ಇಂಥವರಿಂದ ದೇಶ ಉದ್ಧಾರವಾಗಲ್ಲ!

ದೇಶದ ವಿಚಾರ ಕಟ್ಟಿಕೊಂಡು ನಾವೇನು ಮಾಡ್ಬೇಕು ಅನ್ನುವವನಿಂದ ನಮ್ಮ ದೇಶಕ್ಕೆ ಒಳ್ಳೆ ಭವಿಷ್ಯ ನಿರೀಕ್ಷಿಸುವಂತಿಲ್ಲ ಇವತ್ತು ನೀತಿಯ ಸ್ಥಾನದಲ್ಲಿ ಜಾತಿ ಬಂದಿದೆ ಆ ಜಾತಿ ಪರಸ್ಪರರಲ್ಲಿ ಪ್ರೀತಿ ಹುಟ್ಟಿಸುವದರ ಬದಲು ಭೀತಿ ಹುಟ್ಟಿಸುತ್ತಿದೆ ! ಈ ಜಾತಿ ವ್ಯವಸ್ಥೆ ಬಲವಾಗಲು ಬಿಡಬಾರ್ದು ಜಾತಿವ್ಯವಸ್ಥೆಗಳು ಬೆಳೆದರೆ ಆಗುವ ದುಷ್ಪರಿಣಾಮಗಳಿಗೆ ಉದಾಹರಣೆಗೆ ಒಂದು ಕತೆ ಕೇಳಿ ,
“ಒಬ್ಬ ರಾಜ ಇದ್ದ , ಪಕ್ಕದ ರಾಜನು ತನ್ನ ರಾಜಧಾನಿಗೆ ಮುತ್ತಿಗೆ ಹಾಕುತ್ತಾನೆ ಎನ್ನುವ ಸುದ್ದಿ ಈ ರಾಜನಿಗೆ ತಲುಪಿತು ಶತ್ರುವಿನಿಂದ ತನ್ನ ರಾಜ್ಯವನ್ನ ಕಾಪಾಡಿಕೊಳ್ಳುವುದು ಹೇಗೆಂದು ಸಲಹೆ ಕೇಳಲು ರಾಜನು ಊರ ಪ್ರಮುಖರ ಸಭೆ ಕರೆದನು ,

ಸಭೆಗೆ ಬಂದಿದ್ದ ಸ್ಟಾಪತ್ಯೆ ವಿಶಾರದರು ಹೇಳಿದರು : ಊರು ಸುತ್ತ ಎತ್ತರವಾದ ಮಣ್ಣು ದಂಡೆ ನಿರ್ಮಿಸಬೇಕು ಮತ್ತು ಅದರ ಸುತ್ತ ಆಳವಾದ ಕಂದಕ ತೋಡಿಸಿ “ಎಂದ,
ಬಡಗಿಯ: “ಮರದ ಗೋಡೆ ಕಟ್ಟಬೇಕು ಎಂದ ”
ಚಮ್ಮಾರ: “ಇದಕ್ಕೆ ಚರ್ಮದಂತಹ ಯೋಗ್ಯವಾದುದ್ದು ಇನ್ನೊಂದಿಲ್ಲ ಅದರಂತೆ ಕಟ್ಟಿ “ಎಂದ ,
ಕಮ್ಮಾರನಂತೂ “ಗೋಡೆ ಕಬ್ಬಿನದ್ದೇ ಆಗಬೇಕು ,ಮಿಕ್ಕಾವುದು ಉಪಯೋಗವಿಲ್ಲ ” ಎಂದ ,
ಅಷ್ಟೊತ್ತಿಗೆ ನ್ಯಾಯವಾದಿಗಳು ಮುಂದಾಗಿ ” ಕಾನೂನು ದೃಷ್ಟಿಯಿಂದ ಶತ್ರುವಿನದೇ ಹೇಗೆ ತಪ್ಪಿದೆ , ಇನ್ನೊಬ್ಬರ ಸ್ವತ್ತಿಗೆ ಕೈ ಹಾಕುವುದು ಯಾವ ರೀತಿ ಶಿಕ್ಷರ್ಹ ಅಪರಾಧ ಎಂಬುದನ್ನು ಶತ್ರುವಿಗೆ ತೋರಿಸಿಕೊಡುವುದೇ ರಾಜ್ಯರಕ್ಷಣೆಯ ಸರ್ವೋತ್ಕೃಷ್ಟ ಮಾರ್ಗ : ಎಂದರು,

ಕಡೆಗೆ ಪುರೋಹಿತರು ಎದ್ದರು ” ನೀವೆಲ್ಲ ಶುದ್ಧ ಹುಚ್ಚರಂತೆ ಮಾತನಾಡುವಿರಿ ಮೊದಲಿಗೆ ದೇವತೆಗಳನ್ನ ತೃಪ್ತಿಪಡಿಸಬೇಕು , ಅದಕ್ಕಾಗಿ ಯಾಗ-ಯಾಜ್ಞಾದಿಗಳನ್ನ ನೆರವೇರಿಸಬೇಕು ಆಗಲೇ ನಿಮಗೆ ಗೆಲುವು , ಎಂದ ,

ರಾಜ್ಯದ ರಕ್ಷಣೆ ಮಾಡುವ ಬದಲು ಅವರು ಹೀಗೆ ಜಗಳವಾಡುತ್ತ ಕುಳಿತರು ,ವೈರಿಯೂ ಮುನ್ನುಗ್ಗಿ ದಾಳಿಯಿಟ್ಟು ಊರನ್ನು ಕೊಳ್ಳೆ ಹೊಡೆದನು !

ಸಾಮಾನ್ಯವಾಗಿ ಎಲ್ಲ ದುರಾಗ್ರಹಗಳ ಗತಿಯು ಇದೆ,

ಮೋದಿ ಸರ್ವಾಧಿಕಾರಿಯೇ?

ನಸ್ಸಿಂ ನಿಕೋಲಸ್ ತಲೇಬ್, ಇವನು ಲೆಬಾನಿಸ್ ಮೂಲದ ಅಮೆರಿಕನ್ ಸಂಖ್ಯಾಶಾಸ್ತ್ರಜ್ಞ , ಅಪಾಯ ವಿಶ್ಲೇಷಕ (risk analyst) ಲೇಖಕ ಹಾಗೂ ಪ್ರಾಧ್ಯಾಪಕ. ಇಷ್ಟೇ ಅಲ್ಲ ಮ್ಯಾಥಮೆಟಿಕಲ್ ಫೈನಾನ್ಸ್ ವಿಭಾಗದಲ್ಲೂ ಇತನದು ಎತ್ತಿದ ಕೈ. ಹೆಡ್ಜೆ ಫಂಡ್ ಮ್ಯಾನೇಜರ್, ಡಿರೈವೇಟಿವ್ ಟ್ರೇಡರ್ ಆಗಿ ಕೆಲಸ ಮಾಡಿದ ಅನುಭವ ಕೂಡ ಈತನಿಗಿದೆ. ಸದ್ಯಕ್ಕೆ ಯುನಿವರ್ಸ್ ಇನ್ವೆಸ್ಟ್ ಎನ್ನುವ ಕಂಪನಿಗೆ ವೈಜ್ಞಾನಿಕ ಸಲಹೆಗಾರನಾಗಿ ಕೆಲಸ ಮಾಡುತ್ತಿರುವ ಈತ 2007ರಲ್ಲಿ ಬರೆದ ‘ದಿ ಬ್ಲಾಕ್ ಸ್ವಾನ್’ ಪುಸ್ತಕ ಎರಡನೇ ಮಹಾ ಯುದ್ಧದ ನಂತರದ ಹನ್ನೆರಡು ಅತ್ಯಂತ ಪ್ರಭಾವ ಬೀರುವ ಪುಸ್ತಕಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ.

ಈತನ ಉಲ್ಲೇಖ ಏಕೆ? ಎಂದು ನೀವು ಯೋಚಿಸುತ್ತಿರಬಹುದು. ಮೋದಿ ಗೆದ್ದು ಪ್ರಧಾನಿ ಆಗುವುದಕ್ಕೆ ಮುಂಚೆ ಭಾರತಕ್ಕೆ ಬಂದಿದ್ದ ಈತ ಮೋದಿಯ ಮೋಡಿ ಗೆ ಯಾವ ಪರಿಗೆ ಸಿಲುಕಿದ್ದನೆಂದರೆ ‘ನಾನು ಭಾರತೀಯನಾಗಿದ್ದರೆ , ಮೋದಿ ಅವರಿಗೆ ವೋಟು ಮಾಡುತಿದ್ದೆ’ ಎನ್ನುವ ಹೇಳಿಕೆ ಕೊಡುವಷ್ಟು… ಕೆಲವು ವರ್ಷಗಳ ಹಿಂದೆಯೂ ಮತ್ತೆ ಭಾರತಕ್ಕೆ ಬಂದಿದ್ದ ಈತನಿಗೆ ಮಾಧ್ಯಮಗಳು ಕೇಳಿದ ಮೊದಲ ಪ್ರಶ್ನೆ

‘ಕಳೆದ ಬಾರಿ ಭಾರತೀಯನಾಗಿದ್ದರೆ ಮೋದಿ ಅವರಿಗೆ ವೋಟು ಮಾಡುತಿದ್ದೆ ಎಂದಿರಿ. ನಿಮ್ಮ ಇಂದಿನ ನಿಲುವೇನು?’

ಯಾವುದೇ ಸಂಕೋಚ, ತಡವರಿಕೆ ಇಲ್ಲದೆ ತಕ್ಷಣ ಆತನಿಂದ ಬಂದ ಉತ್ತರ, ‘ಖಂಡಿತ ಮೋದಿ ಆಶಾಭಂಗ ಮಾಡಿಲ್ಲ, ಅವರೊಬ್ಬ ತಪಸ್ವಿ (ascetic ), ಕಳೆದ ವರ್ಷದ ಅಂಕಿ ಸಂಖ್ಯೆ ನೋಡಿದರೆ ನಿಮಗೆ ತಿಳಿಯುತ್ತದೆ, ಎಲ್ಲಕ್ಕೂ ಮುಖ್ಯ ಆತನ ಪ್ರಯತ್ನ (effort ), ಬದ್ಧತೆ ಪ್ರಶ್ನಿಸುವಂತಿಲ್ಲ. ಕೆಲವೊಮ್ಮೆ ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯದೆ ಹೋಗಬಹುದು. ಎಲ್ಲಾ ನಮ್ಮ ಹಿಡಿತದಲ್ಲಿ ಇಲ್ಲವಲ್ಲ?’ ಮುಂದುವರಿದು ಹೇಳುತ್ತಾನೆ- ‘ಮತ್ತೊಮ್ಮೆ ಹೇಳುತ್ತೇನೆ, ಆತನೊಬ್ಬ ತಪಸ್ವಿ. ಮತ್ತು ನಾನು ತಪಸ್ವಿಯನ್ನು ನಂಬುತ್ತೇನೆ.’

‘ಮೋದಿಯನ್ನು ಸರ್ವಾಧಿಕಾರಿ ಎಂದು ಹಲವರು ಹೇಳುತ್ತಾರೆ, ನಿಮ್ಮ ನಿಲುವೇನು?’ ಎನ್ನುವ ಮಾಧ್ಯಮದ ಪ್ರಶ್ನೆಗೆ

‘ಮೊಟ್ಟೆಯನ್ನು ಒಡೆಯದೆ ನೀವು ಆಮ್ಲೆಟ್ ತಯಾರಿಸಬಲ್ಲಿರೆ?’ ಎಂದು ಮರು ಪ್ರಶ್ನಿಸಿ, ಮಹಾನ್ ಕಾರ್ಯ ಸಾಧನೆಗೆ ಹಲವೊಮ್ಮೆ ಕಠಿಣ ನಿಲುವು ತೆಗೆದುಕೊಳ್ಳುವುದು ಅವಶ್ಯಕ ಎನ್ನುವ ಖಡಕ್ ಉತ್ತರ.
ಮೋದಿ ಅಧಿಕಾರ ವಹಿಸಿಕೊಂಡ ನಂತರ ಭಾರತದಲ್ಲಿ ಧರ್ಮ ಆಧಾರಿತ ಅಸಹಿಷ್ಣುತೆ ಹೆಚ್ಚಾಗಿದೆ ಎನ್ನುವ ಕೂಗು ಎದ್ದಿದೆ, ನಿಮ್ಮ ಗಮನಕ್ಕೆ ಅದು ಬಂದಿದೆಯೇ ಎನ್ನುವ ಪ್ರಶ್ನೆಗೆ ‘ಹುಟ್ಟಿನಿಂದ ಹಲವು ದೈವಗಳ ಆರಾಧಿಸಿಕೊಂಡು ಬಂದಿರುವ ನಿಮ್ಮ ವಿಶಾಲ ಮನೋಭಾವ ಒಂದೇ ದೈವ ಎನ್ನುವ ಸಿದ್ದಾಂತಕ್ಕೆ ಕಟ್ಟು ಬಿದ್ದ ಬೇರೆ ಯಾವುದೇ ಧರ್ಮದಲ್ಲೂ ಇಲ್ಲ’ ಎನ್ನುವ ಉತ್ತರ ನಮ್ಮ ಚಿಂತಕರ ಕಿವಿಗೆ ಬಿದ್ದೀತೆ ? ಅಥವಾ ಜಾಣ ಕಿವುಡೆ?
ಚೀನಾದ ಮಾರುಕಟ್ಟೆ ಕುಸಿತ ಜಗತ್ತಿನ ಮೇಲೆ ಬೀರುವ ಪರಿಣಾಮದ ಕುರಿತ ಪ್ರಶ್ನೆಗೆ, ಸಾಮಾನ್ಯವಾಗಿ ಎಲ್ಲರೂ ಅದರಿಂದ ಆಗುವ ನಕಾರಾತ್ಮಕ ಅಂಶಗಳನ್ನೇ ಹೇಳುತ್ತಾರೆ. ನಿಕೋಲಸ್ ಅದಕ್ಕೆ ತದ್ವಿರುದ್ಧ ‘ಏರಿದ್ದು ಇಳಿಯಲೇಬೇಕು ‘ ಎನ್ನುವುದು ಪ್ರಕೃತಿ ನಿಯಮ , ಇಳಿಕೆಯೇ ಮತ್ತೊಂದು ಮಹಾನ್ ಏರಿಕೆಗೆ ಕಾರಣ ಅಲ್ಲವೇ? ಎಲ್ಲವೂ ಏರುತ್ತಲೇ ಇರುವುದಕ್ಕೆ ಹೇಗೆ ಸಾಧ್ಯ? ಇಳಿಕೆ ಮಾರುಕಟ್ಟೆಗೆ ಅವಶ್ಯವಾಗಿ ಬೇಕಾದ ಟಾನಿಕ್. ನೋಡಿ ಇಳಿಕೆಯ ಸಮಯದಲ್ಲಿ ಸಟ್ಟಾ ವ್ಯಾಪಾರಿ (speculator ) ಓಡಿ ಹೋಗುತ್ತಾನೆ, ನಿಜವಾದ ಹೂಡಿಕೆದಾರ (Investor) ನೆಲ ಕಚ್ಚಿ ನಿಲ್ಲುತ್ತಾನೆ. ಹಾಲಿನಿಂದ ನೀರನ್ನು ಬೇರ್ಪಡಿಸುವುದು ಇದರಿಂದ ಸಾಧ್ಯ. ಇಳಿಕೆ ಎಲ್ಲಾ ಸಮಯದಲ್ಲೂ ಕೆಟ್ಟದ್ದೇ ಆಗಿರಬೇಕು ಎಂದೇನು ಇಲ್ಲ’ ಎನ್ನುವುದು ಈತನ ನಿಲುವು.

ನಸ್ಸಿಂ ನಿಕೋಲಸ್ ತಲೇಬ್ ಸಂಘ ಪರಿವಾರದವರಲ್ಲ, ಭಕ್ತನೂ ಅಲ್ಲ. ಅವರೊಬ್ಬ ವಿಶ್ಲೇಷಕ. ಕಪ್ಪನ್ನು ಕಪ್ಪೆಂದು, ಬಿಳಿಯನ್ನು ಬಿಳಿ ಎಂದು ಹೇಳಲು ಸಂಕೋಚಿಸದ ವ್ಯಕ್ತಿ. ನಮ್ಮಲ್ಲಿ ಹಲವರಿಗೆ ಮಾತ್ರ ಎಲ್ಲವನ್ನೂ ಕಾಮಾಲೆ ಕಣ್ಣಿಂದ ನೋಡುವ ಬುದ್ಧಿ! ಬದಲಾವಣೆ ಜಗದ ನಿಯಮ, ಅವರೂ ಬದಲಾಗುತ್ತಾರೆ ಎಂದು ಆಶಿಸೋಣ.

ಅರ್ಥವಾಗದ ಗಣಿತ!

ನಾನ್ಯಾಕೆ ಗಣಿತದಲ್ಲಿ ದಡ್ಡನಾದೆ ಅಂದರೆ, ಪ್ರೈಮರಿಯಲ್ಲಿ ಮೇಷ್ಟ್ರು ಬಿಡಿಸುತ್ತ ಹೋಗುವ ಲೆಕ್ಕವನ್ನು, ಸೂತ್ರವನ್ನು, ಪ್ರಮೇಯವನ್ನು ವೇಗವಾಗಿ ನೋಟ್ಸ್ ಮಾಡ್ಕೊಳ್ಳೋದ್ರಲ್ಲೆ ಮಗ್ನನಾಗಿರುತ್ತಿದ್ದೆ. “ಫಸ್ಟ್ ನಂದಾಯ್ತು ಸರ್” ಅಂದಾಗ ಶಿಕ್ಷಕರ ಬಾಯಿಂದ “ಗುಡ್” ಅನ್ನಿಸಿಕೊಳ್ಳುವುದೇ ಬುದ್ಧಿವಂತಿಕೆ ಅಂದ್ಕೊಂಡಿದ್ದೆ.

ಅವರೂ ಯಾವತ್ತೂ‌ “ಲೆಕ್ಕ ಮಾಡಿ ತೋರಿಸು ಮಗನೇ” ಎಂದು ಹೇಳಲಿಲ್ಲ. ನೋಟ್ಸ್ ಮಾಡಿಕೊಂಡರೆ ಸಾಕಾಗಿತ್ತೇನೋ ಅವರಿಗೂ!

ಮುಗಿಲಿಗೆ ಮುತ್ತಿಕ್ಕಿದ ಸಮಯ !

ಕಳೆದ ಭಾನುವಾರದ ಮುಂಜಾನೆ ಎಂದಿನಂತೆ ಹಾಸಿಗೆ ಬಿಟ್ಟು ಏಳಲು ಮನಸ್ಸಾಗಲಿಲ್ಲ ಸಮಯ ಹತ್ತಾಾದರೂ, ಹಸಿದ ಹೊಟ್ಟೆಗೆ ರಮಿಸುತ್ತಾಾ ಹಾಸಿಗೆಗೆ ಅಂಟಿಕೊಂಡೇ ಇದ್ದೆ ಅದಕ್ಕೆ ಕಾರಣ ಭಾನುವಾರವೆನ್ನುವುದು. ಒಳ್ಳೆಯದೋ, ಕೆಟ್ಟದ್ದೋ ನನಗೊಂದು ವಿಚಿತ್ರ ಅಭ್ಯಾಸವಿದೆ. ಅದೇನೆಂದರೆ, ಮರುದಿನ ಭಾನುವಾರವಿದೆ ಎಂದಾಗ, ಶನಿವಾರದ ರಾತ್ರಿಯೆಲ್ಲ ಜಾಗರಣೆಯಂತೆ ನಿದ್ರಿಸದೆ, ಯಾವುದಾದರೂ ಪುಸ್ತಕವನ್ನು ಅಥವಾ ಕೃತಿಯನ್ನು ಓದುವುದು. ಅದನ್ನು ಓದಿ ಮುಗಿಸದೇ ಬಿಡುವುದಿಲ್ಲ. ಇದು ಒಂದು ಭಾನುವಾರದ ಕಥೆಯಲ್ಲ, ಕಳೆದುಹೋದ ಉಳಿದ ಭಾನುವಾರಗಳ ಕಥೆಯೂ ಇದೇ.

ಭಾನುವಾರದ ಹಿಂದಿನ ರಾತ್ರಿ ಅದೇ ಆಗಿದ್ದು. ‘ರಾಮಾ ರಾಮಾ ರೇ..’ ಕೃತಿಯನ್ನು ಕೈಗೆತ್ಕೊಂಡು ಓದುತ್ತಿದ್ದೆ. ಇದುವರೆಗೂ ನಾನು ಎಷ್ಟೋ ಸಿನಿಮಾಗಳನ್ನು ವೀಕ್ಷಿಸಿದ್ದೇನೆ. ಆದರೆ ಒಂದು ಸಿನಿಮಾವನ್ನು ಪುಸ್ತಕ ರೂಪದಲ್ಲಿ ಓದಿದ್ದಿರಲಿಲ್ಲ. ಅಂಥದ್ದೊಂದು ಕುತೂಹಲದಿಂದಲೇ ರಾಮಾ ರಾಮಾ ರೇ.. ಕೃತಿಯನ್ನು ಮಧ್ಯರಾತ್ರಿಯಾದರೂ ಓದುತ್ತಲೇ ಇದ್ದೆ.
ಬೆಳ್ಳಗ್ಗೆ ಲೇಟ್ ಲತೀಫ್‌ನಂತೆ ಎದ್ದು, ಎದ್ದನಿದ್ದೆಗಣ್ಣಲ್ಲಿ ಬ್ರಶ್ ಹುಡುಕಾಡಿ ಹಲ್ಲುಜ್ಜಿದೆ . ಮೂರುನಾಲ್ಕು ಕೊಣೆಗಳಿರುವ ಬಾಡಿಗೆ ರೂಮು ನಮ್ಮದು. ರೂಮಿನ ವಿಶೇಷತೆ ಏನೆಂದರೆ ಹುಡುಕಾಡದೇ ಯಾವ ವಸ್ತುಗಳು ಸಿಗುವುದಿಲ್ಲ ಮತ್ತು ಬೆಳಗ್ಗೆ ಬೇಗ ಅಥವಾ ಸರಿಯಾದ ಸಮಯಕ್ಕೆ ಎಚ್ಚರವಾಗುವುದಿಲ್ಲ. ಪರಮ ಸೋಮಾರಿಗಳಿಗೆ ಹೇಳಿಮಾಡಿಸಿದ ಸ್ಥಳ ನಮ್ಮ ರೂಮು. ಮುಖ ತೊಳೆದು, ರಾಶಿ ಬಿದ್ದಿದ್ದ ಬಟ್ಟೆಗಳೆನ್ನೆಲ್ಲ ಬಕೆಟ್ ಒಳಗಡೆ ತುರುಕಿಕೊಂಡು ಬಟ್ಟೆ ತೊಳೆಯಲು ಸಿದ್ಧನಾಗುತ್ತಿದ್ದೆ , ಅಷ್ಟರೊಳಗೆ ಗೆಳೆಯ ಮಂಜು ಚೆಲ್ಲೂರ್ ಬಂದು, – ‘ಇವತ್ತು ನಂದಿಬೆಟ್ಟಕ್ಕೆ ಟ್ರಿಪ್ ಹೋಗೋಣ ನಡಿ, ಬೇಗ ಮೈ ತೊಳ್ಕಂಡ್ ನಾಷ್ಟಾ ಮಾಡಿ ರೆಡಿ ಆಗು, ಎಲ್ಲರೂ ಹೊಂಟೀವಿ.’ ಎಂದ.
ಈ ಸುದ್ದಿ ಕಿವಿಗೆ ಬಿದ್ದೊಡನೆಯೇ ಮನಸು ಆಗಲೇ ಭಾರತದ ಎರಡನೇ ಅತಿದೊಡ್ಡ ಬೆಟ್ಟವಾದ ‘ನಂದಿಬೆಟ್ಟ’ದ ತುದಿ ಏರಿ ಕುಳಿತಿತ್ತು. ಆಹಾ! ಯಾವುದೇ ಆಯಾಸವಿಲ್ಲದೇ ಹಸಿವು-ನೀರಡಿಕೆಯಿಲ್ಲದೇ ಮನಸಿನ ಜತೆ ಶರೀರವೂ ಕ್ಷಣಾರ್ಧದಲ್ಲಿ ನಂದಿಬೆಟ್ಟದ ನೆತ್ತಿ ಮೇಲತ್ತಿ ಕುಳಿತುಕೊಳ್ಳುವಂತಿದ್ದರೆ, ಎಷ್ಟು ಚೆನ್ನಾಾಗಿರುತ್ತಿತ್ತು ಎಷ್ಟೆಲ್ಲ ಸಮಯ, ಖರ್ಚು ಉಳಿತಿತ್ತು. ನರ-ನಾಡಿಗಳಂತಿರುವ ಬೆಂಗಳೂರಿನ ರಸ್ತೆ ಗಳಲ್ಲಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕು, ಹೊಗೆಧೂಳಿನಿಂದ ಸಿಕ್ ಬಂದು ಸಾಯುವ ತಾಪತ್ರಯವೇ ಇರುತ್ತಿರಲಿಲ್ಲವಲ್ಲ ಎನಿಸಿತು. ಇವೆಲ್ಲ ಯೋಚನೆಗಳು ಕೆಲವೇ ಸೆಕೆಂಡ್‌ಗಳಲ್ಲಿ ನಡೆದು ಹೋದವು.
‘ಸರಿ ಮಂಜು ನಾನು ಬರುತ್ತೇನೆ.’ ಎಂದು ತೊಳೆಯಬೇಕಾಗಿದ್ದ ಬಟ್ಟೆ ತುಂಬಿದ ಬಕೆಟ್‌ನ್ನು ಮೂಲೆಗಿಟ್ಟು ಮುಂದಿನ ಅರ್ಧಗಂಟೆಯಲ್ಲಿ ಎಲ್ಲ ಕೆಲಸಗಳು ಮಿಂಚಿನಂತೆ ನಡೆದುಹೋದವು. ಮನೆಮುಂದೆ ಮೂರು ಬೈಕ್‌ಗಳು ರೆಡಿ ಆಗಿ ನಿಂತಿದ್ದವು. ಅವು ನಮಗಿಂತ ಅವಸರದಲ್ಲಿರುವಂತೆ, ಬೆಟ್ಟ ಹತ್ತುವ ಹಿಗ್ಗಿನಲ್ಲಿದ್ದವು . ಒಟ್ಟೂ ಮೂರು ಬೈಕ್‌ಗಳಲ್ಲಿ ಆರು ಜನರು ರಾಜಾರಾಜೇಶ್ವರಿನಗರದಿಂದ ನಂದಿಬೆಟ್ಟದ ಕಡೆಗೆ ಮುಂಜಾನೆ ಹನ್ನೆರಡು ಗಂಟೆಯ ಸಮಯ ಪ್ರಯಾಣ ಬೆಳೆಸಿದೆವು.

ನಂದಿಬೆಟ್ಟವು ಬೆಂಗಳೂರಿನಿಂದ ಸುಮಾರು 45ಕಿ.ಮೀ ದೂರದಲ್ಲಿದೆ. ಇದು ಹೊಸ ವಿಮಾನ ನಿಲ್ದಾಣ ದೇವನಹಳ್ಳಿಗೆ ಸಮೀಪವಿದೆ. ಚಿಕ್ಕಬಳ್ಳಾಪುರದಿಂದ ಇನ್ನೂ ಸಮೀಪವಾಗುತ್ತದೆ. ನಂದಿ ಬೆಟ್ಟವನ್ನು ಪುರಾತನ ಕಾಲದಲ್ಲಿ ನಂದಿದುರ್ಗ, ಆನಂದಿಗಿರಿ ಎಂದು ಕರೆಯಲಾಗುತ್ತಿತ್ತು ಬೆಟ್ಟದ ಬಗ್ಗೆ ಹಲವಾರು ಕಥೆಗಳಿವೆ. ಬೆಟ್ಟದ ಮೇಲೆ ಯೋಗ ನಂದೀಶ್ವರನೆಂಬ ತಪಸ್ವಿ ತಪಸ್ಸು ಮಾಡಿದ್ದರಿಂದ ಈ ಬೆಟ್ಟಕ್ಕೆ ನಂದಿಬೆಟ್ಟ ಎಂದು ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಬೆಟ್ಟದ ಮೇಲೆ ಯೋಗನಂದೀಶ್ವರ ದೇವಾಲಯವೂ ಇದೆ. 1791ರಲ್ಲಿ ಟಿಪ್ಪು ಸುಲ್ತಾನ ಹಾಗೂ ಕಾರ್ನವಾಲಿಸ್ ನಡುವೆ ನಡೆದ ಯುದ್ಧದಿಂದ ಈ ಬೆಟ್ಟ ಜನಪ್ರಿಯತೆ ಪಡೆಯಿತು. ಟಿಪ್ಪು ಸುಲ್ತಾನನ ಬೇಸಿಗೆ ವಿಶ್ರಾಂತಿಗೆ ಇದೆ ಬೆಟ್ಟದ ಕೋಟೆಯಲ್ಲಿ ತಂಗುತ್ತಿದ್ದನು. ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಕೂಡ ಬೇಸಿಗೆ ಸಮಯವನ್ನು ಇಲ್ಲೇ ಕಳೆಯುತ್ತಿದ್ದರು. ಸಮುದ್ರ ಮಟ್ಟದಿಂದ 4851 ಅಡಿ ಎತ್ತರದಲ್ಲಿರುವ ಈ ಬೆಟ್ಟವು ಭಾರತದಲ್ಲೇ ಎರಡನೇ ಅತಿದೊಡ್ಡ ಬೆಟ್ಟ ಎನಿಸಿಕೊಂಡಿದೆ. ಈ ಬೆಟ್ಟದ ಮೇಲೆ ನಿಂತಾಗ ಆಕಾಶದಲ್ಲಿ ಸಂಚರಿಸುವ ಮೋಡಗಳೇ ನಮ್ಮ ಕಾಲಡಿಯಲ್ಲಿ ಇರುವಂತೆ ಭಾಸವಾಗುತ್ತದೆ. ದಟ್ಟಮೋಡಗಳಾದಾಗ, ಬೆಟ್ಟದಲ್ಲೇ ನೀರಾಗಿ ಕರಗಿ ಹರಿಯುತ್ತದೆ. ಮನಸು ತಲ್ಲಣಗೊಳ್ಳುವಂತ ವಾತಾವರಣ ನಂದಿಬೆಟ್ಟದ ಮೇಲೆ ಅನುಭವಿಸಿಯೇ ತಿಳಿಯಬೇಕು.
ಬೆಂಗಳೂರಿನ ರಸ್ತೆಗಳ ಪರಿಚಯವಿದ್ದ ಮಲ್ಲೇಶ ಮತ್ತು ವಿಶ್ವನಾಥ್ ದಾರಿ ತೋರಿಸುತ್ತಾ ಮುಂದೆ ಮುಂದೆ ಹೋಗುತ್ತಿದ್ದರೆ ಅವರನ್ನು ಹಿಂಬಾಲಿಸುತ್ತ ನಾವು ಹೋದೆವು. ಎರಡು ಬೈಕ್‌ಗಳಿಗಿಂತ ಹಿಂದೆ ಹೋಗುತ್ತಿದ್ದ ನಮ್ಮ ಸ್ಕೂಟಿ ನಡೆಸುತ್ತಿದ್ದವನು ಹೊಸಬ, ನಾನಂತೂ ಆಫೀಸ್ ಮನೆ ಬಿಟ್ಟರೆ ಯಾವ ದಾರಿಯೂ ತಿಳಿಯದ, ಕಾಣದ ಪೂರಾ ಹೊಸಬ. ಕೆಲವೊಂದು ಕಡೆ ಅವರನ್ನು ಚೇಸ್ ಮಾಡಲಾಗದೇ ಹಿಂದೆ ಬಿದ್ದು, ದಾರಿ ತಪ್ಪಿದ ಮಕ್ಕಳಂತೆ ಹ್ಯಾಪಮೋರೆ ಹಾಕಿಕೊಂಡು ಮೊಬೈಲ್‌ನಲ್ಲಿನ ಮ್ಯಾಪ್ ಮೊರೆ ಹೋಗುತ್ತಿದ್ದೆವು. ಅಲ್ಲಲ್ಲಿ ನೀರು ಕುಡಿಯುತ್ತ ಸುಮಾರು ಮೂರು ತಾಸುಗಳ ನಂತರ ನಂದಿಬೆಟ್ಟದ ಮೇಲೆ ಹತ್ತುವ ರಸ್ತೆೆಗೆ ಬಂದು ನಿಂತಾಗ, ಅಬ್ಬಾ! ಮುಗಿಲೆತ್ತರದ ಈ ನಂದಿಬೆಟ್ಟವನ್ನು ಬೈಕ್ ಓಡಿಸುತ್ತಲೇ ಹೇಗೆ ಹತ್ತುವುದು! ನನಗೆ ಮೊದಲ ಅಚ್ಚರಿಯಾಯಿತು.
ಅಲ್ಲಿ ಕಡಿದಾದ ರಸ್ತೆಗಳ ತಿರುವಿನಲ್ಲಿ ಏರುತ್ತಾ ಏರುತ್ತಾ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಅಷ್ಟೆತ್ತರದ ಬೆಟ್ಟ ಹತ್ತುವುದಿದೆಯಲ್ಲ, ಮೈಜುಮ್ ಎನ್ನುತ್ತದೆ, ರೋಮಾಂಚನಗೊಳಿಸುತ್ತದೆ. ಒಂದು ಕಡೆ ಮನಸು ಸುತ್ತಲಿನ ಗಿರಿಧಾಮವನ್ನು, ಕಣ್ಣು ಹಾಯಿಸಿದಷ್ಟು ಕಾಣುವ ನೈಸರ್ಗಿಕ ಸೊಬಗನ್ನು ನೋಡುತ್ತಾ ಮೈಮರೆಯುತ್ತಿದ್ದರೆ ರಸ್ತೆ ತಿರುವಿನಲ್ಲಿ ನಮ್ಮ ಸ್ಕೂಟಿ ಹೋಗುತ್ತಿದ್ದಾಗ, ಕೆಳಗಡೆ ನೋಡುತ್ತಿದ್ದಂತೆ ಭಯದಿಂದ ಮೈಬೆವರುವಂತಾಗುತ್ತಿತ್ತು ಆಯಾ ತಪ್ಪಿ ಅಲ್ಲಿಂದ ಬಿದ್ದರೆ, ಗ್ರಹಚಾರ ಸರಿ ಇಲ್ಲದೇ ಬ್ರೇಕ್ ಫೇಲ್ ಆದರೆ ದೇಹ ನುಚ್ಚುನೂರು!!

ನಂದಿಬೆಟ್ಟಕ್ಕೆ ಹೋಗುವವರೆಗೂ ರಸ್ತೆ ನುಣುಪಾಗಿದೆ. ಇನ್ನು ಪ್ರವಾಸಿಗರಿಗಾಗಿ ಅಲ್ಲಿನ ವ್ಯವಸ್ಥೆ ಹೇಗಿರಬಹುದು, ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಈ ಬೆಟ್ಟದಮೇಲೆ ಪ್ರವಾಸಿಗರಿಗಾಗಿ ಪ್ರವಾಸೋದ್ಯಮ ಇಲಾಖೆ ಏನೆಲ್ಲ ಅಭಿವೃದ್ಧಿಪಡಿಸಿರಬಹುದು ಎಂಬ ಕುತೂಹಲವಿತ್ತು.
ಆದರೆ ಅಲ್ಲಿ ತಲುಪಿದ ನಂತರ ಗೊತ್ತಾಾಗಿದ್ದೇನೆಂದರೆ, ರಸ್ತೆ ಮಾತ್ರ ನುಣುಪಾಗಿದೆ ಎಂದು. ಬೆಟ್ಟದ ಮೇಲೆ ಪಾರ್ಕಿಂಗ್ ಮಾಡುವ ಸ್ಥಳ ವಿಶಾಲವಾಗಿದೆಯಾದರೂ, ಅಲ್ಲಿನ ಪುರಾತನ ದೇವಾಲಯಗಳು ಹಾಗೆ ಶಿಥಿಲಾವಸ್ಥೆಯಲ್ಲಿವೆ. ಕೋಟೆ ಬಾಗಿಲಿಂದ ಶಿಖರಕ್ಕೆ ಹೋಗುವ ದಾರಿಯಲ್ಲಿ ವಿದ್ಯುತ್ ವ್ಯವಸ್ಥೆಯಿಲ್ಲ. ಸಂಜೆಯಾಗುತ್ತಲೇ ದಟ್ಟವಾದ ಮರಗಿಡಗಳಿಂದ ಕತ್ತಲು ಆವರಿಸಿದಂತಾಗುತ್ತದೆ. ಸಂಜೆ ಮೆಟ್ಟಿಲುಗಳ ಮೂಲಕ ಇಳಿದು ಬರುವ ಪ್ರವಾಸಿಗರು ಭಯ ಪಡುವಂತಾಗುತ್ತದೆ.
ಪ್ರವಾಸಿಗರು ಎಲ್ಲೆಂದರಲ್ಲೇ ತಿಂದು ಬಿಟ್ಟ ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು ದಾರಿಯುದ್ದಕ್ಕೂ ಕಂಡುಬರುತ್ತದೆ. ಸ್ವಚ್ಛತೆ, ಸುರಕ್ಷತೆ ಕುರಿತು, ಸರಕಾರಕ್ಕಾಗಲಿ , ಪ್ರವಾಸಿಗರಿಗಾಗಲಿ ಕಿಂಚಿತ್ ಕಾಳಜಿ ಇದ್ದಂತಿಲ್ಲ. ಇತಿಹಾಸ ಪ್ರಸಿದ್ಧ ನಂದೀಶ್ವರ ದೇವಾಲಯವನ್ನಾಾಗಲಿ, ಕೋಟೆ ಬಾಗಿಲಿನಿಂದ ಶಿಖರಕ್ಕೆ ಹೋಗುವಾಗಿನ ಮೆಟ್ಟಿಲುಗಳನ್ನಾಾಗಲಿ ಸುರಕ್ಷಿತವಾಗಿ ಇಟ್ಟುಕೊಂಡಿಲ್ಲ. ಪುರಾತನ ಗೋಡೆಗಳ ಮೇಲೆಲ್ಲ ಮಾರ್ಕರ್ ನಿಂದ ಲವ್ ಚಿಹ್ನೆಯೊಳಗೆ ಪ್ರೇಮಿಗಳ ಹೆಸರು ಗೀಚಿರುವುದು ಅಸಹ್ಯ ಮತ್ತು ಅಂಥವರ ಬುದ್ಧಿ ಗೆ ಮರುಕಪಡುವಂತಾಗುತ್ತದೆ.
ಅಲ್ಲಿನ ವೀಕ್ಷಕ ಗೋಪುರವಂತೂ ಹೇಳಿಕೊಳ್ಳುವಷ್ಟು ಗಟ್ಟಿಮುಟ್ಟಾಗಿಲ್ಲ ಇಲ್ಲ. ಹೆಚ್ಚಿನ ಜನರು ನಿಂತು ವೀಕ್ಷಿಸಲು ಸ್ಥಳಾವಕಾಶವಿಲ್ಲದೇ ಇಕ್ಕಟ್ಟಾಗಿದೆ. ಅಲ್ಲಿ ವೀಕ್ಷಣ ಮಾಡುವವರಿಗಿಂತ ಸೇಲ್ಫಿ ತೆಗೆದುಕೊಳ್ಳುವವರ ಹಾವಳಿಯೇ ಹೆಚ್ಚಾಗಿದೆ. ಇನ್ನು ಬೇಸರದ ಸಂಗತಿಯೆಂದರೆ, ಬೆಟ್ಟ ಹತ್ತಿ ಇಳಿದ ಪ್ರವಾಸಿಗರ ಹೊಟ್ಗೆ ನೂಡಲ್ಸ್ ಫಾಸ್ಟ್ ಫುಡ್ ಗತಿ.ಹೊಟ್ಟೆಗೆ ಅನ್ನ, ರೊಟ್ಟಿ, ಪಲ್ಯ ಇವೆಲ್ಲ ಕೇಳಬೇಡ. ನೀವು ಹೋಗುವಾಗ ಮನೆಯಿಂದಲೇ ಏನಾದರೂ ತಿಂಡಿ ಒಯ್ಯುವುದೇ ಒಳಿತು. ಸುಮಾರು ಮೂರು ತಾಸುಗಳ ಕಾಲ ಗೆಳೆಯರ ಜತೆ ಸುತ್ತಾಡಿ ಸಂಜೆ ಏಳು ಗಂಟೆಯ ಸಮಯ ಕತ್ತಲಲ್ಲಿ ಅನೇಕ ತಿರುವುಗಳ ಮಧ್ಯೆ ನಿಧಾನವಾಗಿ ಬೈಕ್ ಓಡಿಸುತ್ತಾ ಬೆಟ್ಟದಿಂದ ಕೆಳಗಿಳಿದೆವು. ನಂದಿಬೆಟ್ಟದಲ್ಲಿ ರೇಸಿಂಗ್‌ನಂತಹ ಹುಚ್ಚು ಸಾಹಸಗಳಿಗೆ ಇಳಿಯಬಾರದು. ಬೆಟ್ಟದಿಂದ ಕೆಳಗ ಇಳಿಯುವಷ್ಟರಲ್ಲೇ ಎರಡು ಆಕ್ಸಿಡೆಂಟ್! ರಸ್ತೆ ಪಕ್ಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವಾಸಿಗರನ್ನು ಕಂಡು ಮನುಸು ಚುರ್ರ್ ಎಂದಿತು.


ರಾಷ್ಟ್ರಪತಿ ಭವನದಲ್ಲಿ ಇಂಥವರೂ ಇದ್ದರು !

ಆ ವೇಳೆಗಾಗಲೇ ಇಂದಿರಾಗಾಂಧಿಗೆ ಮನವರಿಕೆಯಾಗಿತ್ತು. ತಾವು ಹೇಳಿದಂತೆ ಕೇಳುವ, ಹೇಳುವ ಮೊದಲೇ ಡೊಗ್ಗು ಸಲಾಮು ಹೊಡೆಯುವ, ಯಾವುದನ್ನು ಪ್ರಶ್ನಿಸದ, ಎಲ್ಲದಕ್ಕೂ ತಲೆಯಾಡಿಸುವ ಆಸಾಮಿಯೆಂಬುದು ಅವರಿಗೆ ಸ್ಪಷ್ಟವಾಗಿತ್ತು. ಆದರೂ ಇಂದಿರಾ ತಮ್ಮ ಮನಸ್ಸಿನ ಒಳಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ.

ಇದರಿಂದ ದುಗುಡಗೊಂಡ ಗಿರಿ, ಸ್ವತಃ ಇಂದಿರಾಗಾಂಧಿಯನ್ನು ಭೇಟಿ ಮಾಡಿ ತಮ್ಮನ್ನೇ ಅಭ್ಯರ್ಥಿ ಮಾಡುವಂತೆ ಗೋಗರೆದರು. ಉಪರಾಷ್ಟ್ರಪತಿ ಹಾಗೂ ಹಂಗಾಮಿ ರಾಷ್ಟ್ರಪತಿಯಾಗಿದ್ದ ವ್ಯಕ್ತಿ ತೀರಾ ಕೆಳಮಟ್ಟಕ್ಕಿಳಿದರೆ ಅಂಗಲಾಚಿದರೆ ಜನ ಏನೆಂದು ಭಾವಿಸಬಹುದೆಂಬುದನ್ನು ಯೋಜಿಸದ ಗಿರಿ, ಕೊನೆಗೂ ಹಠ ಬಿಡಲಿಲ್ಲ.

ಖ್ಯಾತ ಪತ್ರಕರ್ತ ಇಂದರ್‌ ಮಲ್ಹೋತ್ರಾ ಹೇಳುವಂತೆ, ವಿ.ವಿ.ಗಿರಿ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಲೆಂದು ಸುಮಾರು ಮುಕ್ಕಾಲು ಗಂಟೆ ಕಾದರಂತೆ. ಹೇಗಿದ್ದರೂ ತನ್ನ ಭೇಟಿ ಮಾಡಲೆಂದು ಬಂದ ಆಸಾಮಿ, ಭೇಟಿ ಮಾಡದೇ ಹೋಗಲಾರ. ‘ಕಾಯಲಿ ಬಿಡು’ ಎಂದು ಇಂದಿರಾ ಗಾಂಧಿ ಸುಮ್ಮನಿದ್ದರು. ರಾಷ್ಟ್ರಪತಿ ಮಾಡಿದರೆ ಹೇಗಿರಬೇಕೆಂಬುದನ್ನು ಸೂಚ್ಯವಾಗಿ ತಿಳಿಹೇಳುವುದೂ ಕಾಯಿಸುವುದರ ಹಿಂದಿನ ಉದ್ದೇಶವಿದ್ದಿತು. ತನ್ನ ಕೆಲಸವಾಗಬೇಕೆಂದಿದ್ದರೆ ಯಾರ ಕಾಲನ್ನು ಬೇಕಾದರೂ ಹಿಡಿದೇನು ಎಂಬ ಮನಸ್ಥಿತಿಯಲ್ಲಿದ್ದ ಗಿರಿ, ಉಪರಾಷ್ಟ್ರಪತಿ ಎಂಬುದನ್ನು ಆ ಕ್ಷಣ ಮರೆತು ಕಾದು ಕಾದು ತಮ್ಮ ಕೆಲಸ ಮಾಡಿಕೊಂಡರು!

ಅಷ್ಟು ಮಾಡದಿದ್ದರೆ ತನ್ನಂಥವ ರಾಷ್ಟ್ರಪತಿಯಾಗುವುದಿಲ್ಲವೆಂಬುದು ಗಿರಿ ಅವರಿಗೆ ಚೆನ್ನಾಗಿ ಗೊತ್ತಿತ್ತು. ರಾಷ್ಟ್ರಪತಿಯಾಗಿ ಅಲ್ಲ ರಾಷ್ಟ್ರಪತಿ ಭವನದಲ್ಲಿ ಯಾವ ಕೆಲಸಕ್ಕೂ ಲಾಯಕ್ಕಲ್ಲದ ವ್ಯಕ್ತಿ ಎಂದು ಖ್ಯಾತ ಪತ್ರಕರ್ತ ಚೋ. ರಾಮಸ್ವಾಮಿ, ಗಿರಿ ಬಗ್ಗೆ ಹೇಳಿದ್ದರು.

ಇಂದಿರಾ ಗಾಂಧಿ ಕಾಲದಲ್ಲಿ ರಾಷ್ಟ್ರಪತಿ ಹುದ್ದೆ ತನ್ನ ಘನತೆ ಕಳೆದುಕೊಂಡಿತು. ತನ್ನ ಮರ್ಜಿಗಾಗಿ ಕಾದು ಕುಳಿದವ ರಾಷ್ಟ್ರಪತಿಯಾದರೇನು, ರಾಷ್ಟ್ರಾಧ್ಯಕ್ಷರಾದರೇನು ಇಂದಿರಾ ಗಾಂಧಿ ಮೊದಲಿನಂತೆ ನಡೆಸಿಕೊಳ್ಳುತ್ತಿದ್ದರು. ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿಯನ್ನು ಸೌಜನ್ಯಕ್ಕೆ ಭೇಟಿಯಾಗಿ ವಿವರಿಸುವ ಪರಿಪಾಠವನ್ನು ಸಹಾ ಇಂದಿರಾ ಗಾಂಧಿ ಇಟ್ಟುಕೊಂಡಿರಲಿಲ್ಲ.

ಫಕ್ರುದ್ದೀನ್‌ ಆಲಿ ಆಹಮದ್‌ ರಾಷ್ಟ್ರಪತಿಯಾದಾಗಲೂ ಇದು ಮುಂದುವರಿಯಿತು. ಪ್ರೊಟೊಕಾಲ್‌ ಪ್ರಕಾರ, ರಾಷ್ಟ್ರಪತಿಯವರೇ ಪ್ರಧಾನಿ ಜತೆ ಮಾತಾಡಬೇಕೆಂದು ಬಯಸಿದರೆ, ಪ್ರಧಾನಿಯವರೇ ಫೋನ್‌ ಮಾಡುತ್ತಾರೆ. ಆದರೆ ಇಂದಿರಾ ಗಾಂಧಿ ರಾಷ್ಟ್ರಪತಿ ಭವನದ ಯಾವ ಶಿಷ್ಟಾಚಾರವನ್ನೂ ಪಾಲಿಸುತ್ತಿರಲಿಲ್ಲ. ರಾಷ್ಟ್ರಪತಿಯವರು ಪ್ರಧಾನಿ ಹೇಳಿದಂತೆ ಕೇಳುತ್ತಿದ್ದರು. ಕೊನೆಕೊನೆಗೆ ರಾಷ್ಟ್ರಪತಿಯವರಿಂದ ಆಗಬೇಕಾದ ಕೆಲಸಗಳಿಗೆ ಇಂದಿರಾ ಗಾಂಧಿ ಪೋನ್‌ ಮಾಡುತ್ತಿರಲಿಲ್ಲ. ತಮ್ಮ ಸಹಾಯಕರಿಂದ ಫೋನ್‌ ಮಾಡಿಸಿ ಕೆಲಸವಾಗುವಂತೆ ನೋಡಿಕೊಳ್ಳುತ್ತಿದ್ದರು. ರಾಷ್ಟ್ರಪತಿ ಭವನ ಅಂಥ ಸ್ಥಿತಿ ತಲುಪಿತ್ತು.

ತುರ್ತು ಘೋಷಿಸುವ ಸಂದರ್ಭ ಬಂದಾಗಲೂ ಇಂದಿರಾ ಗಾಂಧಿ ಇಂಥ ಮಹತ್ವದ ವಿಷಯವನ್ನು ಫಕ್ರುದ್ದೀನ್‌ ಆಲಿ ಅಹಮದ್‌ ಜತೆ ಚರ್ಚಿಸಲು ಹೋಗಲಿಲ್ಲ. ಆಗ ಫಕ್ರುದ್ದೀನ್‌ ವಿದೇಶ ಪ್ರವಾಸದಲ್ಲಿದ್ದರು. ತುರ್ತುಸ್ಥಿತಿ ಘೋಷಣೆಗೆ ಸಹಿ ಹಾಕುವಂತೆ ಪ್ರಧಾನಿ ಕಚೇರಿ ಅಧಿಕಾರಿಗಳು ರಾಷ್ಟ್ರಪತಿಗಳ ಸಹಾಯಕರಿಗೆ ಹೇಳಿದರು. ಆಗ ಫಕ್ರುದ್ದೀನ್‌ ಟಬ್‌ನಲ್ಲಿ ಸ್ನಾನ ಮಾಡುತ್ತಿತ್ತರಂತೆ. ಅವರು ಅಲ್ಲಿಂದಲೇ ಸಹಿ ಹಾಕಿ ಕಳಿಸುತ್ತಿರುವ ವ್ಯಂಗ್ಯಚಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಅವಳು

ಅವಳು ವಾಸ್ತವದಲ್ಲಿ ನನ್ನ ಜತೆ ಮಾತಾಡಿದ್ದಕ್ಕಿಂತ ಕನಸಲ್ಲೇ ಮಾತಾಡಿದ್ದು ಹೆಚ್ಚು !

ಅವಳು ವಾಸ್ತವದಲ್ಲಿ ನನ್ನನ್ನು ತಿರಸ್ಕರಿದ್ದಕ್ಕಿಂತ, ಕನಸಲ್ಲೇ ಕ್ಣಣಕ್ಷಣವೂ ನನ್ನ ಬಿಟ್ಟಿರಲಾರದೆ ಪ್ರೀತಿಸಿದ್ದೆ ಹೆಚ್ಚು.

ಇದು ನಾನು ಅವಳ ಮೇಲೆ ಇಟ್ಟಿದ್ದ ಪ್ರೀತಿಗೆ ವೀಫಲ ಪ್ರಯತ್ನಕ್ಕೆ ಕನಸಲ್ಲೇ ಬರೆದುಕೊಂಡಿದ್ದು ಎಚ್ಚರವಾದಾಗ ಕ್ಷಣವ್ಯಯಿಸದೇ ಅದನ್ನೆ ಯಥವತ್ತಾಗಿ ನೋಟ್ ಮಾಡಿಕೊಂಡು ಇಲ್ಲಿ ಬರೆದಿದ್ದೇನೆ

ಕನಸು ಅಂದ್ರೆ ನನ್ನ ಪಾಲಿಗೆ ಅದೇ ವಾಸ್ತವ, ವಾಸ್ತವದಲ್ಲಿ ಕಾಣುವ ಅವಳೇ ಒಂದು ಕನಸು!

(ಎಚ್ಚರವಾದಾಗ ಸಮಯ ೩:೨೫ರ ಬೆಳಗ್ಗೆ ಬರೆಯುತ್ತಾ ಹಾಗೆ ನಿದ್ದೆಹೋದಾಗ.)

ಡಾ. ರಾಜ್ ಬಗ್ಗೆ ಗೊತ್ತಿಲ್ಲದ ಸತ್ಯಗಳು !

ಕೆಲವರಿಗೆ ರಾಜ್‌ಕುಮಾರ್ ಅವರ ಕೊಡುಗೆಯ ಬಗ್ಗೆ ಅನಗತ್ಯ ಅನುಮಾನಗಳಿವೆ. ಅವರು ದೊಡ್ಡ ಕಲಾವಿದರೆಂಬುದು ನಿಜ. ಆದರೆ ಸಮಾಜಕ್ಕೆ, ಜನರಿಗೆ, ಅವರ ಕೊಡುಗೆ ಏನು? ಎಂಬ ಪ್ರಶ್ನೆಯನ್ನು ನಿರಂತರವಾಗಿ ಕೇಳುವವರು ಇದ್ದಾರೆ. ಕಲಾವಿದರಾಗಿ ಕಲೆಗೆ ಹಾಗೂ ಸದಭಿರುಚಿಗೆ ಅನ್ಯಾಯ ಮಾಡದಿದ್ದರೆ ಅದೇ ಒಂದು ಸಾಮಾಜಿಕ ಕೊಡುಗೆಯೆಂಬ ತಿಳುವಳಿಕೆ ಇಂಥವರಿಗೆ ಇಲ್ಲದಿರಬಹುದು. ಒಂದು ವೇಳೆ ಈ ತಿಳುವಳಿಕೆಯಿದ್ದರೂ ಜನರಿಂದ ಅಪಾರ ಮನ್ನಣೆ ಗಳಿಸಿದ ರಾಜಕುಮಾರ್ ಅವರಿಂದ ಒಂದಷ್ಟು ಲೌಕಿಕ ಸೇವೆಯ ಅಗತ್ಯವಿದೆಯೆಂದು ಭಾವಿಸಿರಬಹುದು. ರಾಜಕುಮಾರ್ ಅವರು ಏನೆಲ್ಲ ಮಾಡಿದರೆಂಬ ಮಾಹಿತಿ ಇಲ್ಲದೆ ಇರುವುದೂ ಇಂಥ ತಪ್ಪು ತಿಳುವಳಿಕೆಗೆ ಕಾರಣವಾಗಿರಬಹುದು. ಇಂತಹ ಸಕಾರಣಗಳ ಹೊರತಾಗಿ ಅಸಹನೆಯ ಆಕ್ಷೇಪಾನಂದರೂ ನಮ್ಮಲ್ಲಿ ಕೆಲವರಿರಬಹುದು.

ಈ ಎಲ್ಲ ಹಿನ್ನೆಲೆಯಲ್ಲಿ ರಾಜಕುಮಾರ್ ಅವರ ಕೆಲವು ಸಾಮಾಜಿಕ ಕಾರ್ಯಗಳನ್ನು ಸಾದರಪಡಿಸುವ ಅಗತ್ಯವಿದೆಯೆಂದು ಭಾವಿಸುತ್ತೇನೆ. ಡಾ. ರಾಜಕುಮಾರ್ ಅವರು ಸಮಾಜಕ್ಕೆ ಕೊಟ್ಟಿದ್ದೇನು?, ಜನರಿಗೆ ಕೊಟ್ಟಿದ್ದೇನು? ಎಂಬ ಪ್ರಶ್ನೆಗೆ ಆಯ್ದ ಕೆಲವು ಉದಾಹರಣೆಗಳ ಮೂಲಕ ಉತ್ತರಿಸುತ್ತೇನೆ.

* ರಾಜಕುಮಾರ್ ಅವರು ಚಲನಚಿತ್ರ ಕಲಾವಿದರಾದ ಮೇಲೆಯೂ ರಂಗಭೂಮಿಯನ್ನು ಮರೆಯಲಿಲ್ಲ.

* ಕಷ್ಟದಲ್ಲಿರುವ ವೃತ್ತಿ ರಂಗಭೂಮಿ ಸಂಸ್ಥೆಗಳಿಗಾಗಿ ಸಹಾಯಾರ್ಥ ನಾಟಕಗಳನ್ನಾಡಿ ಹೆಚ್ಚು ಹಣ ಸಂಗ್ರಹಕ್ಕೆ ಕಾರಣವಾದರು.

* ಬಿಡುವಿನ ಸಂದರ್ಭಗಳಲ್ಲಿ ಯಾರು ಕರೆದರೂ ಬಂದು ನಾಟಕಗಳಲ್ಲಿ ಅಭಿನಯಿಸಿದರು.

* ರಂಗಭೂಮಿ ಕಲಾವಿದರ ಮಕ್ಕಳ ಮದುವೆಗಳಿಗೂ ಸಹಾಯಾರ್ಥ ಪ್ರದರ್ಶನ ಕೊಟ್ಟ ಉದಾಹರಣೆಗಳಿವೆ. ಕರೆದ ಕಡೆಯೆಲ್ಲ ಹೋಗಲು ಸಾಧ್ಯವಾಗದೆ ಇದ್ದಿರಬಹುದಾದರೂ ಈ ಸಹಾಯಾರ್ಥ ನಾಟಕ ಪ್ರದರ್ಶನಗಳನ್ನು ರಾಜ್ಯದ ಜನತೆ ಮರೆಯಲಾರರು.

* ೧೯೬೧ರಲ್ಲಿ ಪ್ರವಾಹ ಪೀಡಿತರಾಗಿ ಜನರು ಕಷ್ಟನಷ್ಟಗಳಿಗೆ ಒಳಗಾದಾಗ ‘ಪ್ರಜಾವಾಣಿ’ ಪತ್ರಿಕೆಯ ಆಶಯದಂತೆ ರಾಜಕುಮಾರ್ ಅವರು ಕನ್ನಡದ ಎಲ್ಲ ಚಲನಚಿತ್ರ ಕಲಾವಿದರ ನೇತೃತ್ವವಹಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂತ್ರಸ್ತ ಜನರಿಗಾಗಿ ನಿಧಿ ಸಂಗ್ರಹ ಮಾಡಿದರು. ಇದೊಂದು ಅಪರೂಪದ ಸಾಮಾಜಿಕ ಕಾರ್ಯವಾಗಿತ್ತು.

* ಡಬ್ಬಿಂಗ್ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರರಂಗಕ್ಕೆ ಧಕ್ಕೆಯಾದಾಗ ಡಬ್ಬಿಂಗ್ ವಿರೋಧಿ ಚಳವಳಿಗೆ ಬೆಂಬಲವಾಗಿ ನಿಂತರು. ಕಡೇಉಸಿರಿರುವವರೆಗೆ ಕನ್ನಡ ಚಿತ್ರಗಳ ಉಳಿವಿಗಾಗಿ ಚಿತ್ರೋದ್ಯಮದ ಹೋರಾಟಗಳಲ್ಲಿ ಭಾವಹಿಸಿದ್ದರು.

* ಬಹು ಮುಖ್ಯವಾದ ಅಂಶವೊಂದನ್ನು ಇಲ್ಲಿ ಹೇಳಬೇಕು. ಚಿತ್ರರಂಗದ ಯಾವುದೇ ಕಲಾವಿದರು-ತಂತ್ರಜ್ಞರು ಖಾಯಿಲೆ ಬಿದ್ದಾಗ ರಾಜಕುಮಾರ್ ಅವರು ಸ್ಪಂದಿಸುತ್ತಿದ್ದ ರೀತಿ ಅಪರೂಪದ್ದು. ತಾವಾಗಿಯೇ ಹೋಗಿ ಅಥವಾ ಪಾರ್ವತಮ್ಮನವರನ್ನು ಕಳಿಸಿ ಒಂದಿಷ್ಟು ಧನ ಸಹಾಯ ಮಾಡಿ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡುತ್ತಿದ್ದರು. ಆದರೆ ಈ ಕೆಲಸಕ್ಕೆ ಪ್ರಚಾರ ಬಯಸುತ್ತಿರಲಿಲ್ಲ. ಕೆಲವರು ಈ ಬಗ್ಗೆ ಅವರಲ್ಲಿ ಕೇಳಿದಾಗ, ‘ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಇದಕ್ಕೆಲ್ಲ ಪ್ರಚಾರ ಯಾಕೆ’ ಎಂದು ನಗುತ್ತಿದ್ದರು.

* ಇವರಿಂದ ನೂರಾರು ಜನರಿಗೆ ಸಹಾಯವಾದದ್ದು ಮಾತ್ರ ಪ್ರಚಾರ ರಹಿತ ಸತ್ಯ. ಈ ರೀತಿಯ ಸಹಾಯ ರಾಜ್ ಕುಟುಂಬದವರಿಂದ ಈಗಲೂ ಮುಂದುವರೆದಿದೆ.

* ತಮ್ಮ ಅಭಿನಯದ ಚಿತ್ರಗಳು ಸೋತಾಗ ನಿರ್ಮಾಪಕರಿಗೆ ನೆರವಾದ ನಟರ ಬಗ್ಗೆ ಈಗ ಸಾಕಷ್ಟು ಪ್ರಚಾರವಾಗುತ್ತಿದೆ. ಹೀಗೆ ನಿರ್ಮಾಪಕರಿಗೆ ರಾಜಕುಮಾರ್ ಅವರು ಅವತ್ತಿನ ದಿನಗಳಲ್ಲೇ ನೆರವು ನೀಡಿದ ಅಂಶ ಕೆಲವರಿಗೆ ಮಾತ್ರ ಗೊತ್ತಿದೆ.

* ರಾಜಕುಮಾರ್ ಅವರ ಚಿತ್ರಗಳಿಂದ ತಮಗೆ ಲಾಭವಾಗಲಿಲ್ಲ ಎಂದು ಕೆಲವರು ಗೊಣಗುತ್ತಿದ್ದ ಸುದ್ದಿ ರಾಜ್ ಕಿವಿಗೆ ಬೀಳುತ್ತದೆ. ಆದರಿದು ಪೂರ್ಣಸತ್ಯವಾಗಿರಲಿಲ್ಲ. ರಾಜಕುಮಾರ್ ಅವರು ಆಗ ಪ್ರಸಿದ್ಧರಾಗಿದ್ಧ ಒಬ್ಬ ಪ್ರೊಡಕ್ಷನ್ ಮ್ಯಾನೇಜರ್ ಅವರನ್ನು ಕರೆದು ‘ಯಾರ‌್ಯಾರು ಹೀಗೆ ಮಾತಾಡುತ್ತಿದ್ದಾರೆ ಪತ್ತೆ ಹಚ್ಚಿ ಹೇಳಿ’ ಎಂದು ಕೇಳಿದರು. ಆ ಪ್ರೊಡಕ್ಷನ್ ಮ್ಯಾನೇಜರ್ ಒಟ್ಟು ಹನ್ನೊಂದು ಜನ ನಿರ್ಮಾಪಕರನ್ನು ಗುರುತಿಸಿದರು. ರಾಜ್ ಅವರು ಒಬ್ಬೊಬ್ಬ ನಿರ್ಮಾಪಕರನ್ನೂ, ಕರೆದು ‘ನಿಮಗೆ ಫ್ರೀ ಡೇಟ್ಸ್ ಕೊಡುತ್ತೇನೆ. ಮತ್ತೊಂದು ಸಿನೆಮಾ ಮಾಡಿ’ ಎಂದು ಸಹಾಯಹಸ್ತ ನೀಡಿದರು.

ಈ ನಿರ್ಮಾಪಕರ ಮಾಹಿತಿ ನೀಡಿದ ಪ್ರೊಡಕ್ಷನ್ ಮ್ಯಾನೇಜರ್‌ಗೂ ‘ಫ್ರೀ ಡೇಟ್ಸ್ ಕೊಡುವೆ. ನೀವೇ ಒಂದು ಸಿನೆಮಾ ಮಾಡಿ’ ಎಂದು ವಾಗ್ದಾನ ಮಾಡಿದರು. ಹೀಗೆ ನಷ್ಟಕ್ಕೊಳಗಾದೆವೆಂದು ಪ್ರಚಾರ ಮಾಡುತ್ತಿದ್ದ ನಿರ್ಮಾಪಕರಿಗೆ ಅಂದಿನ ದಿನಗಳಲ್ಲೇ ಸ್ವಯಂ ಅಪೇಕ್ಷೆಯಿಂದ ನೆರವಿಗೆ ನಿಂತ ರಾಜಕುಮಾರ್ ಅವರು ತಮ್ಮ ಚಿತ್ರಗಳಿಂದ ಬೇರೆಯವರಿಗೇಕೆ ನಷ್ಟವಾಗಬೇಕೆಂದು ಭಾವಿಸಿ ಪಾರ್ವತಮ್ಮನವರಿಗೆ ಪ್ರೇರಣೆ ನೀಡಿದ ಫಲವಾಗಿ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಹುಟ್ಟಿಕೊಂಡಿತು. ವಿತರಣೆ ಮತ್ತು ನಿರ್ಮಾಣಕ್ಕೆ ರಾಜ್ ಕುಟುಂಬ ಕೈ ಹಾಕಿತು.

* ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಅನೇಕ ರಂಗಮಂದಿರಗಳಿಗೆ ಸಹಾಯಾರ್ಥ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ರಾಜಕುಮಾರ್ ಅವರಿಗೆ ಸಲ್ಲುತ್ತದೆ. ಆಯಾ ಜಿಲ್ಲೆಗೆ ತಮ್ಮ ತಂಡದೊಂದಿಗೆ ಹೋಗಿ ಪ್ರದರ್ಶನ ನೀಡಿ ಧನಸಂಗ್ರಹ ಮಾಡಿಕೊಟ್ಟದ್ದು ಒಂದು ಸಾಂಸ್ಕೃತಿಕ ಕೆಲಸ.

* ರಾಜಕುಮಾರ್ ಅವರು ‘ರಸಮಂಜರಿ’ ಕಾರ್ಯಕ್ರಮಗಳಿಂದ ಬಂದ ಗೌರವಧನ ಹಾಗೂ ಗಾಯನದಿಂದ ಬಂದ ಸಂಭಾವನೆಯ ಬಹುಪಾಲನ್ನು ‘ಶಕ್ತಿಧಾಮ’ ಸಂಸ್ಥೆಗೆ ನೀಡುತ್ತಾ ಬಂದರು. ‘ಶಕ್ತಿಧಾಮ’ವು ಪಾರ್ವತಮ್ಮನವರ ನೇತೃತ್ವದಲ್ಲಿ ನಡೆಯುತ್ತಿದ್ದ ಒಂದು ಸಂಸ್ಥೆ. ಬೀದಿಗೆ ಬಿದ್ದ ಹೆಣ್ಣುಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಈ ಸಂಸ್ಥೆ ಮೈಸೂರಿನಲ್ಲಿದ್ದು ನೂರಾರು ಮಹಿಳೆಯರಿಗೆ ಆಶ್ರಯ ನೀಡಿದೆ; ನೀಡುತ್ತಿದೆ. ಇದೊಂದು ಶ್ಲಾಘನೀಯ ಸಾಮಾಜಿಕ ಕಾರ್ಯವಾಗಿದೆ.

* ದಾದಾಫಾಲ್ಕೆ ಪ್ರಶಸ್ತಿಯ ಹಣವನ್ನು ರಾಜಕುಮಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದರು. ಆ ಮೂಲಕ ಒಂದು ಸಾಹಿತ್ಯ ದತ್ತಿ ಸ್ಥಾಪನೆಗೆ ಕಾರಣರಾದರು.

* ಗೋಕಾಕ್ ಚಳವಳಿಯೆಂದೇ ಪ್ರಸಿದ್ಧವಾದ ಕನ್ನಡಪರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ರಾಜಕುಮಾರ್ ಅವರು ತಿಂಗಳಾನುಕಾಲ ಕರ್ನಾಟಕದಾದ್ಯಂತ ಸಂಚರಿಸಿ ಕನ್ನಡಪರ ಜಾಗೃತಿ ಮೂಡಿಸಿದ್ದು ಎಂದೂ ಮರೆಯಲಾಗದ ಸನ್ನಿವೇಶವಾಗಿದೆ. ಇಡೀ ಕನ್ನಡ ಚಿತ್ರೋದ್ಯಮದ ತೊಡಗುವಿಕೆಯನ್ನು ಇಲ್ಲಿ ನೆನೆಯಬೇಕು.

* ಅದೇ ರೀತಿ ಕನ್ನಡ ಹಾಗೂ ಕರ್ನಾಟಕದ ವಿಷಯದಲ್ಲಿ ನಡೆಯುವ ಹೋರಾಟಗಳಿಗೆ ರಾಜಕುಮಾರ್ ಅವರ ಸಕ್ರಿಯ ಬೆಂಬಲ ಸದಾ ಇದ್ದದ್ದು ಇಲ್ಲಿ ಸ್ಮರಣೀಯ.

* ಅಪಾರ ಕೀರ್ತಿ ಮತ್ತು ಹಣ ಸಂಪಾದಿಸಿದ್ದ ರಾಜಕುಮಾರ್ ಅವರು ಚಿತ್ರೋದ್ಯಮದ ಮೂಲ ಸೌಕರ್ಯಗಳಿಗಾಗಿ ಏನು ಮಾಡಿದರು- ಎಂದು ಹಿಂದಿನಿಂದಲೂ ಕೆಲವರು ಕೇಳುತ್ತಿರುವುದುಂಟು. ರಾಜಕುಮಾರ್ ಅವರು ಕೀರ್ತಿ ಮತ್ತು ಜನರ ಪ್ರೀತಿಯನ್ನು ಸಂಪಾದಿಸಿದಷ್ಟು, ಹಣವನ್ನು ಸಂಪಾದಿಸಲಿಲ್ಲ. ತಾವು ಅಭಿನಯಿಸಿದ ಅನೇಕ ಚಿತ್ರಗಳಿಗೆ ಪೂರ್ಣ ಸಂಭಾವನೆಯನ್ನೂ ಪಡೆಯದೆ ಕೆಲಸ ಮುಗಿಸಿಕೊಟ್ಟರು.

* ಬಹಶಃ ನಿಮಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ ನೂರಾರು ಚಿತ್ರಗಳಲ್ಲಿ ನಟಿಸಿದ ನಂತರವೂ ಅವರು ಬೆಂಗಳೂರಿನಲ್ಲಿ ಮನೆಯನ್ನು ಖರೀದಿಸಿದಾಗ 2 ಲಕ್ಷ ರುಪಾಯಿಯ ಕೊರತೆಯುಂಟಾಗಿತ್ತು. ಆಗ ನಿರ್ಮಾಪಕರೊಬ್ಬರಿಂದ ಸಾಲ ಮಾಡಿದ್ದರು.

* ವೃತ್ತಿ ರಂಗಭೂಮಿ ಸಂಸ್ಥೆಗಳ ಮಾಲಿಕರು ಮತ್ತು ಚಿತ್ರ ನಿರ್ಮಾಪಕರನ್ನು ‘ಅನ್ನದಾತ’ರೆಂದು ಭಾವಿಸಿದ ರಾಜಕುಮಾರ್, ಅವರಿಗೆ ಹಣಕ್ಕಾಗಿ ತೊಂದರೆ ಕೊಡಲಿಲ್ಲ. ತಮ್ಮ ಜತೆಯ ಕಲಾವಿದರಿಗೆ ರಾಜಕುಮಾರ್ ಅವರು ಹೇಗೆ ಸಹಾಯ ಹಸ್ತ ನೀಡುತ್ತಿದ್ದರು ಎಂಬುದಕ್ಕೆ ಎರಡು ಘಟನೆಗಳನ್ನು ಹೇಳಬಹುದು.

೧) ಪಂಡರಿಬಾಯಿಯವರು ನಿರ್ಮಿಸಿದ ಒಂದು ಚಿತ್ರದಲ್ಲಿ ರಾಜಕುಮಾರ್ ಅವರ ಸಂಭಾವನೆಯ ಸ್ವಲ್ಪ ಭಾಗ ಬಾಕಿಯಿತ್ತು. ಪಂಡರಿಬಾಯಿಯವರು ಇನ್ನೊಂದು ಚಿತ್ರ ಆರಂಭಿಸಿದರು. ಈ ಚಿತ್ರಕ್ಕೆ ಬೇರೆ ನಟರನ್ನು ನಾಯಕರಾಗಿ ಗೊತ್ತು ಮಾಡಿದರು. ಆಗ ಮದ್ರಾಸಿನಲ್ಲಿ ಬೇರೆ ಭಾಷೆಯ ಚಿತ್ರಗಳಿಗಾಗಿ ಹಾಕಿದ ಸೆಟ್‌ನಲ್ಲಿ ಅಲ್ಪಸ್ವಲ್ಪ ಬದಲಾಯಿಸಿ ಕನ್ನಡ ಚಿತ್ರಗಳ ಚಿತ್ರೀಕರಣ ನಡೆಸಲಾಗುತ್ತಿತ್ತು. ಯಾಕೆಂದರೆ ಕನ್ನಡ ನಿರ್ಮಾಪಕರಿಗೆ ಶ್ರೀಮಂತ ಸೆಟ್ ಹಾಕುವುದು ದುಬಾರಿಯಾಗಿತ್ತು. ಸ್ಟುಡಿಯೊದಲ್ಲಿ ಸಿದ್ಧವಾಗಿದ್ದ ಒಂದು ಸೆಟ್ ಮೂರು ದಿನಗಳ ಕಾಲ ಬಿಡುವಾಗಿತ್ತು. ಆನಂತರ ಅದನ್ನು ತೆಗೆದು ಹಾಕಲಾಗುತ್ತಿತ್ತು. ಈ ಮೂರು ದಿನ ಪಂಡರಿಬಾಯಿಯವರ ಸಿನೆಮಾದ ಚಿತ್ರೀಕರಣ ಮಾಡಲು ನಾಯಕನಟರ ಒಪ್ಪಿಗೆಯೂ ಸಿಕ್ಕಿತ್ತು. ಆದರೆ ಆ ನಾಯಕನಟರು ನಾಳೆ ಚಿತ್ರೀಕರಣ ಎನ್ನುವಾಗ ಬರಲಾಗುವುದಿಲ್ಲ ಎಂದುಬಿಟ್ಟರು. ಈಗ ಸಿದ್ಧವಾಗಿರುವ ಸೆಟ್ ಬಿಟ್ಟರೆ ಅಂಥದನ್ನು ಸ್ವಂತವಾಗಿ ಹಾಕಿಸುವ ಶಕ್ತಿಯಿಲ್ಲ. ಏನು ಮಾಡುವುದು? ಕಡೆಗೆ ರಾಜಕುಮಾರ್ ಅವರನ್ನೇ ಪಾತ್ರಮಾಡಲು ವಿನಂತಿಸೋಣವೆಂದು ಕೊಂಡರು. ‘ಹಿಂದಿನ ಸಂಭಾವನೆ ಸ್ವಲ್ಪ ಬಾಕಿ ಇದೆ. ಜೊತೆಗೆ ಕೈ ಕೊಟ್ಟ ನಟನ ಜಾಗಕ್ಕೆ ಕೂಡಲೇ ಬನ್ನಿ ಎಂದು ಹೇಗೆ ಕೇಳುವುದು?’ ಎಂಬ ಚಿಂತೆ ಪಂಡರಿಬಾಯಿಯವರದು. ಅದಾಗಲೇ ರಾಜಕುಮಾರ್ ತಾರಾಮೌಲ್ಯ ಪಡೆದಿದ್ದರು. ಆದರೂ ಚಿತ್ರತಂಡ ಧೈರ್ಯಮಾಡಿ ರಾಜಕುಮಾರ್ ಬಳಿಗೆ ಹೋಯಿತು. ಪಂಡರಿಬಾಯಿಯವರು ಸತ್ಯವನ್ನೇ ತೆರೆದಿಟ್ಟರು. ರಾಜಕುಮಾರ್ ಅವರು ಕೂಡಲೇ ಒಪ್ಪಿದರು. ‘ಚಿಂತೆ ಮಾಡ್‌ಬೇಡಿ ಕಲಾವಿದರಾದ ನಿಮ್ಮ ಕಷ್ಟ ನನ್ ಕಷ್ಟಾನೂ ಹೌದು. ನಾಳೆಯಿಂದ ಮೂರುದಿನ ಹೇಗೊ ಬಿಡುವು ಮಾಡ್ಕೊಂಡ್ ಬರ್ತೇನೆ. ಆಮೇಲೆ ಬೇರೆ ಡೇಟ್ಸ್ ಕೊಡ್ತೇನೆ’ ಎಂದು ಹೇಳಿದರು. ಹಿಂದಿನ ಬಾಕಿ ಹಣವನ್ನೂ ಕೇಳಲಿಲ್ಲ. ಹೊಸ ಚಿತ್ರದ ಮುಂಗಡ ಹಣವನ್ನೂ ಕೇಳಲಿಲ್ಲ. ಈ ಘಟನೆಯನ್ನು ಪಂಡರಿಬಾಯಿಯವರ ಸೋದರಿ ಮೈನಾವತಿಯವರು ಹೇಳಿದ್ದರು.

೨) ಎಂ.ಪಿ. ಶಂಕರ್ ಅವರು ನಿರ್ಮಿಸಿದ ‘ಗಂಧದ ಗುಡಿ’ಯ ನಾಯಕ ಪಾತ್ರವನ್ನು ಕೇವಲ ಅರವತ್ತು ಸಾವಿರ ರೂಪಾಯಿ ಸಂಭಾವನೆಗೆ ನಟನೆ ಮಾಡಲು ರಾಜಕುಮಾರ್ ಒಪ್ಪಿದರು. ಚಿತ್ರ ಬಿಡುಗಡೆಯಾಗಿ ಶತದಿನ ಪೂರೈಸಿ ಯಶಸ್ವಿಯಾಯಿತು. ರಾಜಕುಮಾರ್ ಅವರು ಇನ್ನಿಲ್ಲವಾದ ಮೇಲೆ ಒಮ್ಮೆ ಎಂ.ಪಿ. ಶಂಕರ್ ಒಮ್ಮೆ ವೇದಿಕೆಯೊಂದರಲ್ಲಿ ನೋವು ತುಂಬಿ ಹೇಳಿದರು; ‘ನಾನು ಅರವತ್ತು ಸಾವಿರ ಕೊಡ್ತೇನೆ ಅಂದಿದ್ದೆ. ಕೊಟ್ಟಿದ್ದು ನಲವತ್ತು ಮಾತ್ರ. ಈಗಲೂ ಇಪ್ಪತ್ತು ಬಾಕಿ ಇದೆ. ರಾಜಣ್ಣ ಒಂದು ದಿನವೂ ಒತ್ತಾಯಿಸಲಿಲ್ಲ. ಈಗ ಅವರೇ ಇಲ್ಲ, ಅವರ ಸಹಕಾರ ಎಂದೂ ಮರೆಯೋ ಹಾಗಿಲ್ಲ’. ಇದು ರಾಜಕುಮಾರ್ ಮಾದರಿ.

* ರಾಜ್ಯ ಮತ್ತು ದೇಶಕ್ಕೆ ಸಂಕಷ್ಟ ಎದುರಾದಾಗ ತಮ್ಮ ವತಿಯಿಂದ ಸರ್ಕಾರದ ನಿಧಿಗೆ ಹಣ ನೀಡಿದ್ದಲ್ಲದೆ ಬೀದಿ ಸಂಚಾರದ ಮೂಲಕ ಧನ ಸಂಗ್ರಹ ಮಾಡಿಕೊಟ್ಟ ಅನೇಕ ಉದಾಹರಣೆಗಳಿವೆ (ಉದಾ: ಕಾರ್ಗಿಲ್‌ಯುದ್ಧ-ಇತ್ಯಾದಿ).
ನೇತ್ರದಾನವನ್ನು ಒಂದು ಚಳವಳಿಯ ನೆಲೆಗೆ ಕೊಂಡೊಯ್ದ ಕ್ರಿಯೆಗೆ ರಾಜಕುಮಾರ್ ಅವರ ಚಾಲಕ ಶಕ್ತಿಯೂ ಒಂದು ಮುಖ್ಯ ಕಾರಣವಾಯಿತೆಂಬುದನ್ನು ಮರೆಯಲಾಗದು.

* ತಾವು 100 ಸಿನೆಮಾಗಳನ್ನು ಪೂರೈಸಿದ ಸಂದರ್ಭದಲ್ಲಿ ಬಡವಿದ್ಯಾರ್ಥಿಗಳಿಗಾಗಿ ಶಿಕ್ಷಣ ನಿಧಿ ಸ್ಥಾಪಿಸಿ ಆರಂಭಿಕ ಇಡುಗಂಟಾಗಿ 10,001 ರೂಪಾಯಿಗಳನ್ನು ನೀಡಿದರು. ಈ ನಿಧಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರಾಗಿ ಸಿ.ವಿ.ಎಲ್.ಶಾಸ್ತ್ರಿಯವರು ಕಾರ್ಯ ನಿರ್ವಹಿಸಿದರು.

* ತುಂಬಾ ಹಿಂದೆಯೇ ಮಾನಸಿಕ ಅಸ್ವಸ್ಥರೋಗಿಗಳ ಕಲ್ಯಾಣ ನಿಧಿಗೆ 1,000- ರುಪಾಯಿ, ಅಶಕ್ತ ಪೋಷಕರ ಸಭಾಗೆ 1,000-ರುಪಾಯಿ ಮತ್ತು ಅನಾಥ ಮಕ್ಕಳ ಕಲ್ಯಾಣ ನಿಧಿಗೆ 1,000- ರುಪಾಯಿ ಧನ ಸಹಾಯ ಮಾಡಿದರು.

* ಮೈಸೂರು ಸವಿತಾ ಸಾರ್ವಜನಿಕರ ವಿದ್ಯಾರ್ಥಿ ನಿಲಯಕ್ಕೆ ಧನ ಸಹಾಯ 1,500-ರುಪಾಯಿ
ಅನಾಥ ಮಕ್ಕಳಿಗೆ ಪುಸ್ತಕ ಕೊಡುವುದಕ್ಕಾಗಿ ಮಹಿಳಾ ಸೇವಾ ಸಮಾಜಕ್ಕೆ ಕೊಡುಗೆ 1,500-00).
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಪದವೀಧರರಿಗೆ ಪದಕ ನೀಡಲು ಕೊಡುಗೆ 5,000-ರುಪಾಯಿ ಸಹಾಯ ಹಸ್ತ ಚಾಚಿದರು

* ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗಕ್ಕೆ ಪದಕಕ್ಕಾಗಿ ಕೊಡುಗೆ 4,000-ರುಪಾಯಿ
ಕೃಷಿ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿ ವೇತನಕ್ಕಾಗಿ ಕೊಡುಗೆ 10,000-ರುಪಾಯಿ,

* ಮಾರ್ಥಾಸ್ ಆಸ್ಪತ್ರೆಯ ಗ್ರಂಥಾಲಯಕ್ಕಾಗಿ ಕೊಡುಗೆ 2,000-ರುಪಾಯಿ,

* ಮೈಸೂರು ವಿವಿ ನಾಟಕ ಕಲೆಯ ವಿಕಾಸಕ್ಕಾಗಿ ಕೊಡುಗೆ 6,000-ರುಪಾಯಿ. ಹೀಗೆ ಉದಾಹರಿಸುತ್ತಾ ಹೋಗಬಹುದು. ಇವತ್ತಿಗೆ ಹೋಲಿಸಿದರೆ ಈ ಹಣದ ಮೊತ್ತ ಕಡಿಮೆ ಎನ್ನಿಸಬಹುದಾದರೂ ಸುಮಾರು 60 ಮತ್ತು 70ರ ದಶಕದ ಆವತ್ತಿಗೆ ಈ ಮೊತ್ತ ಹೆಚ್ಚು ಮೌಲ್ಯಯುತವಾದದ್ದು. ಅವತ್ತಿನ ಒಂದು ಸಾವಿರ, ಐದು ಸಾವಿರ, ಹತ್ತು ಸಾವಿರ ರೂಪಾಯಿಗಳು ಇವತ್ತಿನ ಎಷ್ಟು ರೂಪಾಯಿಗಳಿಗೆ ಸಮ ಎಂದು ಲೆಕ್ಕ ಹಾಕಿದರೆ, ಮೊತ್ತದ ಮಹತ್ವ ಗೊತ್ತಾಗುತ್ತದೆ. ಹಣದ ಮೊತ್ತ ಎಷ್ಟು ಎನ್ನುವುದಷ್ಟೇ ಮುಖ್ಯವಲ್ಲ, ರಾಜಕುಮಾರ್ ಅವರ ಸಮಾಜಮುಖಿ ಮನಸ್ಸು ಮುಖ್ಯ ಎನ್ನುವುದನ್ನೂ ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ರಾಜಕುಮಾರ್ ಅವರು ಅಂದು ತೆಗೆದುಕೊಳ್ಳುತ್ತಿದ್ದ ಸಂಭಾವನೆಗೆ ಹೋಲಿಸಿದರೆ ಕೊಡುಗೆಗಳ ಮೊತ್ತದ ಮಹತ್ವ ಎಷ್ಟೆಂದು, ಮನಸ್ಸಿದ್ದವರಿಗೆಲ್ಲ ಮನವರಿಕೆಆಗುತ್ತದೆ.

ಕೆಲವು ‘ಬುದ್ಧಿವಂತರು’ ರಾಜಕುಮಾರ್ ಜನರಿಗೇನು ಕೊಟ್ಟರು? ಎಂದು ಕುಚೋದ್ಯದಿಂದ ಕೇಳುತ್ತಿರುವಾಗಲೇ ಅಸಂಖ್ಯಾತ ಜನರು ಅವರ ಕೊಡುಗೆಯನ್ನು ಅನೇಕ ವಿಧದಲ್ಲಿ ನೆನೆಯುತ್ತಾರೆ.

ಡಾ. ರಾಜಕುಮಾರ್ ಅವರು ಹೆಚ್ಚು ಓದದೆ ವಿನಯವನ್ನೇ ವಿದ್ವತ್ತಾಗಿಸಿದರು; ಹಣಕ್ಕೆ ಅಂಟಿಕೊಳ್ಳದೆ ಶ್ರೀಮಂತರಾದರು; ಜಾತಿಯನ್ನು ಮೀರಿದ ಸಾಮಾಜಿಕ ರೂಪಕವೂ ಆದರು. ಇವರ ವಿನಯವಂತಿಕೆಯು ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಬದುಕಿನ ಭಾಗವಾಗಿರುವುದನ್ನು ಮೆಚ್ಚಲೇಬೇಕು. ತಂದೆಯ ಕೆಲವು ಗುಣಗಳನ್ನು ಅಳವಡಿಸಿಕೊಂಡ ಈ ಮೂವರು ಮಕ್ಕಳು ತಮ್ಮ ಚಲನಚಿತ್ರಗಳ ಕಥಾವಸ್ತುಗಳ ಆಯ್ಕೆಯಲ್ಲೂ ತಂದೆಯ ಆದರ್ಶವನ್ನು ಪಾಲಿಸಬೇಕೆಂಬುದು ಜನರ ಆಶಯವಾಗಿದೆ. ಈ ಆಶಯವು ಆತಂಕಕ್ಕೊಳಗಾಗಿದೆ ಎಂಬ ವಿಷಾದ ನನ್ನದಾಗಿದೆ. ಆದರೂ ನನ್ನಂಥವರ ವಿಷಾದ ಅರ್ಥವಾದೀತೆಂಬ ಆಶಾವಾದ ಇನ್ನೂ ಉಳಿದಿದೆ. ಯಾಕೆಂದರೆ ರಾಜಕುಮಾರ್ ಅವರ ಸಾಂಸ್ಕೃತಿಕ ವಿವೇಕಕ್ಕೆ ಸಾವಿಲ್ಲ.

ರಾಜ್ ಹುಟ್ಟು ಹಬ್ಬದ ಶುಭಾಶಯಗಳು

ಒಣಜಂಬ ಮೈಗೆ ಒಳ್ಳೆದಲ್ಲ !

ನಮ್ ಸುತ್ತ ಮುತ್ತಲಿನ ಜನರು ಎಷ್ಟೊಂದು ವಿಚಿತ್ರವಾಗಿ ವರ್ತಿಸುತ್ತಾರೆಂದರೆ, ತಮನ್ನು ತಾವು ಏನೋ ಅಂದ್ಕೊಂಡುಬಿಟ್ಟಿರ್ತಾರೆ. ಅವರಿಗಿಂತ ಮೊದಲು ನಾವೇ ಗೌರವಪೂರ್ವಕವಾಗಿ ಒಂದು ನಮಸ್ಕಾರ ಅಥವಾ ಹಾಯ್ ಹೇಳಿದೆವೋ ಕಥೆ ಮುಗಿತು. ಅದುವರೆಗೂ ಗೋಚರಿಸದೇ ಇದ್ದ ಕೋಡುಗಳು ಅವರ ತಲೆಮೇಲೆ ಕಾಣಿಸಿಕೊಂಡುಬಿಡುತ್ತವೆ. ಅವರದು ಜಂಗು ತಿಂದ ಜೀವನ ಅಂತ ನಮಗೆ ಗೊತ್ತಿದ್ದೂ…

ನನಗೆ ಆಗ ಅನಿಸೋದೆನೆಂದರೆ ಇಂಥವರ ಮಧ್ಯೆ ಅತಿಯಾದ ಒಳ್ಳೆಯತನದಿಂದ ವರ್ತಿಸುವುದೇ ಒಳ್ಳೆಯದಲ್ಲ. ಇಂಥವರು ನಮ್ಮ ಒಳ್ಳೆಯತನವನ್ನೇ ತಮ್ಮ ದೊಡ್ಡಸ್ತಿಕೆಯನ್ನು ಜಗತ್ತಿನೆದುರು ತೋರಿಸಿಕೊಳ್ಳಲು ದುರುಪಯೋಗಪಡಿಸಿಕೊಳ್ತಾರೆ.

ಮೊನ್ನೆ ಮಾನವಿಗೆ ಹೋಗಿದ್ದೆ, ಒಬ್ನು ಪರಿಚಯದವನು ಭೇಟಿಯಾದ. ಅವನು ಕಟ್ಟೆಯಮೇಲೆ ಕುಳಿತು ಯಾವದೋ ಚಿಂತೆಯಲ್ಲಿ ಮುಳುಗಿರುವದನ್ನು ಗಮನಿಸಿದೆ. ಬಹಳ ದಿನಗಳಾದ್ವು ಅವನನ್ನು ಮಾತಾಡಿಸೋಣ, ಅವನ ಜೀವನ ಬಾಲ್ಯಕ್ಕೂ, ಈಗಿನ ಜೀವನಕ್ಕೂ ಏನು ಬದಲಾವಣೆ ಆಗಿದೆ ಅನ್ನೋದರ ಕುರಿತು ಒಂದೆರಡು ಮಾತು ಹಂಚಿಕೊಳ್ಳೋಣ‌ವೆಂದು ಅವನನ್ನು ಭೇಟಿ ಮಾಡಿ ಮಾತಾಡಿಸಲು ಹೊರಟೆ

ಅದುವರೆಗೆ ನೂರಾರು ಜನಗಳ ಮಧ್ಯೆದಲ್ಲಿ ಒಂಟಿಯಾಗಿ ನರಪೇತಲನಂತೆ ಕುಳಿತಿದ್ದವನು. ನಾನು ಬರುತ್ತಿರುವುದನ್ನು ನೋಡುತ್ತಿದ್ದಂತೆ, ನನ್ನನ್ನು ನೋಡಿ ಒಂದು ಮುಗುಳ್ನಗೆ ತೋರಿಸದೆ, ನಾನು ಅವನತ್ತ ಬರುತ್ತಿರುವುದನ್ನು ಗಮನಿಸಿಯೇ ಕಾಲ್ಮೇಲೆ ಕಾಲು ಹಾಕಿ ಕುಳಿತು, ಪಾದ ಅಲ್ಲಾಡಿಸುತ್ತಾ, ಎಡಕ್ಕೆ ಬಲಕ್ಕೆ ಜನಗಳನ್ನು ವಿಚಿತ್ರವಾಗಿ ನೋಡುತ್ತಾ (ಜನ ತನ್ನನ್ನು ಯಾರಾದರೂ ಗಮನಿಸುತ್ತಿದ್ದಾರಾ ಎನ್ನುವಂತೆ ) ತನ್ನ ಪಾದಗಳನ್ನು ನಾಜೂಕಾಗಿ ಸವರಿ ಬಡೆದುಕೊಳ್ಳುತ್ತಾ ನನ್ನನ್ನು ನೋಡಿ ಕಣ್ಣುಗುಡ್ಡೆ ಮೇಲೇರಿಸಿ ಗಾಂಭಿರ‌್ಯವಾಗಿ ನಕ್ಕ, ಅದಕ್ಕೆ ಪ್ರತ್ಯಸ್ತ್ರವಾಗಿ ನಾನು ಮುಗುಳ್ನಕ್ಕೆ.

ನಾನೂ ಇದನ್ನೆಲ್ಲ ಗಮನಿಸಿಯೂ ಗಮನಿಸದಂತೆ ಇದ್ದೆ. ಏಕೆಂದರೆ ಒಣಪ್ರತಿಷ್ಠೆ ಬಡಿವಾರ ಬೋಳೆತನ ತೋರಿಸಿಕೊಳ್ಳುವ ಇಂಥ ಜನರನ್ನು ನೋಡುತ್ತಿರುವುದರಲ್ಲಿ ಇವನು ಮೊದಲನೇಯವನೇನಲ್ಲ, ಕೊನೆಯವನೂ ಅಲ್ಲ.

ಚಿಂತೆಗೆ ಚಿಂದಿಯಾಗಿದ್ದ ಅವನ ತಲೆಗೂದಲು, ಬಡಕಲು ದೇಹ, ಕೈಯಲ್ಲೊಂದು ಚೀಲ ಅದರಲ್ಲೊಂದಿಷ್ಟು ಕಾಗದಗಳು. ಅವನು ಯಾವದೋ ಕೆಲಸಕ್ಕಾಗಿ ಬಿಸಿಲಲ್ಲಿ ಸರಕಾರಿ ಕಾರ್ಯಲಯಗಳಿಗೆ ಅಂಡಲೆದಾಡಿರಬೇಕು ಎನ್ನುವುದು, ಅಂಗಿಯಮೇಲೆ ಅಲ್ಲಲ್ಲಿ ನಿರ್ಮಾಣವಾಗಿದ್ದ ಬೆವರುಪ್ಪಿನ ರೇಖಾಚಿತ್ರಗಳು, ಜಿಡ್ಡು ಜಿಡ್ಡಾದ ದೇಹ ಬೆವರಿನ ಕಮಟು ವಾಸನೆ ಅವನ ಬಳಿ ಕುಳಿತಾಗ ಅನುಭಕ್ಕೆ ಬಂತು.

ಆತ್ಮಿಯರಾದವರ ಜತೆ ಮಾತಿಗಿಳಿದಾಗ, ಸರ್ ರೀ ಅಂತ ನಾನು ಬಳಸೋದು ಕಡಿಮೆ. “ಲೇ” ಮಾಮ, ಅಣ್ಣ, ತಮ್ಮ ಪದಗಳೇ ಜಾಸ್ತಿಯಾಗುತ್ತವೆ. ಇದಕ್ಕೆ ನಮ್ ರಾಯಚೂರು ಮಾತಿನ ಸಂಸ್ಕೃತಿಯೂ ಕಾರಣವಿರಬಹುದು. ಬೆಂಗಳೂರಿಗೆ ಕಾಲಿಟ್ಟರೆ, ಹುಟ್ಟು ಬೆಂಗಳೂರಿಗನತರ ಧಿಮಾಕಿನಿಂದ ಮಾತಾಡುವ ನಾನು, ರಾಯಚೂರಿಗೆ ಕಾಲಿಡುತ್ತಿದ್ದಂತೆ ಯಬಡತೊಬಡ ಮಾತು ಶುರುಮಾಡುತ್ತೇನೆ.

ಅವನನ್ನು ಮಾತಾಡಿಸಿದೆ- ‘ ಏನಲೇ ಹೆಂಗಿದ್ದಿ ? ಎಲ್ಲಿ ಕೆಲಸ ಮಾಡಕ್ಹತ್ತಿ ?

ನಾನು ನಿಂತಿದ್ರೂ ಸೌಜನ್ಯಕ್ಕೂ ಅವನು ಕುಂತ್ಕೊ ಅನ್ನದೇ, ತಾನೂ ನನ್ನ ಜತೆ ನಿಲ್ಲದೇ, ಕಾಲ್ಮೇಲೆ ಕಾಲು ಹಾಕಿ ಹಾಗೇ ಕುಳಿತುಕೊಂಡಿದ್ದ

– ” ಹಾ, ನಾನಾ, ರಾಜನ ಥರಾ ಐದೀನಲೇ ಹ್ಹ ಹ್ಹ ಹ್ಹ., ಎಲ್ಲೇಲ್ಲೋ ಮಲಕೊಂಡು, ಯಾರ‌್ಯಾರ್ ಮಾಡಿದ್ದೋ ಫುಟ್ಪಾತ್ನಲ್ಲಿ ತಿನಕಂಡು ಯಾಕ್ ಸಾಯ್ತಿರಲೇ ಬೆಂಗಳೂರಿಗೆ ಹೋಗಿ, ಇಲ್ಲೇ ಮಾನವಿಯಲ್ಲಿ ಎಲ್ಲಾದರೂ ಫೈನಾನ್ಸ್ ಕಂಪನ್ಯಾಗ ಕೆಲಸ ಮಾಡಕೊಂಡು ಇರ‌್ರಲೇ” ಎಂದು ಪಕ್ದಲ್ಲಿದ್ದ ಜನರನ್ನು ನೋಡುತ್ತ ನಕ್ಕ‌. ಜನರು ಇವನ ಮಾತಿಗೆ ತಲೆಯಾಡಿಸಿ ನಕ್ಕಂತೆ ನಟಿಸಿದರು.

ಏನ್ಮಾಡೋದ್ ಲೇ, ನಮ್ಮ ಬಡತನ ಇಲ್ಲಿ ನಿನ್ಹಂಗ ಬದ್ಕೊಕೆ ಬಿಡ್ಬೇಕಲ್ಲ ? ಅಂದೆ.

‘ಹ್ಹ ಹ್ಹ ಹ್ಹ ಬಾಳ ಕಷ್ಟ ಅನಸ್ತದಲಾ ನಿನ್ನ ಜೀವ್ನಾ ?’

‘ ಕಷ್ಟ ಅಂತ ಕೇಳ್ತೆನ್ಲೇ ಮತ್ತೆ, ಭಾರಿ ಕಷ್ಟ”

ಹ್ಹ ಹ್ಹ ಹ್ಹ ಇರ್ಲಿ ಇರ್ಲಿ ಹಣೆಬರಹ ಯಾರು ಏನ್ಮಾಡಕಾಗಲ್ಲ ಯಾರ ಕರ್ಮ ಅವರು ಅನುಭವಿಸಬೇಕು ಅಂತ ಸಾದುಗಳಂತೆ ಬುದ್ಧಿ ಹೇಳಿದ. (ಬೆನ್ನು ಬಡಿದು ಧೈರ್ಯ ತುಂಬಿದ)

“ಪಕ್ದಲ್ಲಿ ಹೊಟೇಲ್ ಐತೆ ಟೀ ಕುಡಿದುಬರಾಣ ನಡಿ ಲೇ ಬಾಳದಿನಾಯ್ತು” ಅಂದೆ.

ಸರಿ, ಬಾ ಅಂತ ಅವನು ಎದ್ದ, ಹೊಟೇಲ್ ಒಳಗೆ ಹೋದ್ವಿ

ನಾಷ್ಟಾ ಏನಾದ್ರೂ ಮಾಡ್ತಿದಾ?

ಅದೆಲ್ಲ ಬೇಡ ಚಾ ಸಾಕು ಅಂದೆ

“ಏ ಬಸ್ವಾ ಇವನಿಗೊಂದು ಟೀ ತಂದ್ಕೊಡು, ನನಗೆ ಕಾಫಿ ಇರಲಿ. ಅಂದ.

ನಾವು ಅಲ್ಲಿ ಟೀ ಕುಡಿಯುತ್ತಾ ಕುಳಿತಿರುವಾಗ ಅಲ್ಲಿಗೆ ನನ್ನ ಫ್ರೆಂಡೊಬ್ನು ಬಂದ. ನಾನು ಬೆಂಗಳೂರಿಂದ ಮಾನವಿಗೆ ಬಂದಿದ್ದು, ಮತ್ತು ನಾನೀಗ ಹೊಟೇಲ್ನಲ್ಲಿದೀನಿ ಅನ್ನೋದು ಅವನಿಗೆ ಮೆಸೇಜ್ ಮಾಡಿ ತಿಳಿಸಿದ್ದೆ.

ಅವನು ಬಂದನಂತರ, ಅವನಿಗೂ ಒಂದು ಟೀ ತಂದು ಕೊಟ್ಟ ಹೊಟೇಲ್ ಮಾಣಿ.

ಅದು ಇದು ಮಾತಾಡ್ಕೊಂತ ಟೀ ಕುಡಿದು ಎದ್ವಿ.

ಕ್ಯಾಷಿಯರ್ ಹತ್ರ ಬಂದು ಪರ್ಸ್ ತೆಗೆದ ಅವನು, ನಾನು ಸುಮ್ನೆ ಅವನ್ಹಿಂದೆ ನಿಂತೆ. ನನ್ನ ಫ್ರೆಂಡ್ ಹೊರಗಡೆ ಹೋದ. ಇವನು ಪರ್ಸ್ನಲ್ಲಿ ತಡಕಾಡಿದ ಐವತ್ತು ರೂಪಾಯಿ ಇತ್ತು. ಮೂರು ಟೀ, ಫಿಲ್ಟರ್ ನೀರು ಸೇರಿ ಮೂವತ್ತೈದು ಬಿಲ್ಲು ಬಂದಿತ್ತು.

ಐವತ್ತುರೂಪಾಯಿ ತಗೆದುಕೊಂಡು ಹದಿನೈದು ರುಪಾಯಿ ವಾಪಸ್ಸು ಕೊಟ್ಟ ಹೊಟೇಲ್ನವ.

ಹದಿನೈದು ಜೇಬಲ್ಲಿ ಇಟ್ಕೊಂಡ ಇವ್ನು ಇದ್ದಕ್ಕಿದ್ದಂತೆ ಸೈಲಂಟ್ ಆಗಿಬಿಟ್ಟಿದ್ದ. ಅವನ ಜತೆ ನಿಂತಿರುವಾಗಲೇ ಮೀಟ್ ಆಗೋಕೆ ಬಂದಿದ್ದ ನನ್ನ ಫ್ರೆಂಡ್ ಜತೆ ಒಂದೆರಡು ನಿಮಿಷ ಮಾತಾಡ್ತ ನಿಂತೆ.

ನನ್ನ ಫ್ರೆಂಡ್ “ಗಾಡಿ ಮೇಲೆ ಕೂಡು ಶಾಪ್ ಗೆ ಹೋಗಿಬರಾಣ” ಅಂದ.
ನಾನು ಇವನಿಗೆ “ಟೀ ಕುಡಿಸಿ ನಾಲ್ಕು ಮಾತು ಹಂಚಿಕೊಂಡಿದ್ದಕ್ಕೆ ” ಥ್ಯಾಂಕ್ಸ್ ಲೆ ಮತ್ತೆ ಸಿಕ್ಕಾಗ ಮಾತಾಡಣ, ನೆಕ್ಷ್ಟ್ ಹೊಟೇಲ್ ಬಿಲ್ ನಂದೆ” ಅಂತ ನಕಲಿ ಮಾಡಿದೆ.ಅವನು ಮಾತಾಡಲಿಲ್ಲ.

ನನ್ ಫ್ರೆಂಡ್ ಗಾಡಿ ಚಾಲೂ ಮಾಡಿ ಕುಳ್ತಿದ್ದ, ನಾನು ಬೈಕ್ ಮೇಲೆ ಹತ್ತೋಕೆ ಮುಂದಾದೆ,

“ಲೇ ರವಿ ಸ್ವಲ್ಪ ನಿಂತ್ಕೊ” ಅಂದ ಹಿಂದಿನಿಂದ ಅವನು.

“ಯಾಕಲೇ ಏನು ? ಏನಾದರೂ ಹೇಳೋದಿತ್ತಾ ?

ಹ್ಮೂ,ಲೇ ಸ್ವಲ್ಪ ಈ ಕಡೆ ಬರ್ತಿಯಾ ?

ನಾನೂ ಹತ್ತಿದ್ದ ಬೈಕ್ ಇಳಿದೆ.

ಬೈಕ್ನಿಂದ ಮೂರುಮೀಟರ್ನಷ್ಟು ದೂರ ಬಂದು

” ಲೇ ರವಿ ತಪ್ಪುತಿಳ್ಕೊಬೇಡ ಹಿಂಗ್ ಕೇಳ್ತಿನಿ ಅಂತ” ಅಂದ ಅವ್ನು.

“ನಾನೇನೂ ತಪ್ತಿಳ್ಕೊಳ್ಳಲ್ಲ ಕೇಳು ”

“ಏನಿಲ್ಲ,ಲೇ ನಿನ್ನೇ ಒಂದು ಸಾವಿರರೂಪಾಯಿ ಇದ್ವು ಖರ್ಚು ಮಾಡೋಕೆ ಒಬ್ನು ಸಿಗಲಿಲ್ಲ. ಇವತ್ತು ಎಲ್ಲ ದುಡ್ಡು ಮನೇಲಿಟ್ಟು, ನೂರು ರೂಪಾಯಿ ಸಾಕು ಅಂತ ಇಟ್ಕೊಂಡು ಬಂದಿದ್ದೆ ಇವತ್ತೇ ನೀನು ಭೆಟ್ಟಿ ಆಗಿದಿ ನೋಡು. ನೂರು ರುಪಾಯಿದಲ್ಲಿ ಐವತ್ತು ಖರ್ಚು ಮಾಡಿ ಐವತ್ತು ರೂಪಾಯಿ ಉಳಿದಿದ್ವು ಅದು ಹೊಟೇಲ್ ಬಿಲ್ಲಿಗೆ ಹೋಯ್ತು ನಂದು ಬಸ್ ಪಾಸ್ ಇಲ್ಲ. ಈಗ ಬಸ್ ಟಿಕೆಟ್ ಗೆ ಕಡಿಮೆ ಆಗ್ಯಾದ ಇಪ್ಪತ್ತು ರೂಪಾಯಿ ಕೊಡು, ನಾಳೆ ವಾಪಸ್ಸು ಕೊಡ್ತಿನಿ” ಅಂದ

” ಅವನ ಸಮಸ್ಯೆ ನನಗೆ ಗೊತ್ತಾಯಿತು”

ಮೊದಲೇ ಹೇಳಿದ್ರೆ ನಾನು ಬಿಲ್ ಕೊಡ್ತದ್ದೆ ಇಲ್ದಿದ್ರೆ ಸಾಕಷ್ಟು ರೊಕ್ಕ ಗಳಿಸಿ, ಬೈಕ್ ಮೇಲೆ ಲಡಾಯಿ ಮಾಡ್ಕೊಂಡಿರೋ ನನ್ ಫ್ರೆಂಡ್ಗಾದರೂ ಟೋಪಿ ಹಾಕ್ತಿದ್ವಿ. ಸರಿ ಅಂತ ಪರ್ಸ್ ತೆಗೆದೆ, ಇಪ್ಪತ್ತು ರೂಪಾಯಿ ಚೆಂಜ್ ಇರಲಿಲ್ಲ. ಐವತ್ತು ರೂಪಾಯಿ ನೋಟು ಕೊಟ್ಟೆ

“ಹೇ ಐವತ್ತು ಬೇಡ ಇಪ್ಪತ್ತು ರುಪಾಯಿ ಸಾಕು” ಅಂದ ಅವನು.

ಇರಲಿ ಚೇಂಜ್ ಇಲ್ಲ. ಇಟ್ಕೊ ನಾಳೆ ಭೇಟಿ ಆದರೆ ವಾಪಸ್ಸು ಕೊಡುವಂತಿ ಅಂತ ಐವತ್ತು ಕೊಟ್ಟು ಬೈಕ್ ಕಡೆ ನಡೆದೆ.

ಕೊನೆಗೆ ಅವನು “ರವಿ ನನಗೆ ಐವತ್ತು ರುಪಾಯಿ ಕೊಟ್ಟಿದ್ದು ನಿಮ್ ಫ್ರೆಂಡ್ ಗೆ ಹೇಳಬ್ಯಾಡ” ಅಂದ. “ಸರಿ ಹೇಳಲ್ಲ” ಅಂತ ಬೈಕ್ ಹತ್ತಿ ಹೊರಟೇ

ಮುಂಜಾನೆ ಅಚಾನಕ್ಕಾಗಿ ಕಣ್ಣಿಗೆ ಬಿದ್ದ ಅವನು. ನಾನು ಐವತ್ತು ರೂಪಾಯಿಯಲ್ಲಿ ಉಳಿದ ದುಡ್ಡು ಕೇಳ್ತಿನೇನೋ ಅಂದ್ಕೊಂಡು ಅವನು ಯಾವದೋ ಅವಸರದ ಕೆಲಸದಲ್ಲಿರುವಂತೆ ನಟನೆ ಮಾಡಿ ಮಾತಾಡದೇ ಹೊರಟೇ ಬಿಟ್ಟ.

ಬೈರಪ್ಪನವರು ಯಾಕೆ ಇಷ್ಟವಾಗುತ್ತಾರೆ ಅಂದ್ರೆ..

ಬೈರಪ್ಪನವರ ಕುರಿತು ಮತ್ತು ಅವರಿಗೆ ಸಂಬಂಧಿಸಿದ ಕೆಲವು ಘಟನೆಗಳ ಬಗ್ಗೆ ಮಾಹಿತಿ ಹುಡುಕಾಡುತ್ತಿದ್ದಾಗ, ೬೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗಿನ ಒಂದು ಘಟನೆ ಕಣ್ಣಿಗೆ ಬಿತ್ತು. ಅಂದು…

1999ರಲ್ಲಿ ಕನಕಪುರದಲ್ಲಿ 67ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಅದರ ಅಧ್ಯಕ್ಷರಾಗಿದ್ದವರು ಡಾ.ಎಸ್.ಎಲ್. ಭೈರಪ್ಪ. ಆ ಸಮ್ಮೇಳನದ ಆಗುಹೋಗುಗಳ ಕುರಿತಾಗಿ ಹಾ.ಮಾ. ನಾಯಕರು, ‘ಮರೆಯಲಾಗದ ಸಮ್ಮೇಳನ’ ಎಂಬ ಶೀರ್ಷಿಕೆಯಡಿ ಲೇಖನವೊಂದನ್ನು ಬರೆದಿದ್ದರು. ಅದರ ಆಯ್ದ ಭಾಗ ಇಲ್ಲಿದೆ: ಸಮ್ಮೇಳನಾಧ್ಯಕ್ಷ ಡಾ.ಭೈರಪ್ಪನವರು ತಮ್ಮ ಅಧ್ಯಕ್ಷ ಭಾಷಣವನ್ನು ಓದಲು ಎಪ್ಪತ್ತೈದು ನಿಮಿಷಗಳನ್ನು ತೆಗೆದುಕೊಂಡರು. ಒಂದು ಅಕ್ಷರವನ್ನೂ ಬಿಡದೆ ಓದಿದರು.
ಕಳೆದ ಅನೇಕ ವರ್ಷಗಳಲ್ಲಿ ಇಷ್ಟು ಶುದ್ಧವಾದ ಸಾಹಿತ್ಯಕ ಭಾಷಣ ಮಾಡಿದವರು ಭೈರಪ್ಪನವರೊಬ್ಬರೆ. ಅವರ ಸುದೀರ್ಘ ಭಾಷಣವನ್ನು ಬಿರುಬಿಸಿಲಿನಲ್ಲಿಯೂ ಐವತ್ತು ಸಾವಿರಕ್ಕೂ ಹೆಚ್ಚು ಜನ ತಾಳ್ಮೆಯಿಂದ ಕೇಳಿದರು. ಊಟದ ಹೊತ್ತಾಗಿದ್ದರೂ ಹೋಗುವವರು ಹೋಗುತ್ತಿದ್ದರು. ಬರುವವರು ಬರುತ್ತಿದ್ದರು. ಇಡೀ ಸಭಾಭವನ ನಿಶ್ಯಬ್ದವಾಗಿತ್ತು. ಭೈರಪ್ಪನವರ ಭಾಷಣದಲ್ಲಿ ಪ್ರಸ್ತಾಪಿತವಾಗಿದ್ದ ಅವರ ವೈಯಕ್ತಿಕ ದೃಷ್ಟಿಕೋನವನ್ನೂ ಜನರು ಹಾಗೆಯೇ ಸ್ವಾಗತಿಸಿದರು. ಸಾಹಿತ್ಯಪ್ರಕಾರಗಳು ಬೆಳೆದು ಬಂದ ಬಗೆಯನ್ನು ಭೈರಪ್ಪನವರು ಸ್ವಾರಸ್ಯವಾಗಿ ನಿರೂಪಿಸಿದರು. ಆದರೆ ಅವು ಭೈರಪ್ಪನವರ ವಿಚಾರಗಳಾದುದರಿಂದ ಅವುಗಳನ್ನು ವಿರೋಧಿಸುವುದೇ ಕೆಲವರ ಕೆಲಸವಾಗಿತ್ತು. ಅವರ ಭಾಷಣದಿಂದ ಅತೃಪ್ತಗೊಂಡವರ ಪ್ರತಿನಿಧಿಯಾಗಿ ಚಂದ್ರಶೇಖರ ಪಾಟೀಲರು, ಸಮೂಹಮಾಧ್ಯಮಗಳ ಗೋಷ್ಠಿಯ ಅಧ್ಯಕ್ಷರಾಗಿ ಭೈರಪ್ಪನವರನ್ನು ತುಂಬ ಗಾಂಭೀರ್ಯದಿಂದ ಮತ್ತು ಅಷ್ಟೇ ಉಗ್ರವಾಗಿ ಟೀಕಿಸಿದರು.
ಭೈರಪ್ಪನವರು ತಮ್ಮ ಸಮಾರೋಪ ಸಮಾರಂಭದ ಭಾಷಣದಲ್ಲಿ ತಮಗೆ ಉತ್ತರ ಕೊಡಬೇಕೆಂದು ಆಶಿಸಿದರು. ಹಾಗೆಯೇ ಅದನ್ನು ಪಡೆದೂಬಿಟ್ಟರು! ಕ್ರಾಂತಿಕಾರಿ ಸಾಹಿತಿಯೊಬ್ಬರು ಭೈರಪ್ಪನವರನ್ನು ಅವರ ಭಾಷಣದ ನಂತರ ಹೃತ್ಪೂರ್ವಕವಾಗಿ ಅಭಿನಂದಿಸಿದರು. ಸ್ವಾರಸ್ಯವೆಂದರೆ ಮರುದಿನ ಅಧ್ಯಕ್ಷರ ಭಾಷಣದ ಪ್ರತಿಗಳನ್ನು ಸುಡುವುದಕ್ಕೂ ಅವರೇ ಕಡ್ಡಿ ಗೀಚಿ ಕೊಟ್ಟರು! ನಮ್ಮ ಲೇಖಕರ ದ್ವಂದ್ವ ಪ್ರವೃತ್ತಿಗೆ ಬೇರೆ ಉದಾಹರಣೆ ಬೇಡವಲ್ಲವೆ? ಅಧ್ಯಕ್ಷ ಭಾಷಣದ ನಂತರ ಅಧ್ಯಕ್ಷರಿಗೆ ಒಂದು ಲಕ್ಷ ರೂಪಾಯಿ ಹಮ್ಮಿಣಿಯನ್ನು ಸ್ವಾಗತ ಸಮಿತಿ ಅಧ್ಯಕ್ಷರು ಅರ್ಪಿಸಿದರು. ಸಮ್ಮೇಳನದ ಅಧ್ಯಕ್ಷರು ಒಂದು ಕ್ಷಣವೂ ಯೋಚಿಸದೆ ಆ ಹಣವನ್ನು ಪರಿಷತ್ತಿನ ಅಮೃತನಿಧಿಗೆ ಒಪ್ಪಿಸಿದರು! ಈ ಸಂಪ್ರದಾಯ ಸರಿಯಾದುದಲ್ಲವೆಂದು ಹೇಳಿದರು. ಅಧ್ಯಕ್ಷರಿಗೆ ಹಲ್ಲಿದ್ದರೆ ಚಕ್ಕುಲಿ ಕೋಡುಬಳೆಗಳನ್ನೂ ಕೊಡಿ ಎಂಬ ಅವರ ಮಾತಿನಲ್ಲಿ ನವುರಾದ ಹಾಸ್ಯವಿತ್ತು! ಅವರು ವೇದಿಕೆಯಿಂದ ಇಳಿದು ಬರುವಾಗ ಸಾಮಾನ್ಯ ಅಕ್ಷರಸ್ಥೆಯಾದ ಮುದುಕಿಯೊಬ್ಬಳು ಅವರ ಬಳಿ ಬಂದು, ಎಂಥ ಧರ್ಮರಾಯನಪ್ಪ ನೀನು, ಈಗಿನ ಕಾಲದಲ್ಲಿ ಒಂದು ಲಕ್ಷ ರುಪಾಯಿಯನ್ನು ಹೀಗೆ ಬೇಡವೆನ್ನುವವರು ಯಾರಿದ್ದಾರೆ ಎಂದು ಕೈಮುಗಿದಳು. ಅದನ್ನು ಕಂಡವರಿಗೆಲ್ಲ ಕಣ್ಣು ತೇವಗೊಂಡವು!’
ಇವಿಷ್ಟೂ ಹಾ.ಮಾ. ನಾಯಕರ ಮಾತು. ಆವತ್ತಿನ ಸಂಜೆ ನಾಲ್ಕರಿಂದ ಐದೂವರೆಯವರೆಗೆ ಭೈರಪ್ಪನವರು ಮಾಡಿದ ಭಾಷಣವನ್ನು ಕೇಳಿ ಅವರನ್ನು ಅಭಿನಂದಿಸಿದ ಕೆಲ ಲೇಖಕರು ಮರುಬೆಳಗ್ಗೆ ಸಮ್ಮೇಳನದ ಪೆಂಡಾಲಿನ ಮುಂಬದಿಗೆ ಪತ್ರಕರ್ತರನ್ನು ಕರೆದಿದ್ದಾರೆ. ಅವರ ಕ್ಯಾಮರಾಗಳ ಎದುರಿಗೆ ಅಧ್ಯಕ್ಷ ಭಾಷಣದ ಮುದ್ರಿತ ಪ್ರತಿಗಳನ್ನು ಸುಟ್ಟು ತಮ್ಮ ಧಿಕ್ಕಾರವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಖಂಡಿಸಿ ನಿಮ್ಮ ಹೇಳಿಕೆ ಕೊಡಿ ಎಂದು ಉಳಿದವರು ಸೂಚಿಸಿದರೂ ಅದಕ್ಕೊಪ್ಪದ ಅಧ್ಯಕ್ಷರು ತಮ್ಮ ಸಮಾರೋಪ ಭಾಷಣದಲ್ಲಿ, ‘ನನ್ನ ಅಭಿಪ್ರಾಯವನ್ನು ನಾನು ಭಾಷೆಯ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದೇನೆ. ಅದನ್ನು ಒಪ್ಪದ ಕೆಲವರು ತಮ್ಮ ಅಭಿಪ್ರಾಯವನ್ನು ಬೆಂಕಿಯ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ. ಅವರವರ ಮಾಧ್ಯಮ ಅವರವರದು’ ಎಂದಷ್ಟೇ ಹೇಳಿ ಮುಗಿಸಿದ್ದಾರೆ.
ಭೈರಪ್ಪನವರ ಮಾಧ್ಯಮ ಆವತ್ತೂ ಭಾಷೆಯಾಗೇ ಇತ್ತು, ಇವತ್ತೂ ಭಾಷೆಯಾಗೇ ಉಳಿದಿದೆ. ಬೆಂಕಿಯ ಮಾಧ್ಯಮವನ್ನು ಆಯ್ದುಕೊಂಡವರು ಆವತ್ತು ಸುಡುವುದನ್ನು ಅಭ್ಯಾಸಮಾಡಿಕೊಂಡರಲ್ಲ, ಇವತ್ತಿಗೂ ಅದನ್ನೇ ರೂಢಿಯಲ್ಲಿರಿಸಿಕೊಂಡಿದ್ದಾರೆ! ಅಧ್ಯಕ್ಷರಿಗೆ ಹಮ್ಮಿಣಿಯನ್ನು ಕೊಡುವುದು ಸಾಹಿತಿಗಳನ್ನು ಸರಕಾರದ ಹಂಗಿನಲ್ಲಿ ಕೆಡವುತ್ತದೆ ಎಂದು ಭೈರಪ್ಪನವರು ಹೇಳಿದ್ದೂ ಯಾರಿಗೂ ಪಥ್ಯವಾಗಿಲ್ಲ. ಆಗ ಒಂದು ಲಕ್ಷವಿದ್ದ ಹಮ್ಮಿಣಿಯ ಮೊತ್ತ ಈಗ ಹಲವಾರು ಲಕ್ಷಗಳಿಗೆ ಏರಿದೆ. ಅಷ್ಟೇ ಏಕೆ, ಕೆಲ ವರ್ಷಗಳ ಹಿಂದೆ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದಾಕೆಗೆ ಸಂದಾಯವಾದ 11 ಲಕ್ಷ ಮೊತ್ತದ ಹಣ ‘ಗಣಿ’ಯ ತಳದಿಂದ ಬಗೆದುಕೊಟ್ಟದ್ದು ಎಂಬುದೂ ದೊಡ್ಡ ಸುದ್ದಿಯಾಗಿ ಹರಿದಾಡಿತ್ತು. ಒಟ್ಟಿನಲ್ಲಿ, ಈ ಸಾಹಿತಿಗಳಿಗೆ ಸರಕಾರದೊಂದಿಗೆ ಒಪ್ಪಂದ ಬೇಕು. ಕೂರಲು ಆಯಕಟ್ಟಿನ ಸ್ಥಾನಗಳು ಬೇಕು. ಭ್ರಷ್ಟ್ರರ ದುಡ್ಡನ್ನೇ ಆದರೂ ಸರಿ, ಇವರು ಯಾವ ಮುಜುಗರವೂ ಇಲ್ಲದೆ ಇಸಿದುಕೊಳ್ಳುತ್ತಾರೆ. ಸಮ್ಮೇಳನಗಳ ಸಾರಥ್ಯವಹಿಸಿಕೊಳ್ಳುವುದಂತೂ ಇವರಿಗೆಲ್ಲ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆ.