ನೀವೂ ಖಿನ್ನತೆಗೆ ಒಳಗಾಗಿದ್ದೀರಾ? ಇದನ್ನೊಮ್ಮೆ ಓದಿ!

ಆ್ಯಸಿಡ್ ದಾಳಿಗೆ ತುತ್ತಾದ ಯುವತಿಯರ ಮದುವೆ ಫೋಟೊ.

ಮುಖದ ಮೇಲೆ ಒಂದು ಸಣ್ಣ ಮೊಡವೆ ಕಾಣಿಸಿದರೂ, ತಾಸುಗಟ್ಟಲೇ ಕನ್ನಡಿ ಮುಂದೆ ನಿಂತುಕೊಳ್ಳುವ ಹದಿಹರೆಯದ ಯುವತಿಯರಿದ್ದಾರೆ‌. ಅವಳಿಗೆ ಮೊಡವೆಗಳಿವೆ ಎಂಬ ಕಾರಣಕ್ಕೆ ಮದುವೆಯೇ ಮುರಿದುಬಿದ್ದ ಉದಾಹರಣೆಗಳು ಸಾಕಷ್ಟಿವೆ. ಮೂಗು ಸ್ವಲ್ಪ ದಪ್ಪವಿದೆಯೆಂದೋ, ಉದ್ದವಿದೆಯೆಂದೋ, ಕೂದಲು ಉದುರಿ ಹೋಯಿತೆಂದೋ, ತಾನು ಇತರರಿಗಿಂತ ಕಪ್ಪಾಗಿದ್ದೇನೆಂದೋ, ವಿಪರೀತ ಬೆಳ್ಳಗಿದ್ದೇನೆಂದೋ, ತೆಳ್ಳಗಿದ್ದೇನೆಂದೋ, ಕುಳ್ಳವಾಗಿದ್ದೇನೆಂದೋ.. ಖಿನ್ನತೆಗೊಳಗಾಗಿ ಜಗತ್ತಿನ ಸಂಪರ್ಕವೇ ಕಡಿದುಕೊಂಡು ಬದುಕೆಂಬುದು ನರಕ ಮಾಡಿಕೊಂಡು ನಾಲ್ಕುಗೋಡೆಗಳ ಮಧ್ಯೆ ಜೀವನ ಕಳೆಯುವ ಬಹುದೊಡ್ಡ ವರ್ಗವೇ ನಮ್ಮ ನಡುವೆ ಇದೆ. ಅವರನ್ನು ಸುಲಭವಾಗಿ ಗುರುತಿಸುವುದೂ ಕಷ್ಟವೇ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಕೆಳಗಿನ ಚಿತ್ರ ನೋಡಿ.

ದುಷ್ಕರ್ಮಿಗಳಿಂದ ಆ್ಯಸಿಡ್ ದಾಳಿಗೆ ತುತ್ತಾಗಿ ಬದುಕುಳಿದ ಯುವತಿಯರ ಮದುವೆ‌ ಫೋಟೊ ಇದು! ಆ್ಯಸಿಡ್ ದಾಳಿಗೆ ಯುವತಿಯರ ಮುಖ ವಿಕಾರವಾಗಿದ್ದರೂ ಅವರಲ್ಲಿನ ಜೀವನೋತ್ಸಾಹದ ನಗು ಮರೆಮಾಚಲು ಸಾಧ್ಯವಾಗಿಲ್ಲ ನೋಡಿ. ಕೆಲವು ಪರಿಸ್ಥಿತಿಗಳನ್ನ ನೀವು ಬದಲಾಯಿಸಲು ಸಾಧ್ಯವಿಲ್ಲ ಎಂದಾದರೆ ಅಂಥ ಪರಿಸ್ಥಿತಿಯೊಂದಿಗೇ ಹೊಂದಿಕೊಂಡು ಸಂತಸದಿಂದ ಬದುಕುವ ಮಾರ್ಗ ಹುಡುಕಬೇಕು. Never ever Give Up!

ಜೀವನದ ಕಟು ಸತ್ಯಗಳು ಏನು ಗೊತ್ತಾ?

• ಹೆಚ್ಚಾಗಿ ಹಣಕಾಸಿನ ಸಮಸ್ಯೆಯೇ ಉಳಿದೆಲ್ಲ ಸಮಸ್ಯೆಗಳಿಗೆ ಕಾರಣ.

• ನಿಜವಾದ ಪ್ರೀತಿ ಎಂಬುದು ಸುಳ್ಳು ಬಹಳಷ್ಟು ಹುಡುಗ / ಹುಡುಗಿ ಇಷ್ಟಪಡೋದಕ್ಕೆ ಕಾರಣ ಸೌಂದರ್ಯ ಮತ್ತು ಹಣ.

• ಪ್ರತಿಯೊಂದು ಹುಡುಗಿ ಬಯಸೋದು ಜೀವನದಲ್ಲಿ ಸೆಟ್ಲ್ ಆಗಿರೋ ಹುಡುಗನ್ನೇ. ಅನಂತರವೇ ಪ್ರೀತಿ ಪ್ರೇಮ.

• ಜೀವನ ಅಂದ್ಕೊಂಡಷ್ಟು ಸುಂದರವಾಗಿಲ್ಲ, ಸುಂದರಗೊಳಿಸಿಕೊಳ್ಬೇಕಾದವರು ನೀವೇ.

• ಸಂಬಂಧಿಕರಾಗಲಿ, ಗೆಳೆಯರಾಗಲಿ ನಿಮ್ಮನ್ನು ಮೆಚ್ಚುವುದು, ನಿಮ್ಮ ಜತೆಯಲ್ಲಿರುವುದು ನೀವು ಜೀವನದಲ್ಲಿ ಸಕ್ಸೆಸ್ ಆಗಿದ್ದಾಗ ಮಾತ್ರ. ನೀವು ಕಷ್ಟದಲ್ದಿದ್ದೀರಿ ಎಂದರೆ ನಿಮ್ಮ ಬಳಿ ಯಾರೂ ಸುಳಿಯುವುದಿಲ್ಲ.

• ನೀವು ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅದನ್ನ ಸಾಧಿಸುವಾಗ ಕೆಲವು ಸಂಗತಿಗಳನ್ನ ಕಳೆದುಕೊಳ್ಳಬೇಕಾಗುತ್ತದೆ. ಯಶಸ್ಸು ಅಂದ್ರೆ ತ್ಯಾಗವೇ!

• ಹಣದಿಂದ ಸಂತೋಷ, ನೆಮ್ಮದಿಯನ್ನ ಖರೀದಿಸಲು ಸಾಧ್ಯವಿಲ್ಲ. ಆದರೆ ಹಲವು ಸೌಕರ್ಯಕ್ಕೆ ಹಣ ತುಂಬಾ ಮುಖ್ಯ.

• ನೆನಪಿಡಿ ಗೆಳೆಯರು ತಾತ್ಕಾಲಿಕ. ನಿಮ್ಮದು ಎಂಥ ಗಾಢ ಸ್ನೇಹವೇ ಇರಲಿ. ಅದು ಒಂದು ದಿನ ಅಂತ್ಯ ಕಾಣುತ್ತದೆ.

• ಜನರು ತಮ್ಮ ಕೆಲಸದಲ್ಲಿ ತಾವು ಬ್ಯುಸಿ ಆಗುತ್ತಿದ್ದಂತೆ ನಿಮ್ಮನ್ನು ಮರೆತುಬಿಡ್ತಾರೆ. ಅವರು ಕೆಲಸವಿಲ್ಲದೆ ಖಾಲಿ ಇದ್ದಾಗ ಮಾತ್ರ ನೀವು ಮುಖ್ಯವಾಗಿರುತ್ತೀ!

• ವಾಟ್ಸಪ್ ಆಗಲಿ, ಫೇಸ್‌ಬುಕ್ ಆಗಲಿ ಯಾರದ್ದೋ ರಿಪ್ಲೆ‌ಗಾಗಿ ಕಾಯಬೇಡಿ. ಅವರಿಗೆ ನೀವು ಆತ್ಮೀಯರೇ ಆಗಿದ್ರೆ ನೋಡಿದ ತಕ್ಷಣವೇ ರಿಪ್ಲೆ ಮಾಡ್ತಾರೆ.

• ನಿಮ್ಮ ಗಾಡಫಾದರ್ ನಿಮ್ಮನ್ನು ಸಾಧಕರನ್ನಾಗಿ ಮಾಡಲಾರರು. ನಿಮ್ಮ ಟ್ರೈನರ್ ನಿಮ್ಮ ಬಾಡಿ ಬಿಲ್ಡ್ ಮಾಡುವುದಿಲ್ಲ. ಇವೆಲ್ಲವನ್ನು ಮಾಡಬೇಕಾದವರು ನೀವೇ.

• ಬದುಕು ನೀವು ಊಹಿಸಿದಂತೆ ಇರುವುದಿಲ್ಲ. ಭವಿಷ್ಯ ಅನಿಶ್ಚಿತ. ಯಾವಾಗ ಬೇಕಾದರೂ ತಿರುವು ಪಡೆದುಕೊಳ್ಳುತ್ತೆ. ಸಾವು, ನೋವು, ಅನಾರೋಗ್ಯ, ಮೋಸ, ವಂಚನೆ… ಹೀಗೆ ಅನಿರೀಕ್ಷಿತ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಅವುಗಳಿಗೆ ಹೆದರಬೇಕಾಗಿಲ್ಲ, ಕೊರಗಬಾರದು. ಕಾರಣ ಎಲ್ಲರ ಬದುಕು ಹೀಗೆ!

• ಕೊನೆಯದಾಗಿ, ನಿಮ್ಮ ಬಗ್ಗೆ ನಿಮಗೆ ಕಾಳಜಿ ಇರಲಿ, ನಿಮ್ಮನ್ನು ನೀವು ಮೊದಲು ಪ್ರೀತಿಸಿಕೊಳ್ಳಿ.


ರವಿ ಜಾನೇಕಲ್

ಬಣ್ಣದ ಪೆಟ್ಟಿಗೆಯೊಳಗೆ ಅಪರಾಧಗಳ ತರಬೇತಿ!

ಖಾಸಗಿ ಟಿವಿ ಚಾನೆಲ್‌ಗಳನ್ನ ಗಮನಿಸಿ. ಈ ದೇಶದ ಪ್ರತಿ ಮನೆಯನ್ನು, ಮನಸನ್ನು ಸೂರೆಹೊಡೆದ ದೃಶ್ಯ ಮಾಧ್ಯಮ ಇದು. ಇದಕ್ಕೆ ಜನರನ್ನು ಮರಳುಮಾಡುವ ವಿಶಿಷ್ಟ ಶಕ್ತಿ ಇದೆ. ಸುಳ್ಳನ್ನು ಕೂಡ ಸತ್ಯವೆಂಬಂತೆ ನಂಬಿಸುವ ತಾಕತ್ತಿದೆ. ಈ ಖಾಸಗಿ ಚಾನೆಲ್‌ಗಳ ಉಪಟಳ ವರ್ಣಿಸಲಾಸಾಧ್ಯ. ಇಲ್ಲಿ ನಡೆಯುವುದೆಲ್ಲ ಕಲ್ಪನಾ ವಿಹಾರ. ಸದಾ ಅಸಹಜವಾದುದ್ದನ್ನೇ ಯೋಚಿಸುತ್ತಿರುತ್ತದೆ. ಹೀಗಿದ್ದಾಗ ಒಂದು ಸಶಕ್ತ ಸಮಾಜ ಕಟ್ಟಲು ಹೇಗೆ ಸಾಧ್ಯ..?

ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ಸೆಳೆಯುತ್ತವೆ “ಕಾಸ್‌”ಗಿ ಚಾನೆಲ್‌ಗಳು. ಏಕೆಂದರೆ ಇವರ ಅಭಿರುಚಿಯಲ್ಲೇ ವ್ಯತ್ಯಾಸವಿರುತ್ತದೆ.  ಪುರುಷರು ಮತ್ತು ಯುವಕರಿಗೆ ಅಪರಾಧಿಕ ವಿಷಯಗಳು ಹೆಚ್ಚು ಆಕರ್ಷಕವಾಗಿರುತ್ತವೆ. ಮಹಿಳೆಯರಿಗೆ ಸ್ವೇಚ್ಛೆ ಮತ್ತು ವೈಭವಗಳಲ್ಲಿ ಆಸಕ್ತಿ. ಇವೆರಡೂ ಮನೋಭಾವಗಳನ್ನು ಚೆನ್ನಾಗಿ ಅರಿತುಕೊಂಡಿರುವ ವಾಹಿನಿಗಳು ಹಣ ಮಾಡುವ ದಂಧೆ ಮಾಡುತ್ತಲಿವೆ. ಈ ಮಾರ್ಗದಲ್ಲಿಯೇ ಸಾಮಾಜಿಕ ಸ್ವಾಸ್ಥ್ಯ ಸರ್ವನಾಶವಾಗುತ್ತಲಿದೆ.

ಇಂದು ಪ್ರಸಾರವಾಗುತ್ತಿರುವ ಬಹುತೇಕ ಧಾರಾವಾಹಿಗಳು ಅಪರಾಧಿಕ ಕೃತ್ಯಗಳನ್ನು ಸುಸಂಬದ್ಧವಾಗಿ ಮಾಡಲು ತರಬೇತಿ ಕಾರ್ಯಾಗಾರದ ತರಹ ಕೆಲಸ ಮಾಡುತ್ತಲಿವೆ. ಸುಳ್ಳು ಹೇಳುವುದು, ಕಾನೂನು ಮುರಿಯುವುದು, ಮೋಸ ಮಾಡಿ ದಕ್ಕಿಸಿಕೊಳ್ಳುವುದು, ಅತ್ಯಾಚಾರ, ಕೊಲೆ, ಒಳ್ಳೆಯವರನ್ನು ಸಂಕಷ್ಟದಲ್ಲಿ ತಳ್ಳುವುದು, ಸತ್ಯಕ್ಕೆ ಸೋಲಾಗಿಸಿ ಸುಳ್ಳನ್ನು ಗೆಲ್ಲಿಸುವುದು ಮುಂತಾದ ವಿಚಿತ್ರವಾದ ಸನ್ನಿವೇಶಗಳನ್ನೇ ನಾವಲ್ಲಿ ಕಾಣುತ್ತೇವೆ.

ಧಾರಾವಾಹಿಗಳನ್ನ ಸೂಕ್ಷ್ಮವಾಗಿ ಗಮನಿಸಿ, ಅದರಲ್ಲಿ ಒಳ್ಳೆಯವರು ಅಳುಬುರುಕರಾಗಿರುತ್ತಾರೆ, ದುಷ್ಡರು‌ ನಗುನಗುತ್ತಾ ಆತ್ಮವಿಶ್ವಾಸದಿಂದ ಮೆರೆಯುತ್ತಿರುತ್ತಾರೆ. ನಾಲ್ಕು ಗೋಡೆಯ ಮಧ್ಯೆ ಕೂಪ ಮಂಡೂಕರಾಗಿ ವೀಕ್ಷಿಸುವವರಿಗೆ ತಾವೂ ಕೂಡ ನಗುತ್ತಾ ಸಂತೋಷದಿಂದಿರಬೇಕೆಂದರೆ ದುಷ್ಟತನ ಮಾಡಬೇಕೆಂಬ ನಂಬಿಕೆ ಅರಳಿಸುವುದಿಲ್ಲವೇ?  ಇದ್ಯಾವ ಸೀಮೆಯ ಸಾಮಾಜಿಕ ಜವಾಬ್ದಾರಿ?

ಇತ್ತೀಚಿನ ವರ್ಷಗಳಲ್ಲಿ ಧಾರಾವಾಹಿಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ‌. ಮಹಿಳೆಯರನ್ನು ಖಳನಾಯಕಿಯರನ್ನಾಗಿ ಬಿಂಬಿಸುವುದು. ಏಕೆಂದರೆ ಇದರ ಹೆಚ್ಚಿನ ವೀಕ್ಷಕರು ಮಹಿಳೆಯರು‌. ಒಂದೇ ಧಾರಾವಾಹಿಗಳಲ್ಲಿ ಎರಡು ಮೂರು ಮಹಿಳಾ ವಿಲನ್‌ಗಳಿರುತ್ತಾರೆ. ಹಾಗಂತ ಇವರು ಮತ್ತೊಬ್ಬ ಮಹಿಳೆಯನ್ನೇ ಶೋಷಣೆ ಮಾಡುತ್ತಿರುತ್ತಾರೆ. ಅಲ್ಲಲ್ಲಿ ಬರುವ ಪುರುಷ ಪಾತ್ರಗಳು ಥೇಟ್ ಭಾರತೀಯ ನಾರಿಯಂತಿರುತ್ತಾರೆ  ಹಾಗೂ ಆಗಾಗ ಒಳ್ಳೆಯ ಮೌಲ್ಯಗಳನ್ನ ಪ್ರತಿಪಾದಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಇದರಿಂದ ಯಾರ ಮಾರ್ಯಾದೆ ಹಾಳಾಗುತ್ತಿದೆ.? ಲಕ್ಷಾಂತರ ಮಹಿಳೆಯರು ತುಟಿಪಿಟಿಕ್ ಅನ್ನದೇ ವೀಕ್ಷಿಸುತ್ತಾರೆ. ಯಾರಿಗೆ ಏನೂ ಅನಿಸುವುದಿಲ್ಲವೇ..? ಮಹಿಳಾ ಸುಧಾರಣಾವಾದಿಗಳು ಈ ಕುರಿತು ಎಲ್ಲೂ ವಿರೋಧ ವ್ಯಕ್ತಪಡಿಸಿದ ಉದಾಹರಣೆಯೇ ಕಣ್ಣಿಗೆ ಕಾಣುತ್ತಿಲ್ಲ. ಏನಿದರರ್ಥ? ಇವೆಲ್ಲ ನಡೆಯಲೇಬೇಕಾದ ಮಹಿಳೆಯರ ಸಾಹಸಗಾಥೆಗಳು ಎಂದುಕೊಂಡಿದ್ದಾರೋ ಏನೋ?

ಮಹಿಳೆಯರ ಸಾಮರ್ಥ್ಯವನ್ನು ಬೇರೆ ರೀತಿಯಲ್ಲಿ ಸಕಾರಾತ್ಮಕವಾಗಿ ತೋರಿಸುವ ಸೃಜನಶೀಲತೆ ಬತ್ತಿಹೋಗಿದೆಯೇ? ಮುಗ್ಧ ಮಹಿಳೆಯರನ್ನ ಇವು ದಾರಿ ತಪ್ಪಿಸುತ್ತಿವೆ‌. ಮಹಿಳೆಯರಲ್ಲಿರಬಹುದಾದ ಮೃದುವಾದ ಆತ್ಮಸಾಕ್ಷಿಯನ್ನ ಛಿದ್ರವಾಗಿಸುತ್ತದೆ.ಹೊಂದಾಣಿಕೆಯ ಮನೋಭಾವವನ್ನು ಧ್ವಂಸ ಮಾಡುತ್ತದೆ. ಇದರಿಂದ ದೇಶದ ಕೋಟ್ಯಂತರ ಕುಟುಂಬಗಳು ಇಂದು ಅಶಾಂತಿಯಿಂದ ನರಳುತ್ತಿವೆ. ನೆನಪಿಡಿ ವಾಹಿನಿಗಳು ಯಾವತ್ತೂ ವಿಚಾರವನ್ನ ಪ್ರಚೋದಿಸುವುದಿಲ್ಲ. ಆದರೆ ಭಾವನೆಗಳನ್ನ ಕೆರಳಿಸುತ್ತದೆ. ಇದು ಪುರುಷರ ವಿಷಯದಲ್ಲೂ ಕೂಡ ಸತ್ಯ.

ಇದಕ್ಕೆ ವಾಹಿನಿಗಳು ನೀಡುವ ಸಮರ್ಥನೆ ಅತಾರ್ಕಿಕವಾಗಿದೆ‌. ತಾವು ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನೇ ತೋರಿಸುತ್ತೇವೆ ಅನ್ನುತ್ತಾರೆ. ಆದರೆ ಅಪ್ರಿಯವಾದ ಸತ್ಯಗಳನ್ನ ಆದಷ್ಟು ದೂರವಿಡಿ ಎಂಬುದು ನಮ್ಮ ಸಂಸ್ಕೃತಿ ಕಲಿಸಿದ ಸಾಮಾನ್ಯ ಜ್ಞಾನ.  ಏಕೆಂದರೆ ಅವು ಹೆಚ್ಚು ಅವಘಡಗಳನ್ನು ಸೃಷ್ಟಿಸುತ್ತವೆ.

ನೈಜತೆಗೂ, ಅಸಹಜತೆಗೂ ತುಂಬಾ ವ್ಯತ್ಯಾಸವಿದೆ. ವಾಹಿನಿಗಳಿಗೆ ಬೇಕಾದುದ್ದು ನೈಜತೆಯಲ್ಲ ಅಸಹಜತೆ. ಏಕೆಂದರೆ ಅಸಹಜತೆಗೆ ಮಾತ್ರ ಮುಗ್ಧ ಮನಸ್ಸನ್ನು ಕೆರಳಿಸುವ ಶಕ್ತಿ ಇರುತ್ತದೆ‌. ಇದರಿಂದ ಮಾತ್ರ ಟಿಆರ್‌ಪಿ ಏರಿಕೆ ಸಾಧ್ಯ‌  ಕ್ಯಾಮೆರಾದಿಂದ ತೆಗೆದ ಫೋಟೊ ನೈಜವಲ್ಲ. ಕೇವಲ ನೈಜತೆಯ ಪ್ರತಿರೂಪ ಮಾತ್ರ. ಈ ಪ್ರತಿರೂಪವನ್ನ ಬೇಕಾದಂತೆ ಮಾರ್ಪಾಡು ಮಾಡಬಹುದು. ಅದನ್ನೇ ನೈಜವೆಂದು ವಾದಿಸುವುದು ಅತಾರ್ಕಿಕ‌. ಪ್ರತಿಯೊಂದು ನೈಜತೆಯ ಹಿಂದೆಯೂ ಒಂದು ನೀತಿ ಸಂಹಿತೆ ಇರುತ್ತದೆ‌. ಬಹಳಷ್ಟು ಜನ ಸ್ನಾನ ಮಾಡುವಾಗ ಬೆತ್ತಲಾಗಿರುತ್ತಾರೆ. ಅದನ್ನು ನೈಜವಾಗಿ ತೋರಿಸುತ್ತೇವೆ ಎಂದರೆ ಸಮರ್ಥನೀಯ ಎನಿಸಲಾರದು. ಇವೆಲ್ಲದರ ಉದ್ದೇಶ ಹಣ ಬಾಚಿಕೊಳ್ಳುವುದು. ಅದಕ್ಕಾಗಿ ಎಷ್ಟು ಕೀಳು ಅಭಿರುಚಿಯನ್ನ ಬಿತ್ತರಿಸಲಿಕ್ಕೂ ಸಿದ್ಧ. ಆ ದೃಷ್ಟಿಯಿಂದ ಸರ್ಕಾರಿ ಸ್ವಾಮ್ಯದ ದೂರದರ್ಶನಗಳು ಪ್ರಶಂಸೆ ಪಡೆಯುತ್ತವೆ. ಕೊನೆಪಕ್ಷ ಭಾರತೀಯ ಸಾಂಸ್ಕೃತಿಕ ಲೋಕವನ್ನಾದರೂ ಪರಿಚಯಿಸುತ್ತವೆ.

ಸಮಾಜದಲ್ಲಿ ನಡೆಯಬಹುದಾದ ಖಾಸಗಿ ಸಂಗತಿಗಳನ್ನೆಲ್ಲ ಸಾರ್ವಜನಿಕರಿಗೆ ತೋರೊಸಿ ಅಪರಾಧವನ್ನು ಸಾರ್ವತ್ರಿಕಗೊಳಿಸಲು ಹೊರಟಂತಿದೆ ವಾಹಿನಿಗಳು. ಇಂದು ಜೀವನದಲ್ಲಿ ನಡೆಯುವ ಘಟನೆಗೂ, ಧಾರಾವಾಹಿಗಳಲ್ಲಿ ನಡೆಯುವ ಘಟನೆಗಳಿಗೂ ತುಂಬಾ ಸಾಮ್ಯತೆ ಇರುತ್ತದೆ. ಯಾರಿಂದ ಯಾರು ಕಲಿತರೆಂಬುದು ಮಾತ್ರ ಚಿದಂಬರ ರಹಸ್ಯ.

(ಲೇಖಕರಾದ ರಮಾನಂದ ಐನಕೈ ಅವರ “ಅನುಗಾಲವೂ ಚಿಂತೆ‌ ಮನುಜಂಗೆ” ಕೃತಿಯ ಆಯ್ದಭಾಗ.)

ಹಿಂದಿರುಗಿ ನೋಡಿದರೆ ಬದುಕು ಬಣ್ಣಗೇಡು..

ಕೆಲವ್ರು ಪುಣ್ಯವಂತ್ರು ಇರ್ತಾರೆ; ಇಂಥವ್ರು ಹುಟ್ದಾಗ್ನಿಂದ ಡಿಗ್ರಿ ಮುಗ್ಸಿ ಜಾಬ್ ಸೇರೋ ತನಕ ಎಲ್ಲ ಖರ್ಚು ಕುಟುಂಬನೇ ನೋಡ್ಕೊಳ್ಳುತ್ತೆ. ದುಡಿಯೋದ್ರ ಬಗ್ಗೆ ಯೋಚನೆನೇ ಮಾಡಲ್ಲ. ಖರ್ಚುಗಳಿಗೆಲ್ಲ ತಂದೆ ತಾಯಿಯನ್ನೇ ಅವಲಂಬಿಸಿರ್ತಾರೆ.

ಶಾಲೆ ಫೀಸು, ಕಾಲೇಜ್ ಫೀಸು, ಟ್ಯೂಷನ್ ಫೀ,ನೋಟ್ಸು, ಬಸ್ ಪಾಸ್, ತಿಂಡಿ ತಿನಿಸು.. ಏನೇ ಖರ್ಚು ಆಗ್ತದೆ ಅಂದ್ರೂ ಎಲ್ಲದಕ್ಕೂ ತಂದೆನೋ, ತಾಯಿನೋ ಮಗನ ಎಲ್ಲ ಬೇಕುಗಳನ್ನ ಖುಷಿಯಿಂದ ನೋಡಿಕೊಳ್ತಿರುತ್ತೆ. ಆರ್ಥಿಕವಾಗಿ ಅಷ್ಟು ಸದೃಢವಾಗಿರ್ತಾರೆ. ಇಂಥ ಕುಟುಂಬದಲ್ಲಿ ಬೆಳೆದವ್ರಿಗೆ ಓದಿ ಉದ್ಯೋಗ ಹಿಡಿಯೋತನಕ ಬೆವರಹನಿಯ ಪರಿಚಯ ಆಗೋದೇ ಇಲ್ಲ.

ಸಿರಿವಂತರ ಮಕ್ಕಳ ನೋಡ್ದಾಗೆಲ್ಲ ನನಗೆ ಎಷ್ಟೋ ಸಲ ಅನ್ಸತಿತ್ತು; ನಮ್ಮ ಕುಟುಂಬನೂ ಹಿಂಗಿರಬೇಕಿತ್ತು. ಇದ್ದಿದ್ರೆ ಚೆಂದವಾಗಿ ಆಡಿ ಬಾಲ್ಯ ಕಳಿಬಹುದಿತ್ತು. ಹಬ್ಬಕ್ಕೆ ಮಾತ್ರ ಉಣ್ಣುತ್ತಿದ್ದ ಅನ್ನ ದಿನವೂ ಉಣ್ಬಹುದಿತ್ತು. ಜ್ವರ ಬಂದಾಗಲಷ್ಟೇ ಸಿಗುತ್ತಿದ್ದ ಪಾರ್ಲೆ ಬಿಸ್ಕಿಟ್ಟು ದಿನವೂ ತಿನ್ಬುದಿತ್ತು. ಐದಾರನೇ ತರಗತಿಗೆ 40 ಡಿಗ್ರಿ ಸುಡು ಬಿಸಿಲಿಗೆ ಎಳೆಮೈ ಬಗ್ಗಿಸಿ ಕೂಲಿ‌ ಮಾಡ್ಬೇಕಾದ ಪರಿಸ್ಥಿತಿನೂ ಬರ್ತಿರಲಿಲ್ಲ. ಸಣ್ಣ ವಯಸ್ಗೇ ಇವೆಲ್ಲ ಯೋಚ್ನೆಗಳು ಬರ್ತಾ ಇದ್ವು.

ಆದರೆ ಅಂದಿನ ಖಾಲಿ ಹೊಟ್ಟೆಯ ಅನುಭವ ಈಗ ಕೆಲಸಕ್ಕೆ ಬರ್ತಿದೆ. ಎಂಟನೇ ತರಗತಿಯಿಂದ್ಲೇ ಓದೋದರ ಜತೆಗೆ ಓದಿನ ಸಂಪೂರ್ಣ ಖರ್ಚು ನಾನೇ ನೋಡಿಕೊಳ್ಳುವುದು ಕಲಿತೆ. ಕಾಲೇಜು ಶುರುವಾಗ ಹೊತ್ಗೆ ಮನೆ ಜವಾಬ್ದಾರಿನೂ ನಿಧಾನವಾಗಿ ಹೆಗಲೇರಿಬಿಟ್ಟಿತು.

ಪಿಯು ಓದುವಾಗ, ನನಗಾಗ ಸಿಗುತ್ತಿದ್ದ 2000 ರೂ. ಸಂಬಳದಲ್ಲಿ ಮನೆಗೆ ಕೊಟ್ಟ ಹಣದ ವಿವರ ಬರೆದುಕೊಳ್ಳುವ ಅಭ್ಯಾಸ ಇತ್ತು. ಇವತ್ತು ಏನೋ ಹುಡುಕಾಡ್ತಿದ್ದಾಗ ಈ ಪಟ್ಟಿ ಕಣ್ಣಿಗೆ ಬಿತ್ತು. ಸುಮಾರು ಪಟ್ಟಿಗಳು ಡೈರಿಯಲ್ಲಿವೆ. ಆಗಾಗ‌ ನೋಡಿದಾಗ ಮನಸು ಹಿಮ್ಮುಖವಾಗಿ ಚಲಿಸುತ್ತಿರುತ್ತೆ!