ಮುಖದ ಮೇಲೆ ಒಂದು ಸಣ್ಣ ಮೊಡವೆ ಕಾಣಿಸಿದರೂ, ತಾಸುಗಟ್ಟಲೇ ಕನ್ನಡಿ ಮುಂದೆ ನಿಂತುಕೊಳ್ಳುವ ಹದಿಹರೆಯದ ಯುವತಿಯರಿದ್ದಾರೆ. ಅವಳಿಗೆ ಮೊಡವೆಗಳಿವೆ ಎಂಬ ಕಾರಣಕ್ಕೆ ಮದುವೆಯೇ ಮುರಿದುಬಿದ್ದ ಉದಾಹರಣೆಗಳು ಸಾಕಷ್ಟಿವೆ. ಮೂಗು ಸ್ವಲ್ಪ ದಪ್ಪವಿದೆಯೆಂದೋ, ಉದ್ದವಿದೆಯೆಂದೋ, ಕೂದಲು ಉದುರಿ ಹೋಯಿತೆಂದೋ, ತಾನು ಇತರರಿಗಿಂತ ಕಪ್ಪಾಗಿದ್ದೇನೆಂದೋ, ವಿಪರೀತ ಬೆಳ್ಳಗಿದ್ದೇನೆಂದೋ, ತೆಳ್ಳಗಿದ್ದೇನೆಂದೋ, ಕುಳ್ಳವಾಗಿದ್ದೇನೆಂದೋ.. ಖಿನ್ನತೆಗೊಳಗಾಗಿ ಜಗತ್ತಿನ ಸಂಪರ್ಕವೇ ಕಡಿದುಕೊಂಡು ಬದುಕೆಂಬುದು ನರಕ ಮಾಡಿಕೊಂಡು ನಾಲ್ಕುಗೋಡೆಗಳ ಮಧ್ಯೆ ಜೀವನ ಕಳೆಯುವ ಬಹುದೊಡ್ಡ ವರ್ಗವೇ ನಮ್ಮ ನಡುವೆ ಇದೆ. ಅವರನ್ನು ಸುಲಭವಾಗಿ ಗುರುತಿಸುವುದೂ ಕಷ್ಟವೇ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಕೆಳಗಿನ ಚಿತ್ರ ನೋಡಿ.
ದುಷ್ಕರ್ಮಿಗಳಿಂದ ಆ್ಯಸಿಡ್ ದಾಳಿಗೆ ತುತ್ತಾಗಿ ಬದುಕುಳಿದ ಯುವತಿಯರ ಮದುವೆ ಫೋಟೊ ಇದು! ಆ್ಯಸಿಡ್ ದಾಳಿಗೆ ಯುವತಿಯರ ಮುಖ ವಿಕಾರವಾಗಿದ್ದರೂ ಅವರಲ್ಲಿನ ಜೀವನೋತ್ಸಾಹದ ನಗು ಮರೆಮಾಚಲು ಸಾಧ್ಯವಾಗಿಲ್ಲ ನೋಡಿ. ಕೆಲವು ಪರಿಸ್ಥಿತಿಗಳನ್ನ ನೀವು ಬದಲಾಯಿಸಲು ಸಾಧ್ಯವಿಲ್ಲ ಎಂದಾದರೆ ಅಂಥ ಪರಿಸ್ಥಿತಿಯೊಂದಿಗೇ ಹೊಂದಿಕೊಂಡು ಸಂತಸದಿಂದ ಬದುಕುವ ಮಾರ್ಗ ಹುಡುಕಬೇಕು. Never ever Give Up!
• ಹೆಚ್ಚಾಗಿ ಹಣಕಾಸಿನ ಸಮಸ್ಯೆಯೇ ಉಳಿದೆಲ್ಲ ಸಮಸ್ಯೆಗಳಿಗೆ ಕಾರಣ.
• ನಿಜವಾದ ಪ್ರೀತಿ ಎಂಬುದು ಸುಳ್ಳು ಬಹಳಷ್ಟು ಹುಡುಗ / ಹುಡುಗಿ ಇಷ್ಟಪಡೋದಕ್ಕೆ ಕಾರಣ ಸೌಂದರ್ಯ ಮತ್ತು ಹಣ.
• ಪ್ರತಿಯೊಂದು ಹುಡುಗಿ ಬಯಸೋದು ಜೀವನದಲ್ಲಿ ಸೆಟ್ಲ್ ಆಗಿರೋ ಹುಡುಗನ್ನೇ. ಅನಂತರವೇ ಪ್ರೀತಿ ಪ್ರೇಮ.
• ಜೀವನ ಅಂದ್ಕೊಂಡಷ್ಟು ಸುಂದರವಾಗಿಲ್ಲ, ಸುಂದರಗೊಳಿಸಿಕೊಳ್ಬೇಕಾದವರು ನೀವೇ.
• ಸಂಬಂಧಿಕರಾಗಲಿ, ಗೆಳೆಯರಾಗಲಿ ನಿಮ್ಮನ್ನು ಮೆಚ್ಚುವುದು, ನಿಮ್ಮ ಜತೆಯಲ್ಲಿರುವುದು ನೀವು ಜೀವನದಲ್ಲಿ ಸಕ್ಸೆಸ್ ಆಗಿದ್ದಾಗ ಮಾತ್ರ. ನೀವು ಕಷ್ಟದಲ್ದಿದ್ದೀರಿ ಎಂದರೆ ನಿಮ್ಮ ಬಳಿ ಯಾರೂ ಸುಳಿಯುವುದಿಲ್ಲ.
• ನೀವು ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅದನ್ನ ಸಾಧಿಸುವಾಗ ಕೆಲವು ಸಂಗತಿಗಳನ್ನ ಕಳೆದುಕೊಳ್ಳಬೇಕಾಗುತ್ತದೆ. ಯಶಸ್ಸು ಅಂದ್ರೆ ತ್ಯಾಗವೇ!
• ಹಣದಿಂದ ಸಂತೋಷ, ನೆಮ್ಮದಿಯನ್ನ ಖರೀದಿಸಲು ಸಾಧ್ಯವಿಲ್ಲ. ಆದರೆ ಹಲವು ಸೌಕರ್ಯಕ್ಕೆ ಹಣ ತುಂಬಾ ಮುಖ್ಯ.
• ನೆನಪಿಡಿ ಗೆಳೆಯರು ತಾತ್ಕಾಲಿಕ. ನಿಮ್ಮದು ಎಂಥ ಗಾಢ ಸ್ನೇಹವೇ ಇರಲಿ. ಅದು ಒಂದು ದಿನ ಅಂತ್ಯ ಕಾಣುತ್ತದೆ.
• ಜನರು ತಮ್ಮ ಕೆಲಸದಲ್ಲಿ ತಾವು ಬ್ಯುಸಿ ಆಗುತ್ತಿದ್ದಂತೆ ನಿಮ್ಮನ್ನು ಮರೆತುಬಿಡ್ತಾರೆ. ಅವರು ಕೆಲಸವಿಲ್ಲದೆ ಖಾಲಿ ಇದ್ದಾಗ ಮಾತ್ರ ನೀವು ಮುಖ್ಯವಾಗಿರುತ್ತೀ!
• ವಾಟ್ಸಪ್ ಆಗಲಿ, ಫೇಸ್ಬುಕ್ ಆಗಲಿ ಯಾರದ್ದೋ ರಿಪ್ಲೆಗಾಗಿ ಕಾಯಬೇಡಿ. ಅವರಿಗೆ ನೀವು ಆತ್ಮೀಯರೇ ಆಗಿದ್ರೆ ನೋಡಿದ ತಕ್ಷಣವೇ ರಿಪ್ಲೆ ಮಾಡ್ತಾರೆ.
• ನಿಮ್ಮ ಗಾಡಫಾದರ್ ನಿಮ್ಮನ್ನು ಸಾಧಕರನ್ನಾಗಿ ಮಾಡಲಾರರು. ನಿಮ್ಮ ಟ್ರೈನರ್ ನಿಮ್ಮ ಬಾಡಿ ಬಿಲ್ಡ್ ಮಾಡುವುದಿಲ್ಲ. ಇವೆಲ್ಲವನ್ನು ಮಾಡಬೇಕಾದವರು ನೀವೇ.
• ಬದುಕು ನೀವು ಊಹಿಸಿದಂತೆ ಇರುವುದಿಲ್ಲ. ಭವಿಷ್ಯ ಅನಿಶ್ಚಿತ. ಯಾವಾಗ ಬೇಕಾದರೂ ತಿರುವು ಪಡೆದುಕೊಳ್ಳುತ್ತೆ. ಸಾವು, ನೋವು, ಅನಾರೋಗ್ಯ, ಮೋಸ, ವಂಚನೆ… ಹೀಗೆ ಅನಿರೀಕ್ಷಿತ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಅವುಗಳಿಗೆ ಹೆದರಬೇಕಾಗಿಲ್ಲ, ಕೊರಗಬಾರದು. ಕಾರಣ ಎಲ್ಲರ ಬದುಕು ಹೀಗೆ!
• ಕೊನೆಯದಾಗಿ, ನಿಮ್ಮ ಬಗ್ಗೆ ನಿಮಗೆ ಕಾಳಜಿ ಇರಲಿ, ನಿಮ್ಮನ್ನು ನೀವು ಮೊದಲು ಪ್ರೀತಿಸಿಕೊಳ್ಳಿ.
ಖಾಸಗಿ ಟಿವಿ ಚಾನೆಲ್ಗಳನ್ನ ಗಮನಿಸಿ. ಈ ದೇಶದ ಪ್ರತಿ ಮನೆಯನ್ನು, ಮನಸನ್ನು ಸೂರೆಹೊಡೆದ ದೃಶ್ಯ ಮಾಧ್ಯಮ ಇದು. ಇದಕ್ಕೆ ಜನರನ್ನು ಮರಳುಮಾಡುವ ವಿಶಿಷ್ಟ ಶಕ್ತಿ ಇದೆ. ಸುಳ್ಳನ್ನು ಕೂಡ ಸತ್ಯವೆಂಬಂತೆ ನಂಬಿಸುವ ತಾಕತ್ತಿದೆ. ಈ ಖಾಸಗಿ ಚಾನೆಲ್ಗಳ ಉಪಟಳ ವರ್ಣಿಸಲಾಸಾಧ್ಯ. ಇಲ್ಲಿ ನಡೆಯುವುದೆಲ್ಲ ಕಲ್ಪನಾ ವಿಹಾರ. ಸದಾ ಅಸಹಜವಾದುದ್ದನ್ನೇ ಯೋಚಿಸುತ್ತಿರುತ್ತದೆ. ಹೀಗಿದ್ದಾಗ ಒಂದು ಸಶಕ್ತ ಸಮಾಜ ಕಟ್ಟಲು ಹೇಗೆ ಸಾಧ್ಯ..?
ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ಸೆಳೆಯುತ್ತವೆ “ಕಾಸ್”ಗಿ ಚಾನೆಲ್ಗಳು. ಏಕೆಂದರೆ ಇವರ ಅಭಿರುಚಿಯಲ್ಲೇ ವ್ಯತ್ಯಾಸವಿರುತ್ತದೆ. ಪುರುಷರು ಮತ್ತು ಯುವಕರಿಗೆ ಅಪರಾಧಿಕ ವಿಷಯಗಳು ಹೆಚ್ಚು ಆಕರ್ಷಕವಾಗಿರುತ್ತವೆ. ಮಹಿಳೆಯರಿಗೆ ಸ್ವೇಚ್ಛೆ ಮತ್ತು ವೈಭವಗಳಲ್ಲಿ ಆಸಕ್ತಿ. ಇವೆರಡೂ ಮನೋಭಾವಗಳನ್ನು ಚೆನ್ನಾಗಿ ಅರಿತುಕೊಂಡಿರುವ ವಾಹಿನಿಗಳು ಹಣ ಮಾಡುವ ದಂಧೆ ಮಾಡುತ್ತಲಿವೆ. ಈ ಮಾರ್ಗದಲ್ಲಿಯೇ ಸಾಮಾಜಿಕ ಸ್ವಾಸ್ಥ್ಯ ಸರ್ವನಾಶವಾಗುತ್ತಲಿದೆ.
ಇಂದು ಪ್ರಸಾರವಾಗುತ್ತಿರುವ ಬಹುತೇಕ ಧಾರಾವಾಹಿಗಳು ಅಪರಾಧಿಕ ಕೃತ್ಯಗಳನ್ನು ಸುಸಂಬದ್ಧವಾಗಿ ಮಾಡಲು ತರಬೇತಿ ಕಾರ್ಯಾಗಾರದ ತರಹ ಕೆಲಸ ಮಾಡುತ್ತಲಿವೆ. ಸುಳ್ಳು ಹೇಳುವುದು, ಕಾನೂನು ಮುರಿಯುವುದು, ಮೋಸ ಮಾಡಿ ದಕ್ಕಿಸಿಕೊಳ್ಳುವುದು, ಅತ್ಯಾಚಾರ, ಕೊಲೆ, ಒಳ್ಳೆಯವರನ್ನು ಸಂಕಷ್ಟದಲ್ಲಿ ತಳ್ಳುವುದು, ಸತ್ಯಕ್ಕೆ ಸೋಲಾಗಿಸಿ ಸುಳ್ಳನ್ನು ಗೆಲ್ಲಿಸುವುದು ಮುಂತಾದ ವಿಚಿತ್ರವಾದ ಸನ್ನಿವೇಶಗಳನ್ನೇ ನಾವಲ್ಲಿ ಕಾಣುತ್ತೇವೆ.
ಧಾರಾವಾಹಿಗಳನ್ನ ಸೂಕ್ಷ್ಮವಾಗಿ ಗಮನಿಸಿ, ಅದರಲ್ಲಿ ಒಳ್ಳೆಯವರು ಅಳುಬುರುಕರಾಗಿರುತ್ತಾರೆ, ದುಷ್ಡರು ನಗುನಗುತ್ತಾ ಆತ್ಮವಿಶ್ವಾಸದಿಂದ ಮೆರೆಯುತ್ತಿರುತ್ತಾರೆ. ನಾಲ್ಕು ಗೋಡೆಯ ಮಧ್ಯೆ ಕೂಪ ಮಂಡೂಕರಾಗಿ ವೀಕ್ಷಿಸುವವರಿಗೆ ತಾವೂ ಕೂಡ ನಗುತ್ತಾ ಸಂತೋಷದಿಂದಿರಬೇಕೆಂದರೆ ದುಷ್ಟತನ ಮಾಡಬೇಕೆಂಬ ನಂಬಿಕೆ ಅರಳಿಸುವುದಿಲ್ಲವೇ? ಇದ್ಯಾವ ಸೀಮೆಯ ಸಾಮಾಜಿಕ ಜವಾಬ್ದಾರಿ?
ಇತ್ತೀಚಿನ ವರ್ಷಗಳಲ್ಲಿ ಧಾರಾವಾಹಿಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಮಹಿಳೆಯರನ್ನು ಖಳನಾಯಕಿಯರನ್ನಾಗಿ ಬಿಂಬಿಸುವುದು. ಏಕೆಂದರೆ ಇದರ ಹೆಚ್ಚಿನ ವೀಕ್ಷಕರು ಮಹಿಳೆಯರು. ಒಂದೇ ಧಾರಾವಾಹಿಗಳಲ್ಲಿ ಎರಡು ಮೂರು ಮಹಿಳಾ ವಿಲನ್ಗಳಿರುತ್ತಾರೆ. ಹಾಗಂತ ಇವರು ಮತ್ತೊಬ್ಬ ಮಹಿಳೆಯನ್ನೇ ಶೋಷಣೆ ಮಾಡುತ್ತಿರುತ್ತಾರೆ. ಅಲ್ಲಲ್ಲಿ ಬರುವ ಪುರುಷ ಪಾತ್ರಗಳು ಥೇಟ್ ಭಾರತೀಯ ನಾರಿಯಂತಿರುತ್ತಾರೆ ಹಾಗೂ ಆಗಾಗ ಒಳ್ಳೆಯ ಮೌಲ್ಯಗಳನ್ನ ಪ್ರತಿಪಾದಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಇದರಿಂದ ಯಾರ ಮಾರ್ಯಾದೆ ಹಾಳಾಗುತ್ತಿದೆ.? ಲಕ್ಷಾಂತರ ಮಹಿಳೆಯರು ತುಟಿಪಿಟಿಕ್ ಅನ್ನದೇ ವೀಕ್ಷಿಸುತ್ತಾರೆ. ಯಾರಿಗೆ ಏನೂ ಅನಿಸುವುದಿಲ್ಲವೇ..? ಮಹಿಳಾ ಸುಧಾರಣಾವಾದಿಗಳು ಈ ಕುರಿತು ಎಲ್ಲೂ ವಿರೋಧ ವ್ಯಕ್ತಪಡಿಸಿದ ಉದಾಹರಣೆಯೇ ಕಣ್ಣಿಗೆ ಕಾಣುತ್ತಿಲ್ಲ. ಏನಿದರರ್ಥ? ಇವೆಲ್ಲ ನಡೆಯಲೇಬೇಕಾದ ಮಹಿಳೆಯರ ಸಾಹಸಗಾಥೆಗಳು ಎಂದುಕೊಂಡಿದ್ದಾರೋ ಏನೋ?
ಮಹಿಳೆಯರ ಸಾಮರ್ಥ್ಯವನ್ನು ಬೇರೆ ರೀತಿಯಲ್ಲಿ ಸಕಾರಾತ್ಮಕವಾಗಿ ತೋರಿಸುವ ಸೃಜನಶೀಲತೆ ಬತ್ತಿಹೋಗಿದೆಯೇ? ಮುಗ್ಧ ಮಹಿಳೆಯರನ್ನ ಇವು ದಾರಿ ತಪ್ಪಿಸುತ್ತಿವೆ. ಮಹಿಳೆಯರಲ್ಲಿರಬಹುದಾದ ಮೃದುವಾದ ಆತ್ಮಸಾಕ್ಷಿಯನ್ನ ಛಿದ್ರವಾಗಿಸುತ್ತದೆ.ಹೊಂದಾಣಿಕೆಯ ಮನೋಭಾವವನ್ನು ಧ್ವಂಸ ಮಾಡುತ್ತದೆ. ಇದರಿಂದ ದೇಶದ ಕೋಟ್ಯಂತರ ಕುಟುಂಬಗಳು ಇಂದು ಅಶಾಂತಿಯಿಂದ ನರಳುತ್ತಿವೆ. ನೆನಪಿಡಿ ವಾಹಿನಿಗಳು ಯಾವತ್ತೂ ವಿಚಾರವನ್ನ ಪ್ರಚೋದಿಸುವುದಿಲ್ಲ. ಆದರೆ ಭಾವನೆಗಳನ್ನ ಕೆರಳಿಸುತ್ತದೆ. ಇದು ಪುರುಷರ ವಿಷಯದಲ್ಲೂ ಕೂಡ ಸತ್ಯ.
ಇದಕ್ಕೆ ವಾಹಿನಿಗಳು ನೀಡುವ ಸಮರ್ಥನೆ ಅತಾರ್ಕಿಕವಾಗಿದೆ. ತಾವು ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನೇ ತೋರಿಸುತ್ತೇವೆ ಅನ್ನುತ್ತಾರೆ. ಆದರೆ ಅಪ್ರಿಯವಾದ ಸತ್ಯಗಳನ್ನ ಆದಷ್ಟು ದೂರವಿಡಿ ಎಂಬುದು ನಮ್ಮ ಸಂಸ್ಕೃತಿ ಕಲಿಸಿದ ಸಾಮಾನ್ಯ ಜ್ಞಾನ. ಏಕೆಂದರೆ ಅವು ಹೆಚ್ಚು ಅವಘಡಗಳನ್ನು ಸೃಷ್ಟಿಸುತ್ತವೆ.
ನೈಜತೆಗೂ, ಅಸಹಜತೆಗೂ ತುಂಬಾ ವ್ಯತ್ಯಾಸವಿದೆ. ವಾಹಿನಿಗಳಿಗೆ ಬೇಕಾದುದ್ದು ನೈಜತೆಯಲ್ಲ ಅಸಹಜತೆ. ಏಕೆಂದರೆ ಅಸಹಜತೆಗೆ ಮಾತ್ರ ಮುಗ್ಧ ಮನಸ್ಸನ್ನು ಕೆರಳಿಸುವ ಶಕ್ತಿ ಇರುತ್ತದೆ. ಇದರಿಂದ ಮಾತ್ರ ಟಿಆರ್ಪಿ ಏರಿಕೆ ಸಾಧ್ಯ ಕ್ಯಾಮೆರಾದಿಂದ ತೆಗೆದ ಫೋಟೊ ನೈಜವಲ್ಲ. ಕೇವಲ ನೈಜತೆಯ ಪ್ರತಿರೂಪ ಮಾತ್ರ. ಈ ಪ್ರತಿರೂಪವನ್ನ ಬೇಕಾದಂತೆ ಮಾರ್ಪಾಡು ಮಾಡಬಹುದು. ಅದನ್ನೇ ನೈಜವೆಂದು ವಾದಿಸುವುದು ಅತಾರ್ಕಿಕ. ಪ್ರತಿಯೊಂದು ನೈಜತೆಯ ಹಿಂದೆಯೂ ಒಂದು ನೀತಿ ಸಂಹಿತೆ ಇರುತ್ತದೆ. ಬಹಳಷ್ಟು ಜನ ಸ್ನಾನ ಮಾಡುವಾಗ ಬೆತ್ತಲಾಗಿರುತ್ತಾರೆ. ಅದನ್ನು ನೈಜವಾಗಿ ತೋರಿಸುತ್ತೇವೆ ಎಂದರೆ ಸಮರ್ಥನೀಯ ಎನಿಸಲಾರದು. ಇವೆಲ್ಲದರ ಉದ್ದೇಶ ಹಣ ಬಾಚಿಕೊಳ್ಳುವುದು. ಅದಕ್ಕಾಗಿ ಎಷ್ಟು ಕೀಳು ಅಭಿರುಚಿಯನ್ನ ಬಿತ್ತರಿಸಲಿಕ್ಕೂ ಸಿದ್ಧ. ಆ ದೃಷ್ಟಿಯಿಂದ ಸರ್ಕಾರಿ ಸ್ವಾಮ್ಯದ ದೂರದರ್ಶನಗಳು ಪ್ರಶಂಸೆ ಪಡೆಯುತ್ತವೆ. ಕೊನೆಪಕ್ಷ ಭಾರತೀಯ ಸಾಂಸ್ಕೃತಿಕ ಲೋಕವನ್ನಾದರೂ ಪರಿಚಯಿಸುತ್ತವೆ.
ಸಮಾಜದಲ್ಲಿ ನಡೆಯಬಹುದಾದ ಖಾಸಗಿ ಸಂಗತಿಗಳನ್ನೆಲ್ಲ ಸಾರ್ವಜನಿಕರಿಗೆ ತೋರೊಸಿ ಅಪರಾಧವನ್ನು ಸಾರ್ವತ್ರಿಕಗೊಳಿಸಲು ಹೊರಟಂತಿದೆ ವಾಹಿನಿಗಳು. ಇಂದು ಜೀವನದಲ್ಲಿ ನಡೆಯುವ ಘಟನೆಗೂ, ಧಾರಾವಾಹಿಗಳಲ್ಲಿ ನಡೆಯುವ ಘಟನೆಗಳಿಗೂ ತುಂಬಾ ಸಾಮ್ಯತೆ ಇರುತ್ತದೆ. ಯಾರಿಂದ ಯಾರು ಕಲಿತರೆಂಬುದು ಮಾತ್ರ ಚಿದಂಬರ ರಹಸ್ಯ.
(ಲೇಖಕರಾದ ರಮಾನಂದ ಐನಕೈ ಅವರ “ಅನುಗಾಲವೂ ಚಿಂತೆ ಮನುಜಂಗೆ” ಕೃತಿಯ ಆಯ್ದಭಾಗ.)
ಕೆಲವ್ರು ಪುಣ್ಯವಂತ್ರು ಇರ್ತಾರೆ; ಇಂಥವ್ರು ಹುಟ್ದಾಗ್ನಿಂದ ಡಿಗ್ರಿ ಮುಗ್ಸಿ ಜಾಬ್ ಸೇರೋ ತನಕ ಎಲ್ಲ ಖರ್ಚು ಕುಟುಂಬನೇ ನೋಡ್ಕೊಳ್ಳುತ್ತೆ. ದುಡಿಯೋದ್ರ ಬಗ್ಗೆ ಯೋಚನೆನೇ ಮಾಡಲ್ಲ. ಖರ್ಚುಗಳಿಗೆಲ್ಲ ತಂದೆ ತಾಯಿಯನ್ನೇ ಅವಲಂಬಿಸಿರ್ತಾರೆ.
ಶಾಲೆ ಫೀಸು, ಕಾಲೇಜ್ ಫೀಸು, ಟ್ಯೂಷನ್ ಫೀ,ನೋಟ್ಸು, ಬಸ್ ಪಾಸ್, ತಿಂಡಿ ತಿನಿಸು.. ಏನೇ ಖರ್ಚು ಆಗ್ತದೆ ಅಂದ್ರೂ ಎಲ್ಲದಕ್ಕೂ ತಂದೆನೋ, ತಾಯಿನೋ ಮಗನ ಎಲ್ಲ ಬೇಕುಗಳನ್ನ ಖುಷಿಯಿಂದ ನೋಡಿಕೊಳ್ತಿರುತ್ತೆ. ಆರ್ಥಿಕವಾಗಿ ಅಷ್ಟು ಸದೃಢವಾಗಿರ್ತಾರೆ. ಇಂಥ ಕುಟುಂಬದಲ್ಲಿ ಬೆಳೆದವ್ರಿಗೆ ಓದಿ ಉದ್ಯೋಗ ಹಿಡಿಯೋತನಕ ಬೆವರಹನಿಯ ಪರಿಚಯ ಆಗೋದೇ ಇಲ್ಲ.
ಸಿರಿವಂತರ ಮಕ್ಕಳ ನೋಡ್ದಾಗೆಲ್ಲ ನನಗೆ ಎಷ್ಟೋ ಸಲ ಅನ್ಸತಿತ್ತು; ನಮ್ಮ ಕುಟುಂಬನೂ ಹಿಂಗಿರಬೇಕಿತ್ತು. ಇದ್ದಿದ್ರೆ ಚೆಂದವಾಗಿ ಆಡಿ ಬಾಲ್ಯ ಕಳಿಬಹುದಿತ್ತು. ಹಬ್ಬಕ್ಕೆ ಮಾತ್ರ ಉಣ್ಣುತ್ತಿದ್ದ ಅನ್ನ ದಿನವೂ ಉಣ್ಬಹುದಿತ್ತು. ಜ್ವರ ಬಂದಾಗಲಷ್ಟೇ ಸಿಗುತ್ತಿದ್ದ ಪಾರ್ಲೆ ಬಿಸ್ಕಿಟ್ಟು ದಿನವೂ ತಿನ್ಬುದಿತ್ತು. ಐದಾರನೇ ತರಗತಿಗೆ 40 ಡಿಗ್ರಿ ಸುಡು ಬಿಸಿಲಿಗೆ ಎಳೆಮೈ ಬಗ್ಗಿಸಿ ಕೂಲಿ ಮಾಡ್ಬೇಕಾದ ಪರಿಸ್ಥಿತಿನೂ ಬರ್ತಿರಲಿಲ್ಲ. ಸಣ್ಣ ವಯಸ್ಗೇ ಇವೆಲ್ಲ ಯೋಚ್ನೆಗಳು ಬರ್ತಾ ಇದ್ವು.
ಆದರೆ ಅಂದಿನ ಖಾಲಿ ಹೊಟ್ಟೆಯ ಅನುಭವ ಈಗ ಕೆಲಸಕ್ಕೆ ಬರ್ತಿದೆ. ಎಂಟನೇ ತರಗತಿಯಿಂದ್ಲೇ ಓದೋದರ ಜತೆಗೆ ಓದಿನ ಸಂಪೂರ್ಣ ಖರ್ಚು ನಾನೇ ನೋಡಿಕೊಳ್ಳುವುದು ಕಲಿತೆ. ಕಾಲೇಜು ಶುರುವಾಗ ಹೊತ್ಗೆ ಮನೆ ಜವಾಬ್ದಾರಿನೂ ನಿಧಾನವಾಗಿ ಹೆಗಲೇರಿಬಿಟ್ಟಿತು.
ಪಿಯು ಓದುವಾಗ, ನನಗಾಗ ಸಿಗುತ್ತಿದ್ದ 2000 ರೂ. ಸಂಬಳದಲ್ಲಿ ಮನೆಗೆ ಕೊಟ್ಟ ಹಣದ ವಿವರ ಬರೆದುಕೊಳ್ಳುವ ಅಭ್ಯಾಸ ಇತ್ತು. ಇವತ್ತು ಏನೋ ಹುಡುಕಾಡ್ತಿದ್ದಾಗ ಈ ಪಟ್ಟಿ ಕಣ್ಣಿಗೆ ಬಿತ್ತು. ಸುಮಾರು ಪಟ್ಟಿಗಳು ಡೈರಿಯಲ್ಲಿವೆ. ಆಗಾಗ ನೋಡಿದಾಗ ಮನಸು ಹಿಮ್ಮುಖವಾಗಿ ಚಲಿಸುತ್ತಿರುತ್ತೆ!
ಇತ್ತೀಚಿಗೆ ಹೊಸದೊಂದು ಟ್ರೆಂಡ್ ಶುರುವಾಗಿದೆ. ಹಿಂದೆ ಹೀಗೆ ಇರಲಿಲ್ಲ. ಮದುವೆಯಾಗ್ತಿದ್ದಂತ ಹಿಂದಿನ ಎಲ್ಲ ಘಟನೆಗಳು ಮನದಲ್ಲೆ ಮಣ್ಣು ಮಾಡಿ ಸಸಿ ನೆಟ್ಟಿರುತ್ತಿದ್ದರು. ಮುಂದಿನ ದಾಂಪತ್ಯ ಜೀವನ ಹಾಳಾಗದಿರಲೆಂಬ ಕಾರಣಕ್ಕೆ ಹಿಂದಿನ ಯಾವುದೇ ಖಾಸಗಿ ಘಟನೆಯನ್ನು ಮದುವೆಯಾದವರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಮದುವೆ ಆಗುವ ಜೋಡಿಗಳು ಯೋಚಿಸುವ ರೀತಿಯೇ ಬದಲಾಗಿಬಿಟ್ಟಿದೆ. ಹಿಂದಿನಂತೆ ಯಾವ ಮುಚ್ಚುಮರೆಯಿಲ್ಲದೆ ಮದುವೆಯ ರಾತ್ರಿಯೇ ಹಂಚಿಕೊಳ್ಳಲಾಗುತ್ತಿದೆ. ಒಬ್ಬರಿಗೊಬ್ಬರು ಅರ್ಥೈಸಿಕೊಳ್ಲಿಕ್ಕೆ ನಂಬಿಕೆ ಹೆಚ್ಚಾಗಲಿಕ್ಕೆ ಅಂತಾನೋ ಏನೋ ತಿಳಿದಿಲ್ಲ; ಆದರೆ ಮದುವೆಗೆ ಮುಂಚೆ ತಮ್ಮ ವೈಯಕ್ತಿಕ ಘಟನೆಗಳನ್ನ ಲೈಫ್ ಪಾರ್ಟನರ್ ಬಳಿ ಹಂಚಿಕೊಳ್ಳೋದು ಇಂದು ಹೆಚ್ಚಾಗುತ್ತಿದೆ.
ಇತ್ತೀಚೆಗೆ ಒಂದು ವರದಿ ನೋಡಿದೆ. ಹೊಸದಾಗಿ ಮದುವೆಯಾದ ಜೋಡಿ ಪ್ರಥಮ ರಾತ್ರಿಯಂದು ಇಂಥದ್ದೇ ವಿಷಯ ಮಾತಾಡಲು ಕುಳಿತರಂತೆ. ಗಂಡನಾದವನು ಮದುವೆಗೆ ಮುಂಚಿನ ಜೀವನದಲ್ಲಿ ತಾನು ಮಾಡಿದ ಎಲ್ಲ ಕೃತ್ಯಗಳನ್ನ ಹಂಚಿಕೊಂಡನಂತೆ. ಇವನ ಬಗ್ಗೆ ಕೇಳಿ ಅವಳಿಗೆ ಆಘಾತವಾದರೂ ಕ್ಷಮಿಸಿದಳಂತೆ. ಆದರೆ ಇವನಿಗೆ “ಅದೆಲ್ಲ ಯಾಕೆ ಹೇಳಿದೆನೋ ಅಂತ ಚಡಪಡಿಸಲು ಶುರುಮಾಡಿದ್ದಾನೆ. ಅವನ ಚಡಪಡಿಕೆ ವಿಪರೀತವಾಗಿ ಅಪರಾಧಿ ಭಾವನೆಯಲ್ಲಿ ನರಳಿ ನರಳಿ ಕೊನೆಗೊಂದು ದಿನ ಒಳ್ಳೆ ಹೆಂಡತಿಗೆ ಮೋಸ ಮಾಡಿದೆನೆಂದು ಮಾನಸಿಕ ಖಿನ್ನತೆಗೊಳಗಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡನಂತೆ! ಮದುವೆ ನಡೆದ ತಿಂಗಳಲ್ಲೇ! ಪಾಪ ಆ ಹೆಣ್ಣಿನ ಪಾಡೇನು? ಮುಂದಿನ ಬದುಕು ಹೇಗೆ?! ಆಹಾ! ನಾನು ಹೇಳೋದಿಷ್ಟೇ; ಮನಸಿಗೆ ಘಾಸಿಯಾಗುವಂತ ವಿಷಯಗಳನ್ನ ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಮದುವೆಯಾಗುವವರೊಂದಿಗೆ ಆದಷ್ಟು ನಿಯತ್ತಿನಿಂದಿರಿ
ಇಲ್ಲಿ ಘಾಸಿಗೊಳಿಸುವ ವಿಷಯಗಳೆಂದರೆ, ಒಂದು ಘಟನೆ ಹೇಳ್ತಿನಿ ಕೇಳಿ ವಾರ್ ಅಂಡ್ ಪೀಸ್ ಬರೆದ ಜನಪ್ರಿಯ ಲೇಖಕ : ಲಿಯೋ ಟಾಲ್ ಸ್ಟಾಯ್ ಮದುವೆಗೆ ಮುನ್ನ ತನ್ನ ಹೆಂಡತಿ ಆನ್ನಾಳಿಗೆ ಮದುವೆಯಾದ ಹೊಸತರಲ್ಲಿ ಪ್ರೀತಿ ನಂಬಿಕೆ ಇನ್ನಷ್ಟು ಹೆಚ್ಚಾಗುತ್ತೆ ಅನ್ನೋ ಭ್ರಮೆಯಿಂದ ತನ್ನ ಡೈರಿ ಕೊಟ್ಟನಂತೆ. ಅದನ್ನ ಓದಿದ ಆನ್ನಾ ತನ್ನ ಆತ್ಮಚರಿತ್ರೆಯಲ್ಲಿ ಹೀಗೆ ಬರೆದುಕೊಂಡಿದ್ದಳು,
“ಪರಮಪಾಪಿಷ್ಟ ಲಿಯೋ ಟಾಲ್ ಸ್ಟಾಯ್ ತನ್ನ ನೀಚತನದಿಂದ ನೂರಾರು ಹೆಣ್ಣುಗಳ ಜೊತೆಗಿನ ಸಂಬಂಧ, ವ್ಯಭಿಚಾರ ಅತ್ಯಾಚಾರ ಅವನ ಅಂಟುಜಾಡ್ಯಗಳು, ಗುಣಪಡಿಸಲಾಗದ ರೋಗಗಳು ಇರುವ ಬಗ್ಗೆ ದಾಖಲಿಸಿರುವ ಅವನ ಡೈರಿ ಓದಿದಾಗಿನಿಂದ ಇಂಥವನನ್ನ ಮದುವೆಯಾಗಿದ್ದಕ್ಕೆ ಅವತ್ತು ರಾತ್ರಿಯೆಲ್ಲ ಅತ್ತಿದ್ದೇನೆ, ದಿನವೂ ಅತ್ತಿದ್ದೇನೆ, ನೆನೆದಾಗಲೆಲ್ಲ ಅತ್ತಿದ್ದೇನೆ ಜೀವನಪರ್ಯಂತ ಅಳುತ್ತೇನೆ” ಅಂತ ಬರೆದುಕೊಂಡಳಂತೆ.
ಅವತ್ತು ಎಂದಿನಂತೆ ಮುಂಜಾನೆ ಮಕ್ಕಳು ಶಾಲೆಗೆ ಬಂದಿದ್ದರು. ಮಕ್ಕಳು ಶಾಲೆಗೆ ಬಂದ ನಂತರ, ಪ್ರಾರ್ಥನೆಗೆ ಬೆಲ್ ಬಾರಿಸುವವರೆಗೆ ಶಾಲಾ ಆವರಣದಲ್ಲಿ ಕುಂಟುಪಿಲ್ಲೆ, ಕಣ್ಣುಮುಚ್ಚಾಲೆ ಆಟವಾಡುವುದು, ಇಲ್ಲಂದ್ರೆ ನೋಟ್ಸ್ ಬರೆಯುವುದು ರೂಢಿ. ಆದರೆ ಅಂದು ಯಾಕೋ ಏನೋ ಮಕ್ಕಳು ಗುಂಪು ಗುಂಪಾಗಿ ಏನೋ ಗುಸು ಗುಸು ಮಾತಾಡ್ತಿದ್ದುದು ಕಾಣಿಸಿತು. ಯಾವತ್ತೂ ಇಷ್ಟು ಗಾಬರಿಗೆ ಬಿದ್ದಿದ್ದು ನೋಡಿರಲಿಲ್ಲ. ಸ್ವಲ್ಪ ಆತಂಕದಲ್ಲಿದ್ದುದನ್ನು ಗಮನಿಸಿದೆ. ಅತಂಕ ಮೂಡಿಸುವ ಸುದ್ದಿಗಳು, ಘಟನೆಗಳು ನಡೆದಾಗ ಮಕ್ಕಳು ಮಾತಾಡುವಾಗ ತಮ್ಮ ಕಣ್ಣುಗುಡ್ಡೆ ದೊಡ್ಡದು ಮಾಡುವುದು ಸಾಮಾನ್ಯ.
ಏನೋ ಮಾತಾಡುತ್ತಾ ನಡುನಡುವೆ ಅಬ್ಬಾ! ಎಂದು ಎರಡು ಕೈಗಳಿಂದ ಬಾಯಿ ಮುಚ್ಚಿಕೊಳ್ಳುತ್ತಿದ್ದವು. ಅಂದು ಆರೇಳು ತರಗತಿಯ ಮಕ್ಕಳಿಂದಿಡಿದು, ಎಲ್ಕೆಜಿ ಯುಕೆಜಿ ಸಣ್ಣ ಸಣ್ಣ ಮಕ್ಕಳತನಕ ಆವರಣದಲ್ಲಿ ಅಲ್ಲಲ್ಲಿ ಗುಂಪು ಕಟ್ಟಿ ಕುಳಿತು, ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದವು. ಆ ರೀತಿ ಮಕ್ಕಳು ಮಾತುಕತೆ ನಡೆಸಿದ್ದು ಅಪರೂಪ. ಏನು ಮಾತಾಡುತ್ತಿರಬಹುದು, ಯಾವ ವಿಷಯದ್ದಿರಬಹುದು, ಊರಲ್ಲಿ ನಿನ್ನೆ ಏನಾದರೂ ಗಲಾಟೆ ಆಗಿರಬಹುದಾ, ಕಳ್ಳರು ಬಂದಿರುವ ಸುದ್ದಿ ಹಬ್ಬಿರಬಹುದಾ ಅಥವಾ ಯಾವುದಾದರೂ ಹಾರರ್ ಸಿನಿಮಾ ನೋಡಿಬಿಟ್ವಾ ಏನ್ ಕತೆ ? ಅಂತ ಯೋಚಿಸುತ್ತಲೇ ದೂರದಲ್ಲಿ ಕುಳಿತಿದ್ದೆ. ಸಮಯ ಸರಿದಂತೆ ಮಕ್ಕಳ ಸಂಖ್ಯೆ ಜಾಸ್ತಿಯಾಯಿತು. ಗುಂಪುಗಳು ಹೆಚ್ಚಾದವು. ಕುತೂಹಲ ನನಗೂ ಜಾಸ್ತಿಯಾಗುತ್ತಿತ್ತು. ಶಾಲೆಯ ಪ್ರಾರ್ಥನೆ ಗಂಟೆ ಹೊಡೆಯಿತು. ಪ್ರಾರ್ಥನೆ ಮುಗಿದ ನಂತರ ನಾನು ಹಾಜರಿ ಪುಸ್ತಕ ಕೈಯಲ್ಲಿಡಿದು ಐದನೇ ತರಗತಿಗೆ ಹೋದೆ.
ಅಲ್ಲಿ ಕೂಡ ಮಕ್ಕಳು ಮತ್ತದೇ ಗುಸು ಗುಸು ಸುದ್ದಿ ಮುಂದುವರಿಸಿದ್ದರು. ‘ಏನ್ರೋ ಅದು, ಬೆಳಗ್ಗೆಯಿಂದ ನಾನೂ ನೋಡ್ತಾ ಇದೀನಿ. ಏನು ಚರ್ಚೆ ನಡೆಸಿರೋದು? ಏನು ಅಂತಾ ಘಟನೆ ನಡೆಯಿತು? ಅಂತ ವಿದ್ಯಾರ್ಥಿಯೊಬ್ಬನ ಪ್ರಶ್ನಿಸಿದೆ. ಈ ಅವಕಾಶಕ್ಕಾಗಿ ಕಾಯುತ್ತಿದ್ದನೋ ಎಂಬಂತೆ ಎಲ್ಲ ಮಕ್ಕಳು ಒಟ್ಟಿಗೆ ಸಾ…ರ್ ಅಂತ ಹೇಳಲು ಶುರು ಹಚ್ಚಿಕೊಂಡವು.
‘ ಸ್ವಲ್ಪ ಸುಮ್ನೆ ಕೂಡ್ತೀರಾ, ಎಲ್ಲರೂ ಹೀಗೆ ಗಲಾಟೆ ಮಾಡಿದ್ರೆ ನನಗೆ ಹೇಗೆ ತಿಳಿಬೇಕು? ನಿಮ್ಮಲ್ಲೆ ಯಾರಾದರೂ ಒಬ್ಬರು ಎದ್ದು ನಿಂತು ಹೇಳಿ, ಉಳಿದವರು ಸುಮ್ಮನೆ ಕುಳಿತುಕೊಳ್ಳಿ’ ಎಂದೆ. ಅದಕ್ಕೆ ಮಕ್ಕಳೆಲ್ಲ ತಮ್ಮ ತಮ್ಮಲ್ಲೇ ಮಾತಾಡಿಕೊಂಡು, ಕೊನೆಗೆ ಹುಟ್ಟು ವಾಚಾಳಿಯಾಗಿದ್ದ ಕೇಶವ್ಕುಮಾರನನ್ನ ಸುದ್ದಿ ವಿವರಿಸಲು ಎಬ್ಬಿಸಿದರು. ಅವನು ಓದಿನಲ್ಲಿ ಮುಂದೆ. ಅದಕ್ಕಿಂತಲೂ, ಗಾಳಿಸುದ್ಧಿಗಳನ್ನ ರಣರೋಚಕವಾಗಿ ಹೇಳುವಂಥವನು. ಕಥೆ ಕಟ್ಟುವುದರಲ್ಲಿ ಒಂದು ಹೆಜ್ಜೆ ಮುಂದು. ಅವನು ಎದ್ದು ನಿಂತು ಕೈಕಟ್ಟಿದ. ನಡೆದ ಘಟನೆ ಹೇಳಲು ಮತ್ತೇ ಸಾ… ಎಂದು ಶುರುಮಾಡಿದ. ‘ಸಾಕು ಮುಂದೇನು ಕತೆ ಹೇಳು’ ಎಂದೆ.
‘ಸರ್ ನಿಮಗೆ ಗೊತ್ತಿಲ್ಲೇನ್ರೀ, ಊರಾಗ ನಿನ್ನೆಯಿಂದ ರಾತ್ರಿ ತಾಯಮ್ಮವ್ವ ಕಾಲಿಗೆ ಗೆಜ್ಜೆ ಕಟಿಗೊಂಡು ತಿರುಗುತ್ತಿದ್ದಾಳಂತ್ರಿ, ರಾತ್ರಿ ಹೊತ್ತು ಘಲ್ ಘಲ್ ಅಂತ ಗೆಜ್ಜೆ ಹೆಜ್ಜೆ ಶಬ್ದ ಬರುತ್ತಂತ್ರಿ. ಊರೆಲ್ಲ ತಿರುಗ್ಯಾಡಕತ್ಯಾಳಂತ್ರಿ. ಓಣಿ ಓಣಿಗೆ ಓಡಾಡ್ತಳಂತ್ರಿ. ಯಾರನ ರಾತ್ರಿ ಹತ್ತು ಗಂಟೆ ಮ್ಯಾಲ ಮನಿ ಒಳಗ ಎದ್ದು ಕುಂತಿದ್ರೆ, ರಾತ್ರಿಹೊತ್ನಲ್ಲಿ ಮನಿಯೊಳಗ ಲೈಟ್ ಹಚಗೊಂಡು ಮಕ್ಕಂಡಿದ್ರೆ ಬಾಗ್ಲಿ ಬಡಿತಾಳಂತ್ರಿ, ಬಾಗ್ಲಿ ತೆರೆಯೋವರೆಗೆ ಬಿಡಂಗಿಲ್ಲಂತ್ರಿ, ನಿನ್ನೆ ರಾತ್ರಿ ಹೊತ್ನಲ್ಲಿ ಏನ್ ಆತಿ ಗೊತ್ತೇನ್ರಿ? ಉಚ್ಚೆ ಹೊಯ್ಯೊದಕ್ಕೆ ಎದ್ದು ರೋಡ್ ಮ್ಯಾಗ ಹೋಗಿದ್ದ ಹೊಟೇಲ್ಸಾಬ್ಗೆ ರೋಡಿನಮೇಲೆ ತಾಯಮ್ಮವ್ವ ಕಾಣಿಸಿದಳಂತ್ರೀ ಸ್ವಲ್ಪದರಲ್ಲಿ ಸಿಗ್ತಿದ್ದನಂತ್ರಿ. ತಾಯಮ್ಮವ್ವನ ಕಂಡು ಉಚ್ಚಿ ಹೊಯ್ಯೋದ್ಬಿಟ್ಟು ತುರ್ರಾ ಓಡಿ ಬಂದು ಮನೆಗೊಕ್ಕಂಡು ಬಾಗಿಲು ಮುಚ್ಕೊಂಡನಂತ್ರೀ..
ಅವನು ಇದನ್ನ ಹೇಳುವಾಗ, ಕೇಳುತ್ತಾ ಕುಳಿತಿದ್ದ ಮಕ್ಕಳಿಗೆ ಮಧ್ಯೆ ನಗು ಬಂದರೂ, ಭಯಕ್ಕೆ ಬಾಯಿಗೆ ಕೈ ಅಡ್ಡಹಾಕಿ ನಗು ತಡೆಯುತ್ತಿದ್ದವು. ಶಾಲೆ ಕಿಟಕಿಯಿಂದ ನೂರು ಮೀಟರ್ನಷ್ಟೇ ದೂರ ಇದ್ದ ತಾಯಮ್ಮ ದೇವಿ ಗುಡಿ ಇದ್ದಿದ್ರಿಂದ ಮಕ್ಕಳ ಭಯ ಇನ್ನಷ್ಟು ಹೆಚ್ಚಿಸಿತ್ತು. ಅವನು ಮಾತು ಮುಂದುರಿಸಿದ್ದ, “ಸಾ.. ಹೋಟೆಲ್ ಸಾಬ್ ರಾತ್ರಿಯೆಲ್ಲ ಹೆದರಿ ಎದೆ ಹೊಡ್ಕಂಡ್ ಜ್ವರ ಬಂದಾವಂತ್ರಿ. ಮುಂಜಾನೆ ಮಾನವಿ ದಾವಖಾನೆಗೆ ಆಟೋದಾಗ ಹಾಕೊಂಡು ಹೋದರಂತ್ರಿ. ದೊಡ್ಡವ್ರು ಮಾತಾಡಕತ್ತಿದ್ರೀ, ಊರು ತುಂಬಾ ಇದೆ ಸುದ್ದಿ ಮಾತಾಡಕತ್ಯಾರ್ರೀ. ಸಾಲಿ ಬಿಟ್ಟಮ್ಯಾಲ ಸಂಜಿಮುಂದ “ಸಾಲಿ ಅಂಗಳದಾಗ ನಿಮ್ಮ ಮಾಸ್ತರ ಜತಿಗೆ ಆಡಕೊಂತ ಕೂಡಬ್ಯಾಾಡ್ರಿ, ಹೊತ್ತು ಮುಣುಗುದ್ರೊಳಗ ಜಲ್ದಿ ಮನಿಗಿ ಬರ್ರಿ” ಅಂತ ನಮ್ಮವ್ವ ಹೇಳ್ಯಾಾಳ್ರಿ ಸರ್, ಯಾರು ಸುಳ್ಳು ಹೇಳಿದರೂ ನಮ್ಮವ್ವ ಸುಳ್ಳು ಹೇಳಾಂಗಿಲ್ರೀ ಸರ್. ಖರೇವಂದ್ರ ಖರೇವು ಸರ್. ತಾಯಮ್ಮವ್ವ ಓಡ್ಯಾಡಕತ್ಯಾಳಂತ್ರಿ.’ ನಾವು ಇವತ್ತು ಇಲ್ಲಿ ಸಂಜೆ ಹೊತ್ತು ಇರಂಗಿಲ್ರಿ” ಅಂತ ಒಂದೇ ಉಸಿರಿಗೆ ನಡೆದ ಘಟನೆ ಹೇಳಿದ ಕೇಶವ್ ಕುಮಾರ.
ಮಕ್ಕಳಿಗೆ “ದೆವ್ವ ಮತ್ತು ದೇವರು” ಬಗ್ಗೆ ಹೇಗೆ ತಿಳಿಸಿ ಹೇಳಬೇಕು ಅಂತ ಕೆಲ ನಿಮಿಷ ಯೋಚನೆಗೆ ಬಿದ್ದೆ.
‘ಇವೆಲ್ಲ ಸುಳ್ಳು ಕಣ್ರೋ, ಹೊಟೇಲ್ನವನು ಪುಕ್ಕಲ ಇರಬೇಕು. ರಾತ್ರಿ ಉಚ್ಚೆ ಹುಯ್ಯೋಕ ಬಂದಾಗ ರೋಡಿನ ಮೇಲೆ ಯಾವುದೋ ವಸ್ತುವಿನ ಆಕೃತಿ ನೋಡಿ ಹೆದರಿಕೊಂಡಿರಬೇಕು. ಭಯ ಇರುವವನ ಕಣ್ಣಿಗೆ ಹಗ್ಗವೂ ಹಾವಿನಂತೆ ಕಾಣುತ್ತೆ. ಕತ್ತಲಲ್ಲಿ ಒಬ್ಬಂಟಿಯಾಗಿ ಹೋದಾಗ ಭಯ ಶುರುವಾಗುತ್ತೆ ಆ ಕ್ಷಣದಲ್ಲಿ ಯೋಚನೆಗಳು ಆ ರೀತಿ ದೆವ್ವದ ವಿಚಾರಗಳು ತಲೆಯಲ್ಲಿ ಬರುತ್ತವೆ. ಆಗ ಕಲ್ಲು ನೋಡಿದರೂ ದೆವ್ವದ ತರ ಕಾಣುತ್ತೆ, ಗಿಡ ನೋಡಿದರೂ ದೆವ್ವದ ತರ ಕಾಣುತ್ತೆ. ರಾತ್ರಿ ಕೆಲವು ಕೀಟಗಳ ಅರಚಾಟ ಗೆಜ್ಜೆಯ ಸಪ್ಪಳದಂತೆ ಇರುತ್ತೆ. ಮೊದಲೇ ಪುಕ್ಕಲ ಆಗಿದ್ದರೆ ಕಲ್ಲು, ಗಿಡಗಳು ಕೀಟದ ಅರಚಾಟ ಎಲ್ಲವೂ ಸೇರಿಕೊಂಡು ದೆವ್ವದ ಆಕಾರ ಪಡೆದು ನಡೆದು ಬಂದಂತಾಗುತ್ತೆ. ನಮ್ಮ ಮೆದುಳಿನಲ್ಲಿ ಆ ರೀತಿ ಭ್ರಮೆ ಹುಟ್ಟಿಸುತ್ತವೆ. ಅವನು ಇಂಥದ್ದೆ ನೋಡಿರಬೇಕು. ನಿಮಗೆ ಒಂದು ಘಟನೆ ಹೇಳ್ತೀನಿ ಕೇಳಿ,ಮಾತು ಮುಂದುವರಿಸಿದೆ.
“ನಾನು ನಿಮ್ಮ ಶಾಲೆಗೆ ಶಿಕ್ಷಕನಾಗಿ ಬಂದ ಹೊಸತರಲ್ಲಿ ನನಗೂ ನಿಮ್ಮೂರಿನ ಕೆಲವು ಮಂದಿ ಹೇಳ್ತಿದ್ರು – ‘ಸರ್ ಆ ಸಾಲ್ಯಾಗ ವಾಸ್ತವ್ಯ ಮಾಡಬಾಡ್ರಿ, ಪಾಠ ಹೇಳಿ ಸಂಜೆ ಊರಿಗೆ ಹೋಗಿ್ರ. ಊರಿನಿಂದ ದಿನ ಬಸ್ಗೆ ಬಂದು ಹೋಗ್ರಿ. ಇಲ್ಲಿ ಮಾತ್ರ ಇರಬೇಡಿ. ಆ ಸಾಲಿ ಅಂಗಳದಾಗ ರಾತ್ರಿ ಹೊತ್ತು ಸಣ್ಣ ಹುಡುಗಿ ದೆವ್ವ ಆಗಿ ತಿರುಗಾಡ್ತಾಳ್ರಿ ಆ ಹುಡುಗಿ ಇದೇ ಸಾಲ್ಯಾಗ ಸತ್ತಾಳಂತ್ರಿ. ಈಗ ದೆವ್ವ ಆಗ್ಯಾಳಂತ್ರಿ
ತಾಯಮ್ಮವ್ವನೂ ತಿರುಗ್ಯಾಡ್ತಾಳ್ರೀ. ತಾಯಮ್ಮವ್ವ ಬೆರಕಿ ಐದಾಳ್ರಿ, ಕಣ್ಣಿಗೆ ಕಂಡೋರನ ಸುಮ್ಮನೆ ಬಿಡಾಂಗಿಲ್ರಿ ನೀವು ಇಲ್ಲಿರೋದು ಒಳ್ಳೆದಲ್ಲ ’ ಅಂತ ಆ ಜನರು ಹೇಳ್ತಿದ್ರು.
ನಾನು ಬೇರೆ ಊರಿನವನು ಆದ್ದರಿಂದ ದಿನಾ ಊರಿಗೆ ಹೋಗಿಬರಲು ಬಸ್ಸಿನ ಅನಾನುಕೂಲದಿಂದಾಗಿ ಆಫೀಸ್ ಕೊಠಡಿಯಲ್ಲೇ ವಾಸವಿದ್ದೆ. ಶಾಲೆಯ ಸುತ್ತಮುತ್ತವೂ ಭಯ ಹುಟ್ಟಿಸುವ ರೀತಿಯೇ. ಶಾಲೆಯ ಹಿಂಬದಿ ಸ್ಮಾಶನ, ಇನ್ನೊಂದು ಬದಿ ತಾಯಮ್ಮದೇವಿ ಗುಡಿ, ದೆವ್ವ-ದೇವರುಗಳ ಸಂಗಮ ಅದು!
“ದೇವರಂಥ ಮಕ್ಕಳು ಸತ್ತು ದೆವ್ವಗಳಾಗೋದುಂಟಾ ? ಮುಠ್ಠಾಳ ಜನಗಳು ಇವರು. ಯಾವಾಗ ಬುದ್ಧಿ ಬರುತ್ತೋ ಇವರಿಗೆಲ್ಲ. ತಾವು ಪುಕ್ಕಲರು ಆಗಿದ್ದಲ್ಲದೆ ನಿಮ್ಮನ್ನೂ ದೇವರು, ದೆವ್ವದ ಹೆಸರಿನಲ್ಲಿ ಹೆದರಿಸುತ್ತಿದ್ದಾರೆ. ಇವೆಲ್ಲ ಸುಳ್ಳು ಅಂತ ಮಕ್ಕಳಿಗೆ ತಿಳಿಹೇಳಿದೆ.
ನಾನು ಆ ಶಾಲೆಯ ಕೊಠಡಿಯಲ್ಲಿ ಎರಡ್ಮೂರು ವರ್ಷಗಳ ಕಾಲ ಒಬ್ಬಂಟಿಯಾಗಿ ಇದ್ದೆ. ರಾತ್ರಿ ಊಟ ಮಾಡಿದ ನಂತರ, ದಿನಾಲೂ 10 ರಿಂದ 11 ಗಂಟೆಯವರೆಗೂ ಶಾಲೆ ಅಂಗಳದಲ್ಲಿ ವಾಕಿಂಗ್ ಮಾಡುವುದು ರೂಢಿಯಾಗಿತ್ತು. ಹಳ್ಳಿಯಲ್ಲಿ ಸಾಮಾನ್ಯವಾಗಿ ರಾತ್ರಿ 8 ಗಂಟೆಗೆ ಜನ ಮಲಗಿಬಿಟ್ಟಿರುತ್ತಾರೆ. ಹತ್ತು ಹನ್ನೊಂದು ಗಂಟೆ ಅಂದರೆ ಮಧ್ಯರಾತ್ರಿ ಆದಂತೆ. ಮುಂಜಾನೆ ತಾಸುಗಟ್ಟಲೇ ನನ್ನೊಂದಿಗೆ ಮಾತುಕತೆಯಾಡುತ್ತಿದ್ದ ಪಕ್ಕದ ಮನೆಯವನೊಬ್ಬ, ರಾತ್ರಿ ನಾನು ಅಂಗಳದಲ್ಲಿ ಒಬ್ಬನೇ ವಾಕಿಂಗ್ ಮಾಡುತ್ತಿದ್ದಾಗ, ನನ್ನನ್ನು ನೋಡಿ ಉಚ್ಚೆ ಹುಯ್ಯುವುದಕ್ಕೆ ಹೊರಗಡೆ ಬಂದವನು ವಾಪಸ್ಸು ಮನೆಯೊಳಗೆ ಹೋಗುತ್ತಿದ್ದ. ನಾನು ಸುಮ್ಮನೆ ಅತ್ತಿಂದಿತ್ತ, ಇತ್ತಿಂದತ್ತಾ ಕತ್ತಲಲ್ಲಿ ತಿರುಗುಡುತ್ತಿರುವುದನ್ನು ನೋಡಿ. ನನ್ನನ್ನು ಮಾತಾಡಿಸುವ ಧೈರ್ಯ ಮಾಡುತ್ತಿದ್ದಿಲ್ಲ. ಅವನಿಗೆ ಎಂಥದ್ದೋ ಭಯ! ಈ ಮಾಸ್ತರಗ ದೆವ್ವ ಬಡಕೊಂಡಿರಬಹುದು!
ಅದು ಬೇಸಿಗೆ ಸಮಯ. ರಾಯಚೂರು ಭಾಗದಲ್ಲಿ ವಿಪರೀತ ಬಿಸಿಲು. ಮನೆಯಲ್ಲಿ ಸೆಕೆ ಜಾಸ್ತಿ. ಮನೆ ಒಳಗೆ ಮಲಗುವುದು ಅಸಾಧ್ಯ
ಆರ್ಸಿಸಿ ಮನೆ ಇದ್ದವರು ಮನೆಮೇಲೆ ಮಲಗ್ತಾರೆ, ಕೆಲವರು ಮನೆಯಂಗಳದಲ್ಲಿ ಹೊರಸು ಹಾಕಿ ಮಲಗ್ತಾರೆ. ಇನ್ನು ಕೆಲವು ಹುಡುಗರು ಪಕ್ಕದಲ್ಲಿ ಶಾಲೆ, ಗುಡಿಗಳ ಮೇಲೆ ಹತ್ತಿ ಮಲಗ್ತಾರೆ. ಹೀಗೆ ಶಾಲೆ ಪಕ್ಕದಲ್ಲಿದ್ದ ನಾಲ್ಕೈದು ಕುಟುಂಬಗಳ ಹುಡುಗರು ನಮ್ಮ ಶಾಲೆ ಅಂಗಳದಲ್ಲಿ ಬೇಸಿಗೆಗೆ ಮಲಗಲು ಬರುತ್ತಿದ್ದರು. ಅವರು ಗುಂಪಾಗಿರುತ್ತಿದ್ದರಿಂದ ಜತೆಗೆ ನಾಲ್ಕೈದು ನಾಯಿಗಳು ಇರುತ್ತಿದ್ದರಿಂದ ಭಯ ಇರಲಿಲ. ರಾತ್ರಿಯೆಲ್ಲ ಅಂಗಳದಲ್ಲಿ ಮಾಡುವುದು,ಗುಟ್ಕಾ ಉಗುಳುವುದು, ಬೀಡಿ ಸಿಗರೇಟು ಸೇದಿ ಬಿಟಾಕುವುದು ಮಾಡುತ್ತಿದ್ದರು. ಇದು ಶಾಲಾ ಅಂಗಳವನ್ನೇ ಹೊಲಸು ಮಾಡಿತ್ತು. ಹೀಗೆಲ್ಲ ಶಾಲೆ ಅಂಗಳದಲ್ಲಿ ಹೊಲಸು ಮಾಡಬೇಡಿ ಅಂತ ತಿಳಿಹೇಳಿದರೂ ಪ್ರಯೋಜನವಾಗಿರಲಿಲ್ಲ.
ನಾನು ಶಾಲೆ ಗೇಟ್ ಸಂಜೆಯಾಗುತ್ತಲೇ ಬೀಗ ಹಾಕಲಾರಂಭಿಸಿದೆ. ಆದರೂ ಕಾಂಪೌಂಡ್ ಏರಿ ಒಬ್ಬನಾದರೂ ಒಳಗೆ ಬರುತ್ತಿದ್ದ. ಒಮ್ಮೆ ಏನಾಯ್ತಂದ್ರೆ ಅವನು ಮುಂಜಾನೆ ಬಂದು ‘ ಸಾಬ್ರೇ, ಇವತ್ತು ಸಾಲಿ ಅಂಗಳ್ದಾಗ ಮಕ್ಕೊಂತೀವಿ ಸಾಲಿ ಗೇಟ್ ತೆರೀರಿ’ ಅಂತ ಕೇಳಿದ್ದ. ಬೇಸಿಗೆ ವಿಪರೀತ ಸೆಕೆ ಬೇರೆ ಇತ್ತಲ್ವ ’ಸರಿ ಮಲಕ್ಕೊಳ್ಳಿ ಗೇಟ್ ತೆಗೆದಿರುತ್ತೇನೆ. ನನಗೂ ಜತೆಯಾದಂತೆ ಆಗುತ್ತದೆ’ ಎಂದೆ. ಅವನು ಅಂದು ರಾತ್ರಿ ಮೂರ್ನಾಲ್ಕು ಗೆಳೆಯರು, ಎರಡು ಮೂರು ನಾಯಿಗಳ ಜತೆ ಶಾಲೆ ಅಂಗಳದಲ್ಲಿ ಮಲಗಲು ಬಂದ. ಗೆಳೆಯರು ಮತ್ತು ಜತೆಗೆ ನಾಯಿಗಳು ಇದ್ದುದರಿಂದ ಯಾವುದೇ ಭಯವಿಲ್ಲದೇ ಹರಟೆ ಹೊಡೆಯುತ್ತ ಮಲಗಿದ್ದರು. ಶಾಲೆ ಕೋಣೆಯೊಂದರಲ್ಲಿ ಫ್ಯಾನ್ ಇದ್ದುದರಿಂದ ನಾನು ಒಳಗಡೆಯೇ ಮಲಗಿದ್ದೆ.
ಅದೇನಾಯಿತೋ ಮಲಗಲು ಬಂದಿದ್ದ ನಾಲ್ವರಲ್ಲಿ ಮೂವರು ರಾತ್ರಿಯೇ ಎದ್ದು ಮನೆಗೆ ಹೋಗಿದ್ದರು. ಇನ್ನೊಬ್ಬ ನಿದ್ದೆಯಲ್ಲೇ ಅಲ್ಲೇ ಮಲಗಿದ್ದ. ಜತೆಗೆ ನಾಯಿಗಳು ಇದ್ದವು. ನರಿ ತೋಳಗಳ ಕೂಗಾಟ ಜೋರಾಗಿತ್ತು. ಇದಕ್ಕೆ ನಾಯಿಗಳ ಕೂಗಾಟವೂ ಎದ್ದಿತ್ತು. ಆ ಶಾಲೆಯು ಹೊಲಕ್ಕೆ ತಾಗಿಕೊಂಡಿರುವುದರಿಂದ ನರಿಗಳು ಶಾಲೆಯ ಪಕ್ಕದಲ್ಲೇ ಬಂದು ಕೂಗುತ್ತಿದ್ದವು. ಅವತ್ತು ಅವನು ಒಬ್ಬನೇ ಮಲಗಿದ್ದ. ಸ್ವಲ್ಪ ಸಮಯದ ನಂತರ ಅವನಿಗೆ ಎಚ್ಚರ ಆಗಿದೆ. ಅವನು ನಾನು ಮಲಗಿದ್ದ ಕೋಣೆಯ ಬಾಗಿಲು ಬಡಿಯತೊಡಗಿದ. ನನಗೆ ಎಚ್ಚರವಿದ್ದೂ ಬಾಗಿಲು ತೆಗೆಯಲಿಲ್ಲ. ಅವನು ರಾತ್ರಿ ವಿಪರೀತ ಮದ್ಯಪಾನ ಮಾಡಿದ್ದರಿಂದ ತೆಗೆಯಲಿಲ್ಲ. ಮಲಗಿದವನಂತೆ ನಟಿಸಿದೆ. ಜೋರಾಗಿ ಬಾಗಿಲು ಬಡಿದು ಶಬ್ದ ಮಾಡಿದಷ್ಟು ಅವನಿಗೆ ಅಪಾಯ ಎಂದು ಅವನು ಭಾವಿಸಿ ಬಡಿಯುವುದು ನಿಲ್ಲಿಸಿದ್ದ. ಅವನು ಸುಮಾರು 32 ವರ್ಷದವನು ನನಗಿಂತ ನಾಲ್ಕು ವರ್ಷ ದೊಡ್ಡವನು. ಅವನ ಧೈರ್ಯ ಪರೀಕ್ಷಿಸಬೇಕೆನಿಸಿತು. ಅವನು ಮಲಗಿರುವ ಜಾಗ ಕಾಣುವಂತೆ ಕಿಟಕಿ ಸ್ವಲ್ಪವೇ ತೆಗೆದೆ. ಅಂಗಳದಿಂದ ಎದ್ದು ಬಂದು ನನ್ನ ಕೋಣೆ ಬಾಗಿಲಿಗೆ ತಲೆ ಇಟ್ಟು ಮಲಗಿದ್ದ. ನಾಯಿಗಳು ಅವನನ್ನು ಬಿಟ್ಟು ಹೋಗಿದ್ದವು. ಅವನು ಮನೆಗೂ ಹೋಗುವ ಧೈರ್ಯವಿಲ್ಲದೇ, ಇಲ್ಲಿಯೂ ಮಲಗಲು ಆಗದೆ ಕುಳಿತಿದ್ದ. ಜತೆಗೆ ಬಂದಿದ್ದ ಮೂವರ ಸುಳಿವಿರಲಿಲ್ಲ. ಮತ್ತೊಮ್ಮೆ ಬಾಗಿಲು ಬಡಿದ. ಮಕ್ಕಳು ಕೂಡುತ್ತಿದ್ದ ಬಂಡೆಮೇಲೆಯೇ ಮೂತ್ರ ಮಾಡಿದ.
ಮತ್ತೆ ಬಂದು ಸಾಬ್ರೇ ಬಾಗಿಲು ತೆಗಿರಿ ಒಳಗ ಮಕ್ಕೊಳ್ತಿನಿ ಅಂತ ಕೂಗಿದ. ಅದು ಆಫೀಸ್ ಕೊಠಡಿ. ಬೇರೆ ಕೋಣೆಗಳು ಖಾಲಿ ಇದ್ದರೂ ಅಲ್ಲಿ ಮಲಗುವ ಧೈರ್ಯ ಇರಲಿಲ್ಲ. ನೋಡೋಕೆ ಆಳೆತ್ತರದ ಮನುಷ್ಯ.
ಜೇಬಿನಿಂದ ಮೊಬೈಲ್ ತೆಗೆದೆ, MP3 ಹಾಡು ಹುಡುಕಿದೆ. ಅಪ್ತಮಿತ್ರ ಚಿತ್ರದ ‘ರಾ…ರಾ.. ಸರಸಕು ರಾ..ರಾ..’ ಹಾಡು ಹಚ್ಚಿದೆ. ಮೊಬೈಲ್ ಬಾಗಿಲ ಬಳಿ ಇಟ್ಟೆ, ಹೊರಗಡೆ ಬಾಗಿಲಿಗೆ ತಲೆಯಿಟ್ಟು ಮಲಗಿದ್ದ ಅವನು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಅಂತ ಕಿಟಕಿಯ ಬಳಿ ಗಮನಿಸುತ್ತ ನಿಂತೆ. ಅವನಿಗೆ ಮೊದಲೇ ಅವತ್ತು ನಿದ್ದೆ ಬಂದಿರಲಿಲ್ಲ. ‘ರಾ.. ರಾ..’ ಎಂದು ಶಬ್ದ ಕೇಳಿದೊಡನೆ ದಿಗ್ಗನೆ ಎದ್ದು ಕುಳಿತೇಬಿಟ್ಟ ! ಸುತ್ತ ಮುತ್ತ ನೋಡಿದ ಏನೂ ಕಾಣುತ್ತಿಲ್ಲ. ಶಬ್ದ ಬಾಗಿಲು ಒಳಗಿಂದ ಬರುತ್ತಿರುವುದನ್ನು ಗಮನಿಸಿದ. ಸಾಂಗ್ ಶುರುವಾಯಿತು. ಹಾಸಿಗೆ ದಿಂಬು ಅವನು ತೊಟ್ಟಿದ್ದ ಲುಂಗಿ ಮೊಬೈಲ್ ಎಲ್ಲ ಇದ್ದಲ್ಲಿಯೇ ಬಿಟ್ಟು ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿಯೇ ಬಿಟ್ಟ !’ ನನಗೆ ನಗು ಬಂತು ಬಾಗಿಲು ತೆಗೆದೆ. ಅವನ ಮೊಬೈಲ್ ಅಲ್ಲೆ ಬಿದ್ದಿತ್ತು ತೆಗೆದು ಒಳಗಿಟ್ಟೆ. ಮುಂಜಾನೆ ಅದೇ ಜಾಗಕ್ಕೆ ಇಟ್ಟಿದ್ದೆ ಅವನು ಬಂದು ಏನು ಮಾತಾಡದೇ ತೆಗೆದುಕೊಂಡು ಹೋದ. ನಾನು ಏನು ಕೇಳಲಿಲ್ಲ. ಅವನು ಅದೇ ಕೊನೆ ಶಾಲೆ ಅಂಗಳಕ್ಕೆ ಬರಲಿಲ್ಲ. ಗೆಳೆಯರು ಬರಲಿಲ್ಲ. ನಾಯಿಗಳು ಮಾತ್ರ ಬರುತ್ತಿದ್ದವು. ಶಾಲೆ ಅಂಗಳ ಮೂತ್ರ, ಬಾಟಲಿ, ಗುಟ್ಕಾದಿಂದ ಮುಕ್ತಿ ಪಡೆದಿತ್ತು.
ಇದನ್ನೆಲ್ಲ ಮಕ್ಕಳಿಗೆ ಹೇಳಿದ್ದೆ, ಕೇಳಿ ಮಕ್ಕಳು ನಕ್ಕಿದ್ದೇ ನಕ್ಕಿದ್ದು….
‘ಸರಿ ಈ ದೆವ್ವ ದೇವರ ಬಗ್ಗೆ ಅಮೇಲೆ ಮಾತಾಡೋಣ ಈಗ ಅವೆಲ್ಲ ಬಿಟ್ಟು ಪಾಠದ ಕಡೆ ಗಮನ ಕೊಡಿ’ ಎಂದು ಪಾಠ ಶುರು ಮಾಡಿದೆ. ಮಕ್ಕಳು ನಗುವುದು ನಿಲ್ಲಿಸಲಿಲ್ಲ. ಮಕ್ಕಳ ಗಮನ ದೇವರು ದೆವ್ವದ ಕಡೆನೇ ಇತ್ತು. ಇಂಥ ವಿಷಯಗಳೆಂದರೆ ಮಕ್ಕಳಿಗೆ ಭಾರಿ ಕುತೂಹಲವಿರುತ್ತದೆ. ಇವತ್ತು ಇವುಗಳ ತಲೆಗೂ ದೆವ್ವ ಬಂದು ಕುಳಿತಿದೆ. ನಾನು ಏನೂ ಹೇಳಿದರೂ ತಲೆಗೆ ಹತ್ತಲ್ಲ’ ಎಂದು ಪುಸ್ತಕ ಮಡಚಿಟ್ಟು ಸ್ಟಾಫ್ ರೂಮ್ಗೆ ತೆರಳಿ ಹೆಡ್ ಮಾಸ್ಟರ್ನ್ನು ಭೇಟಿ ಆದೆ.
‘ಏನ್ ಸಾರ್, ಊರಲ್ಲಿ ಏನೋ ತಾಯಮ್ಮವ್ವ ಅಂತೆ, ರಾತ್ರಿ ತಿರುಗ್ಯಾಡ್ತಾಳಂತೆ ಊರಲ್ಲಿ ಜನ ನೋಡಿ ಹೆದರಿಕೊಂಡಿದರಂತೆ ಏನ್ರೀ ಇದು ನಿಮಗೇನಾದರೂ ಗೊತ್ತಾ ?’ ಅಂತ ಹೆಡ್ ಮಾಸ್ಟರ್ ಗೋವಿಂದರಾಜ್ ಅವರನ್ನು ಕೇಳಿದೆ. ಅದಕ್ಕ ಅವರು- ‘ಹೌದಂತೆ. ಅದರ ಬಗ್ಗೆ ನನಗೂ ಗೊತ್ತಿಲ್ಲ ಜನ ಮಾತಾಡ್ತಿದ್ರು’ ಅಂತಷ್ಟೇ ಹೇಳಿ ಸುಮ್ಮನಾದರು. ಪಿರಿಯಡ್ಗಳು ಮುಗಿದವು. ಶಾಲೆ ಬೆಲ್ ಹೊಡೆಯಿತು. ಶಾಲೆ ಬಿಟ್ಟ ಮೇಲೂ ಸ್ವಲ್ಪ ಹೊತ್ತು ಆಟ ಆಡುತ್ತಾ ನನ್ನ ಜೊತೆ ಒಂದಷ್ಟು ಸಮಯ ಹರಟೆ ಹೊಡೆಯುತ್ತಿದ್ದ ಮಕ್ಕಳು ಅಂದು ಮನೆಕಡೆ ಓಟ ಕಿತ್ತಿದ್ದವು ! ಹೋಗುವುದಕ್ಕೆ ಮುಂಚೆ ವಿದ್ಯಾರ್ಥಿಯೊಬ್ಬ ನಾನು ಮಲಗುತ್ತಿದ್ದ ರೂಮಿನ ಬಾಗಿಲಿಗೆ ‘ನಾಳೆ ಬಾ’ ಎಂದು ಬರೆದು ಹೋಗಿದ್ದ! ಒಂದು ವೇಳೆ ಮಧ್ಯರಾತ್ರಿ ತಾಯಮ್ಮವ್ವ ಬಾಗಿಲಿಗೆ ಬಂದರೂ ‘ನಾಳೆ ಬಾ’ ಅನ್ನುವ ಬೋರ್ಡ್ ನೋಡಿ ನಾಳೆ ಬರುತ್ತಾಳಂತೆ. ನಾಳೆ ಬಂದು ಅದೇ ಬೋರ್ಡ್ ಓದಿ ವಾಪಸ್ಸು ಹೋಗುತ್ತಾಳಂತೆ ದಿನಾ ‘ನಾಳೆ ಬಾ’ ಎನ್ನುವುದನ್ನು ಓದಿ ಓದಿ ಒಂದು ದಿನ ಬರುವುದೇ ಬಿಟ್ಟುಬಿಡ್ತಾಳಂತೆ ವಿದ್ಯಾರ್ಥಿಗಳ ಲೆಕ್ಕಚಾರ! ಊರಿನ ಎಲ್ಲ ಮನೆಗಳ ಬಾಗಿಲಿಗೂ ‘ನಾಳೆ ಬಾ’ ಎನ್ನುವ ಬೋರ್ಡ್ ಬರೆದಿತ್ತು.
ಜೀವನದಲ್ಲಿ ನಡೆಯುವ ಪ್ರತಿ ಘಟನೆಯ ಹಿಂದೆಯೂ ಒಂದು ಕಾರಣ ಇರುತ್ತದೆ. ಯಾವುದೋ ಕಾಯಿಲೆ, ಗಾಯ, ನೋವು, ಪ್ರೀತಿ, ಗತಿಸಿ ಹೋದ ಮರೆಯಲಾರದ ಕ್ಷಣಗಳು ಅಥವಾ ಮೇರೆ ಮೀರಿದ ಮೂರ್ಖತನ ಯಾವುದೂ ಅಕಸ್ಮಾತ್ ಅಥವಾ ಅದೃಷ್ಟವಶಾತ್ ಜರುಗಿರುವುದಿಲ್ಲ. ಎಲ್ಲವೂ ನಮ್ಮ ಆತ್ಮಶಕ್ತಿಯನ್ನು, ಸಾಮರ್ಥ್ಯವನ್ನು ಕಂಡುಕೊಳ್ಳಲು ಒದಗಿದ ಸಲಕರಣೆಗಳಾಗಿರುತ್ತವೆ. ಈ ಸಣ್ಣ ಸಣ್ಣ ಉಬ್ಬರ ಇಳಿತಗಳು ಇಲ್ಲದಿದ್ದರೆ ಸಪಾಟಾದ, ಎಲ್ಲಿಗೂ ಕರೆದೊಯ್ಯದ ರಸ್ತೆಯಾಗಿ ಬಿಡುತ್ತದೆ ಬದುಕು. ಎಲ್ಲ ಸರಿಯಾಗಿದೆ, ಅನುಕೂಲಕರ ಮತ್ತು ಸುರಕ್ಷಿತವಾಗಿದೆ ಆದರೆ ಪಯಣದಲ್ಲಿ ಏನೂ ಸ್ವಾರಸ್ಯವಿಲ್ಲ ಎನಿಸಿ ಬಿಡುತ್ತದೆ.
ಒಟ್ಟಿನಲ್ಲಿ, ನಮ್ಮ ಸಂಪರ್ಕಕ್ಕೆ ಬಂದು ಜೀವನವನ್ನು ಪ್ರಭಾವಿಸುವ ವ್ಯಕ್ತಿಗಳು ಹಾಗೂ ಅನಿರೀಕ್ಷಿತ ದುರ್ಘಟನೆ, ದುಃಖ-ಆಘಾತಗಳು ನಮ್ಮ ನೈಜ ವ್ಯಕ್ತಿತ್ವವನ್ನು ರೂಪಿಸುತ್ತವೆ ಎನ್ನಬಹುದು. ಕೆಟ್ಟ ಅನುಭವಗಳೂ ನಮಗೆ ಅಮೂಲ್ಯ ಸಂಗತಿಗಳನ್ನು ಮನವರಿಕೆ ಮಾಡಿಕೊಡಲು ನಿಮಿತ್ತವಾಗಿ ಬರಬಹುದು.
ಉದಾಹರಣೆಗೆ ಯಾರಾದರೂ ನಮ್ಮನ್ನು ನೋಯಿಸಿದರೆ, ದ್ರೋಹ ಮಾಡಿದರೆ, ಪ್ರೇಮ, ಪ್ರೀತಿ ನಿರಾಕರಿಸಿ ಹೃದಯ ಒಡೆದರೆ ನಂಬಿಕೆ, ಪ್ರೀತಿ, ವಿಶ್ವಾಸಗಳ ನೈಜ ರೂಪ ಹೀಗಿರುವುದಿಲ್ಲ ಎನ್ನುವ ಅರಿವು ಮೂಡಿಸುತ್ತದೆ. ಹಿಂದೆ ಮುಂದೆ ಯೋಚಿಸದೆ ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಎಂತಹ ಅಚಾತುರ್ಯಗಳಿಗೆ ಕಾರಣವಾಗುತ್ತದೆ ಎಂದು ಕಣ್ತೆರೆಸುತ್ತದೆ. ಹಾಗೆ ಅವರನ್ನು ಉದಾರವಾಗಿ ಕ್ಷಮಿಸಿ, ಈ ಪಾಠಗಳನ್ನು ಕಲಿಯುವುದು ಸರ್ವರಿಗೂ ಹಿತ.
ನಮ್ಮ ರಾಯಚೂರು ಬಸ್ಯಾ ಹುಟ್ಟಿದ ಐದು ವರ್ಷದಾಗ ಹಾಲು ಕುಡ್ಯೋದು ಬಿಟ್ಟು ಅಲ್ಕೋಹಾಲ್ ಕುಡ್ಯೋಕ ಸುರುಮಾಡಿದ್ನಂತೆ. ಅವತಿಂದ ಇವತ್ತಿನತಂಕ ದಿನಾ ಸಂಜಿಮುಂದ ರಾಯಲ್ ಸ್ಟ್ಯಾಗ್, ವೋಟಿ ಕುಡ್ದು ಕುಡ್ದು ಇತ್ತೀಚೆಗೆ ಅನಾರೋಗ್ಯಕ್ಕೊಳಗಾಗಿ ದಾವಖಾನಿಗೆ ದಾಖಲಾದ.
“ಕುಡ್ಯೋದು ಬಿಡಲೇ ಬದ್ಮಾಶ್” ಅಂತ ಊರುಮಂದಿ ಕ್ಯಾಕರಿಸಿ ಉಗುದ್ರೂ, ಬೈದು ಬುದ್ಧಿ ಹೇಳಿದರೂ ಯಾರ ಮಾತೂ ಕೇಳದವ್ನು. ಅಲ್ಲದೆ “ಈ ಜಡ್ಡು ಜಾಪತ್ತು ಕುಡ್ಯೋದ್ರಿಂದ ಬಂದಿದ್ದಲ್ಲ. ತಿಂಗ್ಳಾತು ಇಡೀ ದೇಶಕ್ಕ ದೇಶನೇ ಲಾಕ್ಡೌನ್ ಆಗಿ, ದುಖಾನ್ ಬಂದ್ ಆಗ್ಯಾವು. ಊರು ಕಡಿ ಕಳ್ಳಬಟ್ಟಿನೂ ಸಿಗದಂಗಾಗ್ಯದ. ಇದರಿಂದ ಮುಂದೆಂಗ ಎಂಬ ಭವಿಷ್ಯ ಚಿಂತಿ ನನಗ. ಈ ಚಿಂತಿಲೇ ಜಡ್ಡು ಹತ್ತಿದ್ದಂಗಾಗ್ಯದ” ಅಂತ ಹೇಳವ.
ಬಸ್ಯಾ ಈ ಸವಾಲಿಗೆ ಒಪ್ಪಿದ. ಹೆಂಗೂ ಈ ಸವಾಲಿನ ಖರ್ಚಿನ್ಯಾಗ ತನಗೊಂದು ದಕ್ಕಬಹುದು ಎಂಬ ದೂರಾಲೋಚನೆ ಅವಂದು!
ಆದರ ನರ್ಸಮ್ಮ ಒಂದು ಕಂಡಿಷನ್ ಹಾಕಿದ್ಳು, “ನೋಡ್ ಬಸ್ಯಾ, ನಾನು ಹೇಳಿಕೇಳಿ ನರ್ಸಮ್ಮ ಅದೇನಿ. ಈ ದಾವಖಾನ್ಯಾಗ ಕೆಲಸ ಮಾಡಕತ್ತೀನು. ಹಂಗಾಗಿ ನಿನ್ನಂಗ ಪಬ್ಲಿಕದಾಗ ಕುಡ್ಯೋಕ ನನಗ ಆಗಂಗಿಲ್ಲ. ಅದಕ್ಕ ನೀ ಒಂದು ಕೆಲಸ ಮಾಡು, ರಾಯಲ್ ಸ್ಟ್ಯಾಗ್ ಆಗಲಿ, ವೋಡ್ಕಾ ಆಗಲಿ ಎಳೆನೀರಿನ ಕಾಯೊಳಗ ಹಾಕಿಸಿಕೊಂಡ ಬಾ ಅಂದ್ಳು.
“ಸರಿ ನಿಮ್ಮೌನ್” ಅಂತ ಮನಸಿನ್ಯಾಗ ಬೈದುಕೊಂಡು ಹೊರಟ ಬಸ್ಯಾ. ದಾವಖಾನೆ ಬಗಲಕಿದ್ದ ದುಖಾನಂಗಡಿಗೆ ಹೋದ. ಅಲ್ಲಿ ವೋಡ್ಕಾ ಖರೀದಿಸಿ ಎಳೆನೀರು ಮಾರುವವನ ಬಳಿ ಬಂದು, ಈ ವೋಡ್ಕಾ ಪಾಕೇಟ್ ಎಳೆನೀರಿನೊಳಗ ಬೆರೆಸಿಕೊಡುವಂತೆ ತಿಳಿಸಿದ.
ನಮ್ಮ ಬದುಕಿಗೆ ನಿಜಕ್ಕೂ ಒಂದು ಅರ್ಥ ಎಂಬುದು ಇದೆಯಾ, ನಾವು ಆಚರಿಸುವ ಧರ್ಮಗಳು, ಈ ಯುದ್ಧ, ಸಂಪ್ರದಾಯಗಳು, ಹಿಂಸೆ, ಭಿನ್ನ ಭಿನ್ನವಾಗಿ ಹೊರಹೊಮ್ಮುವ ಕ್ರೌರ್ಯ, ನಮ್ಮ ಐಡಿಯಾಲಜಿಗಳು – ಏನು ಇವೆಲ್ಲಾ? ನಿಜಕ್ಕೂ ಇದೇ ನಮ್ಮ ಜೀವನವಾ? ಅಥವಾ ಇದಕ್ಕೂ ಮೀರಿದ್ದು ಇನ್ನೇನಾದರೂ ಇದೆಯಾ ?
ಶತಮಾನಗಳಿಂದ ನಮ್ಮ ಗುರುಗಳು, ನಮ್ಮ ಶಿಕ್ಷಣ ಎಲ್ಲವೂ ನಮಗೆ ಕಲಿಸಿದ್ದನ್ನು ಪಾಲಿಸುತ್ತಾ ಬಂದಿದ್ದೇವೆ. ನಾವೊಂಥರಾ ಸೆಕೆಂಡ್ ಹ್ಯಾಂಡ್ ಮನುಷ್ಯರು. ಇಲ್ಲಿ ನಮ್ಮದು ಎಂಬುದೇನೂ ಇಲ್ಲ. ಅಥವಾ ನಾವು ಅದನ್ನು ಪ್ರಶ್ನೆಯೂ ಮಾಡುವುದಿಲ್ಲ. ನಮ್ಮ ಮೇಲೆ ಏನೋ ಒಂದು ರಿವಾಜನ್ನು ಹೇರಿ ಅದನ್ನು ಪಾಲಿಸಬೇಕು ಅಂದರೂ ನಾವು ಅದನ್ನು ಪ್ರಶ್ನೆ ಮಾಡದೇ ಒಪ್ಪಿಕೊಳ್ಳುತ್ತೇವೆ. ಇದುವರೆಗೂ ನಮ್ಮವರು ನಮಗೆ ಹೇಳಿಕೊಟ್ಟಿದ್ದು ಬಿಟ್ಟರೆ ನಮ್ಮ ಚಿತ್ತಭಿತ್ತಿಯಲ್ಲಿ ಬೇರೇನೂ ಇಲ್ಲವೇ ಇಲ್ಲ.
ನಮ್ಮಲ್ಲಿ ಸಂಬಂಧಗಳು ಎಂದರೆ ಅದಕ್ಕೊಂದು ಚೌಕಟ್ಟಿರುತ್ತದೆ. ನಮ್ಮಲ್ಲಿ ಶಾಲೆಗಳು ಎಂದರೆ ಅಲ್ಲಿ ಶಿಸ್ತು ಮತ್ತು ಸ್ಪರ್ಧೆಗಳಿವೆ. ಹೀಗೆ ಎಲ್ಲಕ್ಕೂ ಒಂದೊಂದು ಚೌಕಟ್ಟು ಮತ್ತು ಪದ್ಧತಿಗಳನ್ನು ನಾವೇ ಹೇರಿಕೊಂಡು, ಕಲಿಸಿದ್ದನ್ನು ಕಲಿತುಕೊಂಡು ಸುಮ್ಮನೆ ಇದ್ದುಬಿಟ್ಟಿದ್ದೇವೆ. ಹಾಗೂ ಅದಕ್ಕೆ ವ್ಯತಿರಿಕ್ತವಾಗಿ ಸಮಸ್ಯೆಗಳು ಎದುರಾದಾಗ ಕಂಗಾಲಾಗಿ ಯೋಚಿಸುತ್ತಾ ಸ್ವಾತಂತ್ರ್ಯವನ್ನು ಧ್ಯಾನಿಸುತ್ತಾ ಅಸಹಾಯಕರಾಗಿ ಕೂಗಾಡುತ್ತೇವೆ. ಅಲ್ಲವೆ? ಹಾಗಾದರೆ ಮಾಡಬೇಕಾದ್ದೇನು? ಈ ಪ್ರಶ್ನೆಗಳನ್ನು ಕೇಳಿಕೊಳ್ಳುವ ಸಾಹಸವನ್ನೇ ನಾವು ಮಾಡುವುದಿಲ್ಲ. ನಮಗೆ ಯಾರೋ ಕಡೆದಿಟ್ಟ ದಾರಿಯಲ್ಲಿ ನಡೆಯುವುದೇ ಸುಖ. ಇದರಿಂದ ಹೊರಗೆ ಬರುವುದು ಹೇಗೆ?
ಎಲ್ಲಕ್ಕಿಂತ ಮೊದಲು, ಸತ್ಯಕ್ಕೆ ಇಂಥದ್ದೇ ಎನ್ನುವ ನಿಖರವಾದ ಯಾವ ದಾರಿಗಳೂ ಇಲ್ಲ ಎಂಬುದು ನಮಗೆ ಖಾತ್ರಿಯಾಗಬೇಕು. ಯಾವುದೇ ಒಂದು ವಿಚಾರವನ್ನಾಗಲೀ ಅಥವಾ ಸಿದ್ಧಾಂತವನ್ನಾಗಲೀ ಯಾರೋ ಒಬ್ಬರು ಫ್ರೇಮ್ ಹಾಕಿ ಕೂರಿಸಲು ಬರುವುದಿಲ್ಲ. ಅವರು ಕಂಡುಕೊಂಡಿರುವುದು ಸತ್ಯವೇ ಆದರೂ ಅದು ಅವರ ಪಾಲಿನ ಸತ್ಯ. ಅದು ಕೇವಲ ಅವರ ಪಾಲಿನ ದರ್ಶನ ಮಾತ್ರವಷ್ಟೆ ಅನ್ನುವುದನ್ನು ನಾವು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ನಮಗೆ ಪ್ರಶ್ನೆ ಮಾಡುವುದು ಸಾಧ್ಯವಾಗಬೇಕು. ಮತ್ತು ಸರಿ ಕಾಣದೆ ಹೋದದ್ದನ್ನು ತಿರಸ್ಕರಿಸಲು ಸಾಧ್ಯವಾಗಬೇಕು. ಕೆಲವೊಮ್ಮೆ ನಾವು ಯಾರದ್ದೋ ನಿರ್ದಿಷ್ಟ ವಿಚಾರವನ್ನು ಮೂರ್ಖರಂತೆ ಅನುಸರಿಸುತ್ತಿದ್ದೇವೆ ಎಂದು ನಮಗೆ ಗೊತ್ತಾದರೂ ಅದನ್ನು ತಿರಸ್ಕರಿಸಲು ಹೋಗುವುದಿಲ್ಲ. ಆದ್ದರಿಂದಲೇ ನಮಗೆ ನಮ್ಮ ಪಾಲಿನ ದಾರಿಯನ್ನು, ಸರಿಯಾದ ದಾರಿಯನ್ನು ಹುಡುಕಿಕೊಳ್ಳಲು ಸಾಧ್ಯವಾಗುವುದಿಲ್ಲ.
ಅದು ಸಾಧ್ಯವಾಗಬೇಕು ಎಂದರೆ ನಾವು ಅದಕ್ಕಾಗಿ ದೃಢ ನಿರ್ಧಾರ ಮಾಡಬೇಕು. ಈ ಭೂಮಿಯ ಮೇಲೆ ಇಂದೇ ಜನಿಸಿ, ಇವತ್ತೊಂದು ದಿನ ಮಾತ್ರ ಬದುಕಿರುತ್ತೇವೆ ಎಂದು ಭಾವಿಸಿ, ಮೊಟ್ಟ ಮೊದಲ ಬಾರಿಗೆ ನಮ್ಮ ಬಗ್ಗೆ ನಾವು ಅರಿಯುತ್ತಾ ಹೊಸತನ್ನು ಶುರುಮಾಡಬೇಕು. ಆಗ ನಮಗೆ ನಮ್ಮದೇ ದಾರಿಯನ್ನು ರೂಪಿಸಿಕೊಳ್ಳಲು ಸಾಧ್ಯವಾಗಬಹುದು
ಪ್ರೀತಿಯನ್ನು ಚಿಂತಿಸಲಾಗುವುದಿಲ್ಲ, ಪ್ರೀತಿಯನ್ನು ರೂಢಿಸಿಕೊಳ್ಳಲಾಗುವುದಿಲ್ಲ, ಅಭ್ಯಾಸ ಮಾಡಿಕೊಳ್ಳಲಾಗುವುದಿಲ್ಲ. ಪ್ರೀತಿಯ ಆಚರಣೆ, ಭ್ರಾತೃತ್ವದ ಆಚರಣೆ, ಮನದ ಬಯಲಲ್ಲೇ ಇದೆ. ಆದ್ದರಿಂದಲೇ ಅದು ಪ್ರೀತಿಯಲ್ಲ. ಇದು ಯಾವಾಗ ನಿಲ್ಲುತ್ತದೋ ಆಗ ಮಾತ್ರ ಪ್ರೀತಿ ಅಸ್ತಿತ್ವಕ್ಕೆ ಬರುತ್ತದೆ. ಆಗ ಮಾತ್ರ ನಿಮಗೆ ಪ್ರೀತಿಯೆಂದರೇನು ಎಂಬುದು ತಿಳಿಯುತ್ತದೆ. ಆಗ ಪ್ರೀತಿಯೆಂಬುದು ಗುಣಾತ್ಮಕವಾದುದಾಗಲಿ, ಪರಿಮಾಣಾತ್ಮಕವಾದುದಾಗಲಿ ಆಗಿರುವುದಿಲ್ಲ. ನೀವು ನಾನು ಇಡೀ ಪ್ರಪಂಚವನ್ನು ಪ್ರೀತಿಸುತ್ತೇನೆ ಎಂದು ಹೇಳುವುದಿಲ್ಲ. ಆದರೆ, ನಿಮಗೆ ಒಬ್ಬರನ್ನಾದರೂ ಪ್ರೀತಿಸುವುದು ತಿಳಿದಿದ್ದಲ್ಲಿ, ಸಮಸ್ತವನ್ನೂ ಪ್ರೀತಿಸುವುದು ನಿಮಗೆ ತಿಳಿದಿರುತ್ತದೆ. ಯಾಕೆಂದರೆ, ನಮಗೆ ಒಬ್ಬರನ್ನೂ ಪ್ರೀತಿಸುವುದು ತಿಳಿದಿಲ್ಲ ಎಂದ ಮೇಲೆ ಮಾನವಕುಲವನ್ನು ಪ್ರೀತಿಸುವುದು ಕಲ್ಪನಾತ್ಮಕವಾದುದಷ್ಟೆ. ಪ್ರೀತಿಯಿದ್ದಾಗ ಮಾತ್ರ ನಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸಬಹುದು. ಆಗ ಮಾತ್ರ ನಮಗೆ ಸಂತೋಷ, ಆನಂದದ ಬಗ್ಗೆ ತಿಳಿಯಲು ಸಾಧ್ಯ.
You must be logged in to post a comment.