ಬಾಳ ಸಂಗಾತಿಯೊಂದಿಗೆ ಈ ಗುಟ್ಟು ಹಂಚಿಕೊಳ್ಳಲೇಬೇಡಿ!

ಅನ್ನಾಳ ಚಿತ್ರ

ಇತ್ತೀಚಿಗೆ ಹೊಸದೊಂದು ಟ್ರೆಂಡ್ ಶುರುವಾಗಿದೆ. ಹಿಂದೆ ಹೀಗೆ ಇರಲಿಲ್ಲ. ಮದುವೆಯಾಗ್ತಿದ್ದಂತ ಹಿಂದಿನ ಎಲ್ಲ ಘಟನೆಗಳು ಮನದಲ್ಲೆ ಮಣ್ಣು ಮಾಡಿ ಸಸಿ ನೆಟ್ಟಿರುತ್ತಿದ್ದರು. ಮುಂದಿನ ದಾಂಪತ್ಯ ಜೀವನ ಹಾಳಾಗದಿರಲೆಂಬ ಕಾರಣಕ್ಕೆ ಹಿಂದಿನ ಯಾವುದೇ ಖಾಸಗಿ ಘಟನೆಯನ್ನು ಮದುವೆಯಾದವರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಮದುವೆ ಆಗುವ ಜೋಡಿಗಳು ಯೋಚಿಸುವ ರೀತಿಯೇ ಬದಲಾಗಿಬಿಟ್ಟಿದೆ. ಹಿಂದಿನಂತೆ ಯಾವ ಮುಚ್ಚುಮರೆಯಿಲ್ಲದೆ ಮದುವೆಯ ರಾತ್ರಿಯೇ ಹಂಚಿಕೊಳ್ಳಲಾಗುತ್ತಿದೆ. ಒಬ್ಬರಿಗೊಬ್ಬರು ಅರ್ಥೈಸಿಕೊಳ್ಲಿಕ್ಕೆ ನಂಬಿಕೆ ಹೆಚ್ಚಾಗಲಿಕ್ಕೆ ಅಂತಾನೋ ಏನೋ ತಿಳಿದಿಲ್ಲ; ಆದರೆ ಮದುವೆಗೆ ಮುಂಚೆ ತಮ್ಮ ವೈಯಕ್ತಿಕ ಘಟನೆಗಳನ್ನ ಲೈಫ್ ಪಾರ್ಟನರ್ ಬಳಿ ಹಂಚಿಕೊಳ್ಳೋದು ಇಂದು ಹೆಚ್ಚಾಗುತ್ತಿದೆ.

ಇತ್ತೀಚೆಗೆ ಒಂದು ವರದಿ ನೋಡಿದೆ. ಹೊಸದಾಗಿ ಮದುವೆಯಾದ ಜೋಡಿ ಪ್ರಥಮ ರಾತ್ರಿಯಂದು ಇಂಥದ್ದೇ ವಿಷಯ ಮಾತಾಡಲು ಕುಳಿತರಂತೆ. ಗಂಡನಾದವನು ಮದುವೆಗೆ ಮುಂಚಿನ ಜೀವನದಲ್ಲಿ ತಾನು ಮಾಡಿದ ಎಲ್ಲ ಕೃತ್ಯಗಳನ್ನ ಹಂಚಿಕೊಂಡನಂತೆ. ಇವನ ಬಗ್ಗೆ ಕೇಳಿ ಅವಳಿಗೆ ಆಘಾತವಾದರೂ ಕ್ಷಮಿಸಿದಳಂತೆ. ಆದರೆ ಇವನಿಗೆ “ಅದೆಲ್ಲ ಯಾಕೆ ಹೇಳಿದೆನೋ ಅಂತ ಚಡಪಡಿಸಲು ಶುರುಮಾಡಿದ್ದಾನೆ. ಅವನ ಚಡಪಡಿಕೆ ವಿಪರೀತವಾಗಿ ಅಪರಾಧಿ ಭಾವನೆಯಲ್ಲಿ ನರಳಿ ನರಳಿ ಕೊನೆಗೊಂದು ದಿನ ಒಳ್ಳೆ ಹೆಂಡತಿಗೆ ಮೋಸ ಮಾಡಿದೆನೆಂದು ಮಾನಸಿಕ ಖಿನ್ನತೆಗೊಳಗಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡನಂತೆ! ಮದುವೆ ನಡೆದ ತಿಂಗಳಲ್ಲೇ! ಪಾಪ ಆ ಹೆಣ್ಣಿನ ಪಾಡೇನು? ಮುಂದಿನ ಬದುಕು ಹೇಗೆ?! ಆಹಾ! ನಾನು ಹೇಳೋದಿಷ್ಟೇ; ಮನಸಿಗೆ ಘಾಸಿಯಾಗುವಂತ ವಿಷಯಗಳನ್ನ ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಮದುವೆಯಾಗುವವರೊಂದಿಗೆ ಆದಷ್ಟು ನಿಯತ್ತಿನಿಂದಿರಿ

ಇಲ್ಲಿ ಘಾಸಿಗೊಳಿಸುವ ವಿಷಯಗಳೆಂದರೆ, ಒಂದು ಘಟನೆ ಹೇಳ್ತಿನಿ ಕೇಳಿ ವಾರ್ ಅಂಡ್ ಪೀಸ್ ಬರೆದ ಜನಪ್ರಿಯ ಲೇಖಕ : ಲಿಯೋ ಟಾಲ್ ಸ್ಟಾಯ್ ಮದುವೆಗೆ ಮುನ್ನ ತನ್ನ ಹೆಂಡತಿ ಆನ್ನಾಳಿಗೆ ಮದುವೆಯಾದ ಹೊಸತರಲ್ಲಿ ಪ್ರೀತಿ ನಂಬಿಕೆ ಇನ್ನಷ್ಟು ಹೆಚ್ಚಾಗುತ್ತೆ ಅನ್ನೋ ಭ್ರಮೆಯಿಂದ ತನ್ನ ಡೈರಿ ಕೊಟ್ಟನಂತೆ. ಅದನ್ನ ಓದಿದ ಆನ್ನಾ ತನ್ನ ಆತ್ಮಚರಿತ್ರೆಯಲ್ಲಿ ಹೀಗೆ ಬರೆದುಕೊಂಡಿದ್ದಳು,

“ಪರಮಪಾಪಿಷ್ಟ ಲಿಯೋ ಟಾಲ್ ಸ್ಟಾಯ್ ತನ್ನ ನೀಚತನದಿಂದ ನೂರಾರು ಹೆಣ್ಣುಗಳ ಜೊತೆಗಿನ ಸಂಬಂಧ, ವ್ಯಭಿಚಾರ ಅತ್ಯಾಚಾರ ಅವನ ಅಂಟುಜಾಡ್ಯಗಳು, ಗುಣಪಡಿಸಲಾಗದ ರೋಗಗಳು ಇರುವ ಬಗ್ಗೆ ದಾಖಲಿಸಿರುವ ಅವನ ಡೈರಿ ಓದಿದಾಗಿನಿಂದ ಇಂಥವನನ್ನ ಮದುವೆಯಾಗಿದ್ದಕ್ಕೆ ಅವತ್ತು ರಾತ್ರಿಯೆಲ್ಲ ಅತ್ತಿದ್ದೇನೆ, ದಿನವೂ ಅತ್ತಿದ್ದೇನೆ, ನೆನೆದಾಗಲೆಲ್ಲ ಅತ್ತಿದ್ದೇನೆ ಜೀವನಪರ್ಯಂತ ಅಳುತ್ತೇನೆ” ಅಂತ ಬರೆದುಕೊಂಡಳಂತೆ.

ಸಂಕೋಚದ ಮುದ್ದೆ ನೀವು

ಯಾರದ್ದೋ ಮನೆಗೆ ಹೋಗಿರುತ್ತೀರ. ಊಟ ಮಾಡಿ ಅಂತಾರೆ. ಬೇಡ, ನಂದಾಯ್ತು ಅಂತ ಹೇಳುತ್ತೀರ. ಆದ್ರೆ ಹೊಟ್ಟೆ ಹಸಿದು ಚುರ್ ಎನಿಸುತ್ತಿರುತ್ತದೆ. ಹಾಗಿದ್ರೆ ಸುಳ್ಳು ಹೇಳಿದ್ದು ಏಕೆ? ಸಂಕೋಚದ ಮುದ್ದೆ ನೀವು. ಊಟ ಅಂತಲ್ಲ, ಪ್ರತಿಯೊಂದಕ್ಕೂ ವಿಪರೀತ ನಾಚಿಕೆ ಪಟ್ಟುಕೊಳ್ಳುತ್ತೀರ. ಆದ್ರೆ ಒಂದೊದ್ಸಲ ಇದೇ ಸ್ವಭಾವ ನಿಮ್ಮ ವ್ಯಕ್ತಿತ್ವಕ್ಕೆ ಮಾರಕವಾಗಬಹುದು. ವ್ಯಕ್ತಿತ್ವಕ್ಕೆ ಕುತ್ತು ಪಕ್ಕಾ ಲೆಕ್ಕಾಚಾರದ ಕಾಲ ಇದು. ಒಂದೊಳ್ಳೆ ಮಾತು, ಒಂಚೂರು ಬುದ್ಧಿವಂತಿಕೆ ಜತೆ ಎಂಥವರನ್ನೂ ಸೆಳೆಯುವ ಮಾತು ನಿಮ್ಮ ಜತೆ ಇದ್ದರೆ ಬದುಕು ಕಷ್ಟವಲ್ಲ. ಸಂಕೋಚ ಪಡುವವರಿಗೆ ಸ್ಥಾನ ಇಲ್ಲ ಅಂತಲ್ಲ. ಅಂಥವರೇ ಇವತ್ತು ದೊಡ್ಡ ಸ್ಥಾನದಲ್ಲಿರಬಹುದು. ಸಂಕೋಚವೂ ಬೇಕು. ಆದ್ರೆ ಬದುಕೇ ಆದಾಗಬಾರದು ಅಷ್ಟೆ. ಕೆಲವರಿಗೆ ಸಂಕೋಚ ಅನ್ನುವ ಸೂರಿನಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ. ನಾಲ್ಕು ಜನರ ಜತೆ ನಿಂತು ಮಾತನಾಡಲು ಹಿಂಜರಿಯುತ್ತಾರೆ. ಗೊತ್ತಿಲ್ಲದ ಹಾಗೆ ಆತ್ಮವಿಶ್ವಾಸವನ್ನೂ ಕಳೆದುಕೊಳ್ಳುತ್ತಾರೆ. ಇಷ್ಟೆಲ್ಲ ಆಗಿ ಯಾರಿಂದಲೋ ನಿರ್ಲಕ್ಷ್ಯಕ್ಕೆ ಒಳಗಾಗುವ ಬದಲು ನಿಮ್ಮ ವ್ಯಕ್ತಿತ್ವ ಬದಲಿಸಿಕೊಳ್ಳಿ. ಯಾರೇನು ಹೇಳಬೇಕಿಲ್ಲ ಸಂಕೋಚ ಅನ್ನುವುದು ಗೊತ್ತಿಲ್ಲದ ಸ್ವಭಾವವೇನಲ್ಲ. ಬೇರೆಯವರು ಗುರುತಿಸುವುದಕ್ಕಿಂತ ಮೊದಲು ನಿಮಗೆ ಗೊತ್ತಿರುತ್ತದೆ. ಎಷ್ಟೋ ಸಲ ಇದೇ ಸಂಕೋಚ ನಿಮಗೆ ಕಂಫರ್ಟ್‌ಬಲ್ ಆಗಿರಲು ಬಿಟ್ಟಿರುವುದಿಲ್ಲ. ನಿಮಗೂ ಅದರ ಮೇಲೊಂದು ಚಿಕ್ಕ ಕೋಪ ಇದೆ ಅಂತಾದ್ರೆ ಅದರಿಂದ ಹೊರ ಬರಲು ಯಾಕೆ ಇಷ್ಟಪಡುವುದಿಲ್ಲ? ಮೊದಲು ನೀವು ಸಂಕೋಚಪಡುವ ಸಂಗತಿ, ದೃಶ್ಯಗಳ ಬಗ್ಗೆ ಗಮನ ಹರಿಸಿ. ಅಂಥ ಸಂದರ್ಭ ಎದುರಾದಾಗೆಲ್ಲ ಅದನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸಿ. ಒಂದೆರಡು ಬಾರಿ ಹೀಗೆ ಮಾಡಿ. ನಿಮ್ಮಳೊಗಿನ ಸಂಕೋಚ ಹೊರಟು ಹೋಗುತ್ತದೆ. ಸುಧಾರಣೆ ಹೇಗೆ? ಎದುರಿಗೆ ನಿಂತವರ ಬಳಿ ಮಾತನಾಡುವಾಗ ಆತ್ಮವಿಶ್ವಾಸ ಇರಲಿ. ಇತರರೊಂದಿಗೆ ಸುಲಭವಾಗಿ ಬೆರೆಯುವುದನ್ನು ಕಲಿತುಕೊಳ್ಳಿ. ಇನ್ಯಾರದ್ದೋ ವ್ಯಕ್ತಿತ್ವ ಇಷ್ಟ ಆಗಲಿಲ್ಲ ಅಂತ ಮಾತನಾಡದೆ ಮುಖ ತಿರುಗಿಸಿಕೊಂಡು ಹೋಗಬೇಡಿ. ನೀವು ತೊಟ್ಟ ಬಟ್ಟೆ, ಮೇಕಪ್ ಅಥವಾ ಹೇರ್‌ಸ್ಟೈಲ್ ಬಗ್ಗೆ ಯಾರೇನು ಹೇಳುತ್ತಾರೆ ಅನ್ನುವ ಅಂಜಿಕೆ ಬೇಡ. ನೇರವಾಗಿ ನಿಂತುಕೊಳ್ಳಲು, ಕುಳಿತುಕೊಳ್ಳಲು, ದೃಢವಾಗಿ ನಡೆಯಲು ಯಾರ ಅಪ್ಪಣೆಯೂ ಬೇಕಿಲ್ಲ. ನಿಮ್ಮ ಶಕ್ತಿ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಅದನ್ನೇ ಇನ್ನಷ್ಟು ಬಲಪಡಿಸಿಕೊಳ್ಳಿ. ಆತ್ಮವಿಶ್ವಾಸ ತಾನಾಗಿಯೇ ನಿಮ್ಮ ಜತೆಯಾಗುತ್ತದೆ.ಏನಂತೀರಾ ?