ಬಣ್ಣದ ಪೆಟ್ಟಿಗೆಯೊಳಗೆ ಅಪರಾಧಗಳ ತರಬೇತಿ!

ಖಾಸಗಿ ಟಿವಿ ಚಾನೆಲ್‌ಗಳನ್ನ ಗಮನಿಸಿ. ಈ ದೇಶದ ಪ್ರತಿ ಮನೆಯನ್ನು, ಮನಸನ್ನು ಸೂರೆಹೊಡೆದ ದೃಶ್ಯ ಮಾಧ್ಯಮ ಇದು. ಇದಕ್ಕೆ ಜನರನ್ನು ಮರಳುಮಾಡುವ ವಿಶಿಷ್ಟ ಶಕ್ತಿ ಇದೆ. ಸುಳ್ಳನ್ನು ಕೂಡ ಸತ್ಯವೆಂಬಂತೆ ನಂಬಿಸುವ ತಾಕತ್ತಿದೆ. ಈ ಖಾಸಗಿ ಚಾನೆಲ್‌ಗಳ ಉಪಟಳ ವರ್ಣಿಸಲಾಸಾಧ್ಯ. ಇಲ್ಲಿ ನಡೆಯುವುದೆಲ್ಲ ಕಲ್ಪನಾ ವಿಹಾರ. ಸದಾ ಅಸಹಜವಾದುದ್ದನ್ನೇ ಯೋಚಿಸುತ್ತಿರುತ್ತದೆ. ಹೀಗಿದ್ದಾಗ ಒಂದು ಸಶಕ್ತ ಸಮಾಜ ಕಟ್ಟಲು ಹೇಗೆ ಸಾಧ್ಯ..?

ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ಸೆಳೆಯುತ್ತವೆ “ಕಾಸ್‌”ಗಿ ಚಾನೆಲ್‌ಗಳು. ಏಕೆಂದರೆ ಇವರ ಅಭಿರುಚಿಯಲ್ಲೇ ವ್ಯತ್ಯಾಸವಿರುತ್ತದೆ.  ಪುರುಷರು ಮತ್ತು ಯುವಕರಿಗೆ ಅಪರಾಧಿಕ ವಿಷಯಗಳು ಹೆಚ್ಚು ಆಕರ್ಷಕವಾಗಿರುತ್ತವೆ. ಮಹಿಳೆಯರಿಗೆ ಸ್ವೇಚ್ಛೆ ಮತ್ತು ವೈಭವಗಳಲ್ಲಿ ಆಸಕ್ತಿ. ಇವೆರಡೂ ಮನೋಭಾವಗಳನ್ನು ಚೆನ್ನಾಗಿ ಅರಿತುಕೊಂಡಿರುವ ವಾಹಿನಿಗಳು ಹಣ ಮಾಡುವ ದಂಧೆ ಮಾಡುತ್ತಲಿವೆ. ಈ ಮಾರ್ಗದಲ್ಲಿಯೇ ಸಾಮಾಜಿಕ ಸ್ವಾಸ್ಥ್ಯ ಸರ್ವನಾಶವಾಗುತ್ತಲಿದೆ.

ಇಂದು ಪ್ರಸಾರವಾಗುತ್ತಿರುವ ಬಹುತೇಕ ಧಾರಾವಾಹಿಗಳು ಅಪರಾಧಿಕ ಕೃತ್ಯಗಳನ್ನು ಸುಸಂಬದ್ಧವಾಗಿ ಮಾಡಲು ತರಬೇತಿ ಕಾರ್ಯಾಗಾರದ ತರಹ ಕೆಲಸ ಮಾಡುತ್ತಲಿವೆ. ಸುಳ್ಳು ಹೇಳುವುದು, ಕಾನೂನು ಮುರಿಯುವುದು, ಮೋಸ ಮಾಡಿ ದಕ್ಕಿಸಿಕೊಳ್ಳುವುದು, ಅತ್ಯಾಚಾರ, ಕೊಲೆ, ಒಳ್ಳೆಯವರನ್ನು ಸಂಕಷ್ಟದಲ್ಲಿ ತಳ್ಳುವುದು, ಸತ್ಯಕ್ಕೆ ಸೋಲಾಗಿಸಿ ಸುಳ್ಳನ್ನು ಗೆಲ್ಲಿಸುವುದು ಮುಂತಾದ ವಿಚಿತ್ರವಾದ ಸನ್ನಿವೇಶಗಳನ್ನೇ ನಾವಲ್ಲಿ ಕಾಣುತ್ತೇವೆ.

ಧಾರಾವಾಹಿಗಳನ್ನ ಸೂಕ್ಷ್ಮವಾಗಿ ಗಮನಿಸಿ, ಅದರಲ್ಲಿ ಒಳ್ಳೆಯವರು ಅಳುಬುರುಕರಾಗಿರುತ್ತಾರೆ, ದುಷ್ಡರು‌ ನಗುನಗುತ್ತಾ ಆತ್ಮವಿಶ್ವಾಸದಿಂದ ಮೆರೆಯುತ್ತಿರುತ್ತಾರೆ. ನಾಲ್ಕು ಗೋಡೆಯ ಮಧ್ಯೆ ಕೂಪ ಮಂಡೂಕರಾಗಿ ವೀಕ್ಷಿಸುವವರಿಗೆ ತಾವೂ ಕೂಡ ನಗುತ್ತಾ ಸಂತೋಷದಿಂದಿರಬೇಕೆಂದರೆ ದುಷ್ಟತನ ಮಾಡಬೇಕೆಂಬ ನಂಬಿಕೆ ಅರಳಿಸುವುದಿಲ್ಲವೇ?  ಇದ್ಯಾವ ಸೀಮೆಯ ಸಾಮಾಜಿಕ ಜವಾಬ್ದಾರಿ?

ಇತ್ತೀಚಿನ ವರ್ಷಗಳಲ್ಲಿ ಧಾರಾವಾಹಿಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ‌. ಮಹಿಳೆಯರನ್ನು ಖಳನಾಯಕಿಯರನ್ನಾಗಿ ಬಿಂಬಿಸುವುದು. ಏಕೆಂದರೆ ಇದರ ಹೆಚ್ಚಿನ ವೀಕ್ಷಕರು ಮಹಿಳೆಯರು‌. ಒಂದೇ ಧಾರಾವಾಹಿಗಳಲ್ಲಿ ಎರಡು ಮೂರು ಮಹಿಳಾ ವಿಲನ್‌ಗಳಿರುತ್ತಾರೆ. ಹಾಗಂತ ಇವರು ಮತ್ತೊಬ್ಬ ಮಹಿಳೆಯನ್ನೇ ಶೋಷಣೆ ಮಾಡುತ್ತಿರುತ್ತಾರೆ. ಅಲ್ಲಲ್ಲಿ ಬರುವ ಪುರುಷ ಪಾತ್ರಗಳು ಥೇಟ್ ಭಾರತೀಯ ನಾರಿಯಂತಿರುತ್ತಾರೆ  ಹಾಗೂ ಆಗಾಗ ಒಳ್ಳೆಯ ಮೌಲ್ಯಗಳನ್ನ ಪ್ರತಿಪಾದಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಇದರಿಂದ ಯಾರ ಮಾರ್ಯಾದೆ ಹಾಳಾಗುತ್ತಿದೆ.? ಲಕ್ಷಾಂತರ ಮಹಿಳೆಯರು ತುಟಿಪಿಟಿಕ್ ಅನ್ನದೇ ವೀಕ್ಷಿಸುತ್ತಾರೆ. ಯಾರಿಗೆ ಏನೂ ಅನಿಸುವುದಿಲ್ಲವೇ..? ಮಹಿಳಾ ಸುಧಾರಣಾವಾದಿಗಳು ಈ ಕುರಿತು ಎಲ್ಲೂ ವಿರೋಧ ವ್ಯಕ್ತಪಡಿಸಿದ ಉದಾಹರಣೆಯೇ ಕಣ್ಣಿಗೆ ಕಾಣುತ್ತಿಲ್ಲ. ಏನಿದರರ್ಥ? ಇವೆಲ್ಲ ನಡೆಯಲೇಬೇಕಾದ ಮಹಿಳೆಯರ ಸಾಹಸಗಾಥೆಗಳು ಎಂದುಕೊಂಡಿದ್ದಾರೋ ಏನೋ?

ಮಹಿಳೆಯರ ಸಾಮರ್ಥ್ಯವನ್ನು ಬೇರೆ ರೀತಿಯಲ್ಲಿ ಸಕಾರಾತ್ಮಕವಾಗಿ ತೋರಿಸುವ ಸೃಜನಶೀಲತೆ ಬತ್ತಿಹೋಗಿದೆಯೇ? ಮುಗ್ಧ ಮಹಿಳೆಯರನ್ನ ಇವು ದಾರಿ ತಪ್ಪಿಸುತ್ತಿವೆ‌. ಮಹಿಳೆಯರಲ್ಲಿರಬಹುದಾದ ಮೃದುವಾದ ಆತ್ಮಸಾಕ್ಷಿಯನ್ನ ಛಿದ್ರವಾಗಿಸುತ್ತದೆ.ಹೊಂದಾಣಿಕೆಯ ಮನೋಭಾವವನ್ನು ಧ್ವಂಸ ಮಾಡುತ್ತದೆ. ಇದರಿಂದ ದೇಶದ ಕೋಟ್ಯಂತರ ಕುಟುಂಬಗಳು ಇಂದು ಅಶಾಂತಿಯಿಂದ ನರಳುತ್ತಿವೆ. ನೆನಪಿಡಿ ವಾಹಿನಿಗಳು ಯಾವತ್ತೂ ವಿಚಾರವನ್ನ ಪ್ರಚೋದಿಸುವುದಿಲ್ಲ. ಆದರೆ ಭಾವನೆಗಳನ್ನ ಕೆರಳಿಸುತ್ತದೆ. ಇದು ಪುರುಷರ ವಿಷಯದಲ್ಲೂ ಕೂಡ ಸತ್ಯ.

ಇದಕ್ಕೆ ವಾಹಿನಿಗಳು ನೀಡುವ ಸಮರ್ಥನೆ ಅತಾರ್ಕಿಕವಾಗಿದೆ‌. ತಾವು ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನೇ ತೋರಿಸುತ್ತೇವೆ ಅನ್ನುತ್ತಾರೆ. ಆದರೆ ಅಪ್ರಿಯವಾದ ಸತ್ಯಗಳನ್ನ ಆದಷ್ಟು ದೂರವಿಡಿ ಎಂಬುದು ನಮ್ಮ ಸಂಸ್ಕೃತಿ ಕಲಿಸಿದ ಸಾಮಾನ್ಯ ಜ್ಞಾನ.  ಏಕೆಂದರೆ ಅವು ಹೆಚ್ಚು ಅವಘಡಗಳನ್ನು ಸೃಷ್ಟಿಸುತ್ತವೆ.

ನೈಜತೆಗೂ, ಅಸಹಜತೆಗೂ ತುಂಬಾ ವ್ಯತ್ಯಾಸವಿದೆ. ವಾಹಿನಿಗಳಿಗೆ ಬೇಕಾದುದ್ದು ನೈಜತೆಯಲ್ಲ ಅಸಹಜತೆ. ಏಕೆಂದರೆ ಅಸಹಜತೆಗೆ ಮಾತ್ರ ಮುಗ್ಧ ಮನಸ್ಸನ್ನು ಕೆರಳಿಸುವ ಶಕ್ತಿ ಇರುತ್ತದೆ‌. ಇದರಿಂದ ಮಾತ್ರ ಟಿಆರ್‌ಪಿ ಏರಿಕೆ ಸಾಧ್ಯ‌  ಕ್ಯಾಮೆರಾದಿಂದ ತೆಗೆದ ಫೋಟೊ ನೈಜವಲ್ಲ. ಕೇವಲ ನೈಜತೆಯ ಪ್ರತಿರೂಪ ಮಾತ್ರ. ಈ ಪ್ರತಿರೂಪವನ್ನ ಬೇಕಾದಂತೆ ಮಾರ್ಪಾಡು ಮಾಡಬಹುದು. ಅದನ್ನೇ ನೈಜವೆಂದು ವಾದಿಸುವುದು ಅತಾರ್ಕಿಕ‌. ಪ್ರತಿಯೊಂದು ನೈಜತೆಯ ಹಿಂದೆಯೂ ಒಂದು ನೀತಿ ಸಂಹಿತೆ ಇರುತ್ತದೆ‌. ಬಹಳಷ್ಟು ಜನ ಸ್ನಾನ ಮಾಡುವಾಗ ಬೆತ್ತಲಾಗಿರುತ್ತಾರೆ. ಅದನ್ನು ನೈಜವಾಗಿ ತೋರಿಸುತ್ತೇವೆ ಎಂದರೆ ಸಮರ್ಥನೀಯ ಎನಿಸಲಾರದು. ಇವೆಲ್ಲದರ ಉದ್ದೇಶ ಹಣ ಬಾಚಿಕೊಳ್ಳುವುದು. ಅದಕ್ಕಾಗಿ ಎಷ್ಟು ಕೀಳು ಅಭಿರುಚಿಯನ್ನ ಬಿತ್ತರಿಸಲಿಕ್ಕೂ ಸಿದ್ಧ. ಆ ದೃಷ್ಟಿಯಿಂದ ಸರ್ಕಾರಿ ಸ್ವಾಮ್ಯದ ದೂರದರ್ಶನಗಳು ಪ್ರಶಂಸೆ ಪಡೆಯುತ್ತವೆ. ಕೊನೆಪಕ್ಷ ಭಾರತೀಯ ಸಾಂಸ್ಕೃತಿಕ ಲೋಕವನ್ನಾದರೂ ಪರಿಚಯಿಸುತ್ತವೆ.

ಸಮಾಜದಲ್ಲಿ ನಡೆಯಬಹುದಾದ ಖಾಸಗಿ ಸಂಗತಿಗಳನ್ನೆಲ್ಲ ಸಾರ್ವಜನಿಕರಿಗೆ ತೋರೊಸಿ ಅಪರಾಧವನ್ನು ಸಾರ್ವತ್ರಿಕಗೊಳಿಸಲು ಹೊರಟಂತಿದೆ ವಾಹಿನಿಗಳು. ಇಂದು ಜೀವನದಲ್ಲಿ ನಡೆಯುವ ಘಟನೆಗೂ, ಧಾರಾವಾಹಿಗಳಲ್ಲಿ ನಡೆಯುವ ಘಟನೆಗಳಿಗೂ ತುಂಬಾ ಸಾಮ್ಯತೆ ಇರುತ್ತದೆ. ಯಾರಿಂದ ಯಾರು ಕಲಿತರೆಂಬುದು ಮಾತ್ರ ಚಿದಂಬರ ರಹಸ್ಯ.

(ಲೇಖಕರಾದ ರಮಾನಂದ ಐನಕೈ ಅವರ “ಅನುಗಾಲವೂ ಚಿಂತೆ‌ ಮನುಜಂಗೆ” ಕೃತಿಯ ಆಯ್ದಭಾಗ.)

ಬಾಳ ಸಂಗಾತಿಯೊಂದಿಗೆ ಈ ಗುಟ್ಟು ಹಂಚಿಕೊಳ್ಳಲೇಬೇಡಿ!

ಅನ್ನಾಳ ಚಿತ್ರ

ಇತ್ತೀಚಿಗೆ ಹೊಸದೊಂದು ಟ್ರೆಂಡ್ ಶುರುವಾಗಿದೆ. ಹಿಂದೆ ಹೀಗೆ ಇರಲಿಲ್ಲ. ಮದುವೆಯಾಗ್ತಿದ್ದಂತ ಹಿಂದಿನ ಎಲ್ಲ ಘಟನೆಗಳು ಮನದಲ್ಲೆ ಮಣ್ಣು ಮಾಡಿ ಸಸಿ ನೆಟ್ಟಿರುತ್ತಿದ್ದರು. ಮುಂದಿನ ದಾಂಪತ್ಯ ಜೀವನ ಹಾಳಾಗದಿರಲೆಂಬ ಕಾರಣಕ್ಕೆ ಹಿಂದಿನ ಯಾವುದೇ ಖಾಸಗಿ ಘಟನೆಯನ್ನು ಮದುವೆಯಾದವರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಮದುವೆ ಆಗುವ ಜೋಡಿಗಳು ಯೋಚಿಸುವ ರೀತಿಯೇ ಬದಲಾಗಿಬಿಟ್ಟಿದೆ. ಹಿಂದಿನಂತೆ ಯಾವ ಮುಚ್ಚುಮರೆಯಿಲ್ಲದೆ ಮದುವೆಯ ರಾತ್ರಿಯೇ ಹಂಚಿಕೊಳ್ಳಲಾಗುತ್ತಿದೆ. ಒಬ್ಬರಿಗೊಬ್ಬರು ಅರ್ಥೈಸಿಕೊಳ್ಲಿಕ್ಕೆ ನಂಬಿಕೆ ಹೆಚ್ಚಾಗಲಿಕ್ಕೆ ಅಂತಾನೋ ಏನೋ ತಿಳಿದಿಲ್ಲ; ಆದರೆ ಮದುವೆಗೆ ಮುಂಚೆ ತಮ್ಮ ವೈಯಕ್ತಿಕ ಘಟನೆಗಳನ್ನ ಲೈಫ್ ಪಾರ್ಟನರ್ ಬಳಿ ಹಂಚಿಕೊಳ್ಳೋದು ಇಂದು ಹೆಚ್ಚಾಗುತ್ತಿದೆ.

ಇತ್ತೀಚೆಗೆ ಒಂದು ವರದಿ ನೋಡಿದೆ. ಹೊಸದಾಗಿ ಮದುವೆಯಾದ ಜೋಡಿ ಪ್ರಥಮ ರಾತ್ರಿಯಂದು ಇಂಥದ್ದೇ ವಿಷಯ ಮಾತಾಡಲು ಕುಳಿತರಂತೆ. ಗಂಡನಾದವನು ಮದುವೆಗೆ ಮುಂಚಿನ ಜೀವನದಲ್ಲಿ ತಾನು ಮಾಡಿದ ಎಲ್ಲ ಕೃತ್ಯಗಳನ್ನ ಹಂಚಿಕೊಂಡನಂತೆ. ಇವನ ಬಗ್ಗೆ ಕೇಳಿ ಅವಳಿಗೆ ಆಘಾತವಾದರೂ ಕ್ಷಮಿಸಿದಳಂತೆ. ಆದರೆ ಇವನಿಗೆ “ಅದೆಲ್ಲ ಯಾಕೆ ಹೇಳಿದೆನೋ ಅಂತ ಚಡಪಡಿಸಲು ಶುರುಮಾಡಿದ್ದಾನೆ. ಅವನ ಚಡಪಡಿಕೆ ವಿಪರೀತವಾಗಿ ಅಪರಾಧಿ ಭಾವನೆಯಲ್ಲಿ ನರಳಿ ನರಳಿ ಕೊನೆಗೊಂದು ದಿನ ಒಳ್ಳೆ ಹೆಂಡತಿಗೆ ಮೋಸ ಮಾಡಿದೆನೆಂದು ಮಾನಸಿಕ ಖಿನ್ನತೆಗೊಳಗಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡನಂತೆ! ಮದುವೆ ನಡೆದ ತಿಂಗಳಲ್ಲೇ! ಪಾಪ ಆ ಹೆಣ್ಣಿನ ಪಾಡೇನು? ಮುಂದಿನ ಬದುಕು ಹೇಗೆ?! ಆಹಾ! ನಾನು ಹೇಳೋದಿಷ್ಟೇ; ಮನಸಿಗೆ ಘಾಸಿಯಾಗುವಂತ ವಿಷಯಗಳನ್ನ ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಮದುವೆಯಾಗುವವರೊಂದಿಗೆ ಆದಷ್ಟು ನಿಯತ್ತಿನಿಂದಿರಿ

ಇಲ್ಲಿ ಘಾಸಿಗೊಳಿಸುವ ವಿಷಯಗಳೆಂದರೆ, ಒಂದು ಘಟನೆ ಹೇಳ್ತಿನಿ ಕೇಳಿ ವಾರ್ ಅಂಡ್ ಪೀಸ್ ಬರೆದ ಜನಪ್ರಿಯ ಲೇಖಕ : ಲಿಯೋ ಟಾಲ್ ಸ್ಟಾಯ್ ಮದುವೆಗೆ ಮುನ್ನ ತನ್ನ ಹೆಂಡತಿ ಆನ್ನಾಳಿಗೆ ಮದುವೆಯಾದ ಹೊಸತರಲ್ಲಿ ಪ್ರೀತಿ ನಂಬಿಕೆ ಇನ್ನಷ್ಟು ಹೆಚ್ಚಾಗುತ್ತೆ ಅನ್ನೋ ಭ್ರಮೆಯಿಂದ ತನ್ನ ಡೈರಿ ಕೊಟ್ಟನಂತೆ. ಅದನ್ನ ಓದಿದ ಆನ್ನಾ ತನ್ನ ಆತ್ಮಚರಿತ್ರೆಯಲ್ಲಿ ಹೀಗೆ ಬರೆದುಕೊಂಡಿದ್ದಳು,

“ಪರಮಪಾಪಿಷ್ಟ ಲಿಯೋ ಟಾಲ್ ಸ್ಟಾಯ್ ತನ್ನ ನೀಚತನದಿಂದ ನೂರಾರು ಹೆಣ್ಣುಗಳ ಜೊತೆಗಿನ ಸಂಬಂಧ, ವ್ಯಭಿಚಾರ ಅತ್ಯಾಚಾರ ಅವನ ಅಂಟುಜಾಡ್ಯಗಳು, ಗುಣಪಡಿಸಲಾಗದ ರೋಗಗಳು ಇರುವ ಬಗ್ಗೆ ದಾಖಲಿಸಿರುವ ಅವನ ಡೈರಿ ಓದಿದಾಗಿನಿಂದ ಇಂಥವನನ್ನ ಮದುವೆಯಾಗಿದ್ದಕ್ಕೆ ಅವತ್ತು ರಾತ್ರಿಯೆಲ್ಲ ಅತ್ತಿದ್ದೇನೆ, ದಿನವೂ ಅತ್ತಿದ್ದೇನೆ, ನೆನೆದಾಗಲೆಲ್ಲ ಅತ್ತಿದ್ದೇನೆ ಜೀವನಪರ್ಯಂತ ಅಳುತ್ತೇನೆ” ಅಂತ ಬರೆದುಕೊಂಡಳಂತೆ.