿದ್ದಂತೆ ಭಯದಿಂದ ಮೈಬೆವರುವಂತಾಗುತ್ತಿತ್ತು ಆಯಾ ತಪ್ಪಿ ಅಲ್ಲಿಂದ ಬಿದ್ದರೆ, ಗ್ರಹಚಾರ ಸರಿ ಇಲ್ಲದೇ ಬ್ರೇಕ್ ಫೇಲ್ ಆದರೆ ದೇಹ ನುಚ್ಚುನೂರು!!

ನಂದಿಬೆಟ್ಟಕ್ಕೆ ಹೋಗುವವರೆಗೂ ರಸ್ತೆ ನುಣುಪಾಗಿದೆ. ಇನ್ನು ಪ್ರವಾಸಿಗರಿಗಾಗಿ ಅಲ್ಲಿನ ವ್ಯವಸ್ಥೆ ಹೇಗಿರಬಹುದು, ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಈ ಬೆಟ್ಟದಮೇಲೆ ಪ್ರವಾಸಿಗರಿಗಾಗಿ ಪ್ರವಾಸೋದ್ಯಮ ಇಲಾಖೆ ಏನೆಲ್ಲ ಅಭಿವೃದ್ಧಿಪಡಿಸಿರಬಹುದು ಎಂಬ ಕುತೂಹಲವಿತ್ತು.
ಆದರೆ ಅಲ್ಲಿ ತಲುಪಿದ ನಂತರ ಗೊತ್ತಾಾಗಿದ್ದೇನೆಂದರೆ, ರಸ್ತೆ ಮಾತ್ರ ನುಣುಪಾಗಿದೆ ಎಂದು. ಬೆಟ್ಟದ ಮೇಲೆ ಪಾರ್ಕಿಂಗ್ ಮಾಡುವ ಸ್ಥಳ ವಿಶಾಲವಾಗಿದೆಯಾದರೂ, ಅಲ್ಲಿನ ಪುರಾತನ ದೇವಾಲಯಗಳು ಹಾಗೆ ಶಿಥಿಲಾವಸ್ಥೆಯಲ್ಲಿವೆ. ಕೋಟೆ ಬಾಗಿಲಿಂದ ಶಿಖರಕ್ಕೆ ಹೋಗುವ ದಾರಿಯಲ್ಲಿ ವಿದ್ಯುತ್ ವ್ಯವಸ್ಥೆಯಿಲ್ಲ. ಸಂಜೆಯಾಗುತ್ತಲೇ ದಟ್ಟವಾದ ಮರಗಿಡಗಳಿಂದ ಕತ್ತಲು ಆವರಿಸಿದಂತಾಗುತ್ತದೆ. ಸಂಜೆ ಮೆಟ್ಟಿಲುಗಳ ಮೂಲಕ ಇಳಿದು ಬರುವ ಪ್ರವಾಸಿಗರು ಭಯ ಪಡುವಂತಾಗುತ್ತದೆ.
ಪ್ರವಾಸಿಗರು ಎಲ್ಲೆಂದರಲ್ಲೇ ತಿಂದು ಬಿಟ್ಟ ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು ದಾರಿಯುದ್ದಕ್ಕೂ ಕಂಡುಬರುತ್ತದೆ. ಸ್ವಚ್ಛತೆ, ಸುರಕ್ಷತೆ ಕುರಿತು, ಸರಕಾರಕ್ಕಾಗಲಿ , ಪ್ರವಾಸಿಗರಿಗಾಗಲಿ ಕಿಂಚಿತ್ ಕಾಳಜಿ ಇದ್ದಂತಿಲ್ಲ. ಇತಿಹಾಸ ಪ್ರಸಿದ್ಧ ನಂದೀಶ್ವರ ದೇವಾಲಯವನ್ನಾಾಗಲಿ, ಕೋಟೆ ಬಾಗಿಲಿನಿಂದ ಶಿಖರಕ್ಕೆ ಹೋಗುವಾಗಿನ ಮೆಟ್ಟಿಲುಗಳನ್ನಾಾಗಲಿ ಸುರಕ್ಷಿತವಾಗಿ ಇಟ್ಟುಕೊಂಡಿಲ್ಲ. ಪುರಾತನ ಗೋಡೆಗಳ ಮೇಲೆಲ್ಲ ಮಾರ್ಕರ್ ನಿಂದ ಲವ್ ಚಿಹ್ನೆಯೊಳಗೆ ಪ್ರೇಮಿಗಳ ಹೆಸರು ಗೀಚಿರುವುದು ಅಸಹ್ಯ ಮತ್ತು ಅಂಥವರ ಬುದ್ಧಿ ಗೆ ಮರುಕಪಡುವಂತಾಗುತ್ತದೆ.
ಅಲ್ಲಿನ ವೀಕ್ಷಕ ಗೋಪುರವಂತೂ ಹೇಳಿಕೊಳ್ಳುವಷ್ಟು ಗಟ್ಟಿಮುಟ್ಟಾಗಿಲ್ಲ ಇಲ್ಲ. ಹೆಚ್ಚಿನ ಜನರು ನಿಂತು ವೀಕ್ಷಿಸಲು ಸ್ಥಳಾವಕಾಶವಿಲ್ಲದೇ ಇಕ್ಕಟ್ಟಾಗಿದೆ. ಅಲ್ಲಿ ವೀಕ್ಷಣ ಮಾಡುವವರಿಗಿಂತ ಸೇಲ್ಫಿ ತೆಗೆದುಕೊಳ್ಳುವವರ ಹಾವಳಿಯೇ ಹೆಚ್ಚಾಗಿದೆ. ಇನ್ನು ಬೇಸರದ ಸಂಗತಿಯೆಂದರೆ, ಬೆಟ್ಟ ಹತ್ತಿ ಇಳಿದ ಪ್ರವಾಸಿಗರ ಹೊಟ್ಗೆ ನೂಡಲ್ಸ್ ಫಾಸ್ಟ್ ಫುಡ್ ಗತಿ.ಹೊಟ್ಟೆಗೆ ಅನ್ನ, ರೊಟ್ಟಿ, ಪಲ್ಯ ಇವೆಲ್ಲ ಕೇಳಬೇಡ. ನೀವು ಹೋಗುವಾಗ ಮನೆಯಿಂದಲೇ ಏನಾದರೂ ತಿಂಡಿ ಒಯ್ಯುವುದೇ ಒಳಿತು. ಸುಮಾರು ಮೂರು ತಾಸುಗಳ ಕಾಲ ಗೆಳೆಯರ ಜತೆ ಸುತ್ತಾಡಿ ಸಂಜೆ ಏಳು ಗಂಟೆಯ ಸಮಯ ಕತ್ತಲಲ್ಲಿ ಅನೇಕ ತಿರುವುಗಳ ಮಧ್ಯೆ ನಿಧಾನವಾಗಿ ಬೈಕ್ ಓಡಿಸುತ್ತಾ ಬೆಟ್ಟದಿಂದ ಕೆಳಗಿಳಿದೆವು. ನಂದಿಬೆಟ್ಟದಲ್ಲಿ ರೇಸಿಂಗ್‌ನಂತಹ ಹುಚ್ಚು ಸಾಹಸಗಳಿಗೆ ಇಳಿಯಬಾರದು. ಬೆಟ್ಟದಿಂದ ಕೆಳಗ ಇಳಿಯುವಷ್ಟರಲ್ಲೇ ಎರಡು ಆಕ್ಸಿಡೆಂಟ್! ರಸ್ತೆ ಪಕ್ಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವಾಸಿಗರನ್ನು ಕಂಡು ಮನುಸು ಚುರ್ರ್ ಎಂದಿತು.